ಕನ್ನಡ ಸುದ್ದಿ  /  Cricket  /  Delhi Capitals To 9 Wicket Win Vs Up Warriorz Shafali Lanning Fifty Radha Yadav Marizanne Kapp Rcb Wpl Points Table Prs

ಖಾತೆ ತೆರೆದ ಡೆಲ್ಲಿ ಕ್ಯಾಪಿಟಲ್ಸ್, ಸತತ ಎರಡನೇ ಸೋಲು ಕಂಡ ಯುಪಿ ವಾರಿಯರ್ಸ್; ಅಂಕಪಟ್ಟಿಯಲ್ಲಿ ಕುಸಿದ ಆರ್​​​ಸಿಬಿ

Delhi Capitals vs UP Warriorz: ವುಮೆನ್ಸ್ ಪ್ರೀಮಿಯರ್​​ ಲೀಗ್​​​​ನಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ 9 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಖಾತೆ ತೆರೆದ ಡೆಲ್ಲಿ ಕ್ಯಾಪಿಟಲ್ಸ್, ಸತತ ಎರಡನೇ ಸೋಲು ಕಂಡ ಯುಪಿ ವಾರಿಯರ್ಸ್
ಖಾತೆ ತೆರೆದ ಡೆಲ್ಲಿ ಕ್ಯಾಪಿಟಲ್ಸ್, ಸತತ ಎರಡನೇ ಸೋಲು ಕಂಡ ಯುಪಿ ವಾರಿಯರ್ಸ್

ಬೌಲಿಂಗ್​ನಲ್ಲಿ ​ಮರಿಜಾನ್ನೆ ಕಪ್, ರಾಧಾ ಯಾದವ್ ಮತ್ತು ಬ್ಯಾಟಿಂಗ್​​ನಲ್ಲಿ ಶಫಾಲಿ ವರ್ಮಾ, ಮೆಗ್​ ಲ್ಯಾನಿಂಗ್​ ಅವರ ಭರ್ಜರಿ ಪ್ರದರ್ಶನದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​, ಯುಪಿ ವಾರಿಯರ್ಸ್ ತಂಡದ​ ವಿರುದ್ಧ 9 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಸೋಲಿನ ಆರಂಭ ಪಡೆದಿದ್ದ ಡೆಲ್ಲಿ, ಇದೀಗ ಗೆಲುವಿನ ಖಾತೆ ತೆರೆದಿದೆ. ಅಲ್ಲದೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​​ ನಡೆಸಿದ ಯುಪಿ ಕಳಪೆ ಪ್ರದರ್ಶನ ನೀಡಿತು. ಶ್ವೇತಾ ಸೆಹ್ರಾವತ್ ಅವರ 45 ರನ್​​ಗಳ ನೆರವಿನಿಂದ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 119 ರನ್​ಗಳ ಸಾಧಾರಣ ರನ್ ಕಲೆ ಹಾಕಿತು. ಅಲಿಸ್ಸಾ ಹೀಲಿ, ತಹ್ಲಿಯಾ ಮೆಗ್ರಾತ್, ಗ್ರೇಸ್ ಹ್ಯಾರಿಸ್ ಕೂಡ ನಿರಾಸೆ ಮೂಡಿಸಿದರು.

ರಾಧಾ ಮತ್ತು ಕಪ್ ಮಿಂಚ್

ಯುಪಿ ಬ್ಯಾಟರ್​​ಗಳನ್ನು ಧೂಳಿಪಟಗೊಳಿಸುವ ಮೂಲಕ ರಾಧಾ ಯಾದವ್ ಮತ್ತು ಮರಿಜಾನ್ನೆ ಕಪ್ ಮಿಂಚಿದರು. ರಾಧಾ 4 ಓವರ್​​ಗಳಲ್ಲಿ 20 ರನ್ ಬಿಟ್ಟುಕೊಟ್ಟು 4 ವಿಕೆಟ್​ ಪಡೆದರು. ಇನ್ನು ಕಪ್ 4 ಓವರ್​ಗಳಲ್ಲಿ 1 ಮೇಡನ್ ಸಹಿತ 5 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಗೆದ್ದರು. ಅರುಂಧತಿ ರೆಡ್ಡಿ, ಅನ್ನಾಬೆಲ್ ಸದರ್ಲ್ಯಾಂಡ್ ತಲಾ 1 ವಿಕೆಟ್ ಪಡೆದರು.

