ಕೊನೆಯ 11 ಎಸೆತಗಳಲ್ಲಿ 6 ವಿಕೆಟ್ ಪತನ; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುಪಿ ವಾರಿಯರ್ಸ್ಗೆ ರೋಚಕ 1 ರನ್ ಗೆಲುವು
Delhi Capitals vs UP Warriorz : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವು 1 ರನ್ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಪ್ಲೇಆಫ್ ಕನಸನ್ನು ಮತ್ತಷ್ಟು ಜೀವಂತವಾಗಿಟ್ಟುಕೊಂಡಿದೆ.
2024ರ ವುಮೆನ್ಸ್ ಪ್ರೀಮಿಯರ್ ಲೀಗ್ ರೋಚಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಗೆಲುವಿಗೆ 2 ರನ್ ಬೇಕಿದ್ದಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ ಯುಪಿ ವಾರಿಯರ್ಸ್ 1 ರನ್ನಿಂದ ರಣರೋಚಕ ಗೆಲುವು ಸಾಧಿಸಿತು. 19ನೇ ಮತ್ತು 20ನೇ ಓವರ್ನ 5 ಎಸೆತಗಳು ಸೇರಿ ಕೊನೆಯ 11 ಎಸೆತಗಳಲ್ಲಿ ಅಂದರೆ ಡೆಲ್ಲಿ 6 ವಿಕೆಟ್ಗಳನ್ನು ಕಳೆದುಕೊಂಡಿತು. ಇದರೊಂದಿಗೆ ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಗೆದ್ದು ಬೀಗಿದ್ದಲ್ಲದೆ, ಪ್ಲೇಆಫ್ ಕನಸನ್ನು ಮತ್ತಷ್ಟು ಜೀವಂತವಾಗಿಟ್ಟುಕೊಂಡಿದೆ.
ಅಂತಿಮ ಎರಡು ಓವರ್ಗಳಲ್ಲಿ ಮಹಾಪತನ
ಕೊನೆಯ ಎರಡು ಓವರ್ಗಳು ಅಂದರೆ 12 ಎಸೆತಗಳಲ್ಲಿ ಡೆಲ್ಲಿ ಗೆಲುವಿಗೆ 15 ರನ್ ಬೇಕಿತ್ತು. ಇನ್ನೂ 6 ವಿಕೆಟ್ಗಳು ತಂಡದ ಕೈಯಲ್ಲಿದ್ದವು. ತಂಡದ ಸ್ಕೋರ್ 124ಕ್ಕೆ 4 ಆಗಿತ್ತು. ಆದರೆ 19ನೇ ಓವರ್ ಬೌಲಿಂಗ್ ಎಸೆದ ದೀಪ್ತಿ ಶರ್ಮಾ ಮೊದಲ ಎರಡು ಎಸೆತಗಳಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್ ಮತ್ತು ಅರುಂಧತಿ ರೆಡ್ಡಿ ಅವರನ್ನು ಔಟ್ ಮಾಡಿದರು. ನಂತರ ಕಣಕ್ಕಿಳಿದ ಶಿಖಾ ಪಾಂಡೆ, ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು. ಆದರೆ ಮರು ಎಸೆತದಲ್ಲೇ ಔಟಾಗಿ ಓವರ್ನಲ್ಲಿ ಮೂರನೇ ಬಲಿಯಾದರು. ಉಳಿದ ಎರಡು ಎಸೆತಗಳಲ್ಲಿ ಒಂದು ರನ್ ಬಂತು.
ಇನ್ನು 20ನೇ ಓವರ್ನಲ್ಲಿ ಡೆಲ್ಲಿ ಗೆಲುವಿಗೆ 10 ಅಗತ್ಯ ಇತ್ತು. ಸ್ಟ್ರೈಕ್ನಲ್ಲಿದ್ದ ರಾಧಾ ಯಾದವ್ ಭರ್ಜರಿ ಹಿಟ್ ಮಾಡಿದರು. ಆ ಚೆಂಡು ಫೀಲ್ಡರ್ಗಳಿಂದ ತಪ್ಪಿಸಿಕೊಂಡು ಬೌಂಡರಿ ಗೆರೆದು ಬಡಿದು ಸಿಕ್ಸರ್ ಆಯಿತು. ಮರು ಎಸೆತದಲ್ಲಿ ರಾಧಾ 2 ರನ್ ಗಳಿಸಿದರು. ಇದರೊಂದಿಗೆ ಡೆಲ್ಲಿ ಡಗೌಟ್ನಲ್ಲಿ ಗೆಲ್ಲುತ್ತೇವೆಂಬ ಮಂದಹಾಸ ಉಕ್ಕುತ್ತಿತ್ತು. ಆದರೆ 3ನೇ ಬಾಲ್ನಲ್ಲಿ ರಾಧಾ ಔಟಾದರು. ಬೌಲಿಂಗ್ ಮಾಡುತ್ತಿದ್ದದ್ದು ಗ್ರೇಸ್ ಹ್ಯಾರಿಸ್. ಆದರೂ ಡೆಲ್ಲಿ ತಂಡದ ಆಟಗಾರ್ತಿಯರ ಖುಷಿಯ ಕೊಂಚವೂ ತಗ್ಗಿರಲಿಲ್ಲ.
ಆದರೆ, 4ನೇ ಎಸೆತದಲ್ಲಿ ತಾನಿಯಾ ಭಾಟಿಯಾ ಸಿಂಗಲ್ ಕದಿಯಲು ಯತ್ನಿಸಿದರು. ಈ ವೇಳೆ ನಾನ್ಸ್ಟ್ರೈಕ್ನಿಂದ ಸ್ಟ್ರೈಕ್ಗೆ ಓಡಿದ ಜೆಸ್ ಜೊನಾಸೆನ್ ರನೌಟ್ ಆದರು. ಇನ್ನು ಕೊನೆಯ ಎರಡು ಎಸೆತಗಳಿಗೆ 2 ರನ್ ಬೇಕಿತ್ತು. ಅತ್ತ ಡೆಲ್ಲಿ ಕೈಯಲ್ಲೂ ಇನ್ನೊಂದೇ ವಿಕೆಟ್ ಇತ್ತು. ಡಗೌಟ್ನಲ್ಲಿ ಮೊದಲಿದ್ದ ಸಂತೋಷವೂ ಏಕಾಏಕಿ ಮಾಯವಾಗಿತ್ತು. 20ನೇ ಓವರ್ನ 5ನೇ ಎಸೆತವನ್ನು ಎದುರಿಸಿದ ಟಿಟಾಸ್ ಸಧು, ನೇರವಾಗಿ ಡೇನಿಯಲ್ ವ್ಯಾಟ್ಗೆ ಕ್ಯಾಚ್ ನೀಡಿದರು. ಈ ಕ್ಯಾಚ್ನೊಂದಿಗೆ ಯುಪಿ ತಂಡ ಕುಣಿದು ಕುಪ್ಪಳಿಸಿತು.
ಅಂಕಪಟ್ಟಿಯಲ್ಲಿ ಆರ್ಸಿಬಿಗೆ ಪೈಪೋಟಿ
ಯುಪಿ ವಾರಿಯರ್ಸ್ ರೋಚಕ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6 ಅಂಕ ಸಂಪಾದಿಸಿದೆ. ಆದರೆ ಇದು ಆರ್ಸಿಬಿಗೆ ಮುಳುವಾಗುವ ಸಾಧ್ಯತೆ ಇದೆ. ಉಭಯ ತಂಡಗಳು ತಲಾ 6 ಅಂಕ ಸಂಪಾದಿಸಿವೆ. ಆದರೆ, ನೆಟ್ ರನ್ರೇಟ್ನಲ್ಲಿ ಆರ್ಸಿಬಿ ಪ್ಲಸ್ ಇದೆ. ಯುಪಿ ಮೈನಸ್ನಲ್ಲಿದೆ. ಯುಪಿಗೆ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಹಾಗಾಗಿ ಮುಂದಿನ ಎರಡೂ ಪಂದ್ಯಗಳಲ್ಲಿ ಆರ್ಸಿಬಿ ಗೆಲುವು ಸಾಧಿಸಲೇಬೇಕಿದೆ.
ಸಂಕ್ಷಿಪ್ತ ಸ್ಕೋರ್ ವಿವರ
ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಯುಪಿ ವಾರಿಯರ್ಸ್ ತಂಡಕ್ಕೆ ದೀಪ್ತಿ ಶರ್ಮಾ ಅರ್ಧಶತಕ (59) ಸಿಡಿಸಿ ಆಸರೆಯಾದರು. ಪರಿಣಾಮ 8 ವಿಕೆಟ್ ನಷ್ಟಕ್ಕೆ 138 ರನ್ ಕಲೆ ಹಾಕಿತು. ರಾಧಾ ಯಾದವ್ ಮತ್ತು ಟಿಟಾಸ್ ಸಧು ತಲಾ 2 ವಿಕೆಟ್ ಪಡೆದರು. ಈ ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿ ಮೆಗ್ ಲ್ಯಾನಿಂಗ್ (59) ಅರ್ಧಶತಕ ಸಿಡಿಸಿದ ಹೊರತಾಗಿಯೂ 1 ರನ್ ರೋಚಕ ಸೋಲನುಭವಿಸಿತು. ಬ್ಯಾಟಿಂಗ್ನಲ್ಲಿ ಹಾಫ್ ಸೆಂಚುರಿ ಬಾರಿಸಿದ್ದ ದೀಪ್ತಿ ಬೌಲಿಂಗ್ನಲ್ಲಿ 4 ವಿಕೆಟ್ ಪಡೆದು ಮಿಂಚಿದರು.