ಕನ್ನಡ ಸುದ್ದಿ  /  Cricket  /  Dog Interrupts Play During Gt Vs Mi Ipl Match Hardik Pandya Reactions Viral Mumbai Indians New Captain Got Trolled Prs

ಮೈದಾನಕ್ಕೆ ನುಗ್ಗಿದ ನಾಯಿ ಹಿಡಿಯಲೆತ್ನಿಸಿದ ಹಾರ್ದಿಕ್; ಸಿಕ್ಕಿದ್ದೇ ಚಾನ್ಸೆಂದು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು

Hardik Pandya: ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ನಡುವೆ ಮೈದಾನಕ್ಕೆ ನುಗ್ಗಿದ ಶ್ವಾನವನ್ನು ಹಿಡಿಯಲು ಯತ್ನಿಸಿದ ಹಾರ್ದಿಕ್​ ಪಾಂಡ್ಯ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ತಮಾಷೆಯ ಪೋಸ್ಟ್​ಗಳು ಇಲ್ಲಿವೆ ನೋಡಿ.

ಮೈದಾನಕ್ಕೆ ನುಗ್ಗಿದ ನಾಯಿ ಹಿಡಿಯಲೆತ್ನಿಸಿದ ಹಾರ್ದಿಕ್
ಮೈದಾನಕ್ಕೆ ನುಗ್ಗಿದ ನಾಯಿ ಹಿಡಿಯಲೆತ್ನಿಸಿದ ಹಾರ್ದಿಕ್

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಅವರ ನೇತೃತ್ವದ ಮುಂಬೈ ಇಂಡಿಯನ್ಸ್ (Mumbai Indians) ತನ್ನ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಸೋಲಿನೊಂದಿಗೆ ತೀವ್ರ ಮುಖಭಂಗಕ್ಕೆ ಒಳಗಾಗಿದೆ. 2012ರ ಐಪಿಎಲ್​ನಿಂದ ತನ್ನ ಮೊದಲ ಪಂದ್ಯದಲ್ಲಿ ಗೆಲ್ಲದ ಮುಂಬೈ, 2024ರಲ್ಲೂ ಪರಾಜಯದೊಂದಿಗೆ ಅಭಿಯಾನ ಆರಂಭಿಸಿದೆ.

ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಹಾರ್ದಿಕ್​ ಪಾಂಡ್ಯ, ಮೊದಲು ಬ್ಯಾಟಿಂಗ್ ನಡೆಸಲು ನೂತನ ನಾಯಕ ಶುಭ್ಮನ್ ಗಿಲ್ ಅವರ ತಂಡಕ್ಕೆ ಆಹ್ವಾನ ನೀಡಿದರು. ಆದರೆ, ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್​ 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್​ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ 162 ರನ್ ಗಳಿಸಲಷ್ಟೇ ಸಾಧ್ಯವಾಯಿತು.

2022ರಲ್ಲಿ ಮುಂಬೈ ತೊರೆದು ಗುಜರಾತ್ ಸೇರಿದ್ದ ಹಾರ್ದಿಕ್ ಈಗ ಮತ್ತೆ ಎಂಐ ತಂಡಕ್ಕೆ ಸೇರಿದ್ದಾರೆ. ಅಲ್ಲದೆ, ನಾಯಕತ್ವವನ್ನೂ ಪಡೆದಿದ್ದಾರೆ. ಹಾಗಾಗಿ ಇದೇ ಮೊದಲ ಬಾರಿಗೆ ನಾಯಕನಾಗಿ ಮುಂಬೈ ತಂಡವನ್ನು ಮುನ್ನಡೆಸಿದ ಪಾಂಡ್ಯಗೆ ಗುಜರಾತ್​ ವಿರುದ್ಧ ಪಂದ್ಯ ವಿಶೇಷವಾಗಿತ್ತು. ಆದರೆ ಈ ಪಂದ್ಯದ ಮಧ್ಯದಲ್ಲಿ ಆಟವನ್ನು ದಿಢೀರ್ ಸ್ಥಗಿತವಾಯಿತು. ಏಕೆಂದರೆ ವಿಶೇಷ ಅತಿಥಿಯೊಬ್ಬರು ಮೈದಾನಕ್ಕೆ ನುಗ್ಗಿದರು.

ಮೈದಾನಕ್ಕೆ ನುಗ್ಗಿದ ವಿಶೇಷ ಅತಿಥಿ

ಈ ವಿಶೇಷ ಅತಿಥಿ ಮೈದಾನಕ್ಕೆ ಆಗಮಿಸಿದ ವೇಳೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿದ್ದರು. ಸ್ವತಃ ನಾಯಕ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆದರೆ ಮೈದಾನಕ್ಕೆ ನುಗ್ಗಿದ್ದು ಅಭಿಮಾನಿ ಅಥವಾ ಬೇರೆ ಯಾರೂ ಅಲ್ಲ, ಅದು ನಾಯಿ. ಈ ಶ್ವಾನವನ್ನು ಹಿಡಿಯಲು ಯತ್ನಿಸಿದ ಹಾರ್ದಿಕ್​ ಪಾಂಡ್ಯರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಸಿಕ್ಕ ಅವಕಾಶ ಬಿಡಬಾರದು ಎನ್ನುತ್ತಿದ್ದಾರೆ ಹಿಟ್​ಮ್ಯಾನ್ ಫ್ಯಾನ್ಸ್.

