ಕೆಎಲ್ ರಾಹುಲ್ ವೃತ್ತಿಜೀವನ ಹಾಳು ಮಾಡುವ ಹುನ್ನಾರ; ಅಕ್ಷರ್ಗೆ ಬಡ್ತಿ ನೀಡಿದ್ದಕ್ಕೆ ಗಂಭೀರ್ ವಿರುದ್ಧ ಆಕ್ರೋಶ
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಬದಲಿಗೆ ಅಕ್ಷರ್ ಪಟೇಲ್ಗೆ ಬಡ್ತಿ ನೀಡಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಿದ ಹೆಡ್ಕೋಚ್ ಗೌತಮ್ ಗಂಭೀರ್ ಆಕ್ರೋಶ ವ್ಯಕ್ತವಾಗಿದೆ.

ನಾಗ್ಪುರದಲ್ಲಿ ಗುರುವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಅವರ ಬದಲಿಗೆ ಬಡ್ತಿ ನೀಡಿ ಅಕ್ಷರ್ ಪಟೇಲ್ ಅವರನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಕೆಎಲ್ ರಾಹುಲ್ ಅವರನ್ನು ಕೆಳ ಕ್ರಮಾಂಕಕ್ಕೆ ತಳ್ಳುವ ಮೂಲಕ ಅವರ ವೃತ್ತಿಜೀವನವನ್ನು ಅಂತ್ಯಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಕಿಡಿಕಾರಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ರಾಹುಲ್ 5ನೇ ಕ್ರಮಾಂಕದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಕ್ರಮಾಂಕದಲ್ಲಿ ಅಮೋಘ ಯಶಸ್ಸು ಕಂಡಿದ್ದಾರೆ. 2023ರ ಏಕದಿನ ವಿಶ್ವಕಪ್ನಲ್ಲೂ ಅದೇ ಪಾತ್ರವನ್ನು ನಿರ್ವಹಿಸಿ ಧೂಳೆಬ್ಬಿಸಿದ್ದರು. ಹೀಗಾಗಿ ಇಂಗ್ಲೆಂಡ್ ಎದುರಿನ ಪಂದ್ಯದಲ್ಲೂ ರಾಹುಲ್ರನ್ನು ಅದೇ ಪಾತ್ರದಲ್ಲಿ ನೋಡಲು ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದರು. ಆದರೆ, ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 59 ರನ್ಗಳಿಸಿ ಔಟಾದ ಬಳಿಕ ಹೆಡ್ಕೋಚ್ ಅಕ್ಷರ್ ಪಟೇಲ್ ಅವರನ್ನು 5ನೇ ಕ್ರಮಾಂಕಕ್ಕೆ ಬಡ್ತಿ ನೀಡಿ ಬ್ಯಾಟಿಂಗ್ ಮಾಡಲು ಕಳುಹಿಸಿಕೊಟ್ಟರು.
ಅಕ್ಷರ್ ಕೂಡ ಬ್ಯಾಟಿಂಗ್ನಲ್ಲಿ ಉತ್ತಮ ಕೌಶಲ ಮತ್ತು ದಾಖಲೆ ಹೊಂದಿದ್ದಾರೆ. ಈ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಮಿಂಚಿದರು. ಶುಭ್ಮನ್ ಗಿಲ್ ಜೊತೆಗೆ 4ನೇ ವಿಕೆಟ್ಗೆ 108 ರನ್ಗಳ ಪಾಲುದಾರಿಕೆ ಒದಗಿಸಿದ ಅಕ್ಷರ್, ತಾನೂ 47 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 52 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಸ್ಥಾನ ಬದಲಾದ ಹಿನ್ನೆಲೆ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರಾಹುಲ್ (2) ಒಂದಂಕಿಗೆ ಔಟಾದರು. ಇದರ ಬೆನ್ನಲ್ಲೇ ಕೆಎಲ್ ಬ್ಯಾಟಿಂಗ್ ಅಂಕಿ-ಅಂಶಗಳನ್ನು ಹಂಚಿಕೊಂಡು ಗಂಭೀರ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಹುಲ್ ವೃತ್ತಿಜೀವನ ಮುಗಿಸಲು ಯತ್ನ
ಕಳೆದ ಐದು ವರ್ಷಗಳಲ್ಲಿ ಟೀಮ್ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮತ್ತು ಅತಿ ಹೆಚ್ಚು ಸರಾಸರಿ ಹೊಂದಿರುವ ಆಟಗಾರ ಕೆಎಲ್ ರಾಹುಲ್. ಅವರು 1758 ರನ್ ಮತ್ತು ಸರಾಸರಿ 62.8 ಹೊಂದಿದ್ದಾರೆ. ಹೀಗಿದ್ದರೂ ಅವರ ಸ್ಥಾನ ಬದಲಾಯಿಸುತ್ತಿರುವುದು ಎಷ್ಟು ಸರಿ? ಕೆಎಲ್ ರಾಹುಲ್ ವೃತ್ತಿಜೀವನ ಮುಗಿಸುವುದೇ ಗಂಭೀರ್ ಅವರ ಮುಖ್ಯ ಗುರಿಯಾಗಿದೆ ಎಂದು ನೆಟ್ಟಿಗರು ಆರೋಪ ಮಾಡುತ್ತಿದ್ದಾರೆ.
ಮೊದಲ ಏಕದಿನ ಪಂದ್ಯದ ಸ್ಕೋರ್ ವಿವರ
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ, ಹರ್ಷಿತ್ ರಾಣಾ ತಲಾ ಮೂರು ವಿಕೆಟ್ ಉರುಳಿಸಿ ಪ್ರವಾಸಿ ತಂಡವನ್ನು 47.4 ಓವರ್ಗಳಲ್ಲಿ ಆಲೌಟ್ ಮಾಡಿ 248 ರನ್ಗಳಿಗೆ ಕಟ್ಟಿ ಹಾಕಿದರು. 249 ರನ್ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಶ್ರೇಯಸ್ ಅಯ್ಯರ್ (59), ಶುಭ್ಮನ್ ಗಿಲ್ (87) ಮತ್ತು ಅಕ್ಷರ್ ಪಟೇಲ್ (52) ಬ್ಯಾಟಿಂಗ್ ಬಲದಿಂದ 38.4 ಓವರ್ಗಳಿಗೆ 6 ವಿಕೆಟ್ ಕಳೆದುಕೊಂಡು 251 ರನ್ ಗಳಿಸಿತು. ಇದರೊಂದಿಗೆ ರೋಹಿತ್ ಪಡೆ 1-0 ಅಂತರದಿಂದ ಮುನ್ನಡೆ ಸಾಧಿಸಿತು.
