ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಇನ್ನಿಂಗ್ಸ್‌ ಮತ್ತು 32 ರನ್‌ ಸೋಲು
ಕನ್ನಡ ಸುದ್ದಿ  /  ಕ್ರಿಕೆಟ್  /  ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಇನ್ನಿಂಗ್ಸ್‌ ಮತ್ತು 32 ರನ್‌ ಸೋಲು

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಇನ್ನಿಂಗ್ಸ್‌ ಮತ್ತು 32 ರನ್‌ ಸೋಲು

ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್‌ ಕೊಹ್ಲಿ ಅರ್ಧಶತಕ ಸಿಡಿಸಿದರೆ, ಶುಭ್ಮನ್‌ ಗಿಲ್‌ 26 ರನ್‌ ಗಳಿಸಿದರು. ಇವರಿಬ್ಬರ ಹೊರತಾಗಿ ಬೇರಾವ ಬ್ಯಾಟರ್‌ಗಳು ಕೂಡಾ ಎರಡಂಕಿ ಮೊತ್ತ ಗಳಿಸಲಿಲ್ಲ.

ದಕ್ಷಿಣ ಆಫ್ರಿಕಾ ಆಟಗಾರರ ಸಂಭ್ರಮ
ದಕ್ಷಿಣ ಆಫ್ರಿಕಾ ಆಟಗಾರರ ಸಂಭ್ರಮ (PTI)

ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ (South Africa vs India) ಭಾರತ ತಂಡವು ಇನ್ನಿಂಗ್ಸ್‌ ಮತ್ತು 32 ರನ್‌ಗಳಿಂದ ಹೀನಾಯ ಸೋಲು ಕಂಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ತೀರಾ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ ಆಟಗಾರರು, ಹರಿಣಗಳ ಬಳಗದ ಬೌಲರ್‌ಗಳಿಗೆ ಸುಲಭ ತುತ್ತಾಗಿ ಕೇವಲ 131 ರನ್‌ಗಳಿಗೆ ಆಲೌಟ್‌ ಆದರು. ಹೀಗಾಗಿ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವು ಕೇವಲ ಮೂರೇ ದಿನಗಳಿಗೆ ಅಂತ್ಯಗೊಂಡಿದೆ.

ಮೂರನೇ ದಿನದಾಟದಲ್ಲಿ ಬ್ಯಾಟಿಂಗ್‌ ಮುಂದುವರೆಸಿದ ದಕ್ಷಿಣ ಆಫ್ರಿಕಾ, ಒಟ್ಟು 408 ರನ್‌ ಗಳಿಸಿ ಆಲೌಟ್‌ ಆಯ್ತು. 163 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತವು, ಮತ್ತೊಮ್ಮೆ ಬರ್ಗರ್‌ ಮತ್ತು ರಬಾಡಾ ಆಕ್ರಮಣಕ್ಕೆ ಬಲಿಯಾಯ್ತು. ಟೀಮ್‌ ಇಂಡಿಯಾ ಪರ ಕೆಲಕಾಲ ಪ್ರತಿರೋಧ ಒಡ್ಡಿದ್ದು ವಿರಾಟ್‌ ಕೊಹ್ಲಿ ಮಾತ್ರ. ಅಂತಿಮವಾಗಿ ಭಾರತವು ಕೇವಲ 131 ರನ್‌ ಗಳಿಗೆ ಆಲೌಟ್‌ ಆಯ್ತು. ಆ ಮೂಲಕ ಆತಿಥೇಯ ದಕ್ಷಿಣ ಆಫ್ರಿಕಾ ಭರ್ಜರಿಯಾಗಿ ಗೆಲ್ಲುವುದರೊಂದಿಗೆ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಭಾರತದ ಪರ ವಿರಾಟ್‌ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರೆ, ಶುಭ್ಮನ್‌ ಗಿಲ್‌ 26 ರನ್‌ ಗಳಿಸಿದರು. ಇವರಿಬ್ಬರ ಹೊರತಾಗಿ ಬೇರಾವ ಬ್ಯಾಟರ್‌ಗಳು ಕೂಡಾ ಎರಡಂಕಿ ಮೊತ್ತ ಗಳಿಸಲಿಲ್ಲ.

