ಐಪಿಎಲ್‌ ತೊರೆದು ತವರಿಗೆ ಮರಳಿದ ವಿಲ್ ಜ್ಯಾಕ್ಸ್, ಬಟ್ಲರ್; ಪ್ಲೇಆಫ್‌ಗೂ ಮುನ್ನ ಆರ್‌ಸಿಬಿ-ರಾಜಸ್ಥಾನಕ್ಕೆ ಭಾರಿ ಹೊಡೆತ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌ ತೊರೆದು ತವರಿಗೆ ಮರಳಿದ ವಿಲ್ ಜ್ಯಾಕ್ಸ್, ಬಟ್ಲರ್; ಪ್ಲೇಆಫ್‌ಗೂ ಮುನ್ನ ಆರ್‌ಸಿಬಿ-ರಾಜಸ್ಥಾನಕ್ಕೆ ಭಾರಿ ಹೊಡೆತ

ಐಪಿಎಲ್‌ ತೊರೆದು ತವರಿಗೆ ಮರಳಿದ ವಿಲ್ ಜ್ಯಾಕ್ಸ್, ಬಟ್ಲರ್; ಪ್