ಲೀಗ್ನಿಂದ ಫೈನಲ್ ತನಕ ಭಾರತ ಪರ ಆರಂಭಿಕ ವಿಕೆಟ್ಗೆ ಬಂದೇ ಇಲ್ಲ ಅರ್ಧಶತಕದ ಜೊತೆಯಾಟ; 39 ರನ್ ಬಂದಿದ್ದೇ ಗರಿಷ್ಠ!
Rohit Sharma Virat Kohli: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಲೀಗ್ ಹಂತದಿಂದ ಫೈನಲ್ ಪಂದ್ಯದ ತನಕ ಭಾರತ ತಂಡದ ಪರ ಆರಂಭಿಕ ವಿಕೆಟ್ಗೆ ಅರ್ಧಶತಕದ ಜೊತೆಯಾಟವೇ ಬಂದಿಲ್ಲ!
ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ (ICC T20 World Cup 2024) ಟೀಮ್ ಇಂಡಿಯಾ (Team India) ಕಳಪೆ ಪ್ರದರ್ಶನ ನೀಡಿದೆ. ಲೀಗ್ನಿಂದ ಫೈನಲ್ ಪಂದ್ಯದ ತನಕ ಒಮ್ಮೆಯೂ ಆರಂಭಿಕ ವಿಕೆಟ್ಗೆ ಅರ್ಧಶತಕದ ಜೊತೆಯಾಟ ಬಂದಿಲ್ಲ! ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಮೊದಲ ವಿಕೆಟ್ಗೆ ಬಂದಿದ್ದು 23 ರನ್ಗಳ ಜೊತೆಯಾಟವಷ್ಟೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Rohit Sharma and Virat Kohli) ಅವರು ಆರಂಭಿಕರಾಗಿ ಒಮ್ಮೆಯೂ 50+ ಸ್ಕೋರ್ ಮಾಡಲಿಲ್ಲ ಎಂಬುದು ವಿಪರ್ಯಾಸ ತಂದಿದೆ. ಬಾಂಗ್ಲಾದೇಶ ವಿರುದ್ಧ 39 ರನ್ಗಳಿಸಿದ್ದೇ ಇಬ್ಬರ ಗರಿಷ್ಠ ಜೊತೆಯಾಟವಾಗಿದೆ.
ಸೆಮಿಫೈನಲ್, ಫೈನಲ್ನಲ್ಲೂ 30 ರನ್ ದಾಟಿಲ್ಲ!
ಲೀಗ್ ಮತ್ತು ಸೂಪರ್-8 ಹಂತವಿರಲಿ ಸೆಮಿಫೈನಲ್, ಫೈನಲ್ ಪಂದ್ಯದಲ್ಲೂ ಆರಂಭಿಕ ವಿಕೆಟ್ಗೆ ಭಾರತ ತಂಡವು ಅರ್ಧಶತಕದ ಜೊತೆಯಾಟವಾಡಿಲ್ಲ. ಕನಿಷ್ಠ 30 ರನ್ಗಳ ಜೊತೆಯಾಟವೂ ಆಡಿಲ್ಲ. ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಎದುರು 19 ರನ್ಗಳ ಪಾಲುದಾರಿಕೆ ಮತ್ತು ಫೈನಲ್ನಲ್ಲಿ ಸೌತ್ ಆಫ್ರಿಕಾ ಎದುರು ಕೂಡ ಕೇವಲ 23 ರನ್ಗಳ ಜೊತೆಯಾಟ ಬಂದಿದೆ. ಸೆಮೀಸ್ನಲ್ಲಿ ವಿರಾಟ್ ಬೇಗ ಔಟಾದರೆ, ಅಂತಿಮ ಹಣಾಹಣಿಯಲ್ಲಿ ರೋಹಿತ್, ಬೇಗನೇ ಹೊರನಡೆದರು. ಇದು ಸಾಕಷ್ಟು ಟೀಕೆಗೆ ಕಾರಣವಾಗಿದೆ.
