ಕನ್ನಡ ಸುದ್ದಿ  /  Cricket  /  Emotional Connect Behind Dhruv Jurel Salute Celebration On Scoring Maiden Test Half Century Against England Prs

ಅರ್ಧಶತಕ ಸಿಡಿಸಿದ ನಂತರ ಧ್ರುವ್ ಜುರೆಲ್ ಸೆಲ್ಯೂಟ್ ಸೆಲೆಬ್ರೇಷನ್; ಈ ಸಂಭ್ರಮದ ಹಿಂದಿದೆ ಭಾವನಾತ್ಮಕ ಸಂಪರ್ಕ

Dhruv Jurel salute celebration : ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್​​ನಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್, ಈ ಸೆಲ್ಯೂಟ್ ಹಿಂದಿರುವ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಅರ್ಧಶತಕ ಸಿಡಿಸಿದ ನಂತರ ಧ್ರುವ್ ಜುರೆಲ್ ಸೆಲ್ಯೂಟ್ ಸೆಲೆಬ್ರೇಷನ್
ಅರ್ಧಶತಕ ಸಿಡಿಸಿದ ನಂತರ ಧ್ರುವ್ ಜುರೆಲ್ ಸೆಲ್ಯೂಟ್ ಸೆಲೆಬ್ರೇಷನ್

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ನ 3ನೇ ದಿನದಂದು ಧ್ರುವ್ ಜುರೆಲ್ (Dhruv Jurel) ಚೊಚ್ಚಲ ಅರ್ಧಶತಕ ಸಿಡಿಸಿ ಭಾರತ ತಂಡಕ್ಕೆ ಮರುಜೀವ ನೀಡಿದರು. ಮೌಲ್ಯಯುತವಾದ 90 ರನ್ ಗಳಿಸಿ ಟೀಮ್ ಇಂಡಿಯಾವನ್ನು 300ರ ಗಡಿ ದಾಟಿಸಿದರು. ದಿನದ ಆರಂಭಕ್ಕೆ 134 ರನ್‌ಗಳ ಹಿನ್ನಡೆಯಲ್ಲಿದ್ದ ಭಾರತ 219/7ರಲ್ಲಿ ತತ್ತರಿಸಿತ್ತು. ಇಷ್ಟು ರನ್​ಗಳೊಂದಿಗೆ 3ನೇ ದಿನ ಶುರು ಮಾಡಿದ ಜುರೆಲ್, 60 ರನ್ ಸೇರಿಸಿದರು.

ಎರಡನೇ ದಿನದಂದು 30 ರನ್ ಪೇರಿಸಿದ್ದ ಜುರೆಲ್ ಒಟ್ಟು 90 ರನ್ ಕಲೆ ಹಾಕಿ ಶತಕದ ಅಂಚಿನಲ್ಲಿ ಎಡವಿದರು. 149 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 90 ರನ್ ಗಳಿಸಿದರು. ಅರ್ಧಶತಕ ಸಿಡಿಸಿದ ನಂತರ ವಿಕೆಟ್ ಕೀಪರ್​ ಬ್ಯಾಟರ್​ ಸೆಲ್ಯೂಟ್​ ಸೆಲೆಬ್ರೇಷನ್ ಮಾಡಿದರು. 3ನೇ ದಿನದ ಅಂತ್ಯದ ನಂತರ, ವಿಕೆಟ್ ಕೀಪರ್-ಬ್ಯಾಟರ್ ಈ ಸೆಲ್ಯೂಟ್ ಹಿಂದಿರುವ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಜುರೆಲ್​ ಜೊತೆಗೆ ಕುಲ್ದೀಪ್ ಯಾದವ್ ಮಹತ್ವದ ಇನ್ನಿಂಗ್ಸ್​ ಕಟ್ಟಿದರು. ಕುಲ್ದೀಪ್ 131 ಎಸೆತಗಳಲ್ಲಿ 28 ರನ್ ಗಳಿಸಿ ಗಮನಾರ್ಹ ಕಾಣಿಕೆ ನೀಡಿದರು. ಈ ವೇಳೆ ಜುರೆಲ್ ರನ್ ಗಳಿಸಿ ತಂಡದ ಹಿನ್ನಡೆಯನ್ನು ತಗ್ಗಿಸಿದರು. ಆಫ್ ಸ್ಪಿನ್ನರ್ ಶೋಯೆಬ್ ಬಶೀರ್ 44 ಓವರ್‌ಗಳಲ್ಲಿ 119 ರನ್ ನೀಡಿ 5 ವಿಕೆಟ್ ಪಡೆದರು. ಎಡಗೈ ಸ್ಪಿನ್ನರ್ ಟಾಮ್ ಹಾರ್ಟ್ಲಿ 27.2 ಓವರ್​​ಗಳಲ್ಲಿ 68 ರನ್ ನೀಡಿ 3 ವಿಕೆಟ್ ಪಡೆದರು.

