ಡೆಲ್ಲಿ ಕ್ಯಾಪಿಟಲ್ಸ್ vs ಎಲ್‌ಎಸ್‌ಜಿ ಐಪಿಎಲ್ ಪಂದ್ಯ: ಪಿಚ್-ಹವಾಮಾನ ವರದಿ, ಮುಖಾಮುಖಿ ದಾಖಲೆ ಹಾಗೂ ಸಂಭಾವ್ಯ ತಂಡ
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೊದಲ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡವನ್ನು ಎದುರಿಸುತ್ತಿದೆ. ವಿಶಾಖಪಟ್ಟಣದಲ್ಲಿ ಪಂದ್ಯ ನಡೆಯುತ್ತಿದ್ದು, ರನ್ ಮಳೆ ಹರಿಯುವ ನಿರೀಕ್ಷೆ ಇದೆ. ಪಂದ್ಯದ ಪಿಚ್-ಹವಾಮಾನ ವರದಿ, ಸಂಭಾವ್ಯ ತಡ ಹಾಗೂ ಮತ್ತಷ್ಟು ವಿವರ ಇಲ್ಲಿದೆ.

ಐಪಿಎಲ್ 2025ರ ಆವೃತ್ತಿಯೂ ಮೂರನೇ ದಿನಕ್ಕೆ ಕಾಲಿಟ್ಟಿದೆ. ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (Delhi Capitals vs Lucknow Super Giants) ತಂಡಗಳು ಮುಖಾಮುಖಿಯಾಗಲಿವೆ. ವಿಶಾಖಪಟ್ಟಣದ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಋತುವಿನ ಮೊದಲ ಪಂದ್ಯಕ್ಕೆ ಇದು ಡೆಲ್ಲಿ ತಂಡದ ತವರು ಮೈದಾನವಾಗಲಿದೆ. ಈ ಬಾರಿ ಅಕ್ಷರ್ ಪಟೇಲ್ ಅವರ ನಾಯಕತ್ವದೊಂದಿಗೆ ಡಿಸಿ ಕೂಡಾ ಹಲವು ಹೊಸತನಗಳೊಂದಿಗೆ ಕಣಕ್ಕಿಳಿಯುತ್ತಿದೆ. ಹರಾಜಿಗೂ ಮುಂಚಿತವಾಗಿ ರಿಷಭ್ ಪಂತ್ ಅವರನ್ನು ಕೈಬಿಟ್ಟ ಫ್ರಾಂಚೈಸಿಯು, ಹರಾಜಿನಲ್ಲಿ ಹೊಸ ಆಟಾರರಿಗೆ ಮಣೆ ಹಾಕಿತು. ಕೆಎಲ್ ರಾಹುಲ್, ಫಾಫ್ ಡುಪ್ಲೆಸಿಸ್ ಅವರಂಥ ಆಟಗಾರರರು ತಂಡದ ಬಲ ಹೆಚ್ಚಿಸಲಿದ್ದಾರೆ.
ಡೆಲ್ಲಿ ತಂಡಕ್ಕೆ ಮೊದಲ ಪಂದ್ಯದಲ್ಲೇ, ಮಾಜಿ ನಾಯಕ ಪಂತ್ ನೇತೃತ್ವದ ಎಲ್‌ಎಸ್‌ಜಿ ಎದುರಾಳಿ. ಲಕ್ನೋ ತಂಡಕ್ಕೆ ಮೊದಲ ಪಂದ್ಯದಲ್ಲೇ ಗಾಯಾಳುಗಳ ಸಮಸ್ಯೆ ದೊಡ್ಡದಿದೆ. ಮಯಾಂಕ್ ಯಾದವ್, ಆಕಾಶ್ ದೀಪ್ ಮತ್ತು ಆವೇಶ್ ಖಾನ್ ಗಾಯದಿಂದಾಗಿ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಇದರ ನಡುವೆ ಮೊಹ್ಸಿನ್ ಖಾನ್ ಬದಲಿಗೆ ಶಾರ್ದೂಲ್ ಠಾಕೂರ್ ಅವರನ್ನು ಟೂರ್ನಿಗೆ ಬದಲಿಯಾಗಿ ಆಯ್ಕೆ ಮಾಡಲಾಗಿದೆ.
ವಿಶಾಖಪಟ್ಟಣ ಪಿಚ್ ವರದಿ
ವಿಶಾಖಪಟ್ಟಣ ಕೂಡಾ ಬ್ಯಾಟರ್‌ಗಳ ಸ್ವರ್ಗ. ಇದೇ ಮೈದಾನದಲ್ಲಿ ಕಳೆದ ಆವೃತ್ತಿಯಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 272 ರನ್ ಗಳಿಸಿತ್ತು. ಹೀಗಾಗಿ ಇಂದು ಕೂಡಾ ಹೆಚ್ಚು ರನ್ ನಿರೀಕ್ಷಿಸಬಹುದು. ಮೈದಾನದಲ್ಲಿ ಈವರೆಗೆ ನಡೆದ ಎರಡೂ ಐಪಿಎಲ್ ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡವು ಬ್ಯಾಟಿಂಗ್‌ಗೆ ಆದ್ಯತೆ ನೀಡಬಹುದು.
ಡೆಲ್ಲಿ ಕ್ಯಾಪಿಟಲ್ಸ್ vs ಲಕ್ನೋ ಸೂಪರ್ ಜೈಂಟ್ಸ್ ಹವಾಮಾನ ವರದಿ
ಆಕ್ಯೂವೆದರ್ ಪ್ರಕಾರ, ಪಂದ್ಯದ ದಿನವಾದ ಸೋಮವಾರ ಸಂಜೆ ವಿಶಾಖಪಟ್ಟಣದಲ್ಲಿ ತಾಪಮಾನವು 28 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರುತ್ತದೆ. ಸಮುದ್ರ ತೀರದ ನಗರದಲ್ಲಿ ಬಿಸಿ ಹೆಚ್ಚಿರುವುದರಿಂದ ಆಟಗಾರರಿಗೆ ವಾತಾವರಣ ಕಷ್ಟಕರವಾಗಿರಲಿದೆ. ಅಲ್ಪ ಪ್ರಮಾಣದಲ್ಲಿ ಮೋಡ ಕವಿದ ವಾತಾವರಣದಿದ್ದರೂ, ಮಳೆಯಿಂದ ಕ್ರೀಡೆಗೆ ಅಡ್ಡಿಯಾಗುವ ಸಾಧ್ಯತೆಗಳಿಲ್ಲ.
ನೇರಪ್ರಸಾರ ವಿವರ
ಡಿಸಿ vs ಎಲ್‌ಎಸ್‌ಜಿ ನಡುವಿನ ಐಪಿಎಲ್ 2025ರ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ.
ಮುಖಾಮುಖಿ ದಾಖಲೆ
ಡೆಲ್ಲಿ ಮತ್ತು ಲಕ್ನೋ ತಂಡಗಳು ಐಪಿಎಲ್‌ನಲ್ಲಿ ಈವರೆಗೆ 5 ಪಂದ್ಯಗಳಲ್ಲಿ ಪರಸ್ಪರ ಎದುರಾಗಿವೆ. ಇದರಲ್ಲಿ ಲಕ್ನೋ 3 ಪಂದ್ಯಗಳಲ್ಲಿ ಗೆದ್ದರೆ, ಡೆಲ್ಲಿ 2ರಲ್ಲಿ ಜಯ ಸಾಧಿಸಿದೆ. ಈ ಎರಡೂ ಗೆಲುವುಗಳು ಕಳೆದ ಆವೃತ್ತಿಯಲ್ಲಿ ಬಂದಿವೆ.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಆಡುವ ಬಳಗ
ಜೇಕ್ ಫ್ರೇಸರ್-ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕೆಎಲ್ ರಾಹುಲ್, ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್, ಟಿ ನಟರಾಜನ್, (ಇಂಪ್ಯಾಕ್ಟ್ ಆಟಗಾರ: ಕರುಣ್ ನಾಯರ್/ಮೋಹಿತ್ ಶರ್ಮಾ).
ಎಲ್‌ಎಸ್‌ಜಿ ಸಂಭಾವ್ಯ ತಂಡ
ಅರ್ಶಿನ್ ಕುಲಕರ್ಣಿ, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ನಿಕೋಲಸ್ ಪೂರನ್, ಆಯುಷ್ ಬದೋನಿ, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ರಾಜವರ್ಧನ್ ಹಂಗರ್ಗೇಕರ್, ರವಿ ಬಿಷ್ಣೋಯ್, ಶಮರ್ ಜೋಸೆಫ್ (ಇಂಪ್ಯಾಕ್ಟ್ ಆಟಗಾರರು: ಆಕಾಶ್ ಸಿಂಗ್/ಶಹಬಾಜ್ ಅಹ್ಮದ್).
