ವಿರಾಟ್ ಕೊಹ್ಲಿ, ಎಂಎಸ್ ಧೋನಿ ಕಂಡರೆ ಗೌತಮ್ ಗಂಭೀರ್​ಗೆ ಇಷ್ಟವಿರಲಿಲ್ಲವೇಕೆ? ಕೊನೆಗೂ ಸಿಕ್ತು ಉತ್ತರ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ, ಎಂಎಸ್ ಧೋನಿ ಕಂಡರೆ ಗೌತಮ್ ಗಂಭೀರ್​ಗೆ ಇಷ್ಟವಿರಲಿಲ್ಲವೇಕೆ? ಕೊನೆಗೂ ಸಿಕ್ತು ಉತ್ತರ

ವಿರಾಟ್ ಕೊಹ್ಲಿ, ಎಂಎಸ್ ಧೋನಿ ಕಂಡರೆ ಗೌತಮ್ ಗಂಭೀರ್​ಗೆ ಇಷ್ಟವಿರಲಿಲ್ಲವೇಕೆ? ಕೊನೆಗೂ ಸಿಕ್ತು ಉತ್ತರ

ಎಂಎಸ್ ಧೋನಿ ಮತ್ತು ಗೌತಮ್ ಗಂಭೀರ್​ ಒಬ್ಬರಿಗೊಬ್ಬರಿಗೆ ಇಷ್ಟಪಡದಿರಲು ಇರುವ ನಿಜ ಸಂಗತಿ ಏನೆಂಬುದನ್ನು ಗೌತಿ ಬಾಲ್ಯದ ಕೋಚ್ ಸಂಜಯ್ ಭಾರದ್ವಾಜ್ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಕೊಹ್ಲಿ ಜೊತೆಗಿನ ಕಿರಿಕ್​ಗಳ ಕುರಿತೂ ವಿವರಿಸಿದ್ದಾರೆ.

ಎಂಎಸ್ ಧೋನಿಗೆ ಗೌತಮ್ ಗಂಭೀರ್, ಗೌತಮ್ ಗಂಭೀರ್‌ಗೆ ಎಂಎಸ್ ಧೋನಿ ಇಷ್ಟವಿಲ್ಲವೇಕೆ? ಕೊನೆಗೂ ಸಿಕ್ತು ಉತ್ತರ
ಎಂಎಸ್ ಧೋನಿಗೆ ಗೌತಮ್ ಗಂಭೀರ್, ಗೌತಮ್ ಗಂಭೀರ್‌ಗೆ ಎಂಎಸ್ ಧೋನಿ ಇಷ್ಟವಿಲ್ಲವೇಕೆ? ಕೊನೆಗೂ ಸಿಕ್ತು ಉತ್ತರ (Agencies)

Gautam Ganbhir and MS Dhoni: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ, ಪ್ರಸ್ತುತ ಹೆಡ್​ಕೋಚ್ ಗೌತಮ್ ಗಂಭೀರ್ ಅವರು ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಸಾಕಷ್ಟು ಬಾರಿ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದುಂಟು. 2011ರ ಏಕದಿನ ವಿಶ್ವಕಪ್ ಗೆಲುವಿನ ಕ್ರೆಡಿಟನ್ನು ಧೋನಿ ನೀಡಿದ್ದರ ವಿರುದ್ಧವೂ ಕಿಡಿಕಾರಿದ್ದುಂಟು. 'ಏಕ್ ಚಕ್ಕೆ ನೆ ವಿಶ್ವಕಪ್ ನಹೀ ಜಿತಾಯಾ' (ಒಂದು ಸಿಕ್ಸರ್​ನಿಂದ ಭಾರತ ವಿಶ್ವಕಪ್ ಗೆದ್ದಿಲ್ಲ). ಎಲ್ಲಾ ಆಟಗಾರರು ಕೊಡುಗೆ ನೀಡಿದ್ದಾರೆ ಎಂದು ಗಂಭೀರ್​ ಹೇಳಿದ್ದರು. ಹೀಗಾಗಿ ಇಬ್ಬರ ನಡುವೆ ಜಗಳ ನಡೆದಿರಬಹುದು ಎಂಬ ಚರ್ಚೆ ಆಗಾಗ್ಗೆ ಮುನ್ನೆಲೆಗೆ ಬರುತ್ತಿರುತ್ತದೆ. ಆದರೆ ಇದೆಲ್ಲವೂ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ ಗಂಭೀರ್​ ಬಾಲ್ಯದ ಕೋಚ್ ಸಂಜಯ್ ಭಾರದ್ವಾಜ್. ಗೌತಿ-ಮಾಹಿ ಮಧ್ಯೆ ಜಗಳ ನಡೆದಿಲ್ಲವಾದರೂ ಇಬ್ಬರಿಗೊಬ್ಬರು ಇಷ್ಟಪಡುವುದಿಲ್ಲ ಎಂದೂ ಇದೇ ವೇಳೆ ತಿಳಿದ್ದಾರೆ ಅವರು.

