ಬ್ಯಾಟಿಂಗ್-ಬೌಲಿಂಗ್‌ನಲ್ಲಿ ಮಿಂಚಿದ ಡೇವಿಡ್ ವೈಸ್; ಒಮಾನ್ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದ ನಮೀಬಿಯಾ
ಕನ್ನಡ ಸುದ್ದಿ  /  ಕ್ರಿಕೆಟ್  /  ಬ್ಯಾಟಿಂಗ್-ಬೌಲಿಂಗ್‌ನಲ್ಲಿ ಮಿಂಚಿದ ಡೇವಿಡ್ ವೈಸ್; ಒಮಾನ್ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದ ನಮೀಬಿಯಾ

ಬ್ಯಾಟಿಂಗ್-ಬೌಲಿಂಗ್‌ನಲ್ಲಿ ಮಿಂಚಿದ ಡೇವಿಡ್ ವೈಸ್; ಒಮಾನ್ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದ ನಮೀಬಿಯಾ

ಟಿ20 ವಿಶ್ವಕಪ್‌ನಲ್ಲಿ ರೋಚಕವಾಗಿ ನಡೆದ ನಮೀಬಿಯಾ ಮತ್ತು ಒಮಾನ್‌ ತಂಡಗಳ ನಡುವಿನ ಪಂದ್ಯವು ಸೂಪರ್ ಓವರ್‌ನಲ್ಲಿ ಫಲಿತಾಂಶ ಕಂಡಿತು. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸಿಡಿದ ಡೇವಿಡ್‌ ವೈಸ್, ಸೂಪರ್ ಓವರ್‌ನಲ್ಲಿ 13 ರನ್ ಗಳಿಸಿ ನಮೀಬಿಯಾಗೆ ರೋಚಕ ಗೆಲುವು ತಂದುಕೊಟ್ಟರು.

ಒಮಾನ್ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದ ನಮೀಬಿಯಾ
ಒಮಾನ್ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದ ನಮೀಬಿಯಾ (ICC)

ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ರೋಚಕ ಪಂದ್ಯಗಳು ನಡೆಯುತ್ತಿವೆ. ಕ್ರಿಕೆಟ್‌ಗೆ ಶಿಶುಗಳಂತಿರುವ ಸಣ್ಣ ತಂಡಗಳ ಪಂದ್ಯ ನೀರಸವಾಗಿರುತ್ತದೆ ಎಂದುಕೊಂಡ ಅಭಿಮಾನಿಗಳಿಗೆ, ಹಲವು ತಂಡಗಳು ರೋಚಕ ಹಣಾಹಣಿ ಉಣಬಡಿಸುತ್ತಿವೆ. ಇದಕ್ಕೆ ನಮೀಬಿಯಾ ಮತ್ತು ಒಮಾನ್‌ (Namibia vs Oman) ತಂಡಗಳ ನಡುವಿನ ಪಂದ್ಯವೇ ಸಾಕ್ಷಿ. ಉಭಯ ತಂಡಗಳ ನಡುವೆ ಬಾರ್ಬಡೋಸ್‌ನಲ್ಲಿ ನಡೆದ ಪಂದ್ಯವು ಟೈನಲ್ಲಿ ಅಂತ್ಯವಾಯ್ತು. ಆ ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಡೇವಿಡ್ ವೈಸ್ ಅವರ ವೀರೋಚಿತ ಪ್ರದರ್ಶನದ ನೆರವಿಂದ ನಮೀಬಿಯಾ ರೋಚಕ ಜಯ ಸಾಧಿಸಿತು. ಇದರೊಂದಿಗೆ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿದೆ.

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನಮೀಬಿಯಾ ಬರೋಬ್ಬರಿ 21 ರನ್‌ ಗಳಿಸಿತು. ಒಮಾನ್‌ ತಂಡಕ್ಕೆ ಒಂದೇ ಓವರ್‌ನಲ್ಲಿ 22 ರನ್‌ ಗುರಿ ನೀಡಿತು. ಭರ್ಜರಿ 13 ರನ್ ಗಳಿಸಿ ಮತ್ತೆ ಬೌಲಿಂಗ್‌ ಮಾಡಿದ ವೈಸ್, 21 ರನ್‌ಗಳನ್ನು ಡಿಫೆಂಡ್‌ ಮಾಡುವಲ್ಲಿ ಯಶಸ್ವಿಯಾದರು. ಇದರ ನಡುವೆ ಒಂದು ವಿಕೆಟ್ ಕೂಡಾ ಪಡೆದರು. ಒಮಾನ್‌ ಕೇವಲ 10 ರನ್‌ ಗಳಿಸಲು ಮಾತ್ರ ಸಾಧ್ಯವಾಯ್ತು.

ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ನಮೀಬಿಯಾ ಪರ ಹೀರೋ ಆಗಿ ಹೊರಹೊಮ್ಮಿದ ಡೇವಿಡ್‌ ವೈಸ್‌, ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಒಮಾನ್, 20 ಓವರ್‌ಳಲ್ಲಿ 109 ರನ್‌ ಗಳಿಸಿ ಆಲೌಟ್‌ ಆಯ್ತು. ಆರಂಭದಿಂದಲೇ ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡು ತಂಡ ನಮೀಬಿಯಾಗೆ 110 ರನ್‌ಗಳ ಅಲ್ಪ ಗುರಿ ನೀಡಿತು. ವೆಸ್ಟ್ ಇಂಡೀಸ್‌ ನಿಧಾನಗತಿಯ ಪಿಚ್‌ನಲ್ಲಿ ಅಲ್ಪ ಮೊತ್ತವನ್ನು ಚೇಸ್‌ ಮಾಡಲು ನಮೀಬಿಯಾ ಪರದಾಡಿತು. ಮೊದಲ ಓವರ್‌ನಲ್ಲೇ ಲಿಂಗನ್‌ ವಿಕೆಟ್‌ ಕಳೆದುಕೊಂಡರೂ, ನಿಕೋಲಸ್ ಡೇವಿನ್ ಮತ್ತು ಜಾನ್ ಫ್ರೈಲಿಂಕ್ ಇನ್ನಿಂಗ್ಸ್‌ ಮುನ್ನಡೆಸಿದರು.

ಕೊನೆಯ ಓವರ್‌ನಲ್ಲಿ ಕೇವಲ 5 ರನ್‌ಗಳ ಗುರಿ

19 ಓವರ್‌ ಅಂತ್ಯಕ್ಕೆ 105 ರನ್‌ ವೇಳೆಗೆ ಕೇವಲ 4 ವಿಕೆಟ್‌ ಕಳೆದುಕೊಂಡಿದ್ದ ನಮೀಬಿಯಾ, ಕೊನೆಯ ಓವರ್‌ನಲ್ಲಿ ಕೇವಲ 5 ರನ್‌ಗಳ ಗುರಿ ಪಡೆಯಿತು. ಆದರೆ, ಗುರಿ ತಲುಪಲು ತಂಡಕ್ಕೆ ಸಾಧ್ಯವಾಗಲಿಲ್ಲ. ಕೊನೆಯ ಎಸೆತದವರೆಗೂ ರೋಚಕವಾಗಿ ನಡೆದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಗೆಲುವಿಗೆ 2 ರನ್‌ ಬೇಕಿತ್ತು. ಒಂದು ರನ್‌ ಗಳಿಸಿದ ನಮೀಬಿಯಾ ಪಂದ್ಯ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯ್ತು. ಹೀಗಾಗಿ ಪಂದ್ಯ ಸೂಪರ್‌ ಓವರ್‌ಗೆ ಸಾಗಿತು.

ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಕೇವಲ 5 ರನ್‌ ಗಳಿಸಲು ಸಾಧ್ಯವಾಗದ ನಮೀಬಿಯಾ, ಆ ಬಳಿಕ ಸೂಪರ್ ಓವರ್‌ನಲ್ಲಿ 21 ರನ್‌ ಗಳಿಸಿ ಗೆದ್ದು ಬೀಗಿತು. ಗುರಿ ತಲುಪಿತು. ಅನುಭವಿ ಆಲ್‌ರೌಂಡರ್ ವೈಸ್, ಬಿಲಾಲ್ ಖಾನ್ ಎಸೆತದಲ್ಲಿ ಸಿಕ್ಸರ್ ಮತ್ತು ಬೌಂಡರಿ ಸಿಡಿಸುಔ ಮೂಲಕ ತಮ್ಮ ಪವರ್ ಹಿಟ್ಟಿಂಗ್ ಸಾಮರ್ಥ್ಯ ಪ್ರದರ್ಶಿಸಿದರು. ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಮೀಬಿಯಾ ಗಳಿಸಿದದ 21 ರನ್, ಸೂಪರ್ ಓವರ್‌ನಲ್ಲಿ ಗರಿಷ್ಠ ಮೊತ್ತವಾಗಿದೆ.

Whats_app_banner