ಯೋ-ಯೋ ಆಯ್ತು ಈಗ ಟೀಂ ಇಂಡಿಯಾ ಆಟಗಾರರಿಗೆ ವಿಶೇಷ ಸ್ಕ್ಯಾನಿಂಗ್; ಏನಿದು ಡೆಕ್ಸಾ ಸ್ಕ್ಯಾನ್?
ಕನ್ನಡ ಸುದ್ದಿ  /  ಕ್ರಿಕೆಟ್  /  ಯೋ-ಯೋ ಆಯ್ತು ಈಗ ಟೀಂ ಇಂಡಿಯಾ ಆಟಗಾರರಿಗೆ ವಿಶೇಷ ಸ್ಕ್ಯಾನಿಂಗ್; ಏನಿದು ಡೆಕ್ಸಾ ಸ್ಕ್ಯಾನ್?

ಯೋ-ಯೋ ಆಯ್ತು ಈಗ ಟೀಂ ಇಂಡಿಯಾ ಆಟಗಾರರಿಗೆ ವಿಶೇಷ ಸ್ಕ್ಯಾನಿಂಗ್; ಏನಿದು ಡೆಕ್ಸಾ ಸ್ಕ್ಯಾನ್?

ಯೋ-ಯೋ ಟೆಸ್ಟ್ ಪಾಸಾಗಿರುವ ಟೀಂ ಇಂಡಿಯಾ ಆಟಗಾರರು ಇದೀಗ ಬೆಂಗಳೂರಿನಲ್ಲಿ ಡೆಕ್ಸಾ ಸ್ಕ್ಯಾನಿಂಗ್‌ಗೆ ಒಳಗಾಗಿದ್ದಾರೆ. ಏನಿದು ಡೆಕ್ಸಾ ಸ್ಕ್ಯಾನಿಂಗ್, ಆಟಗಾರರಿಗೆ ಈ ಸ್ಕ್ಯಾನ್ ಯಾಕೆ ಮಾಡ್ತಾರೆ ಅನ್ನೋದರ ವಿವರ ಇಲ್ಲಿದೆ.

ಏಷ್ಯಾ ಕಪ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಡೆಕ್ಸಾ ಸ್ಕ್ಯಾನ್‌ಗೆ ಒಳಪಡಲಿದ್ದಾರೆ
ಏಷ್ಯಾ ಕಪ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಡೆಕ್ಸಾ ಸ್ಕ್ಯಾನ್‌ಗೆ ಒಳಪಡಲಿದ್ದಾರೆ

ಬೆಂಗಳೂರು: ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೂ (ICC World Cup) ಮುನ್ನ ನಡೆಯಲಿರುವ ಏಷ್ಯಾಕಪ್‌ಗೆ (Asia Cup) ಟೀಂ ಇಂಡಿಯಾ (Team India) ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಏಷ್ಯಾದಲ್ಲೂ ನಾವೇ ಚಾಂಪಿಯನ್ಸ್ ಆಗಬೇಕೆಂದು ಕನಸು ಹೊತ್ತಿರುವ ರೋಹಿತ್ ಪಡೆ, ಫಿಟ್ನೆಸ್ ಸೇರಿ ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದೆ.

ಬೆಂಗಳೂರು ಸಮೀಪದ ಆಲೂರಿನಲ್ಲಿ ಇರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಮೈದಾನದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದರ ಜೊತೆಗೆ ಇತ್ತೀಚೆಗಷ್ಟೇ ಟೀಂ ಇಂಡಿಯಾ ಆಟಗಾರರು ಯೋ-ಯೋ ಟೆಸ್ಟ್ ಪಾಸ್ ಮಾಡಿದ್ದು, ಇದೀಗ ಮತ್ತೊಂದು ವಿಶೇಷ ಸ್ಕ್ಯಾನ್‌ಗೆ ಒಳಗಾಗಿದ್ದಾರೆ.

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಸೇರಿದಂತೆ ತಂಡದ ಎಲ್ಲಾ ಆಟಗಾರರು ಡೆಕ್ಸ್ ಸ್ಯ್ಕಾನ್‌ಗೆ ಒಳಗಾಗಿದ್ದಾರೆ. ಏನಿದು ಡಾಕ್ಸ್ ಸ್ಕ್ಯಾನ್? ಆಟಗಾರರಿಗೆ ಈ ಪರೀಕ್ಷೆ ಮಾಡಿಸುವ ಉದ್ದೇಶ ಏನು ಎಂಬುದರ ಮಾಹಿತಿಯನ್ನು ತಿಳಿಯೋಣ.

ಏನಿದು ಡೆಕ್ಸಾ ಸ್ಕ್ಯಾನ್?

ಎಲುಬಿನ ಸಾಂದ್ರತೆಯನ್ನು ಪತ್ತೆ ಹಚ್ಚುವ ವೈಜ್ಞಾನಿಕ ವಿಧಾನವನ್ನು ಡೆಕ್ಸಾ ಸ್ಕ್ಯಾನ್ ಎಂದು ಕರೆಯಲಾಗುತ್ತದೆ. ಮನುಷ್ಯನ ಅಸ್ಥಿಪಂಜರದ ಮೂಳೆಗಳ ಸಾಂದ್ರತೆಯನ್ನು ಅಳೆಯಲು ತ್ವರಿತ ಮತ್ತು ನೋವು ರಹಿತ ವಿಧಾನವೂ ಇದಾಗಿದೆ. ಈ ಪರೀಕ್ಷೆಯಿಂದ ದುರ್ಬಲವಾದ ಮೂಳೆಗಳನ್ನು ಸುಲಭವಾಗಿ ಗುರುತಿಸಬಹುದು. ದೇಹದಲ್ಲಿನ ಕೊಬ್ಬಿನಾಂಶವೂ ಗೊತ್ತಾಗುತ್ತದೆ.

