ವಿಜಯ್‌ ಹಜಾರೆ ಟ್ರೋಫಿ: ದೇವದತ್‌ ಪಡಿಕ್ಕಲ್‌ ಶತಕ, ಬರೋಡಾ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಕರ್ನಾಟಕ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಜಯ್‌ ಹಜಾರೆ ಟ್ರೋಫಿ: ದೇವದತ್‌ ಪಡಿಕ್ಕಲ್‌ ಶತಕ, ಬರೋಡಾ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಕರ್ನಾಟಕ

ವಿಜಯ್‌ ಹಜಾರೆ ಟ್ರೋಫಿ: ದೇವದತ್‌ ಪಡಿಕ್ಕಲ್‌ ಶತಕ, ಬರೋಡಾ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಕರ್ನಾಟಕ

ಕರ್ನಾಟಕ ರಾಜ್ಯ ಕ್ರಿಕೆಟ್‌ ತಂಡವು ಜನವರಿ 15ರಂದು ನಡೆಯಲಿರುವ ವಿಜಯ್‌ ಹಜಾರೆ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ಗುಜರಾತ್‌ ಅಥವಾ ಹರಿಯಾಣ ತಂಡವನ್ನು ಎದುರಿಸಲಿದೆ.

ವಿಜಯ್‌ ಹಜಾರೆ ಟ್ರೋಫಿ: ಬರೋಡಾ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಕರ್ನಾಟಕ
ವಿಜಯ್‌ ಹಜಾರೆ ಟ್ರೋಫಿ: ಬರೋಡಾ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಕರ್ನಾಟಕ

ಪ್ರಸಕ್ತ ಆವೃತ್ತಿಯ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ರಾಜ್ಯ ತಂಡವು ಸೆಮಿಫೈನಲ್‌ ಪ್ರವೇಶಿಸಿದೆ. ವಡೋದರಾದಲ್ಲಿ ನಡೆದ ನಾಲ್ಕನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬರೋಡಾ ತಂಡವನ್ನು 5 ರನ್‌ಗಳಿಂದ ರೋಚಕವಾಗಿ ಮಣಿಸಿದ ಮಯಾಂಕ್‌ ಅಗರ್ವಾಲ್‌ ಬಳಗವು, ಪ್ರಶಸ್ತಿ ಗೆಲ್ಲಲು ಕೇವಲ ಎರಡು ಹೆಜ್ಜೆ ಹಿಂದಿದೆ. ಪಂದ್ಯದಲ್ಲಿ ದೇವದತ್‌ ಪಡಿಕ್ಕಲ್‌ ಆಕರ್ಷಕ ಶತಕ ಸಿಡಿಸಿ ಮಿಂಚಿದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ ತಂಡ, ದೇವದತ್‌ ಪಡಿಕ್ಕಲ್‌ ಶತಕ ಹಾಗೂ ಅನೀಶ್‌ ಕೆ.ವಿ. ಅರ್ಧಶತಕದ ನೆರವಿನಿಂದ 8 ವಿಕೆಟ್‌ ಕಳೆದುಕೊಂಡು 281 ರನ್‌ ಪೇರಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಬರೋಡಾ, ಶಾಶ್ವತ್‌ ರಾವತ್‌ ಶತಕದ ಹೊರತಾಗಿಯೂ 49.5 ಓವರ್‌ಗಳಲ್ಲಿ 276 ರನ್‌ ಗಳಿಸಿದ್ದಾಗ ಆಲೌಟ್‌ ಆಯ್ತು. ಇದರೊಂದಿಗೆ ಬರೋಡಾ ತಂಡ ಟೂರ್ನಿಯಿಂದ ಹೊರಬಿದ್ದರೆ, ಕರ್ನಾಟಕ ತಂಡ ಸೆಮಿಫೈನಲ್‌ ಪ್ರವೇಶಿಸಿತು.

ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಆಕರ್ಷಕ ಶತಕದೊಂದಿಗೆ ದೇಶೀಯ ಕ್ರಿಕೆಟ್‌ಗೆ ಮರಳಿದರು. ಅನೀಶ್ 64 ಎಸೆತಗಳಲ್ಲಿ 52 ರನ್‌ ಸಿಡಿಸಿದ್ದು ತಂಡದ ಇನ್ನಿಂಗ್ಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿತು. ಅತ್ತ ಬರೋಡಾ ಪರ ಶಾಶ್ವತ್ ರಾವತ್ 104 ರನ್‌ ಸಿಡಿಸುವ ಮೂಲಕ ತಂಡದ ಗೆಲುವಿಗೆ ಪ್ರಯತ್ನ ಪಟ್ಟರು. ಬರೋಡಾ ತಂಡಕ್ಕೆ ಕೊನೆಯ ಐದು ಓವರ್‌ಗಳಲ್ಲಿ 44 ರನ್‌ಗಳ ಅವಶ್ಯಕತೆಯಿತ್ತು. ಈ ಸಮಯದಲ್ಲಿ ಪ್ರಸಿದ್ಧ್ ಕೃಷ್ಣ 60 ರನ್ ಬಿಟ್ಟುಕೊಟ್ಟು 2 ಪ್ರಮುಖ ವಿಕೆಟ್‌ ಕಬಳಿಸಿ, ಪಂದ್ಯದಲ್ಲಿ ಕರ್ನಾಟಕದ ಪೈಪೋಟಿಯನ್ನು ಜೀವಂತವಾಗಿರಿಸಿದರು.‌

ಕೊನೆಯ ಓವರ್‌ ರೋಚಕತೆ

ಅಂತಿಮ ಓವರ್‌ನಲ್ಲಿ ಬರೋಡಾ ಗೆಲುವಿಗೆ 13 ರನ್‌ಗಳ ಅವಶ್ಯಕತೆಯಿತ್ತು. ರಾಜ್ ಲಿಂಬಾನಿ ಮತ್ತು ಭಾರ್ಗವ್ ಭಟ್ ಜೋಡಿ ತಂಡದ ಗೆಲುವಿಗೆ ಎಲ್ಲಾ ರೀತಿಯ ಪ್ರಯತ್ನ ಮಾಡಿದರು. ಆದರೆ ಅದು ಸಾಧ್ಯವಾಗಲಿಲ್ಲ. ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಅಂತಿಮ ಓವರ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಕರ್ನಾಟಕಕ್ಕೆ ಜಯ ತಂದುಕೊಟ್ಟರು.

ಮಹಾರಾಷ್ಟ್ರವೂ ಸೆಮಿಫೈನಲ್‌ಗೆ

ನಾಲ್ಕು ಬಾರಿಯ ಚಾಂಪಿಯನ್ ಆಗಿರುವ ಕರ್ನಾಟಕ ತಂಡ ಆತಿಥೇಯ ಬರೋಡಾ ತಂಡವನ್ನು ಮಣಿಸಿದ್ದು ಒಂದೆಡೆಯಾದರೆ, ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಪಂಜಾಬ್ ತಂಡವನ್ನು 70 ರನ್ ಗಳಿಂದ ಮಣಿಸಿ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪ್ರವೇಶಿಸಿದೆ.

ಕರ್ನಾಟಕ ತಂಡವು ಮುಂದೆ ಜನವರಿ 15ರಂದು ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಗುಜರಾತ್‌ ಅಥವಾ ಹರಿಯಾಣ ತಂಡವನ್ನು ಎದುರಿಸಲಿದೆ. ನಾಳೆ (ಜನವರಿ 12) ಮೊದಲ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿವೆ. ಅದರಲ್ಲಿ ಗೆದ್ದ ತಂಡವು ಸೆಮಿಕದನದಲ್ಲಿ ಕರ್ನಾಟಕವನ್ನು ಎದುರಿಸಲಿದೆ.

Whats_app_banner