16 ಶತಕ, 39 ಅರ್ಧಶತಕ, 7172 ರನ್; 100ನೇ ಟೆಸ್ಟ್ನೊಂದಿಗೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶ್ರೀಲಂಕಾದ ಸ್ಟಾರ್ ಆಟಗಾರ
Dimuth Karunaratne: ಶ್ರೀಲಂಕಾದ ಬ್ಯಾಟರ್ ದಿಮುತ್ ಕರುಣರತ್ನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಅವರ ವಿದಾಯ ಪಂದ್ಯವಾಗಿದೆ. ಈ ಪಂದ್ಯ ಫೆಬ್ರವರಿ 6ರಿಂದ ಆರಂಭವಾಗಲಿದೆ.

ಶ್ರೀಲಂಕಾದ ಮಾಜಿ ನಾಯಕ ದಿಮುತ್ ಕರುಣರತ್ನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಫೆಬ್ರವರಿ 6 ರಿಂದ ಆಸ್ಟ್ರೇಲಿಯಾ ವಿರುದ್ಧ ಗಾಲೆಯಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ಅವರು ದೃಢಪಡಿಸಿದ್ದಾರೆ. ಇದು 2012 ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಶ್ರೀಲಂಕಾದ ಮಾಜಿ ನಾಯಕನ 100ನೇ ಟೆಸ್ಟ್ ಪಂದ್ಯವಾಗಿದೆ. ಈ ವಿಶೇಷ ‘ಶತಕ’ ಪೂರೈಸಿದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತರಾಗಲಿದ್ದಾರೆ.
ಕ್ರಿಕ್ಬಜ್ ವರದಿಯ ಪ್ರಕಾರ, ಕಳಪೆ ಫಾರ್ಮ್ ನೀಡುತ್ತಿರುವ 36 ವರ್ಷದ ಆಟಗಾರ ಆಟದಿಂದ ದೂರವಿರಲು ನಿರ್ಧರಿಸಿದ್ದಾರೆ. ಕರುಣರತ್ನೆ ತಮ್ಮ ಕೊನೆಯ 7 ಟೆಸ್ಟ್ ಪಂದ್ಯಗಳಲ್ಲಿ ಗಳಿಸಿರೋದು ಕೇವಲ 182 ರನ್. ಇದರಲ್ಲಿ ಸೆಪ್ಟೆಂಬರ್ 2024 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕೈಕ ಅರ್ಧಶತಕವೂ ಸೇರಿದೆ. ದೇಶೀಯ ಕ್ರಿಕೆಟ್ನಲ್ಲೂ ಅವರು ರನ್ ಗಳಿಸಲು ಹೆಣಗಾಡಿದ್ದಾರೆ. ಹೀಗಾಗಿ, ಯುವಕರಿಗೆ ಅವಕಾಶ ಒದಗಿಸಿಕೊಡುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ದಿಮುತ್ ಕರುಣರತ್ನೆ ಟೆಸ್ಟ್ ವೃತ್ತಿಜೀವನ
2012ರಲ್ಲಿ ಇದೇ (ಗಾಲೆ) ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ದಿಮುತ್ ಕರುಣರತ್ನೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ವೃತ್ತಿಜೀವನದ ಮೊದಲ ಪಂದ್ಯದಲ್ಲಿ ಡಕೌಟ್ ಮತ್ತು ಅಜೇಯ 60 ರನ್ ಗಳಿಸಿದ್ದರು. ಆ ಪಂದ್ಯವನ್ನು ಶ್ರೀಲಂಕಾ 10 ವಿಕೆಟ್ಗಳಿಂದ ಗೆದ್ದುಕೊಂಡಿತು. ಕರುಣರತ್ನೆ ಇದುವರೆಗೆ ಆಡಿರುವ 99 ಟೆಸ್ಟ್ ಪಂದ್ಯಗಳಲ್ಲಿ 16 ಟೆಸ್ಟ್ ಶತಕಗಳೊಂದಿಗೆ ಒಟ್ಟು 7,172 ರನ್ ಗಳಿಸಿದ್ದಾರೆ. 2021ರಲ್ಲಿ ಅವರು ಬಾಂಗ್ಲಾದೇಶ ವಿರುದ್ಧ ದ್ವಿಶತಕ ಗಳಿಸಿದರು. ಟೆಸ್ಟ್‌ನಲ್ಲಿ ಅವರ ಅತ್ಯಧಿಕ ಸ್ಕೋರ್ 244.
ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೀಲಂಕಾ ಪರ ಪ್ರಭಾವಿ ಆಟಗಾರನಾಗಿದ್ದರೂ 2023 ರಲ್ಲಿ ಐರ್ಲೆಂಡ್ ವಿರುದ್ಧ ಏಕೈಕ ಏಕದಿನ ಶತಕ ಗಳಿಸಲಷ್ಟೇ ಶಕ್ತರಾಗಿದ್ದರು. ಅವರು ಶ್ರೀಲಂಕಾ ಪರ 50 ಏಕದಿನ ಮತ್ತು 34 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಆಡಿದ್ದಾರೆ. ಆದರೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅಂದುಕೊಂಡಂತೆ ಪ್ರದರ್ಶನ ನೀಡಲಿಲ್ಲ. ಶ್ರೀಲಂಕಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಲಿದ್ದಾರೆ. ಕುಮಾರ್ ಸಂಗಕ್ಕಾರ (12400), ಮಹೇಲ ಜಯವರ್ಧನೆ (11814) ಮತ್ತು ಏಂಜೆಲೊ ಮ್ಯಾಥ್ಯೂಸ್ (8090) ಮೊದಲ ಮೂರು ಸ್ಥಾನದಲ್ಲಿದ್ದಾರೆ.
ನಿವೃತ್ತಿ ಕುರಿತು ಕರುಣರತ್ನೆ ಮಾತು..
ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ ಕರುಣರತ್ನೆ, ಒಬ್ಬ ಟೆಸ್ಟ್ ಆಟಗಾರನು ಒಂದು ವರ್ಷಕ್ಕೆ 4 ಟೆಸ್ಟ್‌ಗಳನ್ನು ಆಡಲು ಮತ್ತು ತನ್ನ ಫಾರ್ಮ್ ಅನ್ನು ಕಾಯ್ದುಕೊಳ್ಳಲು ಕಷ್ಟಕರ. ಡಬ್ಲ್ಯುಟಿಸಿ ಆರಂಭದ ನಂತರ ಕಳೆದ 2-3 ವರ್ಷಗಳಲ್ಲಿ ನಾವು ಬಹಳ ಕಡಿಮೆ ದ್ವಿಪಕ್ಷೀಯ ಸರಣಿಗಳನ್ನು ಆಡಿದ್ದೇವೆ. ನನ್ನ ಫಾರ್ಮ್ ಕೂಡ ನಿರೀಕ್ಷಿತವಾಗಿಲ್ಲ. ಇದು ನಿವೃತ್ತಿಗೆ ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. ಇಲ್ಲಿಯವರೆಗೆ ನಾನು ಸಾಧಿಸಿರುವುದರ ಬಗ್ಗೆ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಕಡಿಮೆ ಸಂಖ್ಯೆಯ ಟೆಸ್ಟ್‌ಗಳನ್ನು ಆಡುವುದರಿಂದ ನನ್ನ ಮುಂದಿನ ಗುರಿಯಾದ 10,000 ರನ್‌ಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವೂ ಇದೆ. ಆದರೆ 100ನೇ ಟೆಸ್ಟ್‌ನಲ್ಲಿ ಆಡುವಂತಹ ಸಂತೋಷದ ಕ್ಷಣದೊಂದಿಗೆ ನನ್ನ ನಿವೃತ್ತಿಯನ್ನು ಘೋಷಿಸಲು ಬಯಸುತ್ತೇನೆ. 100 ಟೆಸ್ಟ್ ಪಂದ್ಯ ಆಡುವುದು, 10,000 ರನ್ ಸಿಡಿಸಿವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಅದು ಒಂದು ದೊಡ್ಡ ಸಾಧನೆ. 100 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದು ಒಂದು ಸಾಧನೆ ಎಂದು ನಾನು ಭಾವಿಸುತ್ತೇನೆ ಎಂದು ಕರುಣರತ್ನೆ ಡೈಲಿ ಎಫ್‌ಟಿಗೆ ತಿಳಿಸಿದ್ದಾರೆ.
