ಅಂತ್ಯವಾಯಿತೇ ಶ್ರೇಯಸ್ ಅಯ್ಯರ್ ಟೆಸ್ಟ್ ವೃತ್ತಿಜೀವನ; ಈತನ ಸ್ಥಾನ ಕದ್ದಿದ್ಯಾರು, ಮುಂದಿರುವ ಸವಾಲೇನು?
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂತ್ಯವಾಯಿತೇ ಶ್ರೇಯಸ್ ಅಯ್ಯರ್ ಟೆಸ್ಟ್ ವೃತ್ತಿಜೀವನ; ಈತನ ಸ್ಥಾನ ಕದ್ದಿದ್ಯಾರು, ಮುಂದಿರುವ ಸವಾಲೇನು?

ಅಂತ್ಯವಾಯಿತೇ ಶ್ರೇಯಸ್ ಅಯ್ಯರ್ ಟೆಸ್ಟ್ ವೃತ್ತಿಜೀವನ; ಈತನ ಸ್ಥಾನ ಕದ್ದಿದ್ಯಾರು, ಮುಂದಿರುವ ಸವಾಲೇನು?

Shreyas Iyer: ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯ ಮೊದಲ ಪಂದ್ಯಕ್ಕೆ ಶ್ರೇಯಸ್ ಅಯ್ಯರ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹಾಗಿದ್ದರೆ, ಅವರ ಟೆಸ್ಟ್ ಕ್ರಿಕೆಟ್ ಬದುಕು ಇಲ್ಲಿಗೆ ಅಂತ್ಯವಾಯಿತೇ?

29 ವರ್ಷಕ್ಕೇ ಅಂತ್ಯವಾಯ್ತೆ ಶ್ರೇಯಸ್ ಅಯ್ಯರ್ ಟೆಸ್ಟ್ ವೃತ್ತಿಜೀವನ
29 ವರ್ಷಕ್ಕೇ ಅಂತ್ಯವಾಯ್ತೆ ಶ್ರೇಯಸ್ ಅಯ್ಯರ್ ಟೆಸ್ಟ್ ವೃತ್ತಿಜೀವನ

Shreyas Iyer: ಸೆಪ್ಟೆಂಬರ್ 19ರಿಂದ ಶುರುವಾಗುವ ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್​ ಪಂದ್ಯಕ್ಕೆ 16 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಈ ಸರಣಿಗೆ ಅಚ್ಚರಿಯ ಬದಲಾವಣೆ ಮಾಡಲಾಗಿದ್ದು, ಪ್ರಮುಖರನ್ನೇ ಕೈಬಿಡಲಾಗಿದೆ. ಕೆಲವರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಕೆಲವರು ಇದ್ದ ಸ್ಥಾನಗಳನ್ನೂ ಕಳೆದುಕೊಂಡಿದ್ದಾರೆ. ಈ ಪೈಕಿ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್ ಅಯ್ಯರ್​ ಕೂಡ ಒಬ್ಬರು. ಹೀಗಾಗಿ, ಶ್ರೇಯಸ್ ಅಯ್ಯರ್‌ ಅವರ ಟೆಸ್ಟ್‌ ಕ್ರಿಕೆಟ್​​ ಕರಿಯರ್​​​ ಅಂತ್ಯವಾಯಿತೇ ಎಂಬ ಪ್ರಶ್ನೆ ಕಾಡುವಂತೆ ಮಾಡಿದೆ.

2021ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆಗೈದ ಅಯ್ಯರ್​, ಈವರೆಗೂ ಟೀಮ್ ಇಂಡಿಯಾ ಪರ 14 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಟೆಸ್ಟ್​​​ನಲ್ಲಿ ಉತ್ತಮ ದಾಖಲೆ ಹೊಂದಿದ್ದ ಅಯ್ಯರ್​, ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ವಿಫಲವಾದ ನಂತರ ಮತ್ತೆ ಅವಕಾಶ ಸಿಗಲಿಲ್ಲ. ವೈಟ್​​ಬಾಲ್ ಕ್ರಿಕೆಟ್​ನಲ್ಲಿ ಅತ್ಯುತ್ತಮ ಅಂಕಿ-ಅಂಶ ಹೊಂದಿದ್ದರೂ ಟೆಸ್ಟ್​​ನಲ್ಲಿ ಅದೇ ಪ್ರದರ್ಶನ ನೀಡಲು ವಿಫಲರಾದರು. ಮೊದಲ 12 ಇನ್ನಿಂಗ್ಸ್​​ಗಳಲ್ಲಿ 6 ಫಿಫ್ಟಿ ಪ್ಲಸ್ ಸ್ಕೋರ್ ಮಾಡಿದ್ದ ಅಯ್ಯರ್, ತನ್ನ ಕೊನೆಯ 12 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಫಿಫ್ಟಿ ಸಿಡಿಸಿಲ್ಲ.

ಶ್ರೇಯಸ್​ ಅವರನ್ನು ಮುಂದಿನ ಅಜಿಂಕ್ಯ ರಹಾನೆ ಎಂದೇ ಭಾವಿಸಲಾಗಿತ್ತು. ಐದನೇ ಕ್ರಮಾಂಕದಲ್ಲಿ ಆಧಾರಸ್ಥಂಭವಾಗಿದ್ದ ರಹಾನೆ ಜಾಗವನ್ನು ತುಂಬುವ ಸಾಮರ್ಥ್ಯ ಅಯ್ಯರ್ ಅವರಿ​​ಗಿದೆ ಎಂದು ಕ್ರಿಕೆಟ್​ ವಲಯದಲ್ಲಿ ಚರ್ಚೆ ನಡೆದಿತ್ತು. ಏಕೆಂದರೆ ಟೆಸ್ಟ್ ಕ್ರಿಕೆಟ್​ಗೆ ಪ್ರವೇಶಿಸಿದ ಆರಂಭದಲ್ಲಿ ಅಯ್ಯರ್​​ ಆಟ ಅಷ್ಟರಮಟ್ಟಿಗೆ ಆಕರ್ಷಿಸಿತ್ತು. ಆದರೀಗ ಸರ್ಫರಾಜ್ ಖಾನ್ ಎಂಟ್ರಿಕೊಟ್ಟ ನಂತರ ಅಯ್ಯರ್​ ಪುನರಾಗಮನ ಮಾಡುವುದು ಕಷ್ಟವಾಗಿದೆ. ಇಂಗ್ಲೆಂಡ್ ಎದುರಿನ 3ನೇ ಟೆಸ್ಟ್​​ಗೆ ಅವಕಾಶ ಪಡೆದು ಮಿಂಚಿದ ಸರ್ಫರಾಜ್, ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಯಶಸ್ವಿಯಾದರು. ಅಲ್ಲದೆ, ಇದು ಅಯ್ಯರ್ ಸ್ಥಾನಕ್ಕೆ ಕುತ್ತು ತರುವಂತೆಯೂ ಮಾಡಿತು.

ಅಯ್ಯರ್​ ಕಂಬ್ಯಾಕ್​​ಗೆ ಅಬ್ಬರ ಅಗತ್ಯ

ದುಲೀಪ್ ಟ್ರೋಫಿಯಲ್ಲಿ ಅಯ್ಯರ್ ಅರ್ಧಶತಕ ಸಿಡಿಸಿದರೂ ಆಯ್ಕೆಗೇಕೆ ಪರಿಗಣಿಸಿಲ್ಲ ಎಂಬುದರ ಕುರಿತು ಅಯ್ಯರ್​ ಮನನ ಮಾಡಿಕೊಳ್ಳಬೇಕಿದೆ. ದೇಶೀಯ ರೆಡ್​ ಬಾಲ್ ಕ್ರಿಕೆಟ್​​ನಲ್ಲಿ ಇನ್ನಷ್ಟು ಸ್ಥಿರವಾಗಿ ಬ್ಯಾಟಿಂಗ್ ಮಾಡುವ ಅಗತ್ಯವಿದ್ದು, ಟೆಸ್ಟ್​​ನಲ್ಲಿ ತಂಡಕ್ಕೆ ತಮ್ಮ ಹೆಸರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಬೇಕು ಎಂದರೆ ದೊಡ್ಡ ದೊಡ್ಡ ಸ್ಕೋರ್ ಮಾಡುವುದು ಅಗತ್ಯವಾಗಿದೆ. ಇದೇ ವೇಳೆ ತನ್ನ ಸ್ಥಾನದಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾದ ಸರ್ಫರಾಜ್​ ಕಳಪೆ ಪ್ರದರ್ಶನ ನೀಡಬೇಕಾಗುತ್ತದೆ. ಹೀಗಿದ್ದಾಗ ಮಾತ್ರ ಅಯ್ಯರ್​ ಕಂಬ್ಯಾಕ್ ಮಾಡಲು ಸಾಧ್ಯವಾಗುತ್ತದೆ. ತನ್ನ ಅದ್ಭುತ ಪ್ರದರ್ಶನದ ಮೂಲಕ ಆಯ್ಕೆದಾರರ ಮೇಲೆ ಒತ್ತಡ ಹಾಕಲೇಬೇಕು.

ಒಂದು ವೇಳೆ ಸರ್ಫರಾಜ್ ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನ ನೀಡುವಲ್ಲಿ ಸಫಲರಾದರೆ, ಅಯ್ಯರ್​ ಎಷ್ಟೇ ಅತ್ಯುತ್ತಮ ಸ್ಕೋರ್ ಮಾಡಿದರೂ ಅದರ ಲಾಭ ಸಿಗುವುದಿಲ್ಲ. ಹೀಗಾಗಿ ಸಿಕ್ಕ ಪ್ರತಿಯೊಂದು ಅವಕಾಶವನ್ನೂ ಸರಿಯಾಗಿ ಉಪಯೋಗಿಸಿಕೊಂಡು ಬಿಸಿಸಿಐ, ಸೆಲೆಕ್ಟರ್ಸ್​, ಟೀಮ್ ಮ್ಯಾನೇಜ್ಮೆಂಟ್ ನಂಬಿಕೆಯನ್ನು ಉಳಿಸಿಕೊಂಡು ಮತ್ತೆ ಭಾರತ ತಂಡಕ್ಕೆ ಅವಕಾಶ ಪಡೆಯಲು ತಾನೇ ದೊಡ್ಡ ಹೋರಾಟ ನಡೆಸಬೇಕಿದೆ. ಶ್ರೇಯಸ್ 24 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 36.96 ಸರಾಸರಿಯಲ್ಲಿ 1 ಶತಕ, 5 ಅರ್ಧಶತಕ ಸಹಾಯದಿಂದ 811 ರನ್ ಗಳಿಸಿದ್ದಾರೆ. 2021ರ ಡಿಸೆಂಬರ್​​ನಲ್ಲಿ ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಶತಕ ಗಳಿಸಿದ್ದರು. ಆದರೆ ಇದೇ ಮೊದಲ ಹಾಗೂ ಕೊನೆಯ ಟೆಸ್ಟ್ ಸೆಂಚುರಿಯಾಗಿದೆ.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.