ಐಸಿಸಿ ಈವೆಂಟ್​ನಂತೆ ಇರಲಿಲ್ಲ, ದಿಲ್ ದಿಲ್ ಪಾಕಿಸ್ತಾನ್ ಕೇಳಿಸಲೇ ಇಲ್ಲ; ಸೋತ ಬಳಿಕ ಬಿಸಿಸಿಐ ವಿರುದ್ಧ ಪಾಕ್ ನಿರ್ದೇಶಕ ಗುಡುಗು
ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಈವೆಂಟ್​ನಂತೆ ಇರಲಿಲ್ಲ, ದಿಲ್ ದಿಲ್ ಪಾಕಿಸ್ತಾನ್ ಕೇಳಿಸಲೇ ಇಲ್ಲ; ಸೋತ ಬಳಿಕ ಬಿಸಿಸಿಐ ವಿರುದ್ಧ ಪಾಕ್ ನಿರ್ದೇಶಕ ಗುಡುಗು

ಐಸಿಸಿ ಈವೆಂಟ್​ನಂತೆ ಇರಲಿಲ್ಲ, ದಿಲ್ ದಿಲ್ ಪಾಕಿಸ್ತಾನ್ ಕೇಳಿಸಲೇ ಇಲ್ಲ; ಸೋತ ಬಳಿಕ ಬಿಸಿಸಿಐ ವಿರುದ್ಧ ಪಾಕ್ ನಿರ್ದೇಶಕ ಗುಡುಗು

Mickey Arthur, India vs Australia: ನಿಜ ಹೇಳಬೇಕೆಂದರೆ ಭಾರತ-ಪಾಕಿಸ್ತಾನ ಪಂದ್ಯವು ಐಸಿಸಿ ಕಾರ್ಯಕ್ರಮದಂತೆ ಇರಲಿಲ್ಲ. ಇದು ಸಂಪೂರ್ಣ ದ್ವಿಪಕ್ಷೀಯ ಸರಣಿಯಂತೆ ಇತ್ತು ಎಂದು ಪಾಕ್ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್​ ಹೇಳಿದ್ದಾರೆ.

ಬಿಸಿಸಿಐ ವಿರುದ್ಧ ಪಾಕ್ ನಿರ್ದೇಶಕ ಮಿಕ್ಕಿ ಆರ್ಥರ್ ಗುಡುಗು
ಬಿಸಿಸಿಐ ವಿರುದ್ಧ ಪಾಕ್ ನಿರ್ದೇಶಕ ಮಿಕ್ಕಿ ಆರ್ಥರ್ ಗುಡುಗು

ಪಾಕಿಸ್ತಾನ ಎದುರಿನ ಹೈವೋಲ್ಟೇಜ್ ಕದನದಲ್ಲಿ ಟೀಮ್ ಇಂಡಿಯಾ (India vs Pakistan) ಗೆದ್ದು ಬೀಗಿದೆ. ಏಕದಿನ ವಿಶ್ವಕಪ್ ಟೂರ್ನಿಯ (ICC ODI World Cup 2023) 12ನೇ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಜಯಿಸಿದ ಭಾರತ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium, Ahmedabad) 1.30 ಲಕ್ಷ ಪ್ರೇಕ್ಷಕರ ಮಧ್ಯೆ ಜರುಗಿದ ಈ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ವಿರುದ್ದ ಅಜೇಯ ಓಟ ಮುಂದುವರೆಸಿತು.

ಬಿಸಿಸಿಐ ವಿರುದ್ಧ ಗುಡುಗಿದ ಆರ್ಥರ್

ಈ ಪಂದ್ಯದ ಬಳಿಕ ಪಾಕಿಸ್ತಾನ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ (Mickey Arthur)​, ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಕಂಡುಬಂದ ವಾತಾವರಣಕ್ಕೆ ಸಂಬಂಧಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನ್ನು ಟೀಕಿಸಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉಭಯ ತಂಡಗಳ ಮುಖಾಮುಖಿಯು, ಐಸಿಸಿ ಕಾರ್ಯಕ್ರಮದಂತೆ ಕಾಣಲಿಲ್ಲ. ಇದು ಕೇವಲ ಬಿಸಿಸಿಐ ಕಾರ್ಯಕ್ರಮದಂತೆ ಕಂಡು ಬಂತು. ದ್ವಿಪಕ್ಷೀಯ ಸರಣಿಯಂತೆ ಭಾಸವಾಯಿತು ಎಂದು ಮಿಕ್ಕಿ ಆರ್ಥರ್ ಹೇಳಿದ್ದಾರೆ.

ಪಾಕಿಸ್ತಾನಿ ಅಭಿಮಾನಿಗಳು ಮತ್ತು ಪತ್ರಕರ್ತರು ಇನ್ನೂ ಭಾರತದಿಂದ ತಮ್ಮ ವೀಸಾಗಳಿಗಾಗಿ ಕಾಯುತ್ತಿದ್ದಾರೆ. ಮೈದಾನದ ತುಂಬೆಲ್ಲಾ ನೀಲಿ ಜೆರ್ಸಿ ತೊಟ್ಟ ಕ್ರೀಡಾಭಿಮಾನಿಗಳ ಸಮುದ್ರದ ಮುಂದೆ ಪಂದ್ಯವನ್ನು ಆಡಲಾಯಿತು. ಸ್ಟೇಡಿಯಂನಲ್ಲಿ 1.30 ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಪಂದ್ಯವನ್ನು ಕಣ್ತುಂಬಿಕೊಂಡರು. ಎಲ್ಲರೂ ಭಾರತ ತಂಡಕ್ಕೆ ಬೆಂಬಲ ಸೂಚಿಸಿದವರು. ಹಾಗಾಗಿ ಹಲವು ವರ್ಷಗಳ ಬಳಿಕ ಭಾರತಕ್ಕೆ ಬಂದ ಪಾಕ್​ಗೆ ಇದು ಭಯಭೀತಗೊಳಿಸಿತು ಎಂಬರ್ಥದಲ್ಲಿ ಹೇಳಿದ್ದಾರೆ.

‘ದಿಲ್ ದಿಲ್ ಪಾಕಿಸ್ತಾನ್ ಕೇಳಿಸಲೇ ಇಲ್ಲ’

ಈ ಬಗ್ಗೆ ಮಾತನಾಡಿರುವ ಮಿಕ್ಕಿ ಆರ್ಥರ್​, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಐಸಿಸಿ ಕಾರ್ಯಕ್ರಮದಂತೆ ಇರಲಿಲ್ಲ. ಇದು ಸಂಪೂರ್ಣ ದ್ವಿಪಕ್ಷೀಯ ಸರಣಿಯಂತೆ ಇತ್ತು. ಇದು ಬಿಸಿಸಿಐ ನಡೆಸಿದ ಈವೆಂಟ್​ನಂತೆ ಅನುಭವವಾಯಿತು. ಇಂದು ರಾತ್ರಿ ದಿಲ್ ದಿಲ್ ಪಾಕಿಸ್ತಾನ್ ಎಂಬುದನ್ನು ನಾನು ಕೇಳಲೇ ಎಂದು ಅವರು ಆಟದ ನಂತರ ಬಿಸಿಸಿಐ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದಾರೆ. ತಮ್ಮ ಫ್ಯಾನ್ಸ್​​ಗೆ ವೀಸಾ ನೀಡಿದ್ದರೆ, ಅವರು ಸಹ ಮೈದಾನದಲ್ಲಿ ಇರುತ್ತಿದ್ದರು ಎಂದರು.

ನಮ್ಮ ಪ್ರೇಕ್ಷಕರು ಮೈದಾನದಲ್ಲಿ ಇದ್ದಿದ್ದರೆ ಪಾಕಿಸ್ತಾನ ತಂಡವು ಪ್ರಮುಖ ಪಾತ್ರವಹಿಸುತ್ತಿತ್ತು. ಅದು ಒಂದು ಪಾತ್ರವನ್ನು ವಹಿಸುತ್ತದೆ. ಆದರೆ ನಾನದನ್ನು ಕ್ಷಮಿಸಲು ಹೋಗುವುದಿಲ್ಲ. ಏಕೆಂದರೆ ಮುಂದಿನ ಪಂದ್ಯಗಳಲ್ಲಿ ಹೇಗೆ ಆಡಬೇಕು? ಹೇಗೆ ಹೋರಾಡಬೇಕು? ಹೇಗೆ ಎದುರಿಸಬೇಕು ಎನ್ನುವುದನ್ನು ಭಾರತೀಯ ಆಟಗಾರರು ನಮಗೆ ಕಲಿಸಿದ್ದಾರೆ. ಹಾಗಾಗಿ ನಾನು ಅದನ್ನು (ಕಾರ್ಯಕ್ರಮವನ್ನು) ಕ್ಷಮಿಸಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಹೆಚ್ಚು ಮಾತನಾಡಿದರೆ ದಂಡ ಬೀಳುತ್ತೆ!

ಇನ್ನೂ ಮುಂದಕ್ಕೆ ಹೆಚ್ಚಿನದಾಗಿ ಮಾತನಾಡಲು ಸಾಧ್ಯವಿಲ್ಲ. ಅದರ ಬಗ್ಗೆ ಕಾಮೆಂಟ್ ಮಾಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ದಂಡವನ್ನು ಪಡೆಯಲು ಬಯಸುವುದಿಲ್ಲ ಎಂದು ಹೇಳಿದರು. ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತದ ಅಭಿಮಾನಿಗಳು ಹೊರತುಪಡಿಸಿ ತಮ್ಮ ದೇಶದ ಅಭಿಮಾನಿಗಳು ಇಲ್ಲದಿರುವುದಕ್ಕೆ ಟೀಕೆ ವ್ಯಕ್ತಪಡಿಸಿದ್ದಾರೆ. ಭಾರತದ ವಿರುದ್ಧ ಸೋತ ಬಳಿಕ ಹೀಗೆ ಮಾತನಾಡಿರುವುದಕ್ಕೆ ಅಭಿಮಾನಿಗಳಿಂದ ಟ್ರೋಲ್​ಗೂ ಗುರಿಯಾಗಿದ್ದಾರೆ.

ಭಾರತಕ್ಕೆ 7 ವಿಕೆಟ್​ಗಳ ಗೆಲುವು

ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ, ಭಾರತೀಯ ಬೌಲರ್​ಗಳ ಆರ್ಭಟಕ್ಕೆ ತತ್ತರಿಸಿತು. ಬಾಬರ್ ಅಜಮ್ (50), ಮೊಹಮ್ಮದ್ ರಿಜ್ವಾನ್ (49) ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ ಪಾಕ್ 42.5 ಓವರ್​​ಗಳಲ್ಲಿ 191 ರನ್​ಗಳ ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡ, ಆಕ್ರಮಣಕಾರಿ ಆಟದ ಮೂಲಕ ಗೆಲುವಿನ ನಗೆ ಬೀರಿತು. ನಾಯಕ ರೋಹಿತ್​ ಶರ್ಮಾ, ಮತ್ತೊಂದು ಆಕ್ರಮಣಕಾರಿ ಇನ್ನಿಂಗ್ಸ್​​ ಆಡಿದರು. ರೋಹಿತ್ 86, ಶ್ರೇಯಸ್ ಅಯ್ಯರ್ 53* ರನ್ ಸಿಡಿಸಿದರು.

Whats_app_banner