ಯಶಸ್ವಿ ಜೈಸ್ವಾಲ್ 14 ವರ್ಷದವನಿದ್ದಾಗ ಇಂಗ್ಲೆಂಡ್‌ಗೆ ಕರೆದೊಯ್ದೆ; ಕ್ರಿಕೆಟಿಗನ ಪ್ರತಿಭೆ ಗುರುತಿಸಿದ್ದ ವೆಂಗ್‌ಸರ್ಕಾರ್
Yashasvi Jaiswal: ಯಶಸ್ವಿ ಜೈಸ್ವಾಲ್ ತಮ್ಮ ವೃತ್ತಿಜೀವನದಲ್ಲಿ ಕಂಡ ಯಶಸ್ಸಿನ ಹಿಂದೆ ಹಲವಾರು ಜನರ ಸಹಕಾರವಿದೆ. ಅವರ ತಂದೆ, ಕೋಚ್ ಒಂದೆಡೆಯಾದರೆ; ಕ್ರಿಕೆಟ್ ಬಗ್ಗೆ ಜೈಸ್ವಾಲ್ ಅವರಲ್ಲಿದ್ದ ಹಸಿವನ್ನು ಮೊದಲು ಗಮನಿಸಿದವರು ದಿಗ್ಗಜ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕಾರ್.
2023ರ ಆಗಸ್ಟ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಭಾರತ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal), ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ದಾಖಲೆ ಬರೆದಿದ್ದ ಆರಂಭಿಕ ಆಟಗಾರ, ಕಳೆದ ವಾರ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದರು. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕ ಆಟಗಾರನಾಗಿ, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಹಾದಿಯಲ್ಲಿದ್ದಾರೆ.
ಜೈಸ್ವಾಲ್ ತಮ್ಮ ವೃತ್ತಿಜೀವನದಲ್ಲಿ ಕಂಡ ಯಶಸ್ಸಿನ ಹಿಂದೆ ಕಠಿಣ ಪ್ರಯತ್ನವಿದೆ. ಇದರೊಂದಿಗೆ ಹಲವಾರು ಜನರ ಸಹಕಾರವೂ ಇದೆ. ಅವರ ತಂದೆ, ಕೋಚ್ ಸೇರಿದಂತೆ ತಂಡದ ಸಹ ಆಟಗಾರರ ಬೆಂಬಲವೂ ಇದೆ. ಆದರೆ, ಕ್ರಿಕೆಟ್ ಬಗ್ಗೆ ಜೈಸ್ವಾಲ್ ಅವರಲ್ಲಿದ್ದ ಹಸಿವನ್ನು ಮೊದಲು ಗಮನಿಸಿದ್ದು ಬೇರಾರೂ ಅಲ್ಲ. ಅವರೇ ದಿಗ್ಗಜ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕಾರ್.
ಇದನ್ನೂ ಓದಿ | 30 ಎಸೆತ ಎದುರಿಸಿದ ಶ್ರೇಯಸ್ ಅಯ್ಯರ್‌ಗೆ ಬೆನ್ನುನೋವು; ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಬಹುತೇಕ ಹೊರಕ್ಕೆ
ಬಿಸಿಸಿಐನ ಮಾಜಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ದಿಲೀಪ್, ಜೈಸ್ವಾಲ್ ಕುರಿತಾಗಿ ಮಾತನಾಡಿದ್ದಾರೆ. ಯುವ ಆಟಗಾನನ್ನು ಹದಿಹರೆಯದ ವಯಸ್ಸಿನಲ್ಲಿ ವಿದೇಶಕ್ಕೆ ಕರೆದೊಯ್ದ ಬಗ್ಗೆ ಹೇಳಿಕೊಂಡಿದ್ದಾರೆ. ಇಂಗ್ಲೆಂಡ್‌ನಲ್ಲಿ ರನ್ ಗಳಿಸುವ ಮೂಲಕ ಜೈಸ್ವಾಲ್ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಕ್ರಿಕೆಟ್‌ನಲ್ಲಿ ಪ್ರವರ್ಧಮಾನಕ್ಕೆ ಬಂದರು. ಅಲ್ಲಿಂದ ಜೈಸ್ವಾಲ್ ಅವರ ವೃತ್ತಿಜೀವನ ಆರಂಭವಾಯಿತು.
2020ರಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವು ರನ್ನರ್ ಅಪ್ ಸ್ಥಾನ ಪಡೆಯುವಲ್ಲಿ ಯುವ ಆಟಗಾರನ ಪಾತ್ರ ಮಹತ್ವದ್ದು. ಆ ಪ್ರದರ್ಶನವು ಅವರ ಐಪಿಎಲ್ ಪದಾರ್ಪಣೆಗೆ ನೆರವಾಯ್ತು. ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡ ಯಶಸ್ವಿ, ಕಳೆದ ವರ್ಷದ ಆವೃತ್ತಿಯಲ್ಲಿ ಬರೋಬ್ಬರಿ 625 ರನ್ ಗಳಿಸುವ ಮೂಲಕ ಫ್ರಾಂಚೈಸಿಯ ನಂಬಿಕೆಯನ್ನು ಉಳಿಸಿಕೊಂಡರು.
