ಸಿಎಸ್ಕೆ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ; ಇದಕ್ಕೆ ಪುಷ್ಠಿ ನೀಡುತ್ತಿವೆ ಕೆಲವು ಘಟನೆಗಳು
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದಿದ್ದರ ನಡುವೆಯೂ ಸಿಎಸ್ಕೆ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿದೆ. ಪಂದ್ಯದಲ್ಲಿ ನಡೆದ ಕೆಲವು ಘಟನೆಗಳೂ ಇದಕ್ಕೆ ಪುಷ್ಠಿ ನೀಡುತ್ತಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಅಭಿಯಾನ ಆರಂಭಿಸಿದ ಬಳಿಕ ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್, ಇದೀಗ ಗೆದ್ದು ಸೋಲಿನ ಸರಪಳಿ ಕಳಚಿದೆ. ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್ಗಳ ಗೆಲುವು ದಾಖಲಿಸಿದೆ. ಎಂಎಸ್ ಧೋನಿ ಅವರ ಸ್ಫೋಟಕ ಆಟದಿಂದ 18ನೇ ಆವೃತ್ತಿಯಲ್ಲಿ ಚೆನ್ನೈ 2ನೇ ಜಯದ ನಗೆ ಬೀರಿದೆ. ಗೆದ್ದಿದ್ದರ ನಡುವೆಯೂ ಸಿಎಸ್ಕೆ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿದೆ. ಪಂದ್ಯದಲ್ಲಿ ನಡೆದ ಕೆಲವು ಘಟನೆಗಳೂ ಇದಕ್ಕೆ ಪುಷ್ಠಿ ನೀಡುತ್ತಿವೆ.
ಟಾಸ್ ಕಿವಿಯಲ್ಲಿ ಹೇಳಿದ ಧೋನಿ
ಪಂದ್ಯಕ್ಕೂ ಮುನ್ನ ಟಾಸ್ ಅವಧಿಯಲ್ಲಿ ರಿಷಭ್ ಪಂತ್ ಜೊತೆಗೆ ಆತ್ಮೀಯವಾಗಿ ಮಾತನಾಡಿದ ಧೋನಿ, ಕಾಯಿನ್ ಚಿಮ್ಮಿದ ವೇಳೆ ತನ್ನ ನಿರ್ಧಾರ ಏನೆಂದು ಮ್ಯಾಚ್ ರೆಫ್ರಿಯ ಕಿವಿಯಲ್ಲಿ ಹೇಳಿದರು. ಇದು ಸಂಶಯಾಸ್ಪದಕ್ಕೆ ಕಾರಣವಾಯಿತು. ಕಾಯಿನ್ ಚಿಮ್ಮಿದ ಬೆನ್ನಲ್ಲೇ ನಿರೂಪಕರು ಧೋನಿ ಟೇಲ್ಸ್ ಹೇಳಿದ್ದು ಅಲ್ವಾ ಎಂದು ಕೇಳುತ್ತಾರೆ. ಆಗ ರೆಫ್ರಿ ಹೆಡ್ಸ್ ಎಂದು ಹೇಳುತ್ತಾರೆ. ನಾಣ್ಯ ಯಾವುದು ಬಿದ್ದಿರುತ್ತೋ ಅದನ್ನೇ ಅವರು ಹೇಳಿದ್ದು ಅಚ್ಚರಿ ಮೂಡಿಸಿತ್ತು. ಇದು ಅನುಮಾನಕ್ಕೆ ಕಾರಣವಾಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ತನ್ನ ಕೈಯಲ್ಲಿ ಮೈಕ್ ಇದ್ದರೂ ಟಾಸ್ ಆಯ್ಕೆಯನ್ನು ರೆಫ್ರಿ ಕಿವಿಯಲ್ಲಿ ಹೇಳುವ ಅವಶ್ಯಕತೆ ಏನಿತ್ತು ಎಂದು ಅನೇಕರು ಪ್ರಶ್ನಿಸಿದ್ದಾರೆ.
ಅಂಪೈರ್ ನಿರ್ಧಾರದ ಬಗ್ಗೆ ಆಕ್ರೋಶ
ಲಕ್ನೋ ಬ್ಯಾಟಿಂಗ್ ಮಾಡುತ್ತಿದ್ದ ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ಈ ವಿವಾದಿತ ಘಟನೆ ನಡೆದಿದೆ. ಚೆನ್ನೈ ವೇಗಿ ಮತೀಶ ಪತಿರಾಣ 20ನೇ ಓವರ್ನಲ್ಲಿ ಬೌಲಿಂಗ್ ಮಾಡುತ್ತಿದ್ದರು. ಮೊದಲ ಎಸೆತವನ್ನು ಪಿಚ್ ಹೊರಗೆ ಎಸೆದರು. ಆದರೆ ಅಂಪೈರ್ ವೈಡ್ ಎಂದು ತೀರ್ಪುಕೊಟ್ಟರು. ಸಂಪೂರ್ಣ ಪಿಚ್ನ ಹೊರಗೆ ಹಾಕಿದ್ದನ್ನು ಮರು ಪರಿಶೀಲಿಸಿ ನೋ ಬಾಲ್ ನೀಡುವಂತೆ ಪಂತ್ ಡಿಆರ್ಎಸ್ ಮೊರೆ ಹೋದರು. ಆದರೆ 3ನೇ ಅಂಪೈರ್ ಕೂಡ ನಿರ್ಧಾರ ಬದಲಿಸಲಿಲ್ಲ. ಚೆಂಡು ಪಿಚ್ ಹೊರಗೆ ಹೋಗಿದ್ದು ಸ್ಪಷ್ಟವಾಗಿ ಕಂಡರೂ ನೋಬಾಲ್ ನೀಡದೇ ಇರುವುದು ಅಚ್ಚರಿ ಮೂಡಿಸಿದೆ.
ಅನುಮಾನ ಮೂಡಿಸಿದ ಲಕ್ನೋ ನಿರ್ಧಾರಗಳು
ಲಕ್ನೋ ಮೊದಲು ಬ್ಯಾಟಿಂಗ್ ನಡೆಸಿತು. ಆದರೆ ತಂಡವು ನಿಧಾನವಾಗಿ ಬ್ಯಾಟಿಂಗ್ ನಡೆಸಿದ್ದೂ ಅನುಮಾನ ಸೃಷ್ಟಿಸಿತು. ಬಿರುಸಿನಾಟಕ್ಕೆ ಹೆಸರಾದ ಪಂತ್ ಅರ್ಧಶತಕ ಪೂರೈಸಲು 42 ಎಸೆತಗಳನ್ನು ತೆಗೆದುಕೊಂಡರು. ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್ನಂತಹ ಸ್ಫೋಟಕ ಬ್ಯಾಟರ್ ಇದ್ದರೂ ಬಿರುಸಿನ ಬ್ಯಾಟಿಂಗ್ಗೆ ಪಂತ್ ಮುಂದಾಗದೇ ಇರುವುದೇಕೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದರ ಜೊತೆಗೆ ಚೆನ್ನೈ ಬ್ಯಾಟಿಂಗ್ ಮಾಡುವಾಗ ಕೊನೆಯ ಹಂತದಲ್ಲಿ ಸ್ಪಿನ್ನರ್ಗಳನ್ನು ಬಳಸಿಕೊಳ್ಳದೇ ಇರುವುದು ಅನುಮಾನ ಮೂಡಿಸಿದೆ. ಅದಾಗಲೇ ಪಂದ್ಯದಲ್ಲಿ ಲಯ ಕಳೆದುಕೊಂಡಿದ್ದ ಶಾರ್ದೂಲ್ ಠಾಕೂರ್ ಅವರಿಂದ ಬೌಲಿಂಗ್ ಮಾಡಿಸಿದ್ದು ಏಕೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಇತಿಹಾಸ ನಿರ್ಮಿಸಿದ ಕರುಣ್ ನಾಯರ್
ರವಿ ಬಿಷ್ಣೋಯ್ ಕೋಟಾ ಪೂರ್ಣಗೊಳಿಸಲಿಲ್ಲವೇಕೆ?
ಸ್ಪಿನ್ನರ್ಗಳನ್ನು ಬಳಸಿಕೊಳ್ಳಲಿಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆ ರವಿ ಬಿಷ್ಣೋಯ್. ಈ ಲೆಗ್ ಬ್ರೇಕ್ ಸ್ಪಿನ್ನರ್ 3 ಓವರ್ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಕಿತ್ತಿದ್ದರ ಹೊರತಾಗಿಯೂ ಅವರ ನಾಲ್ಕು ಓವರ್ಗಳ ಕೋಟಾ ಪೂರ್ಣಗೊಳಿಸಲಿಲ್ಲ. ಬದಲಾಗಿ 3 ಓವರ್ಗಳಲ್ಲಿ 37 ರನ್ ಬಿಟ್ಟುಕೊಟ್ಟಿದ್ದ ಶಾರ್ದೂಲ್ಗೆ ಅವಕಾಶ ಕೊಟ್ಟರು. ಅದು ಕೂಡ ಧೋನಿ ಬ್ಯಾಟಿಂಗ್ಗೆ ಬಂದಾಗಲೇ ಈ ನಿರ್ಧಾರ ಮಾಡಿದ್ದೇಕೆ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಆಯುಷ್ ಬದೋನಿ ಸತತ ಔಟಾಗಲು ಪ್ರಯತ್ನಿಸಿದ್ದು ಏಕೆ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಲ್ಎಸ್ಜಿ, ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಚೆನ್ನೈ 19.3 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ರನ್ ಕಲೆ ಹಾಕಿತು.
ಇದನ್ನೂ ಓದಿ: ಐಪಿಎಲ್ನಲ್ಲಿ ದಾಖಲೆ ಬರೆದ ಎಂಎಸ್ ಧೋನಿ