ಇದನ್ನೂ ಓದಿ | ಭಾರತ ತಂಡ ನಿಜಕ್ಕೂ ಆತನನ್ನು ಮಿಸ್ ಮಾಡಿಕೊಳ್ತಿದೆ; ಸ್ಟಾರ್ ಆಟಗಾರನ ಅನುಪಸ್ಥಿತಿಗೆ ದಿನೇಶ್ ಕಾರ್ತಿಕ್ ಬೇಸರ

ನಾಯಕ ರೋಹಿತ್‌ ಶರ್ಮಾ ಡಕೌಟ್‌ ಆಗಿ ಮತ್ತೊಮ್ಮೆ ನಿರಾಶೆ ಮೂಡಿಸಿದರು. ಯಶಸ್ವಿ ಜೈಸ್ವಾಲ್‌ ಆಟ 5 ರನ್‌ಗೆ ಅಂತ್ಯವಾದರೆ, ಶ್ರೇಯಸ್‌ ಅಯ್ಯರ್‌ 6 ರನ್‌ ಗಳಿಸಿ ಜಾನ್ಸೆನ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಕೆಎಲ್‌ ರಾಹುಲ್‌ ಈ ಬಾರಿ 24 ಎಸೆತಗಳಲ್ಲಿ 4 ರನ್‌ ಗಳಿಸಿ ನಿರ್ಗಮಿಸಿದರು. ಅವರ ಬೆನ್ನಲ್ಲೇ ಅಶ್ವಿನ್‌ ಕೂಡಾ ಔಟಾಗಿ ಸತತ ಎರಡು ಎಸೆತಗಳಲ್ಲಿ ತಂಡ ಎರಡು ಪ್ರಮುಖ ವಿಕೆಟ್‌ ಕಳೆದುಕೊಂಡಿತು. ಬ್ಯಾಟಿಂಗ್‌ನಲ್ಲಿ ನೆರವಾಗಬೇಕಿದ್ದ ಶಾರ್ದುಲ್‌ ಠಾಕೂರ್‌ ಕೂಡಾ 2 ರನ್‌ಗೆ ಔಟಾಗಿ ನಿರಾಶೆ ಮೂಡಿಸಿದರು.

ಇದನ್ನೂ ಓದಿ | ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ನಾಯಕರು; ಇಲ್ಲೂ ಭಾರತದವರದ್ದೇ ಪ್ರಾಬಲ್ಯ

ಒಂದು ಕಡೆ ವಿಕೆಟ್‌ ಪತನವಾಗುತ್ತಿದ್ದಾಗ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಹೋರಾಡಿ ತಂಡವನ್ನು ಮುನ್ನಡೆಸುವ ಯೋಜನೆ ಹಾಕಿದರು. ಆದರೆ, 82 ಎಸೆತಗಳಲ್ಲಿ ಕೊಹ್ಲಿ 76 ರನ್‌ ಗಳಿಸಿದ್ದಾಗ ರಬಾಡ ಅಮೋಘ ಕ್ಯಾಚ್‌ ಹಿಡಿದರು. ಇದರೊಂದಿಗೆ ಭಾರತದ ಆಟ ಅಂತ್ಯವಾಯ್ತು.

ದಕ್ಷಿಣ ಆಫ್ರಿಕಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಬರ್ಗರ್ 4 ವಿಕೆಟ್‌ ಪಡೆದುಕೊಂಡರೆ, ಜಾನ್ಸೆನ್‌ 3 ವಿಕೆಟ್‌ ಕಬಳಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವು 245 ರನ್‌ ಗಳಿಸಿ ಆಲೌಟ್‌ ಆಯ್ತು. ಭಾರತದ ಪರ ಕೆಎಲ್‌ ರಾಹುಲ್ 137 ಎಸೆತಗಳಲ್ಲಿ 101 ರನ್‌ ಗಳಿಸಿ ತಂಡದ ಪರ ಅಧಿಕ ರನ್‌ ಗಳಿಸಿದ ಆಟಗಾರನಾದರು. ಕೇವಲ 133 ಎಸೆತಗಳಲ್ಲಿ ಮೂರಂಕಿ ಮೊತ್ತ ತಲುಪಿದ ರಾಹುಲ್‌, ಸೆಂಚುರಿಯನ್‌ ಮೈದಾನದಲ್ಲಿ ಒಂದಕ್ಕಿಂತ ಹೆಚ್ಚು ಶತಕ ಸಿಡಿಸಿದ ಮೊದಲನೇ ವಿದೇಶಿ ಬ್ಯಾಟರ್‌ ಎನಿಸಿಕೊಂಡರು. ಎರಡನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ 5 ವಿಕೆಟ್‌ ನಷ್ಟಕ್ಕೆ 256 ರನ್ ಕಲೆ ಹಾಕಿತ್ತು. ಡೀನ್‌ ಎಲ್ಗರ್‌ ಆಕರ್ಷಕ ಶತಕ ಸಿಡಿಸಿದರು. ಮೂರನೇ ದಿನದಾಟದಲ್ಲಿ ಬ್ಯಾಟಿಂಗ್‌ ಮುಂದುವರೆಸಿದ ಆತಿಥೇಯ ತಂಡ 408 ರನ್‌ ಗಳಿಸಿ ಇನ್ನಿಂಗ್ಸ್‌ ಮುಗಿಸಿತು. ಇದಕ್ಕೆ ಪ್ರತಿಯಾಗಿ ಭಾರತವು ಕೇವಲ 131 ರನ್‌ ಗಳಿಸಲಷ್ಟೆ ಶಕ್ತವಾಯ್ತು.

Whats_app_banner