ವಿಶಾಖಪಟ್ಟಣ ಟೆಸ್ಟ್ ಸೋಲಿನ ಬೆನ್ನಲ್ಲೇ ಭಾರತ ತೊರೆದ ಇಂಗ್ಲೆಂಡ್; 3ನೇ ಟೆಸ್ಟ್‌ಗೂ ಮುನ್ನ ಸ್ಟೋಕ್ಸ್ ಪಡೆ ಹೋಗಿದ್ದೆಲ್ಲಿ?
Ben Stokes: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟಿಗರು ಅಬುಧಾಬಿಗೆ ತೆರಳಿದ್ದಾರೆ. ವಿಶ್ರಾಂತಿ ಪಡೆಯುವ ಸಲುವಾಗಿ ತಂಡ ಭಾರತ ತೊರೆದಿದೆ. ಮೂರನೇ ಟೆಸ್ಟ್‌ಗೂ ಮುನ್ನ ತಂಡ ರಾಜ್‌ಕೋಟ್‌ಗೆ ಮರಳಲಿದೆ.
ಭಾರತ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 106 ರನ್‌ಗಳಿಂದ ಸೋತ ಇಂಗ್ಲೆಂಡ್ ಕ್ರಿಕೆಟ್ ತಂಡದ (England cricket team) ಆಟಗಾರರು ಭಾರತ ತೊರೆದಿದ್ದಾರೆ. ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಕೆಲವು ದಿನಗಳ ಅಂತರ ಇರುವುದರಿಂದ ತಂಡವು ಅಬುಧಾಬಿಗೆ ಹಾರಿದೆ.
ಹೈದರಾಬಾದ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಂತೆ, ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಪಂದ್ಯ ಕೂಡಾ ನಾಲ್ಕು ದಿನಗಳಲ್ಲಿ ಮುಕ್ತಾಯಗೊಂಡಿತು. ಆತಿಥೇಯ ಭಾರತವು ಆಲ್‌ರೌಂಡ್ ಪ್ರದರ್ಶನದೊಂದಿಗೆ ಸರಣಿ ಸಮಬಲಗೊಳಿಸಿತು. ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿ ನಿರಾಳವಾಯ್ತು. ಮುಂದೆ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಎಂಟು ದಿನಗಳ ಅಂತರವಿದೆ. ಹೀಗಾಗಿ ಬೆನ್ ಸ್ಟೋಕ್ಸ್ ನೇತೃತ್ವದ ಆಂಗ್ಲರ ತಂಡವು ವಿಶ್ರಾಂತಿ ಪಡೆಯಲು ನಿರ್ಧರಿಸಿದೆ. ಫೆಬ್ರವರಿ 15ರಂದು ಮೂರನೇ ಪಂದ್ಯ ಆರಂಭವಾಗಲಿದೆ.
ಇದನ್ನೂ ಓದಿ | ನೂತನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್; ಮೊದಲ ಬಾರಿಗೆ ನಂ 1 ಪಟ್ಟ ಅಲಂಕರಿಸಿ ದಾಖಲೆ ಬರೆದ ಬುಮ್ರಾ, ಅಗ್ರಸ್ಥಾನದಿಂದ ಕುಸಿದ ಅಶ್ವಿನ್
ರಾಜ್‌ಕೋಟ್ ಟೆಸ್ಟ್‌ಗೂ ಮುನ್ನ, ಇಂಗ್ಲೆಂಡ್ ಕ್ರಿಕೆಟಿಗರು ಅಬುಧಾಬಿಯಲ್ಲಿ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಗಾಲ್ಫ್ ಸೇರಿದಂತೆ ಇತರ ಚಟುವಟಿಕೆಗಳೊಂದಿಗೆ ತಂಡ ವಿಶ್ರಾಂತಿ ಪಡೆಯಲಿದೆ.
ತಾಜಾತನ ಪಡೆಯಲು ಅಬುಧಾಬಿ ಪ್ರವಾಸ
ಈ ವಿರಾಮವು ಇಂಗ್ಲೆಂಡ್ ಆಟಗಾರರಿಗೆ ತಾಜಾತನವನ್ನು ನೀಡುತ್ತದೆ ಎಂದು ತಂಡದ ನಾಯಕ ನಾಯಕ ಸ್ಟೋಕ್ಸ್ ಮತ್ತು ಮುಖ್ಯ ತರಬೇತುದಾರ ಬ್ರೆಂಡನ್ ಮೆಕಲಮ್ ನೇತೃತ್ವದ ತಂಡದ ಮ್ಯಾನೇಜ್‌ಮೆಂಟ್ ತಿಳಿಸಿದೆ. ಆ ಮೂಲಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ತಂಡ ತಂತ್ರ ರೂಪಿಸಿದೆ. ಈ ಹಿಂದೆ ಅಲೆಸ್ಟರ್ ಕುಕ್ ಬಳಗವು 2012ರಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತವನ್ನು ಸೋಲಿಸಿ ದಾಖಲೆ ನಿರ್ಮಿಸಿತ್ತು.
ಭಾರತದಲ್ಲಿ ಸರಣಿಯ ಆರಂಭಕ್ಕೂ ಮುನ್ನ ಅಬುಧಾಬಿ ಶಿಬಿರದ ಸಮಯದಲ್ಲಿ, ಇಂಗ್ಲೆಂಡ್ ತಂಡವು ಭಾರತೀಯ ಸ್ಪಿನ್ನರ್‌ಗಳನ್ನು ಎದುರಿಸುವ ಮಾರ್ಗಗಳ ಸಾಕಷ್ಟು ಚರ್ಚೆ ನಡೆಸಿತ್ತು. ಅದರಂತೆಯೇ ಮೊದಲ ಪಂದ್ಯದಲ್ಲಿ ತಂಡ ಗೆಲುವು ಸಾಧಿಸಿತು. ಆದರೆ ಎರಡನೇ ಟೆಸ್ಟ್‌ನಲ್ಲಿ ಭಾರತದ ಅನುಭವಿ ಜಸ್ಪ್ರೀತ್ ಬುಮ್ರಾ ಮಾರಕ ರಿವರ್ಸ್ ಸ್ವಿಂಗ್ ದಾಳಿಗೆ ತಂಡ ಸಿಲುಕಿತು. ಪರಿಣಾಮ ಪಂದ್ಯದಲ್ಲಿ ಸೋಲೊಪ್ಪಿತು.
ಇದನ್ನೂ ಓದಿ | ಬುಮ್ರಾ, ಅಶ್ವಿನ್ ಮಾರಕ ದಾಳಿಗೆ ಮಣಿದ ಇಂಗ್ಲೆಂಡ್; ಎರಡನೇ ಟೆಸ್ಟ್‌ನಲ್ಲಿ ಭಾರತಕ್ಕೆ 106 ರನ್ ಗೆಲುವು, ಸರಣಿ ಸಮಬಲ
ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಅನ್ನು 292 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಭಾರತವು 106 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಇದನ್ನೂ ಓದಿ | ಅವಳಿ ಶತಕದೊಂದಿಗೆ ವಿರಾಟ್, ಜೋ ರೂಟ್ ಹಿಂದಿಕ್ಕಿದ ಕೇನ್ ವಿಲಿಯಮ್ಸನ್; ದಕ್ಷಿಣ ಆಫ್ರಿಕಾ ವಿರುದ್ಧ ಕಿವೀಸ್ ಮುನ್ನಡೆ
(This copy first appeared in Hindustan Times Kannada website. To read more like this please logon to kannada.hindustantimes.com)