ಶತಕೋಟಿ ಹೃದಯ ಘಾಸಿಗೊಳಿಸಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ; ಡೇವಿಡ್ ವಾರ್ನರ್ ಬೇಸರ
ಕನ್ನಡ ಸುದ್ದಿ  /  ಕ್ರಿಕೆಟ್  /  ಶತಕೋಟಿ ಹೃದಯ ಘಾಸಿಗೊಳಿಸಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ; ಡೇವಿಡ್ ವಾರ್ನರ್ ಬೇಸರ

ಶತಕೋಟಿ ಹೃದಯ ಘಾಸಿಗೊಳಿಸಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ; ಡೇವಿಡ್ ವಾರ್ನರ್ ಬೇಸರ

David Warner: ಶತ ಕೋಟಿ ಭಾರತೀಯರ ಹೃದಯ ಒಡೆಯಲು ಕಾರಣರಾಗಿದ್ದಕ್ಕೆ ಡೇವಿಡ್ ವಾರ್ನರ್ (David Warner), ಕ್ಷಮೆಯಾಚಿಸಿದ್ದಾರೆ. ಎಕ್ಸ್​ ಖಾತೆಯಲ್ಲಿ ಅಭಿಮಾನಿಯೊಬ್ಬನ ಪೋಸ್ಟ್​ಗೆ ವಾರ್ನರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಡೇವಿಡ್ ವಾರ್ನರ್.
ಡೇವಿಡ್ ವಾರ್ನರ್. (REUTERS)

ನವೆಂಬರ್​ 19ರಂದು ಅಹ್ಮದಾಬಾದ್​​ನಲ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ (India vs Australia) 6ನೇ ಟ್ರೋಫಿಗೆ ಮುತ್ತಿಕ್ಕಿತು. ಆದರೆ ಈ ಗೆಲುವು ಭಾರತದ ಶತಕ ಕೋಟಿ ಜನರ ಹೃದಯ ಛಿದ್ರಗೊಳಿಸಿತು. ತವರಿನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿತು. ಆಟಗಾರರ ಜೊತೆಗೆ ಅಭಿಮಾನಿಗಳು ಕಣ್ಣೀರು ಹಾಕಿದರು. ಇಡೀ ಭಾರತವೇ ಮೌನವಾಗಿತು.

ಈ ಸೋಲು ಎದುರಾಳಿ ಆಟಗಾರರನ್ನೂ ಬೇಸರಗೊಳಿಸಿದೆ. ಹೌದು, ಶತಕೋಟಿ ಭಾರತೀಯರ ಹೃದಯ ಒಡೆಯಲು ಕಾರಣರಾಗಿದ್ದಕ್ಕೆ ಡೇವಿಡ್ ವಾರ್ನರ್ (David Warner), ಕ್ಷಮೆಯಾಚಿಸಿದ್ದಾರೆ. ಅಭಿಮಾನಿಯೊಬ್ಬ ಮಾಡಿದ್ದ ಪೋಸ್ಟ್​ಗೆ ವಾರ್ನರ್​ ಹೀಗೆ ಪ್ರತಿಕ್ರಿಯಿಸಿದ್ದಾರೆ. ಪ್ರೀತಿಯ ಡೇವಿಡ್ ವಾರ್ನರ್​ ಅವರೇ ಭಾರತ ತಂಡವನ್ನು ಸೋಲಿಸುವ ಮೂಲಕ ಶತ ಕೋಟಿ ಹೃದಯ ಒಡೆಯಲು ಕಾರಣರಾಗಿದ್ದೀರಿ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನನ್ನು ಟ್ಯಾಗ್ ಮಾಡಿದ್ದ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ವಾರ್ನರ್​, ಕ್ಷಮೆ ಕೇಳಿದ್ದಾರೆ.

ವಾರ್ನರ್ ಹೇಳಿದ್ದೇನು?

ಶತಕೋಟಿ ಭಾರತೀಯರ ಹೃದಯ ಘಾಸಿಗೊಳಿಸಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಇದು ಅದ್ಭುತ ಆಟವಾಗಿತ್ತು. ಮೈದಾನದ ವಾತಾವರಣವು ನಂಬಲಾಗದಂತಿತ್ತು. ಭಾರತ ನಿಜವಾಗಿಯೂ ಅದ್ಭುತವಾದ ಟೂರ್ನಿಯನ್ನು ಆಯೋಜಿಸಿತ್ತು. ಎಲ್ಲರಿಗೂ ಧನ್ಯವಾದಗಳು ಎಂದು ವಾರ್ನರ್ ಎಕ್ಸ್​​ನಲ್ಲಿ, ಅಭಿಮಾನಿಯ ಪೋಸ್ಟ್​ ಪ್ರತಿಕ್ರಿಯಿಸಿದ್ದಾರೆ. ಇನ್ನು ಇನ್​ಸ್ಟಾಗ್ರಾಂನಲ್ಲಿ ವಾರ್ನರ್ ಸುದೀರ್ಘ ಬರಹದ ಮೂಲಕ ಅಭಿಮಾನಿಗಳಿಗೆ ಮತ್ತು ಭಾರತಕ್ಕೆ ಸಲ್ಲಿಸಿದ್ದಾರೆ.

