ಲಕ್ನೋ ವಿರುದ್ಧ ಅಮೋಘ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್;‌ ಉಭಯ ತಂಡಗಳ ಪ್ಲೇಆಪ್‌ ಕನಸು ಬಹುತೇಕ ಅಂತ್ಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಲಕ್ನೋ ವಿರುದ್ಧ ಅಮೋಘ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್;‌ ಉಭಯ ತಂಡಗಳ ಪ್ಲೇಆಪ್‌ ಕನಸು ಬಹುತೇಕ ಅಂತ್ಯ

ಲಕ್ನೋ ವಿರುದ್ಧ ಅಮೋಘ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್;‌ ಉಭಯ ತಂಡಗಳ ಪ್ಲೇಆಪ್‌ ಕನಸು ಬಹುತೇಕ ಅಂತ್ಯ

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪ್ಲೇಆಫ್‌ ಕನಸಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಅಡ್ಡಿಯಾಗಿದೆ. ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡ ಸೋಲು ಕಂಡಿದ್ದು, ಐಪಿಎಲ್‌ 2024ರ ಪ್ಲೇಆಫ್‌ನಿಂದ ಬಹುತೇಕ ಹೊರಬಿದ್ದಿದೆ. ಡೆಲ್ಲಿ ಕೂಡಾ ಗೆಲುವಿನೊಂದಿಗೆ ಐಪಿಎಲ್‌ ಅಭಿಯಾನ ಮುಗಿಸಿದೆ.

ಲಕ್ನೋ ವಿರುದ್ಧ ಅಮೋಘ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್
ಲಕ್ನೋ ವಿರುದ್ಧ ಅಮೋಘ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ (ANI)

ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 19 ರನ್‌ಗಳ ರೋಚಕ ಜಯ ಸಾಧಿಸಿದೆ. ಆರ್‌ಸಿಬಿ ವಿರುದ್ಧದ ಸೋಲಿನ ಬಳಿಕ ಪ್ಲೇಆಫ್‌ ಅವಕಾಶವನ್ನು ಬಹುತೇಕ ಕಳೆದುಕೊಂಡಿದ್ದ ಡಿಸಿ, ಇದೀಗ ಲಕ್ನೋ ವಿರುದ್ಧದ ಗೆಲುವಿನ ಬಳಿಕವೂ ಪ್ಲೇಆಫ್‌ ಹಂತಕ್ಕೇರುವ ಸಾಧ್ಯತೆ ಇಲ್ಲ. ತೀರಾ ಕಡಿಮೆ ನೆಟ್‌ ರನ್‌ ರೇಟ್‌ ಹೊಂದಿರುವ ತಂಡವು ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಬಹುತೇಕ ಅಂತ್ಯಗೊಳಿಸಿದೆ. ಸದ್ಯ ಅಂಕಪಟ್ಟಿಯಲ್ಲಿ ಆರ್‌ಸಿಬಿ ಹಿಂದಿಕ್ಕಿ ಐದನೇ ಸ್ಥಾನಕ್ಕೆ ನೆಗೆದಿದೆ. ಇದೇ ವೇಳೆ ಗೆಲ್ಲಲೇಬೇಕಿದ್ದ ಪಂದ್ಯವನ್ನು ಕೈಚೆಲ್ಲಿದ ಎಲ್‌ಎಸ್‌ಜಿ ತಂಡವು, ಪ್ಲೇಆಫ್‌ ರೇಸ್‌ನಲ್ಲಿ ಮತ್ತೆ ಹಿಂದೆ ಬಿದ್ದಿದೆ. ತಂಡವು ಮುಂಬೈ ವಿರುದ್ಧ ಇನ್ನೂ ಒಂದು ಪಂದ್ಯದಲ್ಲಿ ಆಡಲಿದ್ದು, ಆ ಪಂದ್ಯದಲ್ಲಿ ಬೃಹತ್‌ ಅಂತರದಿಂದ ಗೆದ್ದರೂ ಮುಂದಿನ ಹಂತಕ್ಕೆ ಲಗ್ಗೆ ಹಾಕುವ ಸಾಧ್ಯತೆ ತೀರಾ ಕಡಿಮೆ ಇದೆ.

