ಕಾರ್ಗಿಲ್ ಯೋಧನ ಪುತ್ರ ಭಾರತ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ; ಧ್ರುವ್ ಜುರೆಲ್ ಲೈಫ್ಸ್ಟೋರಿ ಇಲ್ಲಿದೆ
Dhruv Jurel : ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ ಧ್ರುವ್ ಜುರೆಲ್ ಅವರ ಕ್ರಿಕೆಟ್ ಪಯಣದ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ.
ಬ್ಯಾಟಿಂಗ್ನಲ್ಲಿ ಸತತ ವೈಫಲ್ಯ ಅನುಭವಿಸಿದ ಕೆಎಸ್ ಭರತ್ ಬದಲಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ 23 ವರ್ಷದ ಧ್ರುವ್ ಜುರೆಲ್ (Dhruv Jurel), ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಯುವ ಆಟಗಾರನಿಗೆ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik) ಟೆಸ್ಟ್ ಕ್ಯಾಪ್ ನೀಡಿ ಅಭಿನಂದನೆ ಸಲ್ಲಿಸಿದರು. ಧ್ರುವ ಜುರೆಲ್ ಅವರ ಕ್ರಿಕೆಟ್ ಪಯಣದ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ.
ಧ್ರುವ್ ಜುರೆಲ್ ಜನಿಸಿದ್ದು ಉತ್ತರ ಪ್ರದೇಶದಲ್ಲಿ. ಬಡತನ ಕುಟುಂಬದ ಹಿನ್ನೆಲೆಯುಳ್ಳ ಯುವ ಆಟಗಾರ ತನ್ನ ಕಠಿಣ ಪರಿಶ್ರಮದ ಮೂಲಕ ಬೆಳೆದು ಬಂದವನು. ಈತನ ಕಥೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಕಷ್ಟಪಟ್ಟು ಬೆಳೆದ ಯಂಗ್ಸ್ಟರ್, ಭಾರತ ತಂಡದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ತಾನು ಬೆಳೆದ ಬಂದ ಹಾದಿಯ ಕುರಿತು ಧ್ರುವ್ ಜುರೆಲ್ ಮನಬಿಚ್ಚಿ ಮಾತನಾಡಿದ್ದಾರೆ.
ತಂದೆ-ತಾಯಿ ತ್ಯಾಗ
ನಾನು ಓದುತ್ತಿದ್ದದ್ದು ಆರ್ಮಿ ಸ್ಕೂಲ್ನಲ್ಲಿ. ರಜೆ ಇದ್ದಾಗ ಆಗ್ರಾದ ಏಕಲವ್ಯ ಮೈದಾನದಲ್ಲಿ ಕ್ರಿಕೆಟ್ ಪ್ರಾಕ್ಟೀಸ್ ಶಿಬಿರಕ್ಕೆ ಹೋಗುತ್ತಿದ್ದೆ. ತಂದೆಗೆ ಗೊತ್ತಾಗದಂತೆ ಫಾರ್ಮ್ ಕೂಡ ಭರ್ತಿ ಮಾಡಿದ್ದೆ. ಕೊನೆಗೆ ತಂದೆಗೆ ತಿಳಿದು ಬೈದಿದ್ದರು. ತಂದೆ ನೀಮ್ ಸಿಂಗ್ ಜುರೆಲ್ ಕಾರ್ಗಿಲ್ ಯೋಧ. ಅವರಂತೆ ನಾನು ಸೈನ್ಯಕ್ಕೆ ಸೇರಬೇಕು ಅಥವಾ ಸರ್ಕಾರಿ ನೌಕರಿ ಪಡೆಯಬೇಕೆನ್ನುವುದು ಅವರ ಆಸೆ.
ಆದರೂ 800 ರೂಪಾಯಿ ಸಾಲ ಪಡೆದು ಹೊಸ ಬ್ಯಾಟೊಂದನ್ನು ಖರೀದಿಸಿದ್ದರು. ಅಲ್ಲದೆ, ನಾನು ಕ್ರಿಕೆಟ್ ಕಿಟ್ ಬೇಕೆಂದು ಇಟ್ಟಿದ್ದೆ. ಅದಕ್ಕೆ 7-8 ಸಾವಿರ ಬೇಕಿತ್ತು. ಆದರೆ, ತಂದೆಯ ಬಳಿಕ ಹಣ ಇರಲಿಲ್ಲ. ಹೀಗಾಗಿ ನಾನು ಬಾತ್ರೂಮ್ ಲಾಕ್ ಮಾಡಿಕೊಂಡು ಅತ್ತಿದ್ದೆ. ಹಠ ಮಾಡಿ ಕುಳಿತಿದ್ದೆ. ಮನೆ ಬಿಟ್ಟು ಹೋಗುವುದಾಗಿ ಹೆದರಿಸಿದ್ದೆ. ಅದಕ್ಕೆ ಅಮ್ಮ ಚಿನ್ನದ ಸರ ಮಾರಿ ಕ್ರಿಕೆಟ್ ಕಿಟ್ ಕೊಡಿಸಿದರು ಎಂದು ಜುರೆಲ್ ಹೇಳಿದ್ದಾರೆ.
ಮೊದಲು ಡೆಲ್ಲಿ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಿದ. ಆದರೆ ಆಗ್ರಾದಿಂದ ನೋಯ್ಡಾಕ್ಕೆ ಆಗಾಗ ಪ್ರಯಾಣ ಮಾನಸಿಕ ಮತ್ತು ದೈಹಿಕವಾಗಿ ಆಯಾಸವಾಗುತ್ತಿತ್ತು. ಆಗ ತಾಯಿ ನೋಯ್ಡಾದಲ್ಲಿ ತನ್ನ ಮಗನೊಂದಿಗಿರಲು ವ್ಯವಸ್ಥೆ ಮಾಡಿಕೊಂಡರು. ಹಂತ ಹಂತವಾಗಿ ಬೆಳೆದ ಜುರೆಲ್ ಅಂಡರ್-19 ವರ್ಷದೊಳಗಿನವರ ಭಾರತ ತಂಡಕ್ಕೆ ಆಯ್ಕೆಯಾದರು. ಇದೀಗ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ನನಗೆ ತಂದೆಯೇ ಹೀರೋ ಎಂದಿರುವ ಜುರೆಲ್, ಪದಾರ್ಪಣೆಯನ್ನು ಅವರಿಗೆ ಅರ್ಪಿಸಿದ್ದಾರೆ. ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಬ್ಬರದ ಇನ್ನಿಂಗ್ಸ್ ಆಡುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಸಂಚಲನ ಮೂಡಿಸಿದ್ದರು. ಜುರೆಲ್‌ಗೆ ನೀಡಿದ್ದ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೆಲವು ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು ಧೂಳೆಬ್ಬಿಸಿದ್ದಾರೆ. 172.73ರ ಸ್ಟ್ರೈಕ್ರೇಟ್ ಇದೆ.
ಅಂಡರ್-19 ತಂಡದ ಭಾಗವಾಗಿದ್ದ ಜುರೆಲ್
2020ರ ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದ ಜುರೆಲ್, ಅಂದು ಭಾರತ ಫೈನಲ್ ತಲುಪಲು ಪ್ರಮುಖ ಪಾತ್ರವಹಿಸಿದ್ದರು. ಆದರೆ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿತ್ತು. ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜುರೆಲ್, 3 ಇನ್ನಿಂಗ್ಸ್ಗಳಲ್ಲಿ 44.50 ಸರಾಸರಿಯಲ್ಲಿ 89 ರನ್ ಗಳಿಸಿದ್ದರು. ಒಂದು ಅರ್ಧಶತಕವನ್ನೂ ಸಿಡಿಸಿದ್ದರು. ವಿಕೆಟ್-ಕೀಪರ್ ಆಗಿ ಗಮನ ಸೆಳೆದಿದ್ದರು.
ಪ್ರಥಮ ದರ್ಜೆ ಕ್ರಿಕೆಟ್ ದಾಖಲೆ
ಜುರೆಲ್ ಉತ್ತರ ಪ್ರದೇಶ ತಂಡದ ಪರ ಆಡುತ್ತಾರೆ. ಫೆಬ್ರವರಿ 2022ರಲ್ಲಿ ಉತ್ತರ ಪ್ರದೇಶ ತಂಡಕ್ಕಾಗಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, ಒಟ್ಟು 15 ಪಂದ್ಯಗಳಲ್ಲಿ 46.47ರ ಸರಾಸರಿಯಲ್ಲಿ 1 ಶತಕ ಸಹಿತ 790 ರನ್ ಗಳಿಸಿದ್ದಾರೆ. ಜುರೆಲ್ ಕಳೆದ ತಿಂಗಳು ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದ್ದ ಭಾರತ-ಎ ತಂಡದ ಭಾಗವಾಗಿದ್ದರು. ದಕ್ಷಿಣ ಆಫ್ರಿಕಾ-ಎ ವಿರುದ್ಧದ ಮೊದಲ ಪಂದ್ಯದಲ್ಲಿ ಡಕ್ ಆದರು. ಆದರೆ 2ನೇ ಪಂದ್ಯದಲ್ಲಿ 69 ರನ್‌ಗಳ ಪ್ರಭಾವಿ ಇನ್ನಿಂಗ್ಸ್ ಕಟ್ಟಿದ್ದರು. ಕಳೆದ ವರ್ಷ ನಡೆದ ಎಸಿಸಿ ಏಷ್ಯನ್ ಎಮರ್ಜಿಂಗ್ ಕಪ್ ಟೂರ್ನಿಯಲ್ಲಿ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದ ಭಾರತ-ಎ ತಂಡದ ಭಾಗವಾಗಿದ್ದ ಜುರೆಲ್, ಭಾರತ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.