ಗುಜರಾತ್ ಜೈಂಟ್ಸ್ ವಿರುದ್ಧ ಡಿಸಿಗೆ 6 ವಿಕೆಟ್ ಗೆಲುವು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ಗುಜರಾತ್ ಜೈಂಟ್ಸ್ ವಿರುದ್ಧ ಡಿಸಿಗೆ 6 ವಿಕೆಟ್ ಗೆಲುವು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

ಗುಜರಾತ್ ಜೈಂಟ್ಸ್ ವಿರುದ್ಧ ಡಿಸಿಗೆ 6 ವಿಕೆಟ್ ಗೆಲುವು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್​ ತಂಡವನ್ನು _ ವಿಕೆಟ್​ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಗುಜರಾತ್ ಜೈಂಟ್ಸ್ ವಿರುದ್ಧ ಡಿಸಿಗೆ 6 ವಿಕೆಟ್ ಗೆಲುವು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್
ಗುಜರಾತ್ ಜೈಂಟ್ಸ್ ವಿರುದ್ಧ ಡಿಸಿಗೆ 6 ವಿಕೆಟ್ ಗೆಲುವು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

ಕಳೆದ ಪಂದ್ಯದಲ್ಲಿ 33 ರನ್​ಗಳಿಂದ ಸೋಲನುಭವಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಲಯಕ್ಕೆ ಮರಳಿದ್ದು, ಡಬ್ಲ್ಯುಪಿಎಲ್ ಟೂರ್ನಿಯಲ್ಲಿ 3ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಶಫಾಲಿ ವರ್ಮಾ (44), ಜೆಸ್ ಜೊನಾಸನ್ (61*) ಅವರ ಬ್ಯಾಟಿಂಗ್ ಅಬ್ಬರ ಮತ್ತು ಶಿಖಾ ಪಾಂಡೆ ಸೇರಿ ಉಳಿದ ಬೌಲರ್​ಗಳ ಮಾರಕ ಬೌಲಿಂಗ್ ಬಲದಿಂದ ಗುಜರಾತ್ ಜೈಂಟ್ಸ್ ವಿರುದ್ಧ ಡೆಲ್ಲಿ 6 ವಿಕೆಟ್​ಗಳ ಸುಲಭ ಗೆಲುವು ದಾಖಲಿಸಿದೆ. ಆದರೆ ಕಳಪೆ ಬ್ಯಾಟಿಂಗ್​ಗೆ ಬೆಲೆತೆತ್ತ ಗುಜರಾತ್, ಮೂರನೇ ಸೋಲು ಕಂಡಿದೆ. ಇದರೊಂದಿಗೆ ಜಿಜಿ ಪ್ಲೇಆಫ್ ಹಾದಿ ದುರ್ಗಮವಾಗುತ್ತಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್​ ಲೀಗ್​​​ನ 10ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು ಡೆಲ್ಲಿ ಬೌಲರ್​ಗಳ ಅಬ್ಬರದ ಮುಂದೆ ಸದ್ದು ಮಾಡಲಿಲ್ಲ. 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾರತಿ ಫುಲ್ಮಾಲಿ (40) ಅವರ ಅಬ್ಬರದ ಆಟದ ಪರಿಣಾಮ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್​ಗಳ ಸಾಧಾರಣ ಮೊತ್ತ ಪೇರಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಡೆಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಎದುರಾಳಿ ಬೌಲರ್​ಗಳ ಮೇಲೆ ಸವಾರಿ ಮಾಡಿತು. ಡಿಸಿ 15.1 ಓವರ್​​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 131 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು.

ಬೌಲರ್​ಗಳ ಅಬ್ಬರ, ಗುಜರಾತ್ ತತ್ತರ

ಬೃಹತ್​ ಗುರಿ ಕಲೆ ಹಾಕುವ ನಿಟ್ಟಿನಲ್ಲಿ ಹಲವು ಬದಲಾವಣೆಗಳೊಂದಿಗೆ ಕಣಕ್ಕಿಳಿದ ಗುಜರಾತ್ ಲಕ್ ನಿಜವಾಗಲೂ ಸರಿ ಇರಲಿಲ್ಲ. ಡೆಲ್ಲಿ ಬೌಲರ್​ಗಳ ಚೆಂಕಿ ಚೆಂಡುಗಳನ್ನು ಎದುರಿಸಲಾಗದ ಜಿಜಿ, 20 ರನ್​ಗೆ 4 ವಿಕೆಟ್ ಕಳೆದುಕೊಂಡಿತು. 60 ರನ್ ಆಗುತ್ತಿದ್ದಂತೆ 6 ವಿಕೆಟ್​ಗಳು ನಷ್ಟವಾದವು. ಬೆತ್ ಮೂನಿ (10), ಹರ್ಲೀನ್ ಡಿಯೋಲ್ (5), ಫೀಬಿ ಲಿಚ್​ಫೀಲ್ಡ್ (0), ಆ್ಯಶ್ಲೆ ಗಾರ್ಡ್ನರ್​ (3), ಕಾಶ್ವಿ ಗೌತಮ್ (0), ಡಿಯಾಂಡ್ರಾ ಡಾಟಿನ್ (26) ತೀವ್ರ ನಿರಾಸೆ ಮೂಡಿಸಿದರು. ಇವರೆಲ್ಲರಿಗೂ ಗೇಟ್ ಪಾಸ್ ಕೊಟ್ಟದ್ದು ಮರಿಜಾನ್ ಕಪ್, ಶಿಖಾ ಪಾಂಡೆ, ಅನ್ನಾಬೆಲ್ ಸದರ್ಲ್ಯಾಂಡ್.

