ಟೀಮ್ ಇಂಡಿಯಾಕ್ಕೆ ಮರಳಲು ಇಶಾನ್ ಕಿಶನ್ಗೆ ಚಿನ್ನದಂತಹ ಅವಕಾಶ: ಈ ಬಾರಿಯಾದ್ರೂ ಕೇಳ್ತಾರಾ ಬಿಸಿಸಿಐ ಮಾತು?
Ishan Kishan: ದುಲೀಪ್ ಟ್ರೋಫಿಯಲ್ಲಿ ಭಾಗವಹಿಸುವ ಮೂಲಕ ಇಶಾನ್ ಕಿಶನ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಮತ್ತೆ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ. ಕಿಶನ್ ಭಾರತ ತಂಡಕ್ಕೆ ಮರಳಲು ಬಯಸಿದರೆ, ಅವರು ದುಲೀಪ್ ಟ್ರೋಫಿಯನ್ನು ಆಡಬೇಕಾಗುತ್ತದೆ ಎಂದು ಆಯ್ಕೆ ಸಮಿತಿ ಕೂಡ ಬಯಸುತ್ತಿದೆ.
ಭಾರತ ಕ್ರಿಕೆಟ್ ತಂಡದ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ (Ishan Kishan) ತಂಡದಿಂದ ದೂರವಾಗಿ ಬಹಳ ದಿನಗಳಾಗಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವಿರಾಮ ತೆಗೆದುಕೊಂಡಿದ್ದರು. ಆದರೆ, ಅಂದಿನಿಂದ ತಂಡಕ್ಕೆ ಮರಳಲು ಸಾಧ್ಯವಾಗಿಲ್ಲ. ರಣಜಿ ಟ್ರೋಫಿ ಆಡುವಂತೆ ಬಿಸಿಸಿಐ ಕೇಳಿಕೊಂಡಿತ್ತು. ಈ ಮಾತನ್ನು ತಿರಸ್ಕರಿಸಿ ಅವರು ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲಿಲ್ಲ. ಇದಾದ ಬಳಿಕ ಕಿಶನ್ ಈ ಬಾರಿಯ ವಾರ್ಷಿಕ ಒಪ್ಪಂದದಿಂದ ಹೊರಬಿದ್ದಿದ್ದರು.
ಆದರೆ, ಇದೀಗ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಲು ಇಶಾನ್ ಕಿಶನ್ಗೆ ಮತ್ತೊಂದು ಅದ್ಭುತ ಅವಕಾಶ ಒದಗಿಬಂದಿದೆ. ದುಲೀಪ್ ಟ್ರೋಫಿ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ 5 ರಿಂದ ಪ್ರಾರಂಭವಾಗಲಿದೆ. ಇದರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಸೇರಿದಂತೆ ಅನೇಕ ಟೀಮ್ ಇಂಡಿಯಾ ಆಟಗಾರರು ಸಹ ಭಾಗವಹಿಸುವ ನಿರೀಕ್ಷೆಯಿದೆ. ಈ ದೇಶೀಯ ಟೂರ್ನಿಯಲ್ಲಿ ಇಶಾನ್ ಕೂಡ ಪಾಲ್ಗೊಳ್ಳಬೇಕೆಂದು ಆಯ್ಕೆ ಸಮಿತಿ ಬಯಸಿದೆ ಎಂಬ ವರದಿಗಳಿವೆ.
ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ದುಲೀಪ್ ಟ್ರೋಫಿಯಲ್ಲಿ ಭಾಗವಹಿಸುವ ಮೂಲಕ ಇಶಾನ್ ಕಿಶನ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಮತ್ತೆ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ. ಕಿಶನ್ ಭಾರತ ತಂಡಕ್ಕೆ ಮರಳಲು ಬಯಸಿದರೆ, ಅವರು ದುಲೀಪ್ ಟ್ರೋಫಿಯನ್ನು ಆಡಬೇಕಾಗುತ್ತದೆ ಎಂದು ಆಯ್ಕೆ ಸಮಿತಿ ಕೂಡ ಬಯಸುತ್ತಿದೆ. ಹೀಗಾಗಿ ಇಶಾನ್ ಈ ಬಾರಿ ಬಿಸಿಸಿಐ ಮಾತು ಕೇಳುತ್ತಾರಾ ಎಂಬ ಪ್ರಶ್ನೆ ಹುಟ್ಟಿದೆ.
