ಕನ್ನಡ ಸುದ್ದಿ  /  Cricket  /  Ee Sala Cup Namdu Smriti Mandhana Relishes Wpl Triumph As Rcb Fans Realise Dream Royal Challengers Bangalore Prs

ಅಭಿಮಾನಿಗಳಿಲ್ಲದೆ ನಾವಿಲ್ಲ, ಈ ಸಲ ಕಪ್ ನಮ್ದು ಎಂದು ಆರ್​ಸಿಬಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಸ್ಮೃತಿ ಮಂಧಾನ

Smriti Mandhana: ಆರ್​ಸಿಬಿ ಫ್ಯಾನ್ಸ್​ ಅತ್ಯಂತ ನಿಷ್ಠಾವಂತ ಅಭಿಮಾನಿ ಬಳಗ. ಅವರ ಬೆಂಬಲವಿಲ್ಲದೆ ಏನೂ ಆಗುತ್ತಿರಲಿಲ್ಲ. ಈ ಸಲ ಕಪ್​ ನಮ್ದು ಎಂದು ಸ್ಮೃತಿ ಮಂಧಾನ ಅವರು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಆರ್​ಸಿಬಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಸ್ಮೃತಿ ಮಂಧಾನ
ಆರ್​ಸಿಬಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಸ್ಮೃತಿ ಮಂಧಾನ

ಈ ಸಲ ಕಪ್ ನಮ್ದು.. ಹೌದು, ಈ ಮಾತನ್ನು ಸ್ವತಃ ಸ್ಮೃತಿ ಮಂಧಾನ ಅವರೇ ಹೇಳಿದ್ದಾರೆ. ಐಪಿಎಲ್ ಆರಂಭಗೊಂಡು ಈವರೆಗೆ 16 ಆವೃತ್ತಿಗಳನ್ನೂ ಪೂರೈಸಿದೆ. ಪ್ರತಿ ಸಲ ಬೆಟ್ಟದಷ್ಟು ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿದ್ದ ಆರ್​ಸಿಬಿ, ಸೋಲಿನೊಂದಿಗೆ ಅಂತ್ಯ ಹಾಡುತ್ತಿತ್ತು. ಕಳೆದ 16 ಆವೃತ್ತಿಗಳಲ್ಲಿ ಆರ್​ಸಿಬಿ 3 ಬಾರಿ ಫೈನಲ್ ಪ್ರವೇಶಿಸಿತ್ತಾದರೂ ಒಂದು ಬಾರಿಯೂ ಟ್ರೋಫಿ ಗೆದ್ದಿರಲಿಲ್ಲ.

ಪ್ರತಿ ಆವೃತ್ತಿಯ ಐಪಿಎಲ್​ನಲ್ಲೂ ‘ಈ ಸಲ ಕಪ್ ನಮ್ದೇ‘.. ‘ಈ ಸಲ ಕಪ್ ನಮ್ದೇ‘ ಎಂದು ಅಭಿಮಾನಿಗಳು ಘೋಷಣೆ ಕೂಗುತ್ತಿದ್ದರು. ಪ್ರತಿ ಬಾರಿ ಆರ್​​ಸಿಬಿ ಕಪ್ ಗೆಲ್ಲಬೇಕೆಂದು ದೇವರಲ್ಲಿ ಮೊರೆ ಇಡುತ್ತಿದ್ದರು. ಆದರೆ ಕೊನೆಗೆ ಅದೇ ಸೋಲು, ಅದೇ ನಿರಾಶೆ. ಇದೀಗ ಕಪ್​ ಗೆದ್ದ ಬಳಿಕ ಸ್ಮೃತಿ ಮಂಧಾನ, ಈ ಸಲ ಕಪ್​ ನಮ್ದೇ ಅಲ್ಲ, ಈ ಸಲ ಕಪ್​ ನಮ್ದು ಎಂದು ಹೇಳಿ ಅಭಿಮಾನಿಗಳನ್ನು ಸಮಾಧಾನಪಡಿಸಿದ್ದಾರೆ.

ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಆರ್​​ಸಿಬಿ ಸಿಂಹಿಣಿಯರು, 16 ಸೀಸನ್​​ಗಳಿಂದ ಐಪಿಎಲ್​ನಲ್ಲಿ ಆರ್​ಸಿಬಿ ಪುರುಷ ತಂಡ ಮಾಡಲಾಗದ ಕೆಲಸವನ್ನು ತಮ್ಮ ಕೇವಲ 2ನೇ ಸೀಸನ್​ನಲ್ಲೇ ಮಾಡಿ ಮುಗಿಸಿದ್ದಾರೆ. ಗೆಲುವಿನ ಬಳಿಕ ತಮಗೆ ಬೆಂಬಲ ತೋರಿದ ಅಭಿಮಾನಿಗಳಿಗೆ ಸ್ಮೃತಿ ಮಂಧಾನ ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ. ಅವರು ಏನೆಲ್ಲಾ ಹೇಳಿದ್ದಾರೆ ಬನ್ನಿ ನೋಡೋಣ.

‘ಭಾವನೆಗಳಿಂದ ತುಂಬಿ ಹೋಗಿದ್ದೇನೆ’

ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್​ನಲ್ಲಿ ತಂಡದ ಪರವಾಗಿ 6 ಕೋಟಿ ಚೆಕ್ ಪಡೆದ ಸ್ಮೃತಿ ಮಂಧಾನ ಗೆಲುವಿನ ಕುರಿತು ಮಾತನಾಡಿದರು. ನಿಜವಾಗಿಯೂ ನಾನು ಭಾವನೆಗಳಿಂದ ತುಂಬಿ ಹೋಗಿದ್ದೇನೆ. ಅದರಿಂದ ಹೊರಬರಲು ಸಮಯ ತೆಗೆದುಕೊಳ್ಳುತ್ತದೆ. ನಾನು ತಂಡದ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ. ಫೈನಲ್‌ನಲ್ಲಿ ಗೆಲುವನ್ನು ಮೀರಿದ್ದಕ್ಕೆ ಸಂತೋಷವಾಗಿದೆ. ನಾವು ಬೆಂಗಳೂರು ಲೆಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ ದೆಹಲಿಯಲ್ಲಿ ಎರಡು ಪಂದ್ಯಗಳನ್ನು ಕಳೆದುಕೊಂಡೆವು. ಬಳಿಕ ನಾವು ಪುನರಾಗಮನ ಮಾಡಿದ್ದು ಅದ್ಭುತವಾಗಿತ್ತು ಎಂದು ಮಂಧಾನ ಹೇಳಿದ್ದಾರೆ.

ದೆಹಲಿಯಲ್ಲಿ ಎರಡು ಕಠಿಣ ಸೋಲುಗಳ ನಂತರ ಅದರಿಂದ ಹೊರ ಬರಲು ಏನೆಲ್ಲಾ ಮಾಡಬೇಕು ಎಂಬುದರ ಕುರಿತು ತಂಡದೊಂದಿಗೆ ಮಾಡನಾಡಿದ್ದೆವು. ಕಳೆದ ವರ್ಷ ನಮಗೆ ಬಹಳಷ್ಟು ವಿಷಯಗಳನ್ನು ಕಲಿಸಿತ್ತು. ಯಾವುದು ತಪ್ಪಾಯಿತು, ಯಾವುದು ಸರಿಯಾಯಿತು ಎಂಬುದನ್ನು ತಿಳಿಸಿತು. ಟೀಮ್ ಮ್ಯಾನೇಜ್‌ಮೆಂಟ್ ನನ್ನ ಆಲೋಚನೆಗಳನ್ನು ಬೆಂಬಲಿಸಿತು. ಅವರು ನನ್ನ ಮೇಲೆ ಸಂಪೂರ್ಣ ನಂಬಿಕೆಯನ್ನು ತೋರಿಸಿದರು. ಅವರಿಗೆ ಧನ್ಯವಾದಗಳು ಎಂದರು.

ಪ್ರಶಸ್ತಿ ಗೆದ್ದಿರುವುದು ಅಭಿಮಾನಿಗಳಿಗೆ ತುಂಬಾ ಅರ್ಥಪೂರ್ಣವಾಗಿದೆ. ಟ್ರೋಫಿ ಗೆದ್ದಿದ್ದು ನಾನೊಬ್ಬನೇ ಅಲ್ಲ, ತಂಡವೇ ಟ್ರೋಫಿ ಗೆದ್ದಿದೆ. ನನ್ನ ಟಾಪ್-5 ಗೆಲುವುಗಳಲ್ಲಿ ಒಂದಾಗಿದೆ (ಆರ್​​ಸಿಬಿ ಟ್ರೋಫಿ. ವಿಶ್ವಕಪ್ ಗೆಲುವು ಯಾವಾಗಲೂ ನಂ. 1 ಆಗಿ ಉಳಿಯುತ್ತದೆ ಎಂಂದು ಮಂಧಾನ ವಿಶ್ವಕಪ್ ಗೆಲ್ಲುವ ಗುರಿಯನ್ನು ಹೊರಹಾಕಿದ್ದಾರೆ. ಇದೇ ವರ್ಷದ ಅಕ್ಟೋಬರ್​​ನಲ್ಲಿ ಮಹಿಳಾ ಟಿ20 ವಿಶ್ವಕಪ್​ ಟೂರ್ನಿ ನಡೆಯಲಿದೆ.

ಆರ್​ಸಿಬಿ ಫ್ಯಾನ್ಸ್​ಗೆ ವಿಶೇಷ ಸಂದೇಶ

ಇದೇ ವೇಳೆ ಮಾತು ಮುಂದುವರೆಸಿದ ಸ್ಮೃತಿ, ಅಭಿಮಾನಿಗಳಿಗೆ ವಿಶೇಷ ಸಂದೇಶ ಹೊತ್ತು ತಂದರು. ಅಭಿಮಾನಿಗಳಿಗೆ ಸಂದೇಶವನ್ನು ಹೊತ್ತು ತಂದಿದ್ದೇನೆ. ಆರ್​ಸಿಬಿ ಫ್ಯಾನ್ಸ್​ ಅತ್ಯಂತ ನಿಷ್ಠಾವಂತ ಅಭಿಮಾನಿ ಬಳಗ. ಅವರ ಬೆಂಬಲವಿಲ್ಲದೆ ಏನೂ ಆಗುತ್ತಿರಲಿಲ್ಲ. ಈ ಸಲ ಕಪ್ ನಮ್ದೇ ಎನ್ನುವ ಒಂದು ಹೇಳಿಕೆ ಯಾವಾಗಲೂ ಬರುತ್ತಿದೆ. ಈಗ ಈ ಸಲ ಕಪ್ ನಮ್ದು. ಕನ್ನಡ ನನ್ನ ಮೊದಲ ಭಾಷೆ ಅಲ್ಲ ಆದರೆ ಅಭಿಮಾನಿಗಳಿಗೆ ಹೇಳುವುದು ಮುಖ್ಯವಾಗಿತ್ತು ಎಂದು ಹೇಳುವ ಮಂಧಾನ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಟ್ರೋಫಿ ಗೆದ್ದುಕೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್​ನಲ್ಲಿ ಆರ್​ಸಿಬಿ 8 ವಿಕೆಟ್​​ಗಳಿಂದ ಗೆದ್ದು ಬೀಗಿತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಡೆಲ್ಲಿ 18.3 ಓವರ್​​ಗಳಲ್ಲಿ 113 ರನ್​ಗಳಿಗೆ ಆಲೌಟ್​ ಆಗಿತ್ತು. 114 ರನ್​ಗಳ ಗುರಿ ಬೆನ್ನಟ್ಟಿದ ಆರ್​​ಸಿಬಿ, 19.3 ಓವರ್​​ಗಳಲ್ಲಿ ಗೆಲುವಿನ ನಗೆ ಬೀರಿತು.

IPL_Entry_Point