ಆಟಗಾರರಿಗೆ ಡೆಕ್ಸಾ ಸ್ಕ್ಯಾನ್ ಮಾಡುವುದರಿಂದ ಆಗುವ ಪ್ರಯೋಜನವೇನು?

ಆಟಗಾರರ ಫಿಟ್ನೆಸ್ ತಪಾಸಣೆ ಮಾಡುವ ಒಂದು ವೈಜ್ಞಾನಿಕ ವಿಧಾನ ಡೆಕ್ಸಾ ಸ್ಕ್ಯಾನ್. ಈ ಪರೀಕ್ಷೆ ಮಾಡುವುದರಿಂದ ಎಲುಬಿನ ಸಾಂದ್ರತೆ ಪತ್ತೆಹಚ್ಚಲು ಸಹಕಾರಿಯಾಗಿದೆ. ಅಲ್ಲದೆ, ಆಟಗಾರರ ದೇಹದಲ್ಲಿನ ಕೊಬ್ಬಿನಾಂಶ, ಆಟಗಾರರು ಎಷ್ಟು ಫಿಟ್ ಆಗಿದ್ದಾರೆ ಎಂಬುದನ್ನು ನಿಖರವಾಗಿ ಅಂದಾಜಿಸಲು ನೆರವಾಗುತ್ತದೆ. ಎಕ್ಸ್‌ ರೇ ಮೂಲಕ ಈ ಪರೀಕ್ಷೆ ಮಾಡಲಾಗುತ್ತದೆ. ಇದರಿಂದ ಯಾವುದೇ ನೋವು ಆಗುವುದಿಲ್ಲ. ಕ್ಷ-ಕಿರಣಕ್ಕೆ ಬಳಸುವ ರೇಡಿಯೇಷನ್ ಡೋಸ್ ಕೂಡ ಬಹಳ ಕನಿಷ್ಠ ಪ್ರಮಾಣದಲ್ಲಿ ಇರುತ್ತದೆ.

ಎಂಆರ್‌ಐ ಅಥವಾ ಸಿಟಿ ಸ್ಕ್ಯಾನ್‌ಗಿಂತ ವಿಭಿನ್ನ

ಎಂಆರ್‌ಐ ಅಥವಾ ಸಿಟಿ ಸ್ಕ್ಯಾನ್‌ಗಿಂತ ಡೆಕ್ಸಾ ಸ್ಕ್ಯಾನ್ ಭಿನ್ನವಾಗಿದ್ದು, ಸುರಂಗ ಅಥವಾ ರಿಂಗ್ ಆಕಾರದಲ್ಲಿರುವ ಯಂತ್ರದೊಳಗೆ ವ್ಯಕ್ತಿಯನ್ನು ಕಳುಹಿಸುವುದಿಲ್ಲ. ಹೀಗಾಗಿ ಇದರಲ್ಲಿ ಕ್ಲಾಸ್ಟ್ರೋಫೋಬಿಕ್ ಅನ್ನು ಅನುಭವಿಸುವ ಅಪಾಯವೂ ಇರುವುದಿಲ್ಲ. ಸದ್ಯ ಟೀಂ ಇಂಡಿಯಾದ ಆಟಗಾರರು ಭವಿಷ್ಯದಲ್ಲಿ ಗಾಯಕ್ಕೆ ತುತ್ತಾಗಬಾರದು, ಫಿಟ್ ಆಗಿರಬೇಕು ಎಂಬ ಕಾರಣಕ್ಕೆ ಬಿಸಿಸಿಐ ಈ ಟೆಸ್ಟ್‌ಗಳನ್ನು ಮಾಡಿಸುತ್ತಿದೆ. ಆಟಗಾರರಿಗೆ ಶೇಕಡಾ 10ಕ್ಕಿಂತ ಕಡಿಮೆ ಕೊಬ್ಬಿನಾಂಶ ಇದ್ದರೆ ಚುರುಕಾಗಿ ಫೀಲ್ಡಿಂಗ್, ಬೌಲಿಂಗ್ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಈ ಟೆಸ್ಟ್ ಪ್ರಮುಖವಾಗಿದೆ.

ಆಲೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಇರುವ ಟೀಂ ಇಂಡಿಯಾದ ಆಟಗಾರರು ಅಭ್ಯಾಸ ಮಾಡುತ್ತಿದ್ದಾರೆ. ಫೀಲ್ಡಿಂಗ್, ಬೌಲಿಂಗ್, ಬ್ಯಾಟಿಂಗ್ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಆಗಸ್ಟ್ 30 ರಿಂದ ಏಷ್ಯಾಕಪ್ ಆರಂಭವಾಗಲಿದ್ದು, ಸೆಪ್ಟೆಂಬರ್ 2 ರಂದು ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

Whats_app_banner