ರೌನಾಕ್ ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ ಗೌತಿ ಬಾಲ್ಯದ ತರಬೇತುದಾರ ಸಂಜಯ್ ಭಾರದ್ವಾಜ್, ಧೋನಿ ಮತ್ತು ಗಂಭೀರ್​ ಒಬ್ಬರಿಗೊಬ್ಬರಿಗೆ ಇಷ್ಟಪಡದಿರಲು ಇರುವ ನಿಜ ಸಂಗತಿ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ. ಗಂಭೀರ್ ಅವರ ಸಿದ್ಧಾಂತ ಧೋನಿಗೆ ಇಷ್ಟವಿಲ್ಲ. ಗೌತಮ್ ಎಂದಿಗೂ ಯಾರನ್ನೂ ದ್ವೇಷಿಸಲಿಲ್ಲ, ದ್ವೇಷಿಸುವುದೂ ಇಲ್ಲ. ಇದು ಸತ್ಯ. ಧೋನಿಯನ್ನು ಗಂಭೀರ್ ಇಷ್ಟಪಡುವುದಿಲ್ಲ ಎಂದು ಜನರು ಹೇಳುತ್ತಾರೆ. ವಿರಾಟ್ ಕೊಹ್ಲಿ ಅವರನ್ನೂ ಗಂಭೀರ್​ ಇಷ್ಟಪಡುವುದಿಲ್ಲ ಎನ್ನುತ್ತಾರೆ. ಆದರೆ ಗಂಭೀರ್​ ಯಾರ ವಿರುದ್ಧವೂ ವೈಯಕ್ತಿಕ ದ್ವೇಷ ಸಾಧಿಸುವುದಿಲ್ಲ. ಗಂಭೀರ್​ ಕೇವಲ ಕ್ರಿಕೆಟಿಗರ ಚಟುವಟಿಕೆಗಳನ್ನಷ್ಟೇ ಇಷ್ಟಪಡುವುದಿಲ್ಲ ಎನ್ನುತ್ತಾರೆ ಬಾಲ್ಯದ ಕೋಚ್​. ಆ ಮೂಲಕ ಕೊಹ್ಲಿ, ಧೋನಿ ವಿರುದ್ಧ ಗಂಭೀರ್ ವೈಷಮ್ಯ ಸಾಧಿಸುತ್ತಿದ್ದಾರೆ ಎಂಬ ವದಂತಿಗೆ ಕೊನೆಗೂ ತೆರೆದಿದ್ದಾರೆ ಸಂಜಯ್ ಭಾರಧ್ವಾಜ್.

