ಸೋತ ಬೆನ್ನಲ್ಲೇ LSG ಡ್ರೆಸ್ಸಿಂಗ್ ರೂಮ್ ಪ್ರವೇಶಿಸಿದ ಮಾಲೀಕ ಸಂಜೀವ್ ಗೋಯೆಂಕಾ, ಕೋಪದಲ್ಲೇ ಸಂತೈಸಿದ್ದು ಹೀಗೆ!
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ಡ್ರೆಸ್ಸಿಂಗ್ ರೂಮ್ ಪ್ರವೇಶಿಸಿದ ಮಾಲೀಕ ಸಂಜೀವ್ ಗೋಯೆಂಕಾ ಅವರು ಕೋಪದಲ್ಲೇ ಆಟಗಾರರನ್ನು ಸಂತೈಸಿದ್ದಾರೆ.

ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ರೋಚಕ ಕದನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರೋಚಿತ ಸೋಲು ಅನುಭವಿಸಿದ್ದಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ಪ್ರತಿಕ್ರಿಯಿಸಿದ್ದು, ನಿರಾಸೆ ಅನುಭವಿಸಿದ್ದಾರೆ. ಮಾರ್ಚ್ 24ರಂದು ವಿಶಾಖಪಟ್ಟಣದಲ್ಲಿ ನಡೆದ ಐಪಿಎಲ್ನ 4ನೇ ಪಂದ್ಯದಲ್ಲಿ ಲಕ್ನೋ ಸುಲಭ ಗೆಲುವು ಸಾಧಿಸುವ ಹಂತದಲ್ಲಿತ್ತು. ಆದರೆ ಅಶುತೋಷ್ ಶರ್ಮಾ ಮತ್ತು ವಿಪ್ರಜ್ ನಿಗಮ್ ತಮ್ಮ ವೀರಾವೇಶದ ಬ್ಯಾಟಿಂಗ್ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಎಲ್ಎಸ್ಜಿ ಗೆಲುವನ್ನು ಡೆಲ್ಲಿಯತ್ತ ವರ್ಗಾಯಿಸಿ 1 ವಿಕೆಟ್ ರೋಚಕ ಜಯ ಸಾಧಿಸಿದರು.
65ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು. ಗೆಲುವಿಗೆ ಇನ್ನೂ 145 ರನ್ ಬೇಕಿತ್ತು. ಅದು ಕೂಡ ಕೇವಲ 80 ಎಸೆತಗಳಿಗೆ. ವಿಕೆಟ್ಗಳು ಇಲ್ಲದಿದ್ದ ಈ ಹಂತದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟು ತಂಡವನ್ನು ಒಂದು ಹಂತಕ್ಕೆ ತಂದಿಟ್ಟಿದ್ದು ಟ್ರಿಸ್ಟಾನ್ ಸ್ಟಬ್ಸ್. ಬಳಿಕ ಅದನ್ನು ಅಶುತೋಷ್ ಮತ್ತು ವಿಪ್ರಜ್ ಮುಂದುವರೆಸಿದರು. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ವಿಪ್ರಜ್ ಅಮೋಘ 39 ರನ್ಗಳ ಕಾಣಿಕೆ ನೀಡಿದರೆ, 7 ಕ್ರಮಾಂಕದಲ್ಲಿ ಆಡಿದ ಅಶುತೋಷ್ 31 ಬಾಲ್ಗಳಲ್ಲಿ ಅಜೇಯ 66 ರನ್ ಸಿಡಿಸಿ ಮಿಂಚಿನ ಪ್ರದರ್ಶನ ನೀಡಿ ಲಕ್ನೋ ಗೆಲುವನ್ನು ಕಸಿದುಕೊಂಡರು. ಒಂದು ವಿಕೆಟ್ನಿಂದ ಪಂದ್ಯ ಗೆಲ್ಲಿಸಿದರು.