ಹಾರ್ದಿಕ್ ಪಾಂಡ್ಯ ಪಂದ್ಯದ 3ನೇ ಓವರ್ ಬೌಲಿಂಗ್ ಮಾಡುತ್ತಿದ್ದ ಅವಧಿಯಲ್ಲಿ ನಾಯಿಯೊಂದು ಮೈದಾನಕ್ಕೆ ನುಗ್ಗಿತು. ಆದ್ದರಿಂದ ಆಟ ಸ್ಥಗಿತ ಮಾಡಲಾಯಿತು. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ನಾಯಿಯನ್ನು ಮುದ್ದಾಗಿ ಕರೆಯುವ ಮೂಲಕ ಹಿಡಿಯಲೆತ್ನಿಸಿದರು. ಆದರೆ, ಆ ಶ್ವಾನ ಪಾಂಡ್ಯ ಕೂಗನ್ನು ಲೆಕ್ಕಿಸದೆ ಜೀವ ಭಯದೊಂದಿಗೆ ಓಡತೊಡಗಿತು. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟ್ರೋಲ್ ಮಾಡಿದ ನೆಟ್ಟಿಗರು

ಮೈದಾನಕ್ಕೆ ನಾಯಿ ನುಗ್ಗಿದ ಬೆನ್ನಲ್ಲೇ ಹಾರ್ದಿಕ್.. ಹಾರ್ದಿಕ್ ಎಂದು ಕೂಗಿದ್ದಾರೆ. ವಿಡಿಯೋ ಮತ್ತು ಫೋಟೋ ಹಂಚಿಕೊಂಡು ನಾಯಿಗೆ ಹಾರ್ದಿಕ್​ರನ್ನು ಹೋಲಿಸಿ ಪೋಸ್ಟ್​​ನಲ್ಲಿ ಬರೆದಿದ್ದಾರೆ. ನಾಯಿಗಿರುವ ನಿಯತ್ತು ಹಾರ್ದಿಕ್​ಗೆ ಇಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಹಾರ್ದಿಕ್​ರನ್ನು ಆ ರೀತಿ ಹೋಲಿಸಬೇಡಿ, ಪ್ರಾಣಿಗೆ ಹೋಲಿಸಿಕೊಳ್ಳುವ ಯೋಗ್ಯತೆ ಆತನಿಗಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ತಮಾಷೆಯ ಮೀಮ್ಸ್​​ಗಳನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಕೆಲವರು ಹಾರ್ದಿಕ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಪಾಂಡ್ಯಗೆ ನಾಯಕತ್ವ ಕೊಟ್ಟಿರುವು ಮುಂಬೈ ಫ್ರಾಂಚೈಸಿ. ರೋಹಿತ್​ ಶರ್ಮಾ ಅವರನ್ನು ಕೆಳಗಿಳಿಸಿರುವುದು ಕೂಡ ಫ್ರಾಂಚೈಸಿ. ಹೀಗಾಗಿ ಹಾರ್ದಿಕ್​ ಅವರನ್ನು ಟ್ರೋಲ್ ಮಾಡಿದರೆ ಏನು ಪ್ರಯೋಜನೆ? ನಿಮ್ಮ ಕೋಪ ಫ್ರಾಂಚೈಸಿ ಮೇಲೆ ತೋರಿಸಿ, ಆತನ ಮೇಲೇಕೆ? ಮ್ಯಾನೇಜ್​ಮೆಂಟ್ ತೆಗದುಕೊಂಡ ನಿರ್ಧಾರದಂತೆ ಆತ ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಮುಂಬೈ ನಾಯಕತ್ವ ಬದಲಾವಣೆ ರೋಹಿತ್ ಅಭಿಮಾನಿಗಳಿಗೆ ಆರಂಭದಿಂದಲೂ ಇಷ್ಟವಿಲ್ಲ. ಆರಂಭದಿಂದಲೂ ವ್ಯಾಪಕ ಅಸಮಾಧಾನ ಹಾಗೂ ಆಕ್ರೋಶ ಕೇಳಿಬರುತ್ತಿದೆ. ಇಂದು ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಟಾಸ್‌ ಸಮಯದಲ್ಲೂ, ನರೇಂದ್ರ ಮೋದಿ ಸ್ಟೇಡಿಯಂ ತುಂಬೆಲ್ಲಾ ರೋಹಿತ್, ರೋಹಿತ್ ಘೋಷಣೆಗಳೇ ಕೇಳಿ ಬಂದಿದೆ. ಪಂದ್ಯದ ನಡುವೆಯೂ ನಿಮಿಷಗಳ ಕಾಲ ರೋಹಿತ್‌ ಶರ್ಮಾ ಹೆಸರು ಹೇಳಿ ಅಭಿಮಾನಿಗಳು ಕೂಗಿದ್ದಾರೆ. ಇದು ಹಾರ್ದಿಕ್‌ ಪಾಂಡ್ಯಗೆ ಮುಜುಗರ ಆಗುವಂತಿತ್ತು.

IPL_Entry_Point