ಆರಂಭಿಕ ವಿಕೆಟ್ಗೆ ಒಮ್ಮೆ ಮಾತ್ರ 30+ ಸ್ಕೋರ್
ರೋಹಿತ್ ಮತ್ತು ಕೊಹ್ಲಿ ಇಬ್ಬರು ಆರಂಭಿಕರಾಗಿ ಒಮ್ಮೆ ಮಾತ್ರ 30+ ರನ್ಗಳ ಜೊತೆಯಾಟವಾಡಿದ್ದಾರೆ. ಬಾಂಗ್ಲಾದೇಶ ಎದುರು 39 ರನ್ಗಳ ಪಾಲುದಾರಿಕೆ ಒದಗಿಸಿದ್ದರು. 2 ಬಾರಿಗೆ 20+ ರನ್ಗಳ ಜೊತೆಯಾಟ ಆಡಿದ್ದಾರೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್ ಎದುರು 22, ಫೈನಲ್ನಲ್ಲಿ 23 ರನ್ಗಳ ಪಾಲುದಾರಿಕೆ ನೀಡಿದ್ದಾರೆ. ಉಳಿದ ಪಂದ್ಯಗಳಲ್ಲಿ ಅದಕ್ಕಿಂತ ಕಡಿಮೆ ರನ್ಗಳ ಜೊತೆಯಾಟವಾಡಿದ್ದಾರೆ. ಪ್ರತಿ ಪಂದ್ಯದಲ್ಲಿ ಆರಂಭಿಕರ ಜೊತೆಯಾಟ ಇಲ್ಲಿದೆ ನೋಡಿ.
22 (2.4) vs ಐರ್ಲೆಂಡ್ (ಗುಂಪು ಹಂತ)
12 (1.3) vs ಪಾಕಿಸ್ತಾನ (ಗುಂಪು ಹಂತ)
1 (0.2) vs ಯುಎಸ್ಎ (ಗುಂಪು ಹಂತ)
00 vs ಕೆನಡಾ (ಎಸೆತ ಕಾಣದೆ ಪಂದ್ಯ ರದ್ದು)
11 (2.5) vs ಅಫ್ಘಾನಿಸ್ತಾನ (ಸೂಪರ್-8)
39 (3.4) vs ಬಾಂಗ್ಲಾದೇಶ (ಸೂಪರ್-8)
6 (1.4) vs ಆಸ್ಟ್ರೇಲಿಯಾ (ಸೂಪರ್-8)
19 (2.4) vs ಇಂಗ್ಲೆಂಡ್ (ಸೆಮಿಫೈನಲ್)
23 (1.4) vs ಸೌತ್ ಆಫ್ರಿಕಾ (ಫೈನಲ್)
ರೋಹಿತ್ ಮಿಂಚು, ಕೊಹ್ಲಿ ವೈಫಲ್ಯ
ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಿದರೆ, ರೋಹಿತ್ ಶರ್ಮಾ ಮಿಂಚಿನ ಪ್ರದರ್ಶನ ನೀಡಿದರು. ಫೈನಲ್ನಲ್ಲಿ ಹಿಟ್ಮ್ಯಾನ್ 9 ರನ್ ಗಳಿಸಿದರೂ ಉಳಿದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. 8 ಪಂದ್ಯಗಳಲ್ಲಿ 36.71ರ ಬ್ಯಾಟಿಂಗ್ ಸರಾಸರಿಯಲ್ಲಿ 257 ರನ್ ಗಳಿಸಿ ಎರಡನೇ ಟಾಪ್ ಸ್ಕೋರರ್ ಆದರು. ಆದರೆ ಕೊಹ್ಲಿ ಫೈನಲ್ಗೂ ಮುನ್ನ 7 ಪಂದ್ಯಗಳಲ್ಲಿ ಗಳಿಸಿದ್ದೇ 75 ರನ್. ಸತತ ವೈಫಲ್ಯ ಅನುಭವಿಸಿ ಟೀಕೆಗೂ ಗುರಿಯಾದರು.