ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟಿಸಲು ದಿನಾಂಕ ಬಹಿರಂಗ; ನೂತನ ನಾಯಕನ ಹೆಸರೂ ಅದೇ ದಿನ ಘೋಷಣೆ, ಸದ್ಯಕ್ಕಿದು ಸಂಭಾವ್ಯ ತಂಡ
ಜೂನ್ 20ರಿಂದ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಮೇ 24ರಂದು ಬಿಸಿಸಿಐ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಬಿಸಿಸಿಐ ಪತ್ರಿಕಾಗೋಷ್ಠಿಯ ಮೂಲಕ ಹೊಸ ನಾಯಕನನ್ನು ಘೋಷಿಸಲಿದೆ ಎಂಬ ವರದಿಗಳಿವೆ.

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಹಂತದಲ್ಲಿದೆ. ಇದಾಗಿ ಕೆಲವೇ ದಿನಗಳಲ್ಲಿ ಅಂದರೆ ಜೂನ್ 20ರಿಂದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡವು ಆಂಗ್ಲರ ನಾಡಿಗೆ ಪ್ರವಾಸ ಕೈಗೊಳ್ಳಲಿದೆ. ಭಾರತ ತಂಡವನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ. ಭಾರತ ತಂಡವನ್ನು ಯಾರು ಮುನ್ನಡೆಸಲಿದ್ದಾರೆ? ಯಾವ ಆಟಗಾರರು ಸ್ಥಾನ ಪಡೆಯಲಿದ್ದಾರೆ? ವಿರಾಟ್ ಕೊಹ್ಲಿ ಬದಲಿಗೆ 4ನೇ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್ ಮಾಡಲಿದ್ದಾರೆ? ರೋಹಿತ್ ನಿರ್ಗಮನದ ನಂತರ ಯಶಸ್ವಿ ಜೈಸ್ವಾಲ್ರೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸೋದು ಯಾರು? ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಅಭಿಮಾನಿಗಳ ಕಾತರಕ್ಕೆ ಶೀಘ್ರವೇ ತೆರೆ ಎಳೆಯಲು ಬಿಸಿಸಿಐ ಸಿದ್ಧಗೊಂಡಿದೆ. ಭಾರತ ತಂಡದ ಇಂಗ್ಲೆಂಡ್ ಪ್ರವಾಸಕ್ಕೆ ತಂಡದ ಪ್ರಕಟಣೆಗೆ ಸಂಬಂಧಿಸಿದಂತೆ ಸಂಭಾವ್ಯ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಬಿಸಿಸಿಐ ಮೇ 24 ರಂದು ತಂಡ ಮತ್ತು ಹೊಸ ಭಾರತೀಯ ಟೆಸ್ಟ್ ನಾಯಕನನ್ನು ಘೋಷಿಸುವ ಸಾಧ್ಯತೆಯಿದೆ. ವರದಿಯ ಪ್ರಕಾರ, ಭಾರತದ ಹೊಸ ಟೆಸ್ಟ್ ನಾಯಕ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ತಂಡವನ್ನು ಮೇ 24ರ ಶನಿವಾರ ಪ್ರಕಟಿಸಲಾಗುವುದು. ಶನಿವಾರ ಆಯ್ಕೆ ಸಮಿತಿ ಸಭೆ ಸೇರಲಿದ್ದು, ಅದರ ನಂತರ ಯುವಕರಿಂದ ಕೂಡಿದ ತಂಡವನ್ನು ಘೋಷಿಸಬಹುದು. ಪತ್ರಿಕಾಗೋಷ್ಠಿಯನ್ನು ಸಹ ನಿರೀಕ್ಷಿಸಲಾಗಿದೆ. ಮೂಲಗಳ ಪ್ರಕಾರ, ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಘೋಷಿಸಬಹುದು.
ರೋಹಿತ್ ಸ್ಥಾನ ತುಂಬೋದ್ಯಾರು?
