ವಿರಾಟ್ ಕೊಹ್ಲಿ ಪಂದ್ಯ ವೀಕ್ಷಣೆಗೆ ಅಭಿಮಾನಿಗಳ ಕಾತರ; ದೆಹಲಿ vs ರೈಲ್ವೇಸ್ ರಣಜಿ ಟ್ರೋಫಿ ಪಂದ್ಯದ ಲೈವ್‌ ಸ್ಟ್ರೀಮಿಂಗ್‌ ಲಭ್ಯ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಪಂದ್ಯ ವೀಕ್ಷಣೆಗೆ ಅಭಿಮಾನಿಗಳ ಕಾತರ; ದೆಹಲಿ Vs ರೈಲ್ವೇಸ್ ರಣಜಿ ಟ್ರೋಫಿ ಪಂದ್ಯದ ಲೈವ್‌ ಸ್ಟ್ರೀಮಿಂಗ್‌ ಲಭ್ಯ

ವಿರಾಟ್ ಕೊಹ್ಲಿ ಪಂದ್ಯ ವೀಕ್ಷಣೆಗೆ ಅಭಿಮಾನಿಗಳ ಕಾತರ; ದೆಹಲಿ vs ರೈಲ್ವೇಸ್ ರಣಜಿ ಟ್ರೋಫಿ ಪಂದ್ಯದ ಲೈವ್‌ ಸ್ಟ್ರೀಮಿಂಗ್‌ ಲಭ್ಯ

ದೆಹಲಿ ಪರ ವಿರಾಟ್ ಕೊಹ್ಲಿ ರಣಜಿ ಟ್ರೋಫಿ ಪಂದ್ಯ ಆಡಲು ಸಜ್ಜಾಗಿದ್ದಾರೆ. ಹೀಗಾಗಿ ಪಂದ್ಯವನ್ನು ಲೈವ್‌ ಸ್ಟ್ರೀಮ್‌ ಮಾಡಲು ಬಿಸಿಸಿಐ ಒಪ್ಪಿಕೊಂಡಿದೆ. ಅಭಿಮಾನಿಗಳು ಮನೆಯಲ್ಲೇ ಕುಳಿತು ವಿರಾಟ್‌ ಕೊಹ್ಲಿ ಆಡುವ ರಣಜಿ ಪಂದ್ಯ ವೀಕ್ಷಿಸಬಹುದು.

ವಿರಾಟ್ ಕೊಹ್ಲಿಯ ದೆಹಲಿ vs ರೈಲ್ವೇಸ್ ರಣಜಿ ಟ್ರೋಫಿ ಪಂದ್ಯದ ಲೈವ್‌ ಸ್ಟ್ರೀಮಿಂಗ್‌ ವಿವರ
ವಿರಾಟ್ ಕೊಹ್ಲಿಯ ದೆಹಲಿ vs ರೈಲ್ವೇಸ್ ರಣಜಿ ಟ್ರೋಫಿ ಪಂದ್ಯದ ಲೈವ್‌ ಸ್ಟ್ರೀಮಿಂಗ್‌ ವಿವರ (Hindustan Times)

ಟೀಮ್‌ ಇಂಡಿಯಾ ಮಾಜಿ ನಾಯಕ, ಸ್ಟಾರ್‌ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) 12 ವರ್ಷಗಳ‌ ನಂತರ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ (Ranji Trophy) ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದ್ದು, ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಜನವರಿ 30ರಂದು ಆರಂಭವಾಗಲಿರುವ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಬಲಗೈ ಬ್ಯಾಟರ್‌ ಕಣಕ್ಕಿಳಿಯಲಿದ್ದಾರೆ. ಪಂದ್ಯಕ್ಕಾಗಿ ವಿಶೇಷ ಸಿದ್ಧತೆ ನಡೆಸಲಾಗಿದ್ದು, ದೆಹಲಿ ಪೊಲೀಸರು ಕೂಡಾ ಹೆಚ್ಚುವರಿ ಭದ್ರತಾ ವ್ಯವಸ್ಥೆಗೆ ಅಲರ್ಟ್‌ ಆಗಿದ್ದಾರೆ. ಈ ನಡುವೆ ಪಂದ್ಯದ ಲೈವ್‌ ಸ್ಟ್ರೀಮಿಂಗ್‌ ವಿಚಾರವಾಗಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಈ ಹಿಂದೆ, ದೆಹಲಿ ಮತ್ತು ರೈಲ್ವೇಸ್‌ ನಡುವಿನ ರಣಜಿ ಟ್ರೋಫಿ ಪಂದ್ಯದ ನೇರಪ್ರಸಾರ ಇರುವುದಿಲ್ಲ ಎಂದು ಹೇಳಲಾಗಿತ್ತು. ಅಭಿಮಾನಿಗಳು ದೂರದರ್ಶನ ಅಥವಾ ಲೈವ್‌ ಸ್ಟ್ರೀಮಿಂಗ್‌ ಮೂಲಕ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿತ್ತು. ಇದೀಗ ಭಾರಿ ಒತ್ತಾಯಕ್ಕೆ ಮಣಿದ ಬಿಸಿಸಿಐ, ಪ್ರಸಾರ ಯೋಜನೆಗಳಲ್ಲಿ ದೊಡ್ಡ ಬದಲಾವಣೆ ಮಾಡಿದೆ.

