ಎಲಿಸ್ ಪೆರ್ರಿ ಸಿಕ್ಸರ್​ ಏಟಿಗೆ ಕಾರಿನ ಗಾಜು ಪುಡಿ ಪುಡಿ; ಪಂಚ್​ಗೆ ಸೂಪರ್ ಪಂಚ್​ ಎಂದ ನೆಟ್ಟಿಗರು, ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಎಲಿಸ್ ಪೆರ್ರಿ ಸಿಕ್ಸರ್​ ಏಟಿಗೆ ಕಾರಿನ ಗಾಜು ಪುಡಿ ಪುಡಿ; ಪಂಚ್​ಗೆ ಸೂಪರ್ ಪಂಚ್​ ಎಂದ ನೆಟ್ಟಿಗರು, ವಿಡಿಯೋ ವೈರಲ್

ಎಲಿಸ್ ಪೆರ್ರಿ ಸಿಕ್ಸರ್​ ಏಟಿಗೆ ಕಾರಿನ ಗಾಜು ಪುಡಿ ಪುಡಿ; ಪಂಚ್​ಗೆ ಸೂಪರ್ ಪಂಚ್​ ಎಂದ ನೆಟ್ಟಿಗರು, ವಿಡಿಯೋ ವೈರಲ್

Ellyse Perry : ಮಹಿಳಾ ಪ್ರೀಮಿಯರ್​ ಲೀಗ್​ನ 11ನೇ ಪಂದ್ಯದಲ್ಲಿ ಆರ್​​ಸಿಬಿ ತಂಡದ ಎಲಿಸ್ ಪೆರ್ರಿ ಬಾರಿಸಿದ ಸಿಕ್ಸರ್ ಏಟಿಗೆ ​ಕಾರಿನ ಗಾಜು ಪುಡಿಪುಡಿಯಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಎಲಿಸ್ ಪೆರ್ರಿ ಸಿಕ್ಸರ್​ ಏಟಿಗೆ ಕಾರಿನ ಗಾಜು ಪುಡಿ ಪುಡಿ; ಪಂಚ್​ಗೆ ಸೂಪರ್ ಪಂಚ್​ ಎಂದ ನೆಟ್ಟಿಗರು
ಎಲಿಸ್ ಪೆರ್ರಿ ಸಿಕ್ಸರ್​ ಏಟಿಗೆ ಕಾರಿನ ಗಾಜು ಪುಡಿ ಪುಡಿ; ಪಂಚ್​ಗೆ ಸೂಪರ್ ಪಂಚ್​ ಎಂದ ನೆಟ್ಟಿಗರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತವರು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಅಕ್ಷರಶಃ ಘರ್ಜಿಸಿದೆ. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಲಿಸ್ ಪೆರ್ರಿ ಆಕ್ರಮಣಕಾರಿ ಇನ್ನಿಂಗ್ಸ್​​ ಮೂಲಕ ಯುಪಿ ವಾರಿಯರ್ಸ್ ತಂಡಕ್ಕೆ ಬೆಂಡೆತ್ತಿದರು. ಮಹಿಳಾ ಪ್ರೀಮಿಯರ್​ ಲೀಗ್​ನ 11ನೇ ಪಂದ್ಯದಲ್ಲಿ ಪೆರ್ರಿ ಬಾರಿಸಿದ ಸಿಕ್ಸರ್ ಏಟಿಗೆ ​ಕಾರಿನ ಗಾಜು ಪುಡಿಪುಡಿಯಾಗಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್​​ಸಿಬಿ, ಅದ್ಭುತ ಪ್ರದರ್ಶನ ನೀಡಿತು. ಇನ್ನಿಂಗ್ಸ್​​ನಲ್ಲಿ ಸ್ಪಿನ್ನರ್​ ದೀಪ್ತಿ ಶರ್ಮಾ ಎಸೆದ 19ನೇ ಓವರ್​ನ 5ನೇ ಎಸೆತದಲ್ಲಿ ಮಿಡ್-ವಿಕೆಟ್​​ ಕಡೆಗೆ ಪೆರ್ರಿ ಬಾರಿಸಿದ ಸಿಕ್ಸರ್ ನೇರವಾಗಿ ಕಾರಿನ ಕಿಟಕಿ ಗಾಜಿಗೆ ಬಿತ್ತು. ಚೆಂಡು ಬಿದ್ದ ರಭಸಕ್ಕೆ ಗಾಜು ಪುಡಿ ಪುಡಿಯಾಯಿತು. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಪೆರ್ರಿ ಸೂಪರ್​ ಪಂಚ್​​ಗೆ​​ ಪಂಚ್ ಕಾರ್ ಪೀಸ್ ಎಂದು ನೆಟ್ಟಿಗರು ಕಾಮೆಂಟ್ ಹಾಕುತ್ತಿದ್ದಾರೆ.

ಡಬ್ಲ್ಯುಪಿಎಲ್​ನಲ್ಲಿ ಸೂಪರ್ ಸ್ಟ್ರೈಕರ್ ಪಡೆದ ಆಟಗಾರ್ತಿಗೆ ಈ ಕಾರನ್ನು ಪ್ರಶಸ್ತಿಯಾಗಿ ಕೊಡಲಾಗುತ್ತದೆ. ಈ ಆವೃತ್ತಿಯಲ್ಲಿ ಟಾಟಾ ಪಂಚ್​ ಕಾರ್ ಅನ್ನು ಪ್ರಶಸ್ತಿಯಾಗಿ ನೀಡಲಾಗುತ್ತದೆ. ಹೀಗಾಗಿ ಈ ಪಂಚ್​ ಕಂಪನಿಯ ಕಾರೊಂದನ್ನು ಪ್ರದರ್ಶನವಾಗಿ ಪ್ರತಿ ಪಂದ್ಯದಲ್ಲೂ ಇಡಲಾಗುತ್ತದೆ. ಹಾಗೆ ಇಟ್ಟಿರುವ ಕಾರಿನ ಗಾಜಿಗೆ ಎಲ್ಲಿಸ್‌ ಪೆರ್ರಿ ಬಾರಿಸಿದ ಸಿಕ್ಸರ್​ ಬಡಿದಿದ್ದು, ಚೆಂಡು ಬಿದ್ದ ರಭಸಕ್ಕೆ ಗಾಜು ಪೀಸ್ ಪೀಸ್​ ಆಗಿದೆ.

ಪೆರ್ರಿಯಿಂದ ಭರ್ಜರಿ ಆಟ

ಯುಪಿ ವಾರಿಯರ್ಸ್ ಮೇಲೆ ಎಲಿಸ್ ಪೆರ್ರಿ ಸವಾರಿ ಮಾಡಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಪೆರ್ರಿ ಆಕರ್ಷಕ ಅರ್ಧಶತಕ ಸಿಡಿಸಿದರು. 37 ಎಸೆತಗಳಲ್ಲಿ ಭರ್ಜರಿ 4 ಸಿಕ್ಸರ್​ ಮತ್ತು ಸೊಗಸಾದ 4 ಬೌಂಡರಿಗಳ ಸಹಾಯದಿಂದ 58 ರನ್ ಚಚ್ಚಿದರು. ಸ್ಮೃತಿ ಮಂಧಾನ ಜೊತೆಗೂಡಿ 95 ರನ್​ಗಳ ಪಾಲುದಾರಿಕೆ ನೀಡಿದರು. ಅಲ್ಲದೆ ಆರ್​​ಸಿಬಿ ಬೃಹತ್ ಪೇರಿಸಲು ಸಹ ನೆರವಾದರು.

ಸ್ಮೃತಿ ಮಂಧಾನ ಭರ್ಜರಿ 80 ರನ್

ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಸಹ ಆಕ್ರಮಣಕಾರಿ ಇನ್ನಿಂಗ್ಸ್​ ಕಟ್ಟಿದರು. ಆ ಮೂಲಕ ಈ ಟೂರ್ನಿಯಲ್ಲಿ ತನ್ನ ಎರಡನೇ ಅರ್ಧಶತಕ ಸಿಡಿಸಿದರು. 10 ಬೌಂಡರಿ ಮತ್ತು 3 ಸಿಕ್ಸರ್​ ಸಹಿತ 80 ರನ್ ​ಗಳಿಸಿದರು. ಇದು ಅವರ ವೈಯಕ್ತಿಕ ಗರಿಷ್ಠ ಸ್ಕೋರ್​ ಆಗಿದೆ. ಉಭಯ ಆಟಗಾರ್ತಿಯರು ಬೆಂಕಿ-ಬಿರುಗಾಳಿ ಆಟದ ಮೂಲಕ 26000+ ಪ್ರೇಕ್ಷಕರನ್ನು ರಂಜಿಸಿದರು. ಆರ್​ಸಿಬಿ 20 ಓವರ್​ಗಳಲ್ಲಿ 3 ವಿಕೆಟ್​ಗೆ 198 ರನ್​ ಕಲೆ ಹಾಕಿತು.

ಆರ್‌ಸಿಬಿ ಆಡುವ ಬಳಗ

ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್‌ ಕೀಪರ್), ಸೋಫಿ ಮೊಲಿನ್, ಜಾರ್ಜಿಯಾ ವೇರ್ಹಮ್, ಏಕ್ತಾ ಬಿಶ್ತ್‌, ಸಿಮ್ರಾನ್ ಬಹದ್ದೂರ್, ಆಶಾ ಸೋಭಾನಾ, ರೇಣುಕಾ ಠಾಕೂರ್ ಸಿಂಗ್.

ಯುಪಿ ವಾರಿಯರ್ಸ್‌ ಆಡುವ ಬಳಗ

ಅಲಿಸ್ಸಾ ಹೀಲಿ (ನಾಯಕಿ ಮತ್ತು ವಿಕೆಟ್‌ ಕೀಪರ್), ಕಿರಣ್ ನವಗಿರೆ, ಚಾಮರಿ ಅಥಾಪತ್ತು, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್, ಪೂನಮ್ ಖೇಮ್ನಾರ್, ಸೈಮಾ ಠಾಕೋರ್, ಸೋಫಿ ಎಕ್ಲೆಸ್ಟನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner