ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 5 ವಿಕೆಟ್ ಜಯ; ಟಿ20 ವಿಶ್ವಕಪ್ ಸೂಪರ್ 8 ಹಂತಕ್ಕೆ ಪ್ರವೇಶಿಸಿದ ಇಂಗ್ಲೆಂಡ್
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 5 ವಿಕೆಟ್ ಜಯ; ಟಿ20 ವಿಶ್ವಕಪ್ ಸೂಪರ್ 8 ಹಂತಕ್ಕೆ ಪ್ರವೇಶಿಸಿದ ಇಂಗ್ಲೆಂಡ್

ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 5 ವಿಕೆಟ್ ಜಯ; ಟಿ20 ವಿಶ್ವಕಪ್ ಸೂಪರ್ 8 ಹಂತಕ್ಕೆ ಪ್ರವೇಶಿಸಿದ ಇಂಗ್ಲೆಂಡ್

ಸ್ಕಾಟ್ಲೆಂಡ್ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಸೂಪರ್ ಎಂಟರ ಘಟ್ಟಕ್ಕೆ ಪ್ರವೇಶಿಸಿದೆ.

ಟಿ20 ವಿಶ್ವಕಪ್ ಸೂಪರ್ 8 ಹಂತಕ್ಕೆ ಪ್ರವೇಶಿಸಿದ ಇಂಗ್ಲೆಂಡ್
ಟಿ20 ವಿಶ್ವಕಪ್ ಸೂಪರ್ 8 ಹಂತಕ್ಕೆ ಪ್ರವೇಶಿಸಿದ ಇಂಗ್ಲೆಂಡ್ (AP)

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು ಸ್ಕಾಟ್ಲೆಂಡ್‌ (Australia vs Scotland) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಟಿ20 ವಿಶ್ವಕಪ್ 2024ರಲ್ಲಿ ಇಂಗ್ಲೆಂಡ್‌ ತಂಡವು ಸೂಪರ್‌ 8 ಹಂತಕ್ಕೆ ಲಗ್ಗೆ ಹಾಕಿದೆ. ದಿನದ ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸಿತ್ತು. ಆದರೆ, ಸೂಪರ್‌ 8 ಪ್ರವೇಶಕ್ಕೆ ಜೋಸ್ ಬಟ್ಲರ್ ಪಡೆಗೆ ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾದ ಗೆಲುವು ಅನಿವಾರ್ಯವಾಗಿತ್ತು. ಅದರಂತೆಯೇ ಕಾಂಗರೂಗಳು ರೋಚಕ ಗೆಲುವು ಸಾಧಿಸಿದ್ದಾರೆ. ಬಿ ಗುಂಪಿನಲ್ಲಿ ಇಂಗ್ಲೆಂಡ್‌ ಹಾಗೂ ಸ್ಕಾಟ್ಲೆಂಡ್‌ ತಂಡಗಳು ತಲಾ 5 ಅಂಕಗಳನ್ನು ಹೊಂದಿದ್ದರೂ, ರನ್‌ ರೇಟ್‌ ಲೆಕ್ಕಾಚಾರದಲ್ಲಿ ಇಂಗ್ಲೆಂಡ್‌ ತುಸು ಮೇಲಿದೆ. ಹೀಗಾಗಿ ಸ್ಕಾಟ್ಲೆಂಡ್‌ ಟೂರ್ನಿಯಿಂದ ಹೊರಬಿದ್ದಿದೆ.

ಆಸೀಸ್‌ ವಿರುದ್ಧ ಮೊದಲು ಬ್ಯಾಟಿಂಗ್‌ ನಡೆಸಿದ ಸ್ಕಾಟ್ಲೆಂಡ್‌ 180 ರನ್‌ ಪೇರಿಸಿತು. ಬ್ರೆಂಡನ್‌ ಮೆಕ್ಮುಲ್ಲನ್ ಕೇವಲ 34 ಎಸೆತಗಳಲ್ಲಿ 6 ಸ್ಫೋಟಕ ಸಿಕ್ಸರ್‌ ಸಹಿತ 60 ರನ್‌ ಸಿಡಿಸಿದರು. 181 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ‌, 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಟಿಮ್‌ ಡೇವಿಡ್‌ ಗೆಲುವಿನ ಸಿಕ್ಸರ್‌ ಬಾರಿಸಿದರು.

ಚೇಸಿಂಗ್‌ ವೇಳೆ ಒಂದು ಹಂತದಲ್ಲಿ ಆಸಿಸ್‌ 3 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿತ್ತು. ಈ ವೇಳೆ ಟೂರ್ನಿಯ ಯಶಸ್ವಿ ಬ್ಯಾಟರ್‌ಗಳಾದ ಟ್ರಾವಿಸ್ ಹೆಡ್ (68) ಮತ್ತು ಮಾರ್ಕಸ್ ಸ್ಟೊಯ್ನಿಸ್ (59) ತಲಾ ಅರ್ಧಶತಕ ಸಿಡಿಸಿ ತಂಡವನ್ನು ಮೇಲೆತ್ತಿದರು. ಇಬ್ಬರು ಅನುಭವಿ ದಾಂಡಿಗರು ಕೇವಲ 44 ಎಸೆತಗಳಲ್ಲಿ ಮೂರನೇ ವಿಕೆಟ್‌ಗೆ 80 ರನ್‌ಗಳ ಜೊತೆಯಾವಾಡಿದರು.

ಹೆಡ್ ಕೇವಲ 49 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 68 ರನ್ ಗಳಿಸಿದರು. ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿದ ಸ್ಟೋಯ್ನಿಸ್, ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿ ಕೇವಲ 29 ಎಸೆತಗಳಲ್ಲಿ 59 ರನ್ ಪೇರಿಸಿದರು. ಆರಂಭಿಕರಾದ ಡೇವಿಡ್ ವಾರ್ನರ್ (1), ನಾಯಕ ಮಿಚೆಲ್ ಮಾರ್ಷ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ವಿಫಲರಾದರು.

ಸ್ಕಾಟ್ಲೆಂಡ್‌ ಸ್ಪೋಟಕ ಬ್ಯಾಟಿಂಗ್

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ 5 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತ್ತು. ಆರಂಭಿಕ ಆಟಗಾರ ಮೈಕೆಲ್ ಜೋನ್ಸ್ ಕೇವಲ ಎರಡು ರನ್‌ಗಳಿಗೆ ಔಟಾದರು. ಆಸ್ಟನ್ ಅಗರ್ ಮೊದಲ ಓವರ್‌ನಲ್ಲಿ ಪ್ರಮುಖ ವಿಕೆಟ್‌ ಪಡೆದರು. ಈ ವೇಳೆ ಮೆಕ್ಮುಲ್ಲನ್ ಮತ್ತು ಜಾರ್ಜ್ ಮುನ್ಸೆ ಜೋಡಿ ಅತ್ಯುತ್ತಮ ಆಟ ಪ್ರದರ್ಶಿಸಿದರು. ಇವರಿಬ್ಬರು ಕೇವಲ 48 ಎಸೆತಗಳಲ್ಲಿ ಎರಡನೇ ವಿಕೆಟ್‌ಗೆ 89 ರನ್ ಒಟ್ಟುಗೂಡಿಸಿದರು. ಮುನ್ಸೆ 23 ಎಸೆತಗಳಲ್ಲಿ 35 ರನ್ ಗಳಿಸಿ ತಮ್ಮ ಜವಾಬ್ದಾರಿ ಪೂರೈಸಿದರು. ಮತ್ತೊಂದೆಡೆ ಬೆರಿಂಗ್ಟನ್ 31 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ ಅಜೇಯ 42 ರನ್ ಗಳಿಸಿದರು.

ಆಸೀಸ್‌ ತಂಡವು ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿದೆ. ಅತ್ತ ಕಾಂಗರೂಗಳ ಗೆಲುವನಿಂದ ಇಂಗ್ಲೆಂಡ್‌ ತಂಡ ಖುಷಿಯಾಗಿದೆ. ಬಟ್ಲರ್‌ ಪಡೆ ಕೂಡಾ ಸೂಪರ್‌ 8ಕ್ಕೆ ಬಡ್ತಿ ಪಡೆದಿದೆ.

Whats_app_banner