ವಿರಾಟ್ ಕೊಹ್ಲಿ ಅವರ ರಣಜಿ ಟ್ರೋಫಿ ಪುನರಾಗಮನವನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಎಲ್ಲರೂ ಸ್ಟೇಡಿಯಂಗೆ ಹೋಗಿ ಪಂದ್ಯ ನೋಡಲು ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲೇ ಕುಳಿತು ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗಬೇಕು ಎಂಬುದು ಅಭಿಮಾನಿಗಳ ನಿರೀಕ್ಷೆ. ಹೀಗಾಗಿ ಬಿಸಿಸಿಐ ಕೂಡಾ ತನ್ನ ನಿರ್ಧಾರದಲ್ಲಿ ಬದಲಾವಣೆ ಮಾಡಿದೆ. ಇದೀಗ ದೆಹಲಿ ಮತ್ತು ರೈಲ್ವೇಸ್‌ ಪಂದ್ಯವು ಜಿಯೋ ಸಿನಿಮಾದಲ್ಲಿ ಲಭ್ಯವಾಗಲಿದೆ.

ಪಂದ್ಯ ವೀಕ್ಷಿಸಲು ಕನಿಷ್ಠ 10,000 ಅಭಿಮಾನಿಗಳಿಗೆ ಅವಕಾಶವಿದೆ. ಹೀಗಾಗಿ ಡಿಡಿಸಿಎ ಪ್ರೇಕ್ಷಕರಿಗೆ ಉಚಿತ ಟಿಕೆಟ್ ನೀಡುವುದಾಗಿ ಘೋಷಿಸಿದೆ. ಇದರೊಂದಿಗೆ ಮೊಬೈಲ್‌ ಮೂಲಕ ನೋಡಲು ಲೈವ್‌ ಸ್ಟ್ರೀಮಿಂಗ್‌ ಇರಲಿದೆ. ಆದರೆ, ಈ ಪಂದ್ಯವು ಟಿವಿ ಮೂಲಕ ನೇರಪ್ರಸಾರ ಆಗುವ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಇಲ್ಲ.

ಜಿಯೋ ಸಿನಿಮಾದಲ್ಲಿ ಲೈವ್‌ ಸ್ಟ್ರೀಮಿಂಗ್

“ಜಿಯೋ ಸಿನಿಮಾ ಪಂದ್ಯವನ್ನು ಲೈವ್ ಸ್ಟ್ರೀಮ್ ಮಾಡುತ್ತದೆ. ಆದ್ದರಿಂದ ದೆಹಲಿಯಲ್ಲಿ ಇಲ್ಲದ ವಿರಾಟ್ ಕೊಹ್ಲಿ ಅಭಿಮಾನಿಗಳು ಚಿಂತಿಸಬೇಕಾಗಿಲ್ಲ. ಅವರು ತಮ್ಮ ನೆಚ್ಚಿನ ಆಟಗಾರನನ್ನು ಲೈವ್ ಮೂಲಕ ವೀಕ್ಷಿಸಬಹುದು,” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ದೇಶೀಯ ಕ್ರಿಕೆಟ್‌ಗೆ ಮರಳುತ್ತಿರುವುದು ಬಿಸಿಸಿಐ ನಿರ್ಧಾರದಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಲು ಪ್ರೇರೇಪಿಸಿದೆ.

ಕೆಎಲ್‌ ರಾಹುಲ್‌ ಕಣಕ್ಕೆ

ಜನವರಿ 30ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಮುಂದಿನ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ಮತ್ತು ಹರಿಯಾಣ ತಂಡಗಳು ಕೂಡಾ ಮುಖಾಮುಖಿಯಾಗುತ್ತಿವೆ. ಕನ್ನಡಿಗ ಕೆಎಲ್ ರಾಹುಲ್ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಹೀಗಾಗಿ ವಿರಾಟ್‌ ಹಾಗೂ ಕೆಎಲ್‌ ರಾಹುಲ್‌ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ವಿರಾಟ್ ಕೊಹ್ಲಿ 2012ರಲ್ಲಿ ಕೊನೆಯ ಬಾರಿಗೆ ರಣಜಿ ಪಂದ್ಯ ಆಡಿದ್ದರು. ಮಂಗಳವಾರವಷ್ಟೇ ಬಲಗೈ ಬ್ಯಾಟರ್ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ತಂಡದೊಂದಿಗೆ ತರಬೇತಿ ಅವಧಿಯಲ್ಲಿ ಪಾಲ್ಗೊಂಡದರು. ಸುದೀರ್ಘ ನೆಟ್ ಸೆಷನ್‌ನಲ್ಲಿ ಭಾಗಿಯಾದರು. ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಪರ್ತ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿದರೂ, ಆಡಿದ 9 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 190 ರನ್ ಮಾತ್ರ.

Whats_app_banner