ಶಫಾಲಿ-ಲ್ಯಾನಿಂಗ್ ಮಿಂಚು

ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ 14.3 ಓವರ್​​ಗಳಲ್ಲೇ ಜಯದ ನಗೆ ಬೀರಿತು. ಆಕ್ರಮಣಕಾರಿ ಆಟದೊಂದಿಗೆ ಇನ್ನಿಂಗ್ಸ್​ ಆರಂಭಿಸಿದ ಶಫಾಲಿ ವರ್ಮಾ ಮತ್ತು ಮೆಗ್​ ಲ್ಯಾನಿಂಗ್​ ಯುಪಿ ವಾರಿಯರ್ಸ್ ಬೌಲರ್​​ಗಳಿಗೆ ಬೆಂಡೆತ್ತಿದರು. ಶಫಾಲಿ 43 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್​​ ಸಹಿತ ಅಜೇಯ 64 ರನ್ ಕಲೆ ಹಾಕಿದರು. ಲ್ಯಾನಿಂಗ್​ 43 ಎಸೆತಗಳಲ್ಲಿ 6 ಬೌಂಡರಿ ಸಹಿತ 51 ರನ್ ಸಿಡಿಸಿದರು.

ಅಂಕಪಟ್ಟಿಯಲ್ಲಿ ಮೇಲೇರಿದ ಡೆಲ್ಲಿ

ಯುಪಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಡೆಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಮುಂಬೈ ಇಂಡಿಯನ್ಸ್ ಸತತ ಎರಡು ಗೆಲುವಿನೊಂದಿಗೆ 4 ಅಂಕ ಸಂಪಾದಿಸಿ +0.488 ನೆಟ್​ ರನ್​ರೇಟ್ ಪಡೆದಿದೆ. ಡೆಲ್ಲಿ 2ರಲ್ಲಿ 1 ಜಯಿಸಿ 2 ಅಂಕ ಪಡೆದು ನೆಟ್​ ರನ್​ರೇಟ್ +1.222 ಅನ್ನು ಹೊಂದಿದೆ.

ಆರ್​ಸಿಬಿ ಎರಡರಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಆಡಿರುವ 1 ಪಂದ್ಯ ಗೆದ್ದಿದ್ದು 2 ಅಂಕ ಪಡೆದಿದೆ. ಆದರೆ ನೆಟ್​ ರನ್ ರೇಟ್ (+0.100) ಡೆಲ್ಲಿಗಿಂತ ಕಡಿಮೆ ಇದೆ. ಇನ್ನು ಯುಪಿ ವಾರಿಯರ್ಸ್ ಆಡಿದ ಎರಡರಲ್ಲೂ ಸೋತಿದ್ದು ನೆಟ್​ರನ್​ರೇಟ್ -1.266 ಹೊಂದಿದೆ. ಗುಜರಾತ್ ಜೈಂಟ್ಸ್ ಆಡಿದ 1ರಲ್ಲಿ ಸೋತಿದ್ದು -0.801 ರನ್​ರೇಟ್ ಹೊಂದಿದೆ.

ಯುಪಿ ವಾರಿಯರ್ಸ್ ಪ್ಲೇಯಿಂಗ್ ಇಲೆವೆನ್

ಅಲಿಸ್ಸಾ ಹೀಲಿ (ನಾಯಕಿ & ವಿಕೆಟ್ ಕೀಪರ್), ವೃಂದಾ ದಿನೇಶ್, ತಹ್ಲಿಯಾ ಮೆಗ್ರಾತ್, ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ಪೂನಂ ಖೇಮ್ನಾರ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ರಾಜೇಶ್ವರಿ ಗಾಯಕ್ವಾಡ್, ಗೌಹರ್ ಸುಲ್ತಾನಾ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್

ಮೆಗ್ ಲ್ಯಾನಿಂಗ್ (ನಾಯಕ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ಅನ್ನಾಬೆಲ್ ಸದರ್ಲ್ಯಾಂಡ್, ಅರುಂಧತಿ ರೆಡ್ಡಿ, ಮಿನ್ನು ಮಣಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ಶಿಖಾ ಪಾಂಡೆ.

IPL_Entry_Point