ಮೇ 7ರಂದು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಇದೀಗ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿ ಬಿಸಿಸಿಐ ಸಿಲುಕಿಕೊಂಡಿದೆ. ರೋಹಿತ್ ನಿವೃತ್ತಿ ನಂತರ ಹಲವರ ಹೆಸರುಗಳು ತೇಲಿ ಬಂದವು. ಜಸ್ಪ್ರೀತ್ ಬುಮ್ರಾ, ಶುಭ್ಮನ್ ಗಿಲ್, ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವರ ಹೆಸರುಗಳು ಮುನ್ನೆಲೆಗೆ ಬಂದವು. ಕ್ರಿಕೆಟ್ ತಜ್ಞರು ತಮ್ಮ ತಮ್ಮ ಅಭಿಪ್ರಾಯಗಳನ್ನೂ ಹಂಚಿಕೊಂಡಿದ್ದಾರೆ. ಬಿಸಿಸಿಐ ಮೂಲಗಳು ಒಂದೊಂದು ಹೆಸರು ನಾಯಕತ್ವದ ರೇಸ್ನಲ್ಲಿವೆ ಎಂದು ಬಹಿರಂಗಪಡಿಸಿದ್ದು ಇದೆ. ಕೆಲವೊಂದು ವರದಿಗಳು ಬುಮ್ರಾರನ್ನು ರೇಸ್ನಿಂದ ಹೊರಗಿಡಲಾಗಿದೆ ಎನ್ನುತ್ತಿವೆ.
ಆದರೆ, ಈವರೆಗಿನ ಬಿಸಿಸಿಐ ಮೂಲಗಳ ಪ್ರಕಾರ ಶುಭ್ಮನ್ ಗಿಲ್ ನಾಯಕ ಮತ್ತು ರಿಷಭ್ ಪಂತ್ ಅವರು ಉಪನಾಯಕ ಎಂದು ಹೇಳಲಾಗುತ್ತಿದೆ. ಭಾರತದ ವೇಗದ ಬೌಲರ್ ಬುಮ್ರಾ ಅವರ ಫಿಟ್ನೆಸ್ ಕಾರಣ ಅವರನ್ನು ಕೊಟ್ಟು ನಾಯಕತ್ವದ ರೇಸ್ನಿಂದ ಹೊರಗಿಡಲಾಗಿದೆ. ತಮ್ಮ ಕೆಲಸದ ಹೊರೆ ನಿರ್ವಹಣೆಯಿಂದ ಇಂಗ್ಲೆಂಡ್ನಲ್ಲಿ ಎಲ್ಲಾ ಐದು ಟೆಸ್ಟ್ಗಳನ್ನು ಆಡುವ ಸಾಧ್ಯತೆ ಇಲ್ಲ. ಏಕೆಂದರೆ ಅವರು ಗಾಯದಿಂದ ದೀರ್ಘಕಾಲದವರೆಗೆ ಮೈದಾನಕ್ಕೆ ಮರಳಿಲ್ಲ. ಗಿಲ್ ಮತ್ತು ಪಂತ್ ಅವರೊಂದಿಗಿನ ಅನೌಪಚಾರಿಕ ಮಾತುಕತೆಯ ನಂತರವೂ ರೋಹಿತ್ ಅವರ ಉತ್ತರಾಧಿಕಾರಿಯಾಗಿ ಯಾರನ್ನು ಹೆಸರಿಸಲಾಗುವುದು ಎಂದು ಬಿಸಿಸಿಐ ಇನ್ನೂ ನಿರ್ಧರಿಸಿಲ್ಲ ಎಂದು ಮೇ 20 ರಂದು ವರದಿಯಾಗಿತ್ತು. ಹೀಗಾಗಿ ಈ ಕ್ಲೈಮ್ಯಾಕ್ಸ್ಗೆ ಉತ್ತರ ಸಿಗಲು ಮೇ 24ರ ತನಕ ಕಾಯಲೇಬೇಕು.
ಇಂಗ್ಲೆಂಡ್ ಸರಣಿಗೆ ಭಾರತದ ಸಂಭಾವ್ಯ ತಂಡ
ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ನಿತೀಶ್ ಕುಮಾರ್ ರೆಡ್ಡಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ.