ತಂಡಕ್ಕೆ ಬೇಡ ಎಂದವರೆದುರೇ ರೋಚಕ ಕಂಬ್ಯಾಕ್ ಮಾಡಿದ ಆರ್ಸಿಬಿ ಫಿನಿಷರ್; ಎಲಿಮಿನೇಟರ್ ಪಂದ್ಯಕ್ಕೂ ಈತನ ಮೇಲೆಯೇ ನಿರೀಕ್ಷೆ
Dinesh Karthik : 2023ರ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ದಿನೇಶ್ ಕಾರ್ತಿಕ್ ಅವರನ್ನು ಕೈಬಿಡುವಂತೆ ಹಲವರು ಒತ್ತಾಯಿಸಿದ್ದರು. ಆದರೀಗ ರೋಚಕ ಕಂಬ್ಯಾಕ್ ಮೂಲಕ ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ.
ಒಂದು ಕನಸು, ಒಂದು ಗುರಿ.., ಸಾಧಿಸಲೇಬೇಕೆಂಬ ಛಲ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ದಿನೇಶ್ ಕಾರ್ತಿಕ್ (Dinesh Karthik) ಉತ್ತಮ ಉದಾಹರಣೆ. ಪ್ರಸಕ್ತ ಐಪಿಎಲ್ನಲ್ಲಿ ಅತ್ಯುತ್ತಮ ಫಿನಿಷರ್ ಆಗಿ ಹೊರ ಹೊಮ್ಮಿರುವ ಡಿಕೆ ಬಾಸ್ ಕಂಬ್ಯಾಕ್ ಕಹಾನಿ, ಹಲವರ ಪಾಲಿಗಂತೂ, ಒಂದೊಳ್ಳೆ ಪಾಠ ಎಂದರೂ ತಪ್ಪಾಗಲ್ಲ. ಹಾಗಾದರೆ, ದಿನೇಶ್ ಕಾರ್ತಿಕ್ ಪುನರಾಗಮನದ ಹಿಂದಿನ ಸೀಕ್ರೆಟ್ ಏನು.? ಇಲ್ಲಿದೆ ನೋಡಿ ಆಸಕ್ತಿಕರ ಸಂಗತಿ.
ತುಂಬಾ ಹಿಂದಲ್ಲ.. ವರ್ಷದ ಹಿಂದೆ ದಿನೇಶ್ ಕಾರ್ತಿಕ್, ಕ್ರಿಕೆಟ್ ವೃತ್ತಿಜೀವನ ಮುಗಿದೇ ಹೋಯ್ತು ಎಂದು ಅಂತಿಮ ನಿರ್ಧಾರಕ್ಕೆ ಇಡೀ ಕ್ರಿಕೆಟ್ ಲೋಕವೇ ಬಂದಿತ್ತು. ಅದರಲ್ಲೂ ಕಾಮೆಂಟೇಟರ್ ಅವತಾರ ಎತ್ತಿದ ಮೇಲಂತೂ ಕಾರ್ತಿಕ್, ಕಳೆದ ವರ್ಷ ನೀಡಿದ್ದ ಅತ್ಯಂತ ಕೆಟ್ಟ ಪ್ರದರ್ಶನಕ್ಕೆ ಇನ್ಮುಂದೆ ಆರ್ಸಿಬಿ ತಂಡದಲ್ಲಿ ಅವಕಾಶ ಪಡೆಯುವುದೇ ಅನುಮಾನ ಎಂದು ಹೇಳಲಾಗಿತ್ತು. ಡಿಕೆ ಆಟ ಮುಗೀತು, ಬೇರೆ ಯುವ ಆಟಗಾರರಿಗೆ ಅವಕಾಶ ಕೊಡಿ ಎಂದು ಮಾತನಾಡಿದ್ದವರೇ ಹೆಚ್ಚು.
2022ರ ಐಪಿಎಲ್ನಲ್ಲಿ ನಂಬರ್ 1 ಫಿನಿಷರ್ ಆಗಿದ್ದ ಕಾರ್ತಿಕ್, 2023ರ ಸೀಸನ್ನಲ್ಲಿ ಸತತ ವೈಫಲ್ಯಕ್ಕೆ ಒಳಗಾಗಿ ರನ್ ಗಳಿಸಲು ಪರದಾಟ ನಡೆಸಿದ್ದರು. 13 ಪಂದ್ಯಗಳಲ್ಲಿ ಗಳಿಸಿದ್ದೇ 140 ರನ್. ಅದು ಕೂಡ 134.62 ಸ್ಟ್ರೈಕ್ರೇಟ್ನಲ್ಲಿ. ಇದರಿಂದ ಸಾಕಷ್ಟು ಟೀಕೆ ಮತ್ತು ಟ್ರೋಲ್ಗೆ ಗುರಿಯಾಗಿದ್ದರು. ಆತನನ್ನು ಕೈಬಿಟ್ಟು ಯುವಕರಿಗೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಮಿನಿ ಹರಾಜಿಗೆ ಡಿಕೆ ಕೈಬಿಡದ ಕಾರಣಕ್ಕೆ ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಆದರೆ ತಂಡಕ್ಕೆ ಬೇಡವಾಗಿದ್ದ ಆಟಗಾರರ ಈಗ ಆರ್ಸಿಬಿ ಅತ್ಯುತ್ತಮ ಫಿನಿಷರ್ ಆಗಿದ್ದಾರೆ. ಈ ಟ್ರೋಲ್, ಟೀಕೆಗಳ ನಡುವೆಯೂ ಸಾಧಿಸಬೇಕೆಂಬ ಛಲ ಕಾರ್ತಿಕ್ರಲ್ಲಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದಕ್ಕೆ ಈ ವರ್ಷ ನೀಡುತ್ತಿರುವ ಸ್ಫೋಟಕ ಆಟವೇ ಸಾಕ್ಷಿ.17ನೇ ಸೀಸನ್ ಆರಂಭದಿಂದಲೇ ತನ್ನ ಬೆಂಕಿ ಬಿರುಗಾಳಿ ಆಟದ ಮೂಲಕವೇ ಗಮನ ಸೆಳೆದಿರುವ ಡಿಕೆ, ತನ್ನ ತೆಗಳಿದವರಿಂದಲೇ ಶಹಬ್ಬಾಷ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಈ ವರ್ಷ ಡಿಕೆ ನೀಡಿದ ಪ್ರದರ್ಶನ ಹೇಗಿದೆ?
2024ರ ಐಪಿಎಲ್ನ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳ ಪೈಕಿ 13 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದು, 39.38ರ ಸರಾಸರಿಯಲ್ಲಿ 315 ರನ್ ಪೇರಿಸಿದ್ದಾರೆ. ಆರನೇ ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ದಿನೇಶ್, 300 + ರನ್ ಗಳಿಸುವುದು ಸಾಮಾನ್ಯದ ಮಾತಲ್ಲ. ಆದರೆ 2022ರಲ್ಲಿ ಇಂತಹದ್ದೇ ಪ್ರದರ್ಶನ ನೀಡಿದ್ದ ತಮಿಳುನಾಡು ಕ್ರಿಕೆಟಿಗ ಒಂದೇ ಒಂದು ಸೀಸನ್ನಲ್ಲಿ ವೈಫಲ್ಯ ಅನುಭವಿಸಿದ್ದಕ್ಕೆ ಟೀಕೆಗೆ ಗುರಿಯಾಗಿದ್ದರು. ಆದರೀಗ 38 ವರ್ಷದ ಆಟಗಾರ ಆಟಗಾರರನ್ನೂ ನಾಚಿಸುವಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಐಪಿಎಲ್ ಅಖಾಡಕ್ಕಿಳಿಯುವ ಮುನ್ನ ವಿಶೇಷ ಅಭ್ಯಾಸ
ಟೀಕೆಗಳಿಗೆ ತಿರುಗೇಟು ನೀಡುವ ಗುರಿ ಹೊಂದಿದ್ದ ದಿನೇಶ್ ಕಾರ್ತಿಕ್ಗೆ, 2024ರ ಐಪಿಎಲ್ನಲ್ಲಿ ಅಬ್ಬರಿಸೋದು ಅನಿವಾರ್ಯ ಎಂಬುದು ಸ್ಪಷ್ಟವಾಗಿತ್ತು. ಹೀಗಾಗಿಯೇ ಇದಕ್ಕೆಂದು ಕಾರ್ತಿಕ್ ವಿಶೇಷ ಅಭ್ಯಾಸದ ಮೋರೆ ಹೋದರು. ಪ್ರಮುಖ ಸರಣಿಗಳಿಗೆ ಕಾಮೆಂಟರಿ ಮಾಡುತ್ತಲೇ ಪ್ರಾಕ್ಟೀಸ್ ಮಾಡುತ್ತಿದ್ದರು. ಡಿಕೆ ವಿಶೇಷ ಅಭ್ಯಾಸ ನಡೆಸಿ ಲಯಕ್ಕೆ ಮರಳಲು ಹಗಲು ರಾತ್ರಿ ಕಷ್ಟಪಟ್ಟರು. ಇದೇ ಅವರ ಕೈಹಿಡಿಯಲು ಕಾರಣವಾಗಿದೆ. ಎಲ್ಲಿ ನೋಡಿದರೂ ಉಘೇ ಉಘೇ ಎನ್ನುತ್ತಿದ್ದಾರೆ.
ಇದು ಡಿಕೆಗೆ ಕೊನೆಯ ಐಪಿಎಲ್
2024ರ ಐಪಿಎಲ್ ನಂತರ ಡಿಕೆಗೆ ಕೊನೆಯ ಐಪಿಎಲ್ ಆಗಿದೆ. ಈಗಾಲೇ ಆರ್ಸಿಬಿ ಶೋನಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ. ಅಬ್ಬರಿಸುವ ಮೂಲಕ ಆರ್ಸಿಬಿಗೆ ಗೆಲುವಿನ ಗಿಫ್ಟ್ ನೀಡುತ್ತಿರುವ ಡಿಕೆ, ಎಲಿಮಿನೇಟರ್ ಪಂದ್ಯದಲ್ಲೂ ಇಂತಹದ್ದೇ ಪ್ರದರ್ಶನ ನೀಡಲಿ, ಮಾಸ್ಟರ್ ಕ್ಲಾಸ್ ಫಿನಿಷಿಂಗ್ ಮಾಡಲಿ. ಆ ಮೂಲಕ ಆರ್ಸಿಬಿ ತಂಡವನ್ನು ಫೈನಲ್ಗೂ ಕೊಂಡೊಯ್ದು ಕಪ್ ಗೆಲ್ಲಿಸಿಕೊಡಲಿ ಎಂಬುದೇ ನಮ್ಮೆಲ್ಲರ ಆಶಯ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)