ಕೊಹ್ಲಿ vs ಗಂಭೀರ್

ಧೋನಿ ನಂತರ ಗಂಭೀರ್ ಅವರೊಂದಿಗೆ ದೀರ್ಘಕಾಲದಿಂದ ಸಂಬಂಧ ಹೊಂದಿರುವ ಆಟಗಾರ ಅಂದರೆ ಕೊಹ್ಲಿ. ಕೊಹ್ಲಿ-ಗಂಭೀರ್ ರಣಜಿ ಟ್ರೋಫಿಯಲ್ಲಿ ಇಬ್ಬರೂ ಒಂದೇ ತಂಡವನ್ನು ಪ್ರತಿನಿಧಿಸಿದ್ದರು. ಜೊತೆಗೆ ಭಾರತ ತಂಡದಲ್ಲಿ. 2009ರಲ್ಲಿ, ಕೊಹ್ಲಿ ಭಾರತ ತಂಡದ ಪರ ಗೆಲುವಿನ ಚೊಚ್ಚಲ ಶತಕ ಸಿಡಿಸಿದ್ದಾಗ ಗಂಭೀರ್ ಅವರೇ ಸ್ವತಃ ತನಗೆ ಸಿಕ್ಕಿದ್ದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಿರಾಟ್​​ಗೆ ಹಸ್ತಾಂತರಿಸಿದ್ದರು. ಆದಾಗ್ಯೂ, ಒಟ್ಟಿಗೆ ವಿಶ್ವಕಪ್ ಗೆದ್ದ ನಂತರ ಕೊಹ್ಲಿ ಮತ್ತು ಗಂಭೀರ್ ಪ್ರತಿಸ್ಪರ್ಧಿಗಳಾದರು. ಐಪಿಎಲ್ 2013 ರ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದವೂ ನಡೆದಿತ್ತು. 10 ವರ್ಷಗಳ ನಂತರ ಅಂದರೆ 2023ರಲ್ಲಿ ಗಂಭೀರ್ ಮತ್ತು ಕೊಹ್ಲಿ ನಡುವೆ ಮತ್ತೊಮ್ಮೆ ದೊಡ್ಡ ಜಗಳ ನಡೆದಿತ್ತು. ನವೀನ್ ಉಲ್ ಹಕ್ ವಿಚಾರವಾಗಿ ಈ ಗಲಾಟೆ ನಡೆದಿತ್ತು. ಆದರೆ 2024ರ ಐಪಿಎಲ್​ನಲ್ಲಿ ಕೊಹ್ಲಿ-ಗಂಭೀರ್​ ಮೈದಾನದಲ್ಲಿ ತಮ್ಮ ಏನೂ ನಡೆದೇ ಇಲ್ಲವೇನೋ ಎನ್ನುವಂತೆ ಪರಸ್ಪರ ಕೈಕುಲುಕಿ ಮಾತನಾಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

ತನ್ನ ಕುಟುಂಬದಂತೆ ಭಾವಿಸುತ್ತಾರೆ ಎಂದ ಸಂಜಯ್

ಗಂಭೀರ್ ಈಗ ಭಾರತದ ಹೆಡ್​​ಕೋಚ್ ಆಗಿದ್ದು, ಅಭ್ಯಾಸದ ವೇಳೆ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಮತ್ತು ನಗುತ್ತಿರುವ ದೃಶ್ಯಗಳನ್ನು ನೋಡಿದರೆ ಹಿಂದಿನದ್ದೆಲ್ಲವನ್ನೂ ಮರೆತು ಒಂದಾಗಿ, ಮತ್ತೆ ಸ್ನೇಹಿತರಾಗಿದ್ದಾರೆ. ಇದೇ ವೇಳೆ ನವೀನ್-ಉಲ್-ಹಕ್ ಮತ್ತು ಕೊಹ್ಲಿ ನಡುವಿನ ಘರ್ಷಣೆ ಕುರಿತು ಮಾತನಾಡಿದ ಸಂಜಯ್ ಅವರು, 'ನವೀನ್ ನನ್ನ ತಂಡದ ಆಟಗಾರ' ಎಂದು ಗಂಭೀರ್​ ಭಾವಿಸುತ್ತಾರೆ. ತಮ್ಮ ತಂಡದ ಆಟಗಾರರನ್ನು ಯಾರಾದರೂ ನಿಂದಿಸಿದರೆ ಗಂಭೀರ್ ಎಂದಿಗೂ ಸುಮ್ಮನಿರುವುದಿಲ್ಲ. ಅದನ್ನೇ ಅಂದು ಮಾಡಿದ್ದು. ಏಕೆಂದರೆ ಗಂಭೀರ್ ತಮ್ಮ ತಂಡವನ್ನು ಕುಟುಂಬದಂತೆ ಪರಿಗಣಿಸುತ್ತಾರೆ. ನನ್ನ ತಂಡದ ವಿರುದ್ಧ ಯಾರೇ ಮಾತನಾಡಿದರೂ ಎಂತಹವರಾದರೂ ನಾನು ಯಾರನ್ನಾದರೂ ಎದುರಿಸುತ್ತೇನೆ ಎಂದು ಗೌತಿ ಹೇಳಿದ್ದರು. ಆದರೆ ಮೈದಾನದಲ್ಲಿ ನಡೆಯುವ ಘಟನೆಗಳ ಕುರಿತು ಮೈದಾನದ ಹೊರಗೆ ಮಾತನಾಡುವುದಿಲ್ಲ ಎಂದಿದ್ದಾರೆ ಸಂಜಯ್ ಭಾರಧ್ವಾಜ್.

Whats_app_banner