100ರೊಳಗೆ ಆಲೌಟ್​ ಆಗುವ ಭೀತಿಗೆ ಸಿಲುಕಿದ್ದ ಜಿಜಿಗೆ ಆಸರೆಯಾಗಿದ್ದು ಭಾರತಿ ಭಾರತಿ ಫುಲ್ಮಾಲಿ. ಅತ್ಯುತ್ತಮ ಲಯದಲ್ಲಿದ್ದ ಡೆಲ್ಲಿ ಬೌಲರ್​ಗಳ ಎದುರು ಸಿಡಿದೆದ್ದು ನಿಂತ ಭಾರತಿ, 29 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 40 ರನ್ ಪೇರಿಸಿ ತಂಡವನ್ನು 120ರ ಗಡಿ ದಾಟಿಸಿದರು. ಇವರಿಗೆ 16 ರನ್ ಗಳಿಸಿದ ತನುಜಾ ಕನ್ವರ್​ ಸಾಥ್ ಕೊಟ್ಟರು. ಕೊನೆಯಲ್ಲಿ ಸಿಮ್ರಾನ್ ಖಾನ್ 5, ಮೇಘನಾ ಸಿಂಗ್ 0 ನಿರಾಸೆ ಮೂಡಿಸಿದರು. ಡೆಲ್ಲಿ ಪರ ಶಿಖಾ, ಸದರ್ಲ್ಯಾಂಡ್, ಮರಿಜಾನ್ ತಲಾ 2 ವಿಕೆಟ್ ಪಡೆದರು.

ಜೆಸ್ ಜೊನಾಸೆನ್ ಬ್ಯಾಟಿಂಗ್ ಸುನಾಮಿ

128 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಡೆಲ್ಲಿ, ಕೆಟ್ಟ ಆರಂಭದ ಹೊರತಾಗಿಯೂ ಶಫಾಲಿ ವರ್ಮಾ ಮತ್ತು ಜೆಸ್ ಜೊನಾಸೆನ್ ಗುಜರಾತ್ ಬೌಲರ್​ಗಳಿಗೆ ಬೆಂಡೆತ್ತಿದರು. ಇವರಿಬ್ಬರು 2ನೇ ವಿಕೆಟ್​ಗೆ 74 ರನ್​ ಕಲೆ ಹಾಕಿದರು. ಶಫಾಲಿ 27 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್​ ಸಹಿತ 44 ರನ್ ಸಿಡಿಸಿ ಪಂದ್ಯದ ಗೆಲುವನ್ನು ಇನ್ನಷ್ಟು ಸುಲಭಗೊಳಿಸಿದರು. ಮತ್ತೊಂದೆಡೆ ಜೊನಾಸೆನ್ 32 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಿತ 61 ರನ್ ಗಳಿಸಿ ಕೊನೆಯವರೆಗೂ ಕ್ರೀಸ್​ನಲ್ಲೇ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಜೆಮಿಮಾ ರೋಡ್ರಿಗಸ್ 5, ಅನ್ನಾಬೆಲ್ ಸದರ್ಲ್ಯಾಂಡ್ 1 ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಮರಿಜಾನ್ನೆ ಕಪ್ 9 ರನ್ ಗಳಿಸಿ ಅಜೇಯರಾಗಿ ಗೆಲುವಿಗೆ ಸಾಥ್ ಕೊಟ್ಟರು.

ತಂಡ (ಅಂಕಪಟ್ಟಿ)ಪಂದ್ಯಗೆಲುವುಸೋಲುಅಂಕNRR
ಡೆಲ್ಲಿ ಕ್ಯಾಪಿಟಲ್ಸ್05030206-0.223
ಆರ್​ಸಿಬಿ04020204+0.619
ಮುಂಬೈ ಇಂಡಿಯನ್ಸ್03020104+0.610
ಯುಪಿ ವಾರಿಯರ್ಸ್04020204+0.167
ಗುಜರಾತ್ ಜೈಂಟ್ಸ್04010302-0.974

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner