IPL 2025: ಫಾಫ್ ಡುಪ್ಲೆಸಿಸ್ ಓಪನಿಂಗ್, ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್; ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಆಡುವ ಬಳಗ
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಾರ್ಚ್ 24ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಐಪಿಎಲ್ 2025ರ ಅಭಿಯಾನ ಆರಂಭಿಸಲಿದೆ. ಈ ಬಾರಿ ಅಕ್ಷರ್ ಪಟೇಲ್ ನಾಯಕತ್ವದಲ್ಲಿ ಡಿಸಿ ತಂಡ ಚೊಚ್ಚಲ ಐಪಿಎಲ್ ಕಪ್ ಗೆಲುವಿಗೆ ಶ್ರಮ ಹಾಕಲಿದೆ. ಟೂರ್ನಿಗೆ ತಂಡದ ಬಲಿಷ್ಠ ಆಡುವ ಬಳಗ ಹೀಗಿದೆ ನೋಡಿ.

ಐಪಿಎಲ್ 2025ರ ಋತುವಿನಲ್ಲಿ ಬಹುತೇಕ ಹೆಚ್ಚಿನ ತಂಡಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ನಾಯಕತ್ವದಿಂದ ಹಿಡಿದು, ತಂಡದಲ್ಲೂ ಹೆಚ್ಚಿನ ಬದಲಾವಣೆಗಳನ್ನು ಕಂಡ ತಂಡ ಡೆಲ್ಲಿ ಕ್ಯಾಪಿಟಲ್ಸ್. ಆಲ್‌ರೌಂಡರ್ ಅಕ್ಷರ್ ಪಟೇಲ್ ನಾಯಕತ್ವದಲ್ಲಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಲು ಸಜ್ಜಾಗಿದೆ. ಕಳೆದ ಬಾರಿ ತಂಡವನ್ನು ಮುನ್ನಡೆಸಿದ್ದ ಸ್ಥಳೀಯ ಆಟಗಾರ ರಿಷಭ್ ಪಂತ್, ಈ ಬಾರಿ ಲಕ್ನೋ ತಂಡಕ್ಕೆ ಶಿಫ್ಟ್ ಆಗಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಡಿಸಿ ತಂಡಕ್ಕೆ ಬಂದರೂ, ನಾಯಕತ್ವದ ಜವಾಬ್ದಾರಿಯನ್ನು ಒಪ್ಪಿಕೊಂಡಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಒಂದಷ್ಟು ಸವಾಲುಗಳೊಂದಿಗೆ ತಂಡವು 18ನೇ ಆವೃತ್ತಿಯಲ್ಲಿ ಆಡಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಾರ್ಚ್ 24ರ ಸೋಮವಾರ ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್‌ಜಿ) ವಿರುದ್ಧ ಐಪಿಎಲ್ 2025ರ ಅಭಿಯಾನ ಆರಂಭಿಸಲಿದೆ. ಡೆಲ್ಲಿ ತಂಡವು ತಮ್ಮ ಮೊದಲ ಎರಡು ತವರು ಪಂದ್ಯಗಳನ್ನು ವಿಶಾಖಪಟ್ಟಣದಲ್ಲಿ ಆಡಲಿದ್ದು, ನಂತರ ದೆಹಲಿಗೆ ತೆರಳಲಿದೆ.
ಹರಾಜಿನಲ್ಲಿ ಅನುಭವಿ ವಿಕೆಟ್-ಕೀಪರ್ ಹಾಗೂ ಬ್ಯಾಟರ್ ಕೆಎಲ್ ರಾಹುಲ್ ಸೇರ್ಪಡೆಯು ತಂಡದ ಬಲ ಹೆಚ್ಚಿಸಲಿದೆ. ಇದೇ ವೇಳೆ ಕಳೆದ ಬಾರಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ ಅನುಭವಿ ಆಟಗಾರ ಫಾಫ್ ಡುಪ್ಲೆಸಿಸ್ ಹಾಗೂ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ತಂಡಕ್ಕೆ ಬಂದಿದ್ದು, ಒಟ್ಟಾರೆ ಸಾಮರ್ಥ್ಯವನ್ನು ಹೆಚ್ಚಿಸಿದೆ. ಹೀಗಾಗಿ ಪ್ರಸಕ್ತ ಆವೃತ್ತಿಗೆ ತಂಡದ ಆಡುವ ಬಳಗದ ರಚನೆ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಹರಾಜಿನಲ್ಲಿ ತಂಡಕ್ಕೆ ಬಂದಿದ್ದ ಇಂಗ್ಲೆಂಡ್ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್, ಕೊನೆಯ ಹಂತದಲ್ಲಿ ಐಪಿಎಲ್‌ನಿಂದ ಹಿಂದೆ ಸರಿದಿರುವುದು ಆಡಳಿತ ಮಂಡಳಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬ್ರೂಕ್ ಸೇರ್ಪಡೆಗೊಂಡಿರುವುದು ಡೆಲ್ಲಿ ತಂಡಕ್ಕೆ ಒಂದು ರೀತಿಯ ಪರಿಪೂರ್ಣತೆಯನ್ನು ನೀಡಿತ್ತು. ಇದೀಗ ಅವರು ಹೊರನಡೆದರೂ, ತಂಡದಲ್ಲಿ ಬದಲಿ ಆಟಗಾರರ ವ್ಯವಸ್ಥೆ ಇದೆ.
ಮಧ್ಯಮ ಕ್ರಮಾಂಕಕ್ಕೆ ಕೆಎಲ್ ರಾಹುಲ್
ನೂತನ ಐಪಿಎಲ್ ಅಭಿಯಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬಲಿಷ್ಠ ಅಗ್ರ ಕ್ರಮಾಂಕವಿದೆ. ಕಳೆದ ಆವೃತ್ತಿಯ ಸಿಡಿಗುಂಡು ಜೇಕ್ ಫ್ರೇಸರ್-ಮೆಕ್‌ಗುರ್ಕ್ ಈ ಬಾರಿಯೂ ತಂಡಕ್ಕೆ ಬಲವಾಗಲಿದ್ದಾರೆ. ಅನುಭವಿ ಫಾಫ್ ಡು ಪ್ಲೆಸಿಸ್ ಮತ್ತು ಕೆಎಲ್ ರಾಹುಲ್, ತಂಡದ ಬ್ಯಾಟಿಂಗ್ ಆಳವನ್ನು ಹೆಚ್ಚಿಸಲಿದ್ದಾರೆ. ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಸೈ ಎನಿಸಿಕೊಳ್ಳುವ ಕನ್ನಡಿಗ ಕೆಎಲ್ ರಾಹುಲ್, ಈ ಬಾರಿ ಫಾಫ್ ಮತ್ತು ಮೆಕ್‌ಗುರ್ಕ್ ಅವರಿಗಾಗಿ ಅಗ್ರ ಕ್ರಮಾಂಕ ಬಿಟ್ಟುಕೊಡುವ ಬಗ್ಗೆ ವರದಿ ಇದೆ. ಹೀಗಾಗಿ ಮಧ್ಯಮ ಕ್ರಮಂಕಕ್ಕೆ ರಾಹುಲ್ ಬಲ ತುಂಬಲಿದ್ದಾರೆ.
ಬೌಲಿಂಗ್‌ನಲ್ಲಿ ಅನುಭವಿ ಸ್ಟಾರ್ಕ್‌ಗೆ ಭಾರತೀಯ ವೇಗಿಗಳಾದ ಮುಕೇಶ್ ಕುಮಾರ್ ಹಾಗೂ ಮೋಹಿತ್ ಶರ್ಮಾ ಸಾಥ್ ನೀಡಲಿದ್ದಾರೆ. ಇವರಿಗೆ ಸ್ಪಿನ್ನರ್ ಕುಲ್ದೀಪ್ ಬಲ ತುಂಬಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಬಲಿಷ್ಠ ಆಡುವ ಬಳಗ
ಜೇಕ್ ಫ್ರೇಸರ್-ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್, ಕೆಎಲ್ ರಾಹುಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್, ಮೋಹಿತ್ ಶರ್ಮಾ, ಟಿ ನಟರಾಜನ್.
