ಸೇಡಿನ ಸಮರ, ಕೊಹ್ಲಿ ತವರೂರು, ರಾಹುಲ್ಗೆ ತಿರುಗೇಟು ನೀಡಲು ಕಾತರ; ಡೆಲ್ಲಿ vs ಆರ್‌ಸಿಬಿ ಪಂದ್ಯದ ಪ್ರಮುಖ ಅಂಶಗಳು
ಇಂಡಿಯನ್ ಪ್ರೀಮಿಯರ್ ಲೀಗ್ 46ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ 2ನೇ ಬಾರಿಗೆ ಮುಖಾಮುಖಿಯಾಗಲು ಸಜ್ಜಾಗಿವೆ. ಇದು ಐಪಿಎಲ್ನ 46ನೇ ಪಂದ್ಯ. ಏಪ್ರಿಲ್ 27ರಂದು ಸಂಜೆ 7.30ಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಏಪ್ರಿಲ್ 10ರಂದು ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ತಂಡವನ್ನು ಅವರದ್ದೇ ಪಿಚ್ನಲ್ಲಿ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಸೋಲಿಸಿತ್ತು. ಇದೀಗ ಆ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳಲು ಆರ್‌ಸಿಬಿ ಸಿದ್ಧತೆ ನಡೆಸಿದೆ.
8 ಪಂದ್ಯಗಳಲ್ಲಿ 6 ಗೆಲುವು, 2 ಸೋಲು ಕಂಡಿರುವ ಡಿಸಿ, 12 ಅಂಕ ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 9 ಪಂದ್ಯ ಆಡಿರುವ ರಾಯಲ್ ಚಾಲೆಂಜರ್ಸ್ ಅಷ್ಟೇ ಗೆಲುವು ಸಾಧಿಸಿ 12 ಅಂಕ ಪಡೆದಿದೆ. ಆದರೆ ಮೂರು ಪಂದ್ಯಗಳನ್ನು ಸೋತಿದೆ. ಇನ್ನು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿರುವ ಆರ್‌ಸಿಬಿ, ತವರಿನ ಹೊರಗಿನ ಪಿಚ್ಗಳಲ್ಲಿ ಇದುವರೆಗೂ ಒಂದು ಪಂದ್ಯ ಸೋತಿಲ್ಲ. ಇದು ತಂಡದ ಅತಿ ದೊಡ್ಡ ಬಲವಾಗಿದೆ. ಡೆಲ್ಲಿ ಪಿಚ್ ಕೊಹ್ಲಿಯ ತವರಿನ ಪಿಚ್ ಎಂಬುದು ಗಮನಿಸಬೇಕಾದ ಮುಖ್ಯ ಅಂಶವಾಗಿದೆ.
ವೃತ್ತದಲ್ಲಿ ಇರೋದೆಲ್ಲಾ ನಂದೆ ಎಂದಿದ್ದ ಕೆಎಲ್
ಮೊದಲ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತ್ತು. ಅಂದು ಬೆಂಗಳೂರು ತೀವ್ರ ಕಳಪೆ ಪ್ರದರ್ಶನ ನೀಡಿತ್ತು. ಕುಲ್ದೀಪ್ ಯಾದವ್ (17/2) ಮತ್ತು ವಿಪ್ರಜ್ ನಿಗಮ್ (18/2) ಸ್ಪಿನ್ ದಾಳಿಗೆ ತತ್ತರಿಸಿತ್ತು. ಈ ಗುರಿ ಬೆನ್ನಟ್ಟಿದ ಡೆಲ್ಲಿ 17.5 ಓವರ್ಗಳಲ್ಲೇ ಗೆದ್ದು ಬೀಗಿತ್ತು. ಅದರಲ್ಲೂ ಕೆಎಲ್ ರಾಹುಲ್ ತನ್ನ ಹೋಮ್ ಗ್ರೌಂಡ್ನಲ್ಲಿ ಅಜೇಯ 93 ರನ್ ಸಿಡಿಸಿ ಗೆಲುವಿನ ಪ್ರಮುಖ ರೂವಾರಿ ಎನಿಸಿದರು. ಗೆದ್ದ ಬಳಿಕ ಕೆಎಲ್ ಬ್ಯಾಟ್ನಿಂದ ವೃತ್ತ ಬರೆದು, ವೃತ್ತದಲ್ಲಿ ಇರೋದೇಲ್ಲಾ ನಂದೇ ಎಂದಿದ್ದರು.
ಕರ್ನಾಟಕದ ಕ್ರಿಕೆಟಿಗನೇ ಆದರೂ ರಾಹುಲ್ ನಡೆ ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು. ಹೀಗಾಗಿ, ಪಂದ್ಯಕ್ಕೂ ಮುನ್ನ ಕರ್ಮ ಬಿಟ್ಟರೂ ವಿರಾಟ್ ಕೊಹ್ಲಿ ಬಿಡಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಟ್ರೆಂಡ್ ಆಗುತ್ತಿದೆ. ಅದು ಅಲ್ಲದೆ, ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಿ ಬೆಳೆದಿರುವ ಕೊಹ್ಲಿ, ಅದ್ಭುತ ಪ್ರದರ್ಶನದೊಂದಿಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ಅದು ಅಲ್ಲದೆ, ರೆಡ್ ಹಾಟ್ ಫಾರ್ಮ್ನಲ್ಲಿರುವ ವಿರಾಟ್ ಘರ್ಜಿಸುವ ವಿಶ್ವಾಸದಲ್ಲಿದ್ದಾರೆ. ಎಲ್ಲರೂ ಅವರ ಆಟದ ಮೇಲೆ ಕಣ್ಣಿಟ್ಟಿದ್ದಾರೆ.
ಡೆಲ್ಲಿ vs ಆರ್‌ಸಿಬಿ ಮುಖಾಮುಖಿ ದಾಖಲೆ
ಪಂದ್ಯಗಳು - 30
ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು - 11
ಆರ್‌ಸಿಬಿ ತಂಡಕ್ಕೆ ಗೆಲುವು - 19
ಯಾವುದೇ ಫಲಿತಾಂಶವಿಲ್ಲ - 00
ದೆಹಲಿ ಪಿಚ್ ವರದಿ
ಆರ್‌ಸಿಬಿ ಮತ್ತು ಡಿಸಿ ತಂಡಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪರಸ್ಪರ ಸೆಣಸಲಿವೆ. ಪ್ರಸ್ತುತ ಸೀಸನ್‌ನಲ್ಲಿ ಸ್ಪಿನ್ನರ್‌ಗಳಿಗೆ ಸ್ವಲ್ಪ ತಿರುವು ನೀಡುತ್ತದೆ. ಪವರ್ಪ್ಲೇನಲ್ಲಿ ಬ್ಯಾಟರ್ಗಳ ಬ್ಯಾಟ್ಗೆ ಚೆಂಡು ಸಿಗಲಿದೆ. ಮೊದಲ ಆರು ಓವರ್ಗಳನ್ನು ಬ್ಯಾಟರ್ಗಳು ಚೆನ್ನಾಗಿ ಸದುಪಯೋಗಿಸಿಕೊಳ್ಳಬಹುದು. ಇನ್ನಿಂಗ್ಸ್ ಮುಂದುವರೆದಂತೆ, ಬ್ಯಾಟಿಂಗ್ ಮಾಡುವುದು ಕಷ್ಟವಾಗುತ್ತದೆ. ಇಬ್ಬನಿಯ ಅನುಪಸ್ಥಿತಿಯಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಸ್ವಲ್ಪ ಕಷ್ಟವಾದರೂ ಸ್ಟ್ರೈಕ್ ರೊಟೇಟ್ ಮಾಡಿದರೆ ಸ್ಕೋರ್ ಹರಿದು ಬರಲಿದೆ. ಬೌಲರ್‌ಗಳು ಉತ್ತಮ ಲೈನ್ ಮತ್ತು ಲೆಂತ್‌ಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ವೇಗಿಗಳು ತಮ್ಮ ವೇಗವನ್ನು ಬದಲಾಯಿಸಿದರೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸಲಿದ್ದಾರೆ.
ಹವಾಮಾನ ವರದಿ
ಪಂದ್ಯದ ದಿನದಂದು ದೆಹಲಿಯಲ್ಲಿ ಮಳೆ ಬರುವ ಮುನ್ಸೂಚನೆ ಇಲ್ಲ. ಆದ್ದರಿಂದ ಡಿಸಿ vs ಆರ್‌ಸಿಬಿ ಪಂದ್ಯವು ಯಾವುದೇ ಪ್ರಮುಖ ಅಡಚಣೆಗಳಿಲ್ಲದೆ ನಡೆಯುವ ಸಾಧ್ಯತೆಯಿದೆ. ಪಂದ್ಯದ ಸಮಯದಲ್ಲಿ ತಾಪಮಾನವು 30-35 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ.
