ಕನ್ನಡ ಸುದ್ದಿ  /  Cricket  /  Delhi Capitals To Playing First Two Ipl 2024 Matches In Visakhapatnam Instead Of Arun Jaitley Stadium Rishabh Pant Jra

Explainer: ಡೆಲ್ಲಿ ಕ್ಯಾಪಿಟಲ್ಸ್ ತವರು ವಿಶಾಖಪಟ್ಟಣ; ಪಂತ್‌ ಪಡೆ ದೆಹಲಿಯಲ್ಲಿ ಐಪಿಎಲ್ ಪಂದ್ಯ ಆಡುತ್ತಿಲ್ಲವೇಕೆ?

ಐಪಿಎಲ್‌ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡುವ ತವರಿನ 2 ಪಂದ್ಯಗಳು ದೆಹಲಿಯಲ್ಲಿ ನಡೆಯುತ್ತಿಲ್ಲ. ಬದಲಿಗೆ ಆಂದ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಡೆಲ್ಲಿ ತಂಡದ ತವರು ಮೈದಾನ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ. ಆದರೆ, ಕ್ಯಾಪಿಟಲ್ಸ್‌ ತಂಡದ ಪಂದ್ಯವು ದೆಹಲಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ವೈಜಾಗ್‌ನಲ್ಲಿ ನಡೆಯುತ್ತಿವೆ.

ಡೆಲ್ಲಿ ಕ್ಯಾಪಿಟಲ್ಸ್ ತವರು ವಿಶಾಖಪಟ್ಟಣ
ಡೆಲ್ಲಿ ಕ್ಯಾಪಿಟಲ್ಸ್ ತವರು ವಿಶಾಖಪಟ್ಟಣ (ANI)

ಬಹುನಿರೀಕ್ಷಿತ ಐಪಿಎಲ್‌ 2024ರ (IPL 2024) ವೇಳಾಪಟ್ಟಿ ಕೊನೆಗೂ ಪ್ರಕಟಗೊಂಡಿದೆ. ಬಿಸಿಸಿಐ ವೇಳಾಪಟ್ಟಿಯನ್ನು ಬಹಿರಂಗಪಡಿಸಿದ್ದು, ಮಿಲಿಯನ್‌ ಡಾಲರ್‌ ಟೂರ್ನಿಯ 17ನೇ ಆವೃತ್ತಿಯು, ಮಾರ್ಚ್ 22ರಂದು ಆರಂಭವಾಗಲಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಸದ್ಯ ಟೂರ್ನಿಯ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಟೂರ್ನಿಯ ಉಳಿದ ಪಂದ್ಯಗಳ ದಿನಾಂಕ ನಿಗದಿಪಡಿಸಿಲ್ಲ. ಭಾರತೀಯ ಚುನಾವಣಾ ಆಯೋಗವು ಚುನಾವಣೆ ದಿನಾಂಕ ಬಹಿರಂಗಪಡಿಸಿದ ನಂತರ, ಪಂದ್ಯಾವಳಿಯ ಉಳಿದ ಪಂದ್ಯಗಳ ವೇಳಾಪಟ್ಟಿ ಅಂತಿಮವಾಗಲಿದೆ.‌

ಇದನ್ನೂ ಓದಿ | ಪೂರ್ಣ ಪ್ರಮಾಣದ ಐಪಿಎಲ್ ವೇಳಾಪಟ್ಟಿ ಪ್ರಕಟಿಸಿಲ್ಲವೇಕೆ ಬಿಸಿಸಿಐ; ಉಳಿದ ಪಂದ್ಯಗಳ ಶೆಡ್ಯೂಲ್ ಯಾವಾಗ ನಿರೀಕ್ಷಿಸಬಹುದು?

ಡೆಲ್ಲಿ ಕ್ಯಾಪಿಟಲ್ಸ್‌ ತವರು ಬದಲು

ಈ ಬಾರಿಯ ಐಪಿಎಲ್ ಆವೃತ್ತಿಯ ವೇಳಾಪಟ್ಟಿಯಲ್ಲಿ ಒಂದು ಪ್ರಮುಖ ಅಂಶವಿದೆ. ಆ ಕುತೂಹಲಕಾರಿ ಅಂಶವೆಂದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡುವ ತವರಿನ 2 ಪಂದ್ಯಗಳು ದೆಹಲಿಯಲ್ಲಿ ನಡೆಯುತ್ತಿಲ್ಲ. ಬದಲಿಗೆ ಆಂದ್ರಪ್ರದೇಶದ ಡಾ.ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಸಾಮಾನ್ಯವಾಗಿ ದೆಹಲಿಯ ತವರು ಮೈದಾನ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ. ಆದರೆ, ಇಲ್ಲಿ ಕ್ಯಾಪಿಟಲ್ಸ್‌ ತಂಡದ ಪಂದ್ಯ ನಡೆಯುತ್ತಿಲ್ಲ. ದೆಹಲಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ವೈಜಾಗ್‌ನಲ್ಲಿ ನಡೆಯುತ್ತಿವೆ.

