ಬಾರ್ಡರ್-ಗವಾಸ್ಕರ್ ಟ್ರೋಫಿ: ಟೀಮ್ ಇಂಡಿಯಾ ಸೇರಿದ ದೇವದತ್ ಪಡಿಕ್ಕಲ್; ಪರ್ತ್ ಟೆಸ್ಟ್ ಆಡಲು ಸಜ್ಜಾದ ಕನ್ನಡಿಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾರ್ಡರ್-ಗವಾಸ್ಕರ್ ಟ್ರೋಫಿ: ಟೀಮ್ ಇಂಡಿಯಾ ಸೇರಿದ ದೇವದತ್ ಪಡಿಕ್ಕಲ್; ಪರ್ತ್ ಟೆಸ್ಟ್ ಆಡಲು ಸಜ್ಜಾದ ಕನ್ನಡಿಗ

ಬಾರ್ಡರ್-ಗವಾಸ್ಕರ್ ಟ್ರೋಫಿ: ಟೀಮ್ ಇಂಡಿಯಾ ಸೇರಿದ ದೇವದತ್ ಪಡಿಕ್ಕಲ್; ಪರ್ತ್ ಟೆಸ್ಟ್ ಆಡಲು ಸಜ್ಜಾದ ಕನ್ನಡಿಗ

ಆಸ್ಟ್ರೇಲಿಯಾ ಎ ವಿರುದ್ಧ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಿದ್ದ‌ ಕನ್ನಡಿಗ ದೇವದತ್ ಪಡಿಕ್ಕಲ್, ಇದೀಗ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ಮುಖ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ರೋಹಿತ್‌ ಶರ್ಮಾ ಹಾಗೂ ಶುಭ್ಮನ್‌ ಗಿಲ್ ಅನುಪಸ್ಥಿತಿಯಲ್ಲಿ ಇವರು ಪರ್ತ್‌ ಟೆಸ್ಟ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಬಾರ್ಡರ್-ಗವಾಸ್ಕರ್ ಟ್ರೋಫಿ: ಟೀಮ್ ಇಂಡಿಯಾ ಸೇರಿದ ದೇವದತ್ ಪಡಿಕ್ಕಲ್
ಬಾರ್ಡರ್-ಗವಾಸ್ಕರ್ ಟ್ರೋಫಿ: ಟೀಮ್ ಇಂಡಿಯಾ ಸೇರಿದ ದೇವದತ್ ಪಡಿಕ್ಕಲ್ (AFP)

ಪರ್ತ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ, ಭಾರತ ಮುಖ್ಯ ತಂಡಕ್ಕೆ ಕನ್ನಡಿಗ ದೇವದತ್ ಪಡಿಕ್ಕಲ್ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಭಾರತ ಆಸ್ಟ್ರೇಲಿಯಾ ನಡುವಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತದ ಆಡುವ ಬಳಗದಲ್ಲಿ ಪಡಿಕ್ಕಲ್‌ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಕುರಿತು ವರದಿಗಳು ತಿಳಿಸಿವೆ. ಇದೇ ವೇಳೆ ಆರ್‌ಸಿಬಿ ವೇಗಿ ಯಶ್ ದಯಾಳ್ ಅವರನ್ನು ಪ್ರಯಾಣದ ಮೀಸಲು ಆಟಗಾರನಾಗಿ ಸೇರಿಸಲಾಗಿದೆ.

ಪಡಿಕ್ಕಲ್ ಮತ್ತು ದಯಾಳ್ ಇಬ್ಬರೂ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಿದ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದರು.

ಸದ್ಯ ಪರ್ತ್‌ ಟೆಸ್ಟ್‌ನಲ್ಲಿ ಪಡಿಕ್ಕಲ್‌ ಆಡುವ ಕುರಿತು ಟೀಮ್‌ ಇಂಡಿಯಾ ಅಥವಾ ಬಿಸಿಸಿಐನಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಕೆಲವು ದಿನಗಳ ಹಿಂದೆ ಅಭ್ಯಾಸದ ಸಮಯದಲ್ಲಿ ಶುಭ್ಮನ್ ಗಿಲ್ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರು ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಎಡಗೈ ಬ್ಯಾಟರ್‌ ಆಡುವ ಬಳಗದಲ್ಲಿ 3ನೇ ಕ್ರಮಾಂಕದಲ್ಲಿ ಆಡಲು ಸಜ್ಜಾಗಿದ್ದಾರೆ.