ಪಂದ್ಯ ಮುಕ್ತಾಯಗೊಂಡ ನಂತರ ಗೋಯೆಂಕಾ ಅವರು ಲಕ್ನೋ ಸೂಪರ್ ಜೈಂಟ್ಸ್ ಡ್ರೆಸ್ಸಿಂಗ್ ರೂಮ್ಗೆ ಪ್ರವೇಶಿಸಿ, ಅಸಮಾಧಾನ ಹೊರಹಾಕುವುದರ ಜತೆಗೆ ಸಕಾರಾತ್ಮಕ ಅಂಶಗಳ ಕುರಿತೂ ಮಾತನಾಡಿದ್ದಾರೆ. ಮುಖದಲ್ಲಿ ನಗುವು ಇಲ್ಲದಿದ್ದರೂ ತಂಡಕ್ಕೆ ಬೆಂಬಲ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಫಲಿತಾಂಶ ನಿರಾಶಾದಾಯಕವಾಗಿದೆ ಎಂದು ಒಪ್ಪಿಕೊಂಡ ಗೋಯೆಂಕಾ, ಬೃಹತ್ ಮೊತ್ತವನ್ನು ರಕ್ಷಿಸಬಹುದಿತ್ತು ಎಂದು ಪರೋಕ್ಷವಾಗಿ ಗುಡುಗಿದ್ದಾರೆ. ಆದರೆ ಇದು ಆರಂಭಿಕ ಪಂದ್ಯವಷ್ಟೆ. ಟೂರ್ನಿ ಇನ್ನೂ ಬಹುದೂರ ಇದೆ ಎಂದರು. ಆಟಗಾರರು ಕೊನೆವರೆಗೂ ಹೋರಾಡಿದ್ದಕ್ಕೆ ಶ್ಲಾಘಿಸಿದ್ದಾರೆ.
ಸಂಜೀವ್ ಗೋಯೆಂಕಾ ಹೇಳಿದ್ದೇನು?
ಪಂದ್ಯದಿಂದ ಸಾಕಷ್ಟು ಸಕಾರಾತ್ಮಕ ಅಂಶಗಳನ್ನು ಸ್ವೀಕರಿಸುತ್ತೇನೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನಾವು ಪವರ್ ಪ್ಲೇ ಹೊಂದಿದ್ದ ರೀತಿ ಅದ್ಭುತವಾಗಿತ್ತು. ಆಟ ಎಂದಮೇಲೆ ಇಂತಹ ಸಂಗತಿಗಳು ಸಂಭವಿಸುತ್ತವೆ. ನಮ್ಮದು ಯುವ ತಂಡ; ಪಾಸಿಟಿವ್ ಕಾಯ್ದುಕೊಳ್ಳೋಣ. ಮಾರ್ಚ್ 27ರವರೆಗೆ ಎದುರು ನೋಡೋಣ. ನಾವು ಉತ್ತಮ ಫಲಿತಾಂಶ ಪಡೆಯುತ್ತೇವೆ ಎಂದು ಆಶಿಸುತ್ತೇವೆ. ನಿರಾಶಾದಾಯಕ ಫಲಿತಾಂಶ (ಇಂದು ರಾತ್ರಿ), ಹೌದು. ಆದರೆ ಒಂದು ಅದ್ಭುತ ಆಟ. ತುಂಬಾ ಚೆನ್ನಾಗಿತ್ತು ಎಂದು ಗೋಯೆಂಕಾ ಹೇಳಿದ್ದಾರೆ. ನಂತರ ಗೋಯೆಂಕಾ ಅವರೊಂದಿಗೆ ಆಟಗಾರರು, ಸಿಬ್ಬಂದಿ ಚಪ್ಪಾಳೆ ತಟ್ಟಿದರು. ಆದರೆ ಮಾಲೀಕರ ಮುಖದಲ್ಲಿ ಸೋಲಿನ ನಿರಾಸೆ ಎದ್ದುಕಾಣುತ್ತಿತ್ತು.
ಡೆಲ್ಲಿ ಮತ್ತು ಲಕ್ನೋ ಪಂದ್ಯದ ಸ್ಕೋರ್ ವಿವರ
ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಅವರ ಸ್ಫೋಟಕ ಅರ್ಧಶತಕಗಳ ಸಹಾಯದಿಂದ ಲಕ್ನೋ ಬೃಹತ್ ಮೊತ್ತವನ್ನೇ ಪೇರಿಸಿತು. ಈ ಜೋಡಿ ಒಟ್ಟಾಗಿ 13 ಸಿಕ್ಸರ್ಗಳನ್ನು ಬಾರಿಸಿತು. ಅಂತಿಮವಾಗಿ ಲಕ್ನೋ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 209 ರನ್ ಪೇರಿಸಿತು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಪಂತ್ ಆರು ಎಸೆತಗಳಲ್ಲಿ ಡಕ್ ಔಟ್ ಆದರು. 210 ರನ್ ಗುರಿ ಬೆನ್ನಟ್ಟಿದ ಡೆಲ್ಲಿ, 19.1 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಇದೀಗ ಲಕ್ನೋ ತನ್ನ ಮುಂದಿನ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