ವಾರ್ನರ್​ ಇನ್​ಸ್ಟಾಗ್ರಾಂ ಪೋಸ್ಟ್​

ಮೊದಲನೆಯದಾಗಿ ನಾನು ಅದ್ಭುತ ಮತ್ತು ನಂಬಲಾಗದ ವಿಶ್ವಕಪ್ ಆಯೋಜಿಸಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಟೂರ್ನಿ ಯಶಸ್ಸಿನ ಹಿಂದೆ ಅಗಾಧ ಶ್ರಮ ಇದೆ. ತೆರೆಮರೆಯಲ್ಲಿ ಭಾಗಿಯಾದ ಎಲ್ಲಾ ಜನರು, ಗ್ರೌಂಡ್ ಸಿಬ್ಬಂದಿ, ಡ್ರೆಸ್ಸಿಂಗ್ ರೂಮ್‌ ಸಿಬ್ಬಂದಿ, ಕಿಚನ್ ಸ್ಟಾಫ್, ಬಾಣಸಿಗರು, ಹೋಟೆಲ್ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಪೊಲೀಸರು, ಆಯೋಜಕರು.. ಹೀಗೆ ಹೇಳುತ್ತಾ ಹೋದರೆ ಪಟ್ಟಿ ಮುಂದುವರಿಯುತ್ತದೆ. ಇವರೆಲ್ಲರಿಗೂ ನನ್ನ ಧನ್ಯವಾದಗಳು.

ಆದರೆ ಮುಖ್ಯವಾಗಿ ಅಭಿಮಾನಿಗಳಿಗೆ ಧನ್ಯವಾದಗಳು. ನಾವು ಪ್ರಯಾಣಿಸುತ್ತಿದ್ದ ರಸ್ತೆ, ವಿಮಾನ ನಿಲ್ದಾಣ ಹೀಗೆ ಎಲ್ಲಾ ಕಡೆಯೂ ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ್ದೀರಿ. ನಮಗಾಗಿ ಕಾಯುತ್ತಿದ್ದ ನಿಮ್ಮ ತಾಳ್ಮೆ, ಸಹನೆ ಮೆಚ್ಚುಗೆಗೆ ಕಾರಣವಾಗಿದೆ. ನೀವೇ ಇಲ್ಲದಿದ್ದರೆ, ನಾವೆಲ್ಲರೂ ಇಷ್ಟಪಡುವ ಆಟವನ್ನು ಆಡಲು ಕಷ್ಟವಾಗುತ್ತಿತ್ತು. ನಿಜ, ಫಲಿತಾಂಶ ನೀವಂದುಕೊಂಡಂತು ಇರಲಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ ಈ ಹಲವು ವಾರಗಳಂತೂ ಅದ್ಭುತವಾಗಿದ್ದವು.

ಚಾಂಪಿಯನ್​ ಆಗಿ ಮತ್ತು 6ನೇ ಟ್ರೋಫಿಗೆ ಮುತ್ತಿಕ್ಕಿರುವುದು ಭಾರಿ ಖುಷಿ ಕೊಟ್ಟಿದೆ. ನಮ್ಮ ಇಡೀ ತಂಡವು ಅತ್ಯಂತ ಹೆಮ್ಮೆಪಡುತ್ತಿದೆ. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು. 2027ರ ವಿಶ್ವಕಪ್​​ನಲ್ಲಿ ಭೇಟಿಯಾಗೋಣ ಎಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ 2027ರ ವಿಶ್ವಕಪ್ ಆಡುವ ಸುಳಿವನ್ನೂ ಕೊಟ್ಟಿದ್ದಾರೆ. ಆದರೆ ಅವರಿಗೀಗ 37 ವರ್ಷ. ಅಲ್ಲಿಯವರೆಗೂ ತಂಡದಲ್ಲಿ ಇರುತ್ತಾರಾ ಎಂಬುದೇ ಅನುಮಾನ.

ವಿಶ್ವಕಪ್​ನಲ್ಲಿ ವಾರ್ನರ್ ಪ್ರದರ್ಶನ

ಈ ವಿಶ್ವಕಪ್​ನಲ್ಲಿ ಡೇವಿಡ್ ವಾರ್ನರ್ ಅತ್ಯದ್ಬುತ ಪ್ರದರ್ಶನ ನೀಡಿದ್ದಾರೆ. ಆಡಿರುವ 11 ಪಂದ್ಯಗಳ ಪೈಕಿ ಅವರು 48.64ರ ಸರಾಸರಿಯಲ್ಲಿ 535 ರನ್ ಗಳಿಸಿದ್ದಾರೆ. 108ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿದ ವಾರ್ನರ್, 2 ಶತಕ, 2 ಅರ್ಧಶತಕ ಸಿಡಿಸಿದ್ದಾರೆ. ಆ ಮೂಲಕ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಇದು ಆಸೀಸ್​ ಪರ ಆಟಗಾರನೊಬ್ಬ ಗಳಿಸಿದ ಅಧಿಕ ರನ್.

Whats_app_banner