ಇಶಾನ್ ಕಿಶನ್ ಅಂತಾರಾಷ್ಟ್ರೀಯ ವೃತ್ತಿಜೀವನ
26 ವರ್ಷದ ಕಿಶನ್ ಭಾರತ ಪರ ಇದುವರೆಗೆ 2 ಟೆಸ್ಟ್, 27 ಏಕದಿನ ಮತ್ತು 32 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 78 ರನ್, ಏಕದಿನದಲ್ಲಿ 933 ರನ್ ಮತ್ತು ಟಿ20ಯಲ್ಲಿ 796 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು 1 ಶತಕ ಮತ್ತು 14 ಅರ್ಧ ಶತಕಗಳನ್ನು ಹೊಂದಿದ್ದಾರೆ.
ವಿರಾಮ ತೆಗೆದುಕೊಂಡ ಮೇಲೆ ಇಶಾನ್ ಹೇಳಿದ್ದೇನು?
ಈ ವಿಷಯದ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಸಂದರ್ಶನ ನೀಡಿದ ಇಶಾನ್ ಕಿಶನ್, ''ನಾನು ಚೆನ್ನಾಗಿ ರನ್ ಗಳಿಸುತ್ತಿದ್ದೆ. ಬಳಿಕ ನಾನು ಬೆಂಚ್‌ನಲ್ಲಿ ಕಾಯಬೇಕಾಯಿತು. ಈ ರೀತಿಯ ಘಟನೆ ಕ್ರೀಡೆಯಲ್ಲಿ ಸಂಭವಿಸುತ್ತವೆ. ಆದರೆ, ನಾನು ಪ್ರಯಾಣದಲ್ಲಿ ದಣಿದಿದ್ದೆ. ಏನೋ ತಪ್ಪಾಗುತ್ತಿದೆ ಎಂದು ಅನಿಸಿತು. ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಮೂಡಿತು. ಹೀಗಾಗಿ ನಾನು ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದೆ. ಆದರೆ, ದುಃಖದ ವಿಷಯವೆಂದರೆ ಅದು ನನ್ನ ಕುಟುಂಬ ಮತ್ತು ಕೆಲವು ಜನರನ್ನು ಹೊರತುಪಡಿಸಿ, ಉಳಿದವರು ಯಾರೂ ಅದನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
ಟೀಮ್ ಇಂಡಿಯಾಕ್ಕೆ ಆಯ್ಕೆಯಾದರೂ ಅವಕಾಶ ಕಷ್ಟ
ಮುಂಬರುವ ತಿಂಗಳುಗಳಲ್ಲಿ ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ವಿರುದ್ಧ ಟೀಮ್ ಇಂಡಿಯಾ ಒಟ್ಟು 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಸಮಯದಲ್ಲಿ ಇಶಾನ್ ಕಿಶನ್ ದೇಶೀಯ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಟೀಮ್ ಇಂಡಿಯಾಗೆ ಮರಳಬಹುದು. ಕಳೆದ ವರ್ಷ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಅವರು ಟೀಮ್ ಇಂಡಿಯಾ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು.
ಆದರೆ ಇಶಾನ್‌ಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿ ನಂತರ ಪ್ಲೇಯಿಂಗ್ ಹನ್ನೊಂದರಲ್ಲಿ ಅವಕಾಶ ಪಡೆಯುವುದು ಕಷ್ಟ. ಏಕೆಂದರೆ ಟೆಸ್ಟ್‌ನಲ್ಲಿ ರಿಷಭ್ ಪಂತ್ ಅವಕಾಶ ಪಡೆಯುವುದು ಬಹುತೇಕ ಖಚಿತ. ಮತ್ತೊಂದೆಡೆ, ರಾಂಚಿ ಟೆಸ್ಟ್‌ನಲ್ಲಿ ಧ್ರುವ್ ಜುರೆಲ್ ಕೂಡ ಪ್ರಬಲ ಪ್ರದರ್ಶನ ನೀಡಿದ್ದರು. ಈ ಮೂಲಕ ಕಿಶನ್ ಟೀಮ್ ಇಂಡಿಯಾಕ್ಕೆ ಆಯ್ಕೆಯಾದರೂ ಕಣಕ್ಕಿಳಿಯಲು ಸಾಲು ಸಾಲು ಸವಾಲುಗಳಿವೆ.