ಕಾರಣವೇನು?

ಡಬ್ಲ್ಯೂಪಿಎಲ್‌ ಪಂದ್ಯಗಳು ನಡೆಯುವ ಕಾರಣದಿಂದಾಗಿ, ಟೂರ್ನಿಯ ಆರಂಭದ ವೇಳೆಗೆ ಅರುಣ್ ಜೇಟ್ಲಿ ಸ್ಟೇಡಿಯಂ ಐಪಿಎಲ್‌ಗೆ ಅಲಭ್ಯವಾಗಿರುವುದೇ ಸ್ಥಳ ಬದಲಾವಣೆಗೆ ಕಾರಣ. ದೆಹಲಿಯ ಪ್ರಮುಖ ಕ್ರಿಕೆಟ್ ಮೈದಾನವು ಮಹಿಳಾ ಪ್ರೀಮಿಯರ್ ಲೀಗ್‌ನ (WPL) ಎಲಿಮಿನೇಟರ್ ಮತ್ತು ಫೈನಲ್ ಸೇರಿದಂತೆ ಕೊನೆಯ 11 ಪಂದ್ಯಗಳನ್ನು ಆಯೋಜಿಸಲಿದೆ. ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಐಪಿಎಲ್‌ ಆರಂಭದ ವೇಳೆಗೆ ಈ ಮೈದಾನವು ಸಿದ್ಧವಾಗುವುದಿಲ್ಲ. ದುಬಾರಿ ಲೀಗ್‌ ಮಾರ್ಚ್‌ 22ರಂದು ಆರಂಭವಾಗುತ್ತದೆ. ಅದಕ್ಕೂ ಮುನ್ನ ಕೇವಲ ಐದು ದಿನಗಳಿಗಿಂದ ಮೊದಲು ಮಾರ್ಚ್ 17ರಂದು ಡಬ್ಲ್ಯುಪಿಎಲ್‌ ಫೈನಲ್ ಪಂದ್ಯ ನಡೆಯಲಿದೆ.‌ ಕಡಿಮೆ ದಿನಗಳ ಅಂತರ ಇರುವುದರಿಂದ ಸ್ಟೇಡಿಯಂನಲ್ಲಿ ಸಿದ್ಧತಾ ಕೆಲಸಗಳನ್ನು ನಡೆಸುವುದು ಕಷ್ಟ. ಹೀಗಾಗಿ ವಿಶಾಖಪಟ್ಟಣಕ್ಕೆ ಪಂದ್ಯಗಳು ಶಿಫ್ಟ್ ಆಗಿವೆ.

ಇದನ್ನೂ ಓದಿ | IPL 2024 Schedule: ಐಪಿಎಲ್ ವೇಳಾಪಟ್ಟಿ ಪ್ರಕಟ; ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ vs ಸಿಎಸ್​ಕೆ ಸೆಣಸಾಟ

ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಆ ಬಳಿಕ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಮೊಹಾಲಿ ಮತ್ತು ಜೈಪುರದಲ್ಲಿ ಈ ಎರಡು ಪಂದ್ಯಗಳು ನಡೆಯಲಿವೆ. ಈ ಬಾರಿ ತಂಡವು, ನಾಯಕ ರಿಷಬ್ ಪಂತ್ ಅವರೊಂದಿಗೆ ಕಣಕ್ಕಿಳಿಯಲಿದೆ. ಭೀಕರ ಕಾರು ಅಪಘಾತದಿಂದ ಗಾಯಕ್ಕೊಳಗಾಗಿದ್ದ ಅವರು, ಒಂದು ವರ್ಷಕ್ಕೂ ಹೆಚ್ಚು ಕಾಲ ವಿಶ್ರಾಂತಿಯಲ್ಲಿದ್ದಾರೆ.

ಮಾರ್ಚ್ 31ರ ಭಾನುವಾರದಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಕ್ಯಾಪಿಟಲ್ಸ್‌ ಮೊಲದ ತವರು ಪಂದ್ಯವನ್ನು ಆಡುತ್ತಿದೆ. ಅದುವೇ ಬಂದರು ನಗರದ ವಿಶಾಖಪಟ್ಟಣ.

ಇದನ್ನೂ ಓದಿ | ಗುಜರಾತ್ ಟೈಟಾನ್ಸ್​​ಗೆ ಬಹುದೊಡ್ಡ ಆಘಾತ; ಐಪಿಎಲ್​ನಿಂದ ಮೊಹಮ್ಮದ್ ಶಮಿ ಔಟ್, ಟಿ20 ವಿಶ್ವಕಪ್​ಗೆ ಡೌಟ್

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point