ಮ್ಯಾನೇಜ್‌ಮೆಂಟ್‌ ಮೆಚ್ಚುಗೆ ಗಳಿಸಿದ ಕನ್ನಡಿಗ

ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ಎ ತಂಡ ಬೌಲರ್‌ಳ ವಿರುದ್ಧ ದಿಟ್ಟ ಹೋರಾಟ ನಡೆಸಿದ ಕೆಲವೇ ಭಾರತೀಯ ಬ್ಯಾಟರ್‌ಗಳ ಪೈಕಿ ಪಡಿಕ್ಕಲ್ ಕೂಡ ಒಬ್ಬರು. ಮೊದಲ ಅನಧಿಕೃತ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ, ಪಡಿಕ್ಕಲ್ ಮತ್ತು ಸಾಯಿ ಸುದರ್ಶನ್ ಜೋಡಿ ಆತಿಥೇಯರ ವಿರುದ್ಧ ಸ್ವಲ್ಪ ಪ್ರತಿರೋಧ ಒಡ್ಡಿದರು. ಕೇವಲ 12 ರನ್‌ಗಳಿಂದ ಪಡಿಕ್ಕಲ್ ಶತಕ ವಂಚಿತರಾದರು. ಆದರೆ, ಆಸೀಸ್‌ ಪಿಚ್‌ನಲ್ಲಿ ಅವರ ಸಂಯಮ ಮತ್ತು ಆತ್ಮವಿಶ್ವಾಸ ತಂಡ ಮ್ಯಾನೇಜ್‌ಮೆಂಟ್‌ಗೆ ಮೆಚ್ಚುಗೆಯಾಗಿದೆ.

ಅತ್ತ ಎರಡನೇ ಮಗುವಿಗೆ ತಂದೆಯಾಗಿರುವ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾ ಕಾಯಂ ನಾಯಕ ರೋಹಿತ್ ಶರ್ಮಾ ಕೂಡ ಮೊದಲ ಟೆಸ್ಟ್‌ನಿಂದ ಹೊರಗುಳಿದಿದಿದ್ದಾರೆ.‌ ಹೀಗಾಗಿ ಆರಂಭಿಕನ ಸ್ಥಾನ ಖಾಲಿ ಉಳಿದಿದೆ. ಹೀಗಾಗಿ ಅಭಿಮನ್ಯು ಈಶ್ವರನ್ ಪರ್ತ್‌ ಟೆಸ್ಟ್ ಮೂಲಕ ಟೀಮ್‌ ಇಂಡಿಯಾ ಪದಾರ್ಪಣೆ ಮಾಡುವ ನಿರೀಕ್ಷೆ ಇತ್ತು. ಇದೀಗ ಪಡಿಕ್ಕಲ್ ಸೇರ್ಪಡೆಯಿಂದಾಗಿ ಅಭಿಮನ್ಯು ಈಶ್ವರನ್ ಪದಾರ್ಪಣೆ ವಿಳಂಬವಾಗುವ ಸಾಧ್ಯತೆ ಇದೆ.

ಹೀಗಿರಲಿದೆ ಆಡುವ ಬಳಗ

ಸದ್ಯ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಕನ್ನಡಿಗ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ಪಡಿಕ್ಕಲ್ ಮತ್ತು ಕೊಹ್ಲಿ 3 ಮತ್ತು 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ರಿಷಭ್ ಪಂತ್ ಮತ್ತು ಧ್ರುವ್ ಜುರೆಲ್ ಭಾರತದ ಅಗ್ರ ಆರು ಸ್ಥಾನಗಳನ್ನು ಪೂರ್ಣಗೊಳಿಸಿದ್ದಾರೆ.

ಬಾರ್ಡರ್‌ ಗವಾಸ್ಕರ್‌ ಟ್ರೋಫಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.

ಮೀಸಲು ಆಟಗಾರರು: ಮುಖೇಶ್ ಕುಮಾರ್, ನವದೀಪ್ ಸೈನಿ, ಖಲೀಲ್ ಅಹ್ಮದ್, ಯಶ್ ದಯಾಳ್.

Whats_app_banner