ಡೆಲ್ಲಿ ಗೆಲುವು ಮತ್ತು ಲಕ್ನೋ ಸೋಲು, ಆರ್‌ಸಿಬಿ ಸೇರಿದಂತೆ ನಾಲ್ಕು ತಂಡಗಳಿಗೆ ಖುಷಿ ತಂದಿದೆ. ರಾಜಸ್ಥಾನ ತಂಡವು ಎರಡನೇ ತಂಡವಾಗಿ ಪ್ಲೇಆಫ್‌ ಪ್ರವೇಶಿಸಿದ್ದು, ಸಿಎಸ್‌ಕೆ ಹಾಗೂ ಹೈದರಾಬಾದ್‌ ತಂಡಗಳ ಪ್ಲೇಆಫ್‌ ಅವಕಾಶ ಹೆಚ್ಚಿದೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ, 4 ವಿಕೆಟ್‌ ಕಳೆದುಕೊಂಡು 208 ರನ್‌ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಲಕ್ನೋ, 9 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಲಷ್ಟೇ ಶಕ್ತವಾಯ್ತು.

ಇದನ್ನೂಓದಿ | ವಿಶೇಷ ಔತಣಕೂಟದಲ್ಲಿ ಕೆಎಲ್ ರಾಹುಲ್‌ ತಬ್ಬಿಕೊಂಡ ಎಲ್ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ; ಫೋಟೋ ವೈರಲ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್‌ ಉತ್ತಮ ಆರಂಭ ಪಡೆಯಲಿಲ್ಲ. ಟೂರ್ನಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿದ್ದ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್, ಶೂನ್ಯಕ್ಕೆ ನಿರ್ಗಮಿಸಿದರು. ಎಸೆದ ಮೊದಲ ಓವರ್‌ನಲ್ಲೇ ಅರ್ಷದ್‌ ಖಾನ್‌ ಪ್ರಮುಖ ವಿಕೆಟ್‌ ಕಬಳಿಸಿ ಮಿಂಚಿದರು. ಈ ವೇಳೆ ಒಂದಾದ ಅಭಿಷೇಕ್‌ ಪೊರೆಲ್‌ ಹಾಗೂ ಶಾಯ್‌ ಹೋಪ್‌ ಆಕರ್ಷಕ ಜೊತೆಯಾಟವಾಡಿದರು. ತಂಡದ ಮೊತ್ತವನ್ನು ಶತಕದ ಸಮೀಪ ಕೊಂಡೊಯ್ದರು.

ಶಾಯ್‌ ಹೋಪ್‌ 38 ರನ್‌ ಗಳಿಸಿದ್ದಾಗ ಕೆಎಲ್‌ ರಾಹುಲ್‌ ಅಮೋಘ ಕ್ಯಾಚ್‌ ಹಿಡಿದರು. ಇದಕ್ಕೆ ಮಾಲೀಕ ಗೋಯೆಂಕಾ ಕಡೆಯಿಂದಲೂ ಶ್ಲಾಘನೆ ವ್ಯಕ್ತವಾಯ್ತು. ಆದರೆ, ಅಬ್ಬರಿಸಿದ ಪೊರೆಲ್‌ ಆಕರ್ಷಕ ಅರ್ಧಶತಕ ಸಿಡಿಸಿದರು. 33 ಎಸೆತ ಎದುರಿಸಿದ ಅವರು 5 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ 58 ರನ್‌ ಪೇರಿಸಿ ನವೀನ್‌ ಉಲ್‌ ಹಕ್‌ ಎಸೆತದಲ್ಲಿ ಔಟಾದರು. ಬೌಂಡರಿ ಲೈನ್‌ ಬಳಿ ಪೂರನ್‌ ಅಮೋಘ ಕ್ಯಾಚ್‌ ಹಿಡಿದು ಪ್ರಮುಖ ವಿಕೆಟ್‌ ಕಬಳಿಸಲು ನೆರವಾದರು. ನಾಯಕ ಪಂತ್‌ 33 ರನ್‌ ಗಳಿಸಿದರೆ, ಟ್ರಿಸ್ಟಾನ್‌ ಸ್ಟಬ್ಸ್‌ 25 ಎಸೆತಗಳಿಂದ 4 ಸಿಕ್ಸರ್‌ ಸಹಿತ 57 ರನ್‌ ಬಾರಿಸಿರು. ಇವರಿಗೆ ಸಾಥ್‌ ನೀಡಿದ ಅಕ್ಷರ್‌ ಪಟೇಲ್‌ 14 ರನ್‌ ಗಳಿಸಿದರು. ಡೆತ್‌ ಓವರ್‌ಗಳಲ್ಲಿ ಸ್ಟಬ್ಸ್‌ ಅಬ್ಬರದ ನೆರವಿಂದ ತಂಡದ ಮೊತ್ತ 200ರ ಗಡಿ ದಾಟಿತು.

ಲಕ್ನೋ ಚೇಸಿಂಗ್

ಬೃಹತ್‌ ಮೊತ್ತ ಚೇಸಿಂಗ್‌ಗಿಳಿದ ಲಕ್ನೋ, ಆರಂಭದಲ್ಲೇ ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡಿತು. ಮೊದಲ ಓವರ್‌ನಲ್ಲಿ ಒಂದು ಸೇರಿದಂತೆ ಪವರ್‌ಪ್ಲೇ ಒಳಗಡೆ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಕೆಎಲ್‌ ರಾಹುಲ್‌ 5, ಕ್ವಿಂಟನ್‌ ಡಿಕಾಕ್‌ 12 ಹಾಗೂ ಸ್ಟೋಯ್ನಿಸ್‌ 5 ರನ್‌ ಗಳಿಸಿ ಔಟಾದರು. ಅವರ ಬೆನ್ನಲೇ ದೀಪಕ್‌ ಹೂಡಾ ಕೂಡಾ ಇಶಾಂತ್‌ ಶರ್ಮಾ ಎಸೆತದಲ್ಲಿ ಶೂನ್ಯ ಸಂಪಾದಿಸಿ ವಿಕೆಟ್‌ ಒಪ್ಪಿಸಿದರು.

ಅರ್ಷದ್‌ ಖಾನ್‌ ಅದ್ಭುತ ಆಟ

ಪೂರನ್‌ ಜೊತೆಗೆ ಕೆಲಕಾಲ ಕ್ರೀಸ್‌ನಲ್ಲಿದ್ದ ಬದೋನಿ ಆಟ 6 ರನ್‌ಗಳಿಗೆ ಅಂತ್ಯವಾಯ್ತು. ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದ ಪೂರನ್‌, 27 ಎಸೆತಗಳಿಂದ 6 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ 61 ರನ್‌ ಸಿಡಿಸಿ ಔಟಾದರು. ಕೃನಾಲ್‌ ಪಾಂಡ್ಯ 18 ರನ್‌ ಗಳಿಸಿದ್ದಾಗ, ಕುಲ್ದೀಪ್‌ ಎಸೆತದಲ್ಲಿ ಸ್ಟಂಪ್‌ ಔಟ್‌ ಆದರು. ಅರ್ಷದ್‌ ಖಾನ್‌ ಜೊತೆಗೂಡಿ ಉತ್ತಮ ಆಟವಾಡಿದ ಯುಧ್ವೀರ್‌ ಸಿಂಗ್‌ 14 ರನ್‌ ಗಳಿಸಿ ಔಟಾದರು. ಸ್ಫೋಟಕ ಆಟದೊಂದಿಗೆ ಅರ್ಷದ್‌ ಖಾನ್‌ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ಎಲ್ಲಾ ರೀತಿಯ ಪ್ರಯತ್ನ ಮಾಡಿದರು.‌ ಕೇವಲ 33 ಎಸೆತಗಳಲ್ಲಿ ಅಜೇಯ 58 ರನ್‌ ಸಿಡಿಸಿದರು. ಆದರೆ ತಂಡದ ಗೆಲುವು ಸಾಧ್ಯವಾಗಲಿಲ್ಲ.

Whats_app_banner