ಇಂಗ್ಲೆಂಡ್ ವಿಶ್ವದಾಖಲೆ, 147 ವರ್ಷಗಳ ಟೆಸ್ಟ್ ಕ್ರಿಕೆಟ್ನಲ್ಲಿ 5 ಲಕ್ಷ ರನ್ ಪೂರೈಸಿದ ಆಂಗ್ಲರು; ಸನಿಹದಲ್ಲಿ ಆಸ್ಟ್ರೇಲಿಯಾ, ದೂರದಲ್ಲಿ ಭಾರತ!
England World Record: ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಇಂಗ್ಲೆಂಡ್ ಕ್ರಿಕೆಟ್ ತಂಡವು ಟೆಸ್ಟ್ನಲ್ಲಿ 5 ಲಕ್ಷ ರನ್ ಪೂರೈಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದೆ.
147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ವಿಶೇಷ ಮೈಲಿಗಲ್ಲೊಂದನ್ನು ನೆಟ್ಟಿದೆ. ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬ್ರಿಟಿಷ್ ತಂಡ, ದೀರ್ಘ ಸ್ವರೂಪದ ಕ್ರಿಕೆಟ್ನಲ್ಲಿ ಬರೋಬ್ಬರಿ 5 ಲಕ್ಷ ರನ್ ಪೂರೈಸಿದೆ. ಆಂಗ್ಲರನ್ನು ಹೊರತುಪಡಿಸಿ ಬೇರೆ ಯಾವ ತಂಡವೂ ಸಾಧನೆ ಮಾಡಿಲ್ಲ. ಹೀಗಾಗಿ ಟೆಸ್ಟ್ 5 ಲಕ್ಷ ರನ್ ಪೂರ್ಣಗೊಳಿಸಿದ ವಿಶ್ವದ ಮೊದಲ ತಂಡ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇತಿಹಾಸದಲ್ಲಿ 1,082ನೇ ಟೆಸ್ಟ್ ಆಡುತ್ತಿರುವ ಇಂಗ್ಲೆಂಡ್, ದೀರ್ಘ ಸ್ವರೂಪದ ಕ್ರಿಕೆಟ್ನಲ್ಲಿ 5,00,000 ರನ್ ಗಳಿಸಿದ ಮೊದಲ ತಂಡ ಎಂಬ ವಿಶ್ವದಾಖಲೆ ನಿರ್ಮಿಸಿದೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ಬೃಹತ್ ಮೈಲುಗಲ್ಲು ಸಾಧಿಸಿದೆ. ಪ್ರತಿ ವರ್ಷ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡುವ ಕ್ರಿಕೆಟ್ ಜನಕರ ತಂಡ ಬ್ಯಾಟ್‌ನಿಂದ ಗಳಿಸಿದ ಅರ್ಧ ಮಿಲಿಯನ್ ರನ್‌ಗಳ ಪರ್ವತ ತಲುಪಿದೆ.
ಸನಿಹದಲ್ಲಿ ಆಸ್ಟ್ರೇಲಿಯಾ, ದೂರದಲ್ಲಿ ಭಾರತ!
ಆಸ್ಟ್ರೇಲಿಯಾ ಕ್ರಿಕೆಟ್ ತಂಡ 2ನೇ ಸ್ಥಾನದಲ್ಲಿದ್ದರೂ 5 ಲಕ್ಷ ರನ್ ಮುಟ್ಟಲು ಇನ್ನೂ 70 ಸಾವಿರ ರನ್‌ಗಳ ಅಗತ್ಯ ಇದೆ. ಇದು ಸನಿಹವಾದರೂ 70 ಸಾವಿರ ರನ್ ಗಳಿಸಲು ಹಲವು ವರ್ಷಗಳು ಬೇಕಾಗಬಹುದು. ಮತ್ತೊಂದೆಡೆ ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿದ್ದು, 5 ಲಕ್ಷ ರನ್ ಪೂರೈಸಲು ಬಹುದೂರಲ್ಲಿದೆ. ಇದುವರೆಗೂ 2 ಲಕ್ಷ 79 ಸಾವಿರ ರನ್ ಗಳಿಸಿದೆ. ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿರುವ ಕಾರಣ ಈ ದಾಖಲೆ ಬರೆಯಲು ಸಾಧ್ಯವಾಯಿತು.
ನ್ಯೂಜಿಲೆಂಡ್ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್, ಮೊದಲ ಇನ್ನಿಂಗ್ಸ್ನಲ್ಲಿ 280 ರನ್, ಎರಡನೇ ಇನ್ನಿಂಗ್ಸ್ 378 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಒಟ್ಟಾರೆ 658 ರನ್ ಸಿಡಿಸಿ ಈ ದಾಖಲೆ ಬರೆದಿದೆ. ಇಂಗ್ಲೆಂಡ್ ಮೊದಲ ಟೆಸ್ಟ್ನಲ್ಲಿ 603 ರನ್ ಪೇರಿಸಿತ್ತು. ಎಲ್ಲಾ ತಂಡಗಳಿಗಿಂತ ಇಂಗ್ಲೆಂಡ್ ಅತ್ಯಧಿಕ ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಭಾರತ ತಂಡದ ಇದರಲ್ಲಿ ಅರ್ಧದಷ್ಟು ಪಂದ್ಯಗಳನ್ನಾಡಿದೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡಗಳು
5,00,126 - ಇಂಗ್ಲೆಂಡ್ (1082 ಪಂದ್ಯಗಳು, 18,954 ಇನ್ನಿಂಗ್ಸ್)
4,29,000 - ಆಸ್ಟ್ರೇಲಿಯಾ (868 ಪಂದ್ಯಗಳು, 15,183 ಇನ್ನಿಂಗ್ಸ್)
2,78,751 - ಭಾರತ (586 ಪಂದ್ಯಗಳು, 10,119 ಇನ್ನಿಂಗ್ಸ್)
ಪ್ರಸ್ತುತ ವೆಲ್ಲಿಂಗ್ಟನ್‌ನಲ್ಲಿ ಆಡುತ್ತಿರುವ ಇಂಗ್ಲೆಂಡ್ vs ನ್ಯೂಜಿಲೆಂಡ್ ಟೆಸ್ಟ್ ಮತ್ತು ಅಡಿಲೇಡ್‌ನಲ್ಲಿ ಆಡುತ್ತಿರುವ ಭಾರತ vs ಆಸ್ಟ್ರೇಲಿಯಾ ಟೆಸ್ಟ್- ಎರಡೂ ಟೆಸ್ಟ್‌ಗಳಲ್ಲಿ ಗಳಿಸಿದ ರನ್‌ಗಳು ಇದಕ್ಕೆ ಸೇರ್ಪಡೆಯಾಗುತ್ತವೆ.
ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ನಡೆಸಿದ್ದು, 280 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕಿವೀಸ್ 125 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಎರಡನೇ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 378 ರನ್ ಗಳಿಸಿದೆ. ಇದೇ ವೇಳೆ ಜೋ ರೂಟ್ 36ನೇ ಶತಕದತ್ತ ದಾಪುಗಾಲಿಟ್ಟಿದ್ದಾರೆ. ಒಟ್ಟು 533 ರನ್‌ಗಳ ಮುನ್ನಡೆಯಲ್ಲಿದೆ ಇಂಗ್ಲೆಂಡ್.