ಪಾಕಿಸ್ತಾನ ವಿರುದ್ಧದ ನಾಲ್ಕನೇ ಟಿ20ಯಲ್ಲೂ ಕಿವೀಸ್ ಜಯಭೇರಿ; ಅಫ್ರಿದಿ ಪಡೆಗೆ ವೈಟ್‌ವಾಶ್ ಭೀತಿ
New Zealand vs Pakistan 4th T20I: ಪಾಕಿಸ್ತಾನ ವಿರುದ್ಧ ನ್ಯೂಜಿಲ್ಯಾಂಡ್‌ನ ಡೇರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಜೋಡಿಯು ನಾಲ್ಕನೇ ವಿಕೆಟ್‌ಗೆ ಅಜೇಯ 139 ರನ್‌ಗಳ ಜೊತೆಯಾಟವಾಡಿದರು. ಇಬ್ಬರೂ ತಲಾ ಅಜೇಯ ಅರ್ಧಶತಕ ಸಿಡಿಸಿದರು.
ಪಾಕಿಸ್ತಾನ ವಿರುದ್ಧದ ನಾಲ್ಕನೇ ಟಿ20 (New Zealand vs Pakistan) ಪಂದ್ಯದಲ್ಲೂ ನ್ಯೂಜಿಲ್ಯಾಂಡ್ ಭರ್ಜರಿ ಜಯ ಗಳಿಸಿದೆ. ಜನವರಿ 19ರ ಶುಕ್ರವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ನಾಲ್ಕನೇ ಚುಟುಕು ಪಂದ್ಯದಲ್ಲಿ ಡೇರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ (ಡೇರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್) ಅಬ್ಬರದ ಅಜೇಯ ಅರ್ಧಶತಕದ ನೆರವಿಂದ ಕಿವೀಸ್ ಏಳು ವಿಕೆಟ್‌ಗಳ ಜಯಭೇರಿ ಬಾರಿಸಿದೆ. ಆ ಮೂಲಕ ಸರಣಿಯ ನಾಲ್ಕನೇ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್ ಸ್ವೀಪ್ ಸಾಧಿಸುವ ಅಂಚಿನಲ್ಲಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ, ರಿಜ್ವಾನ್ ಅವರ ಅಜೇಯ 90 ರನ್ ನೆರವಿಂದ 5 ವಿಕೆಟ್ ಕಳೆದುಕೊಂಡು 158 ರನ್ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಆತಿಥೇಯ ಕಿವೀಸ್ ತಂಡವು 18.1 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಗುರಿ ತಲುಪಿತು.
ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಜೋಡಿಯು ನಾಲ್ಕನೇ ವಿಕೆಟ್‌ಗೆ ಅಜೇಯ 139 ರನ್‌ಗಳ ಜೊತೆಯಾಟವಾಡಿದರು. ಈ ನಡುವೆ ಇಬ್ಬರೂ ತಲಾ ಅಜೇಯ ಅರ್ಧಶತಕ ಸಿಡಿಸಿದರು.
ಇದನ್ನೂ ಓದಿ | ಅಫ್ಘನ್ ಬೇಟೆ ನಂತರ ಇಂಗ್ಲೆಂಡ್ ಶಿಕಾರಿಗೆ ಭಾರತ ಸಿದ್ಧ; ತಂಡಗಳು, ವೇಳಾಪಟ್ಟಿ, ನೇರಪ್ರಸಾರ, ಮುಖಾಮುಖಿ ದಾಖಲೆ ವಿವರ ಹೀಗಿದೆ
ಚೇಸಿಂಗ್ ಆರಂಭಿಸಿದ ಕಿವೀಸ್‌ಗೆ ಪಾಕಿಸ್ತಾನದ ನಾಯಕ ಶಾಹೀನ್ ಶಾ ಆಫ್ರಿದಿ ಆಘಾತವಿತ್ತರು. ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳು ಒಬ್ಬರ ನಂತರ ಮತ್ತೊಬ್ಬರಂತೆ ಒಂದಂಕಿ ಮೊತ್ತಕ್ಕೆ ಔಟಾದರು. ಒಂದು ಹಂತದಲ್ಲಿ ಕಿವೀಸ್ ಕೇವಲ 20 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಅಬ್ಬರಿಸಿದ ಮಿಚೆಲ್ 44 ಎಸೆತಗಳಲ್ಲಿ 72 ರನ್ ಗಳಿಸಿದರು. ಇವರಿಗೆ ಸಾಥ್ ನೀಡಿದ ಫಿಲಿಪ್ಸ್ 52 ಎಸೆತಗಳಲ್ಲಿ 70 ರನ್ ಗಳಿಸಿದರು. ಇವರ ಅಮೋಘ ಶತಕದ ಜೊತೆಯಾಟದ ನೆರವಿಂದ ತಂಡವು ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ ಪರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಅಬ್ಬರಿಸಿದರು. ಕೇವಲ 63 ಎಸೆತಗಳಲ್ಲಿ ಅಜೇಯ 90 ರನ್ ಗಳಿಸಿದರು. ಇದರಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು. ಮೊದಲ ಮೂರು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಗಳಿಸಿದ್ದ ಬಾಬರ್ ಅಜಾಮ್, ಈ ಪಂದ್ಯದಲ್ಲಿ 19 ರನ್ ಗಳಿಸಿ ಔಟಾದರು. ಕಿವೀಸ್ ಪರ ಸೀಮರ್‌ಗಳಾದ ಮ್ಯಾಟ್ ಹೆನ್ರಿ ಮತ್ತು ಲಾಕಿ ಫರ್ಗುಸನ್ ತಲಾ 2 ವಿಕೆಟ್ ಪಡೆದರು.
ಇದನ್ನೂ ಓದಿ | 3ನೇ ಕ್ರಮಾಂಕದಲ್ಲಿ ವಿರಾಟ್ ಅತ್ಯಂತ ಅಪಾಯಕಾರಿ; ಕೊಹ್ಲಿ ಟಿ20 ಬ್ಯಾಟಿಂಗ್ ಕ್ರಮಾಂಕ ಕುರಿತು ಎಬಿಡಿ ತೀರ್ಪು
ಉಭಯ ತಂಡಗಳು ಮುಂದೆ ಹ್ಯಾಗ್ಲಿ ಓವಲ್ ಮೈದಾನದಲ್ಲಿ ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆ ಪಂದ್ಯದಲ್ಲಿ ಗೆದ್ದರೆ ನ್ಯೂಜಿಲ್ಯಾಂಡ್ ಸರಣಿಯಲ್ಲಿ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧಿಸಲಿದೆ.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ.
ಇಮೇಲ್: ht.kannada@htdigital.in