ಟಿ20 ವಿಶ್ವಕಪ್‌ನಲ್ಲಿ ಆಡಲ್ಲ ಎಂದ ಬೆನ್ ಸ್ಟೋಕ್ಸ್; ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಭಾರಿ ಹೊಡೆತ
Ben Stokes: ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ತಂಡದಿಂದ ಬೆನ್ ಸ್ಟೋಕ್ಸ್ ಹೊರಗುಳಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಆಲ್‌ರೌಂಡರ್ ನಿರ್ಧಾರವು ಆಯ್ಕೆದಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಬಾರಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಹಾಲಿ ಚಾಂಪಿಯನ್ ಇಂಗ್ಲೆಂಡ್ (England Cricket team) ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ಆಂಗ್ಲರ ಟೆಸ್ಟ್ ತಂಡದ ನಾಯಕ ಹಾಗೂ ಸ್ಫೋಟಕ ಆಟಗಾರ ಬೆನ್ ಸ್ಟೋಕ್ಸ್ (Ben Stokes), ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಘೋಷಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಕಳೆದ ಆವೃತ್ತಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ತಂಡವು ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಸ್ಟೋಕ್ಸ್ ನಿರ್ಣಾಯಕ ಪಾತ್ರ ವಹಿಸಿದ್ದರು. 2022ರಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಸ್ಟೋಕ್ಸ್ 52 ರನ್ ಗಳಿಸಿದ್ದರು. ಅಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿ ಟ್ರೋಫಿ ಎತ್ತಿಹಿಡಿಯುವಲ್ಲಿ ನೆರವಾಗಿದ್ದರು.
ಈ ವರ್ಷ ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದೆ. ಹಾಲಿ ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಇಂಗ್ಲೆಂಡ್, ಬಲಿಷ್ಠ ತಂಡವನ್ನು ಪಂದ್ಯಾವಳಿಗೆ ಆಯ್ಕೆ ಮಾಡುವ ಲೆಕ್ಕಚಾರದಲ್ಲಿತ್ತು. ಆದರೆ, ಐಸಿಸಿ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರಕ್ಕೆ ಸ್ಟೋಕ್ಸ್ ಬಂದಿರುವುದು, ಆಯ್ಕೆದಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ತಂಡದ ಪರ ಆಡುವ ಸಲುವಾಗಿ ಏಕದಿನ ನಿವೃತ್ತಿಯನ್ನು ಸ್ಟೋಕ್ಸ್ ಹಿಂಪಡೆದಿದ್ದರು. ಆದರೆ, ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ತಂಡವು ಅರ್ಧದಲ್ಲೇ ಹೊರಬಿತ್ತು. ಪಂದ್ಯಾವಳಿಯಿಂದಾಗಿ ತಮ್ಮ ಮೊಣಕಾಲು ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದ ಸ್ಟೋಕ್ಸ್, ಆ ಬಳಿಕ ನವೆಂಬರ್ ತಿಂಗಳಲ್ಲಿ ಸರ್ಜರಿಗೆ ಒಳಗಾದರು. ಈ ವರ್ಷದ ಆರಂಭದಲ್ಲಿ ನಡೆದ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲೂ ತಂಡವನ್ನು ಮುನ್ನಡೆಸಿದ್ದರು.
ಫಿಟ್‌ನೆಟ್ ಮತ್ತು ಕೆಲಸದ ಒತ್ತಡವನ್ನು ನಿಭಾಯಿಸುವ ಸಲುವಾಗಿ, ಸ್ಟೋಕ್ಸ್ ಈ ಬಾರಿಯ ಐಪಿಎಲ್‌ನಿಂದಲೂ ಹೊರಗುಳಿದರು. 2023ರಲ್ಲಿ ಸಿಎಸ್‌ಕೆ ತಂಡದ ದುಬಾರಿ ಆಟಗಾರನಾದ ಸ್ಟೋಕ್ಸ್, 2024ರ ಆವೃತ್ತಿಗೂ ಮುಂಚಿತವಾಗಿಯೇ ಪಂದ್ಯಾವಳಿಯಿಂದ ಹೊರಗುಳಿಯುವುದಾಗಿ ಹೇಳಿದ್ದರು.
ಭಾರತದಲ್ಲಿ ನಡೆದ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಸ್ಟೋಕ್ಸ್, ಸರಣಿಯನ್ನು 4-1 ಅಂತರದಿಂದ ಸೋತಿತ್ತು. ಇದೀಗ ಮಹತ್ವದ ಟಿ20 ವಿಶ್ವಕಪ್ ಪಂದ್ಯಾವಳಿಯಿಂದ ಸ್ಟೋಕ್ಸ್ ಹೊರಗುಳಿದಿರುವುದು ಆಂಗ್ಲರಿಗೆ ಭಾರಿ ನಷ್ಟವಾಗಲಿದೆ.