ಅರ್ಧಶತಕವನ್ನು ತಂದೆಗೆ ಅರ್ಪಿಸಿದ ಜುರೆಲ್

ಜುರೆಲ್‌ ತನ್ನ ಚೊಚ್ಚಲ ಟೆಸ್ಟ್ ಅರ್ಧಶತಕ ತಲುಪಿದ ನಂತರ ದೊಡ್ಡ ಸಂಭ್ರಮಾಚರಣೆ ಕೈಗೊಂಡಿಲ್ಲ. ಮೈಲಿಗಲ್ಲು ತಲುಪಿದ ನಂತರ ಸರಳವಾದ ಸೆಲ್ಯೂಟ್ ಮೂಲಕ ಅಭಿಮಾನಿಗಳನ್ನು ಆಶ್ಚರ್ಯವನ್ನುಂಟು ಮಾಡಿದರು. ಹಾಫ್ ಸೆಂಚುರಿ ನಂತರ ಸೆಲ್ಯೂಟ್ ಸೆಲೆಬ್ರೇಷನ್ ಕುರಿತು ಮಾತನಾಡಿದ ಜುರೆಲ್, ನನ್ನ ತಂದೆ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಆದ್ದರಿಂದ ನನ್ನ ಅರ್ಧಶತಕದ ಸೆಲ್ಯೂಟ್ ಸಂಭ್ರಮಾಚರಣೆ ಅವರಿಗಾಗಿ ಎಂದು ಜುರೆಲ್ ಹೇಳಿದ್ದಾರೆ.

ಜುರೆಲ್ ಅವರ ತಂದೆ ಕಾರ್ಗಿಲ್ ಯೋಧರು. 2008ರಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆಯುವ ಮೊದಲು 1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ನಿವೃತ್ತ ಹವಾಲ್ದಾರ್ ಅವರ ತಂದೆಗೆ ಸೆಲ್ಯೂಟ್ ಅನ್ನು ಅರ್ಪಿಸಿದ್ದಾರೆ. ರಾಜ್​ಕೋಟ್​​ ಟೆಸ್ಟ್​​​ನಲ್ಲಿ ಪದಾರ್ಪಣೆ ಮಾಡುವುದಕ್ಕೂ ಮುನ್ನ ಜುರೆಲ್ ತನ್ನ ಟೆಸ್ಟ್ ಕ್ಯಾಪ್ ಅನ್ನು ತನ್ನ ತಂದೆಗೆ ಅರ್ಪಿಸಲು ಬಯಸುತ್ತೇನೆ ಎಂದು ಹೇಳಿದ್ದರು. ನಾನು ಭಾರತ ಕ್ಯಾಪ್ ಪಡೆದರೆ, ಅದನ್ನು ನನ್ನ ತಂದೆಗೆ ಅರ್ಪಿಸಲು ನಾನು ಬಯಸುತ್ತೇನೆ. ಏಕೆಂದರೆ ಅವರು ನನ್ನ ಹೀರೋ ಎಂದು ಹೇಳಿದ್ದರು.

ನಾಲ್ಕನೇ ಟೆಸ್ಟ್​​ ಸ್ಕೋರ್ ವಿವರ

ಮೊದಲ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್ ತಂಡ - 353/10 (ಜೋ ರೂಟ್ 122*, ಜಡೇಜಾ 4 ವಿಕೆಟ್)

ಮೊದಲ ಇನ್ನಿಂಗ್ಸ್​​ನಲ್ಲಿ ಭಾರತ ತಂಡ - 307/10 (ಧ್ರುವ್ ಜುರೆಲ್ 90, ಬಶೀರ್​ 5 ವಿಕೆಟ್)

ಎರಡನೇ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್ - 145/10 (ಜಾಕ್​ ಕ್ರಾವ್ಲಿ 60, ಅಶ್ವಿನ್ 5 ವಿಕೆಟ್)

ಎರಡನೇ ಇನ್ನಿಂಗ್ಸ್​​ನಲ್ಲಿ ಭಾರತ - 40/0 (ನಾಲ್ಕನೇ ದಿನದಾಟದಲ್ಲಿ ಭಾರತ ಆಡಬೇಕಿದೆ) ಗೆಲುವಿಗೆ 152 ರನ್ ಬೇಕಿದೆ.