ಇದನ್ನೂ ಓದಿ | ಇವತ್ತೇ ಭಾರತ ತಂಡ ಪ್ರಕಟ ಸಾಧ್ಯತೆ; ಜಸ್ಪ್ರೀತ್ ಬುಮ್ರಾ ಆಯ್ಕೆಯ ಗೊಂದಲದಲ್ಲಿ ಬಿಸಿಸಿಐ ಆಯ್ಕೆ ಸಮಿತಿ
ಇಂಗ್ಲೆಂಡ್‌ಗೆ ಕರೆದುಕೊಂಡು ಹೋಗಿದ್ದೆ
“ಅವನು 14 ಅಥವಾ 15 ವರ್ಷದವನಿದ್ದಾಗ ನಾನು ಅವನನ್ನು ಇಂಗ್ಲೆಂಡ್‌ಗೆ ಕರೆದೊಯ್ದಿದ್ದೆ. ನಮಗೆಲ್ಲರಿಗೂ ತಿಳಿದಿರುವಂತೆ, ಆತ ತುಂಬಾ ವಿನಮ್ರ ಹಿನ್ನೆಲೆಯಿಂದ ಬಂದವನು. ಇಂಗ್ಲೆಂಡ್‌ನಲ್ಲಿ ಆತ ಆಡಿದ ಪ್ರತಿ ಪಂದ್ಯದಲ್ಲೂ ಉತ್ತಮ ರನ್ ಕಲೆ ಹಾಕಿದ. ನಾವು ಈಗಲೂ ಆತನಲ್ಲಿ ರನ್ ಗಳಿಸುವ ಹಸಿವನ್ನು ನೋಡಬಹುದು. ಆತ ಭಾರತ ಅಂಡರ್ -19 ಪರ ಆಡಿ, ವಿಶ್ವಕಪ್‌ನಲ್ಲಿ ಸಾಕಷ್ಟು ರನ್ ಗಳಿಸಿದ. ಆ ಬಳಿಕ ಐಪಿಎಲ್ ಫ್ರಾಂಚೈಸ್ ರಾಜಸ್ಥಾನ್ ರಾಯಲ್ಸ್‌ಗೆ ಆಯ್ಕೆಯಾಗುವ ಮೂಲಕ, ಆತನ ಪ್ರತಿಭೆಗೆ ವೇದಿಕೆ ಸಿಕ್ಕಿತು. ಆತನ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಈಗ ಅವನು ದಾದರ್ ಯೂನಿಯನ್ ನಾಯಕ ಕೂಡಾ ಹೌದು. ಅಲ್ಲಿ ನಾನು 25 ವರ್ಷಗಳ ಕಾಲ ಆಡಿದ್ದೆ” ಎಂದು ವೆಂಗಸರ್ಕರ್ ರೇವ್‌ಸ್ಪೋರ್ಟ್ ಜೊತೆಗೆ ಮಾತನಾಡಿದ್ದಾರೆ.
ಸಮಯಕ್ಕೆ ಸರಿಯಾಗಿ ಅವಕಾಶ ನೀಡಿ
ವೆಂಗ್‌ಸರ್ಕಾರ್ ಹಲವು ಯುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿದ್ದಾರೆ. 2000ದ ದಶಕದ ಮಧ್ಯಭಾಗದಲ್ಲಿ, ವಿರಾಟ್ ಕೊಹ್ಲಿ ಸಾಮರ್ಥ್ಯವನ್ನು ಗಮನಿಸಿದವರು ಇದೇ ವೆಂಗ್‌ಸರ್ಕಾರ್. ಆ ಬಳಿಕ ನಡೆದಿದ್ದು ಇತಿಹಾಸ.
ಇದನ್ನೂ ಓದಿ | ದ್ರಾವಿಡ್ ಸಲಹೆಯಂತೆ ರಣಜಿ ಆಡಲು ಒಲ್ಲದ ಇಶಾನ್ ಕಿಶನ್; ಹಾರ್ದಿಕ್, ಕೃನಾಲ್ ಜೊತೆ ಅಭ್ಯಾಸ
“ನಮ್ಮ ಸುತ್ತಲೂ ಸಾಕಷ್ಟು ಉತ್ತಮ ಆಟಗಾರರಿದ್ದಾರೆ. ರಜತ್ ಪಾಟೀದಾರ್ ಉತ್ತಮ ಆಟಗಾರ ಎಂದು ನಾನು ಭಾವಿಸುತ್ತೇನೆ. ನಾನು ಆತನ ಆಟವನ್ನು ನಾಲ್ಕು ವರ್ಷಗಳ ಹಿಂದೆ ನೋಡಿದೆ. ಆದರೆ, ಆಗ ಅವನಿಗೆ ಅವಕಾಶ ಸಿಗಲಿಲ್ಲ. ಸರ್ಫರಾಜ್ ಖಾನ್ ಕೂಡ ಉತ್ತಮ ಪ್ಲೇಯರ್. ಆದರೆ ಅವರಿಗೆ ಸರಿಯಾದ ಸಮಯದಲ್ಲಿ ಅವಕಾಶ ಸಿಕ್ಕಿಲ್ಲ. ಅವರನ್ನು ಗುರುತಿಸಿ ಅವಕಾಶ ನೀಡುವ ಸಮಯವು ಸರಿಯಾಗಿರಬೇಕು. ಇಂಥಾ ಯುವಕರು ಉತ್ತಮ ಫಾರ್ಮ್‌ನಲ್ಲಿರುವಾಗ ಅವಕಾಶ ನೀಡಿ. ಆ ಸಮಯ ತಪ್ಪಿದರೆ, ಆ ಆಟಗಾರನು ತನ್ನ ಫಾರ್ಮ್, ಆಸಕ್ತಿ ಅಥವಾ ಫಿಟ್‌ನೆಸ್ ಕಳೆದುಕೊಳ್ಳಬಹುದು,” ಎಂದು ವೆಂಗ್‌ಸರ್ಕರ್ ಹೇಳಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)