ಯಾವೆಲ್ಲಾ ಆಟಗಾರರ ಮೇಲೆ ಕಣ್ಣು?
ಆರ್‌ಸಿಬಿ ಮತ್ತು ಡೆಲ್ಲಿ ಎರಡೂ ತಂಡಗಳಿಂದಲೂ ಅತ್ಯುತ್ತಮ ಪ್ರದರ್ಶನ ಬರುತ್ತಿದೆ. ಫಿಲ್ ಸಾಲ್ಟ್ ಬಿರುಸಿನ ಆಟಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹಾಗಾಗಿ ಅವರು ಬಿರುಸಿನ ಆಟದ ಜೊತೆಗೆ ರಕ್ಷಣಾತ್ಮಕ ಆಟಕ್ಕೂ ಒತ್ತು ನೀಡಬೇಕು. ಕೊಹ್ಲಿ ತವರಿನ ಪಿಚ್ನಲ್ಲಿ ಮಿಂಚುವುದು ಅನಿವಾರ್ಯ. ಕೊಹ್ಲಿ ಜೊತೆಗೆ ಪಡಿಕ್ಕಲ್ ಉತ್ತಮ ಜೊತೆಯಾಟ ನೀಡುತ್ತಿರುವುದು ಮತ್ತೊಂದು ಸಕಾರಾತ್ಮಕ ಅಂಶ. ಟಿಮ್ ಡೇವಿಡ್ ಫಿನಿಷಿಂಗ್ ಕಾರ್ಯ ನಿಭಾಯಿಸಲಿದ್ದಾರೆ. ಬೌಲಿಂಗ್ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್ ದುಬಾರಿ ಆಗುತ್ತಿರುವುದು ತಂಡದ ತಲೆನೋವಿಗೆ ಕಾರಣವಾಗಿದೆ. ಸುಯಾಶ್ ಶರ್ಮಾ ಬದಲಿಗೆ ಸ್ವಪ್ನಿಲ್ ಸಿಂಗ್ಗೆ ಅವಕಾಶ ಕೊಟ್ಟರೂ ಉತ್ತಮ. ಜೋಶ್ ಹೇಜಲ್‌ವುಡ್ ಪರ್ಪಲ್ ಕ್ಯಾಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಡೆಲ್ಲಿ ತಂಡದಲ್ಲಿ ಆರಂಭಿಕರಾಗಿ ಫಾಫ್ ಡು ಪ್ಲೆಸಿಸ್ ಮರಳುವ ಸಾಧ್ಯತೆ ಇದೆ. ಅಲ್ಲದೆ, ಎಲ್ಲರಿಂದಲೂ ಅದ್ಭುತ ಪ್ರದರ್ಶನ ಬರುತ್ತಿದೆ. ಕರುಣ್ ನಾಯರ್, ಅಭಿಷೇಕ್ ಪೊರೆಲ್ ಬಿರುಸಿನ ಆರಂಭ ಒದಗಿಸುತ್ತಿದ್ದರೆ, ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರಸ್ತಂಭವಾಗಿದ್ದಾರೆ. ಅಕ್ಷರ್ ಪಟೇಲ್, ಟ್ರಿಸ್ಟಾನ್ಸ್ ಸ್ಟಬ್ಸ್, ಅಶುತೋಷ್ ಶರ್ಮಾ ಕೊನೆಯಲ್ಲಿ ವೇಗದ ಬ್ಯಾಟಿಂಗ್ ನಡೆಸುವ ಮೂಲಕ ದೊಡ್ಡ ಮೊತ್ತವಿದ್ದರೂ ಚೇಸ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಕುಲ್ದೀಪ್ ಯಾದವ್ ಮತ್ತು ಮಿಚೆಲ್ ಸ್ಟಾರ್ಕ್ ಎದುರಾಳಿ ತಂಡಗಳನ್ನು ಕಾಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ 11
ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್. ಇಂಪ್ಯಾಕ್ಟ್ ಪ್ಲೇಯರ್: ಮೋಹಿತ್ ಶರ್ಮಾ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ 11
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್‌ವುಡ್. ಇಂಪ್ಯಾಕ್ಟ್ ಪ್ಲೇಯರ್: ಸುಯಾಶ್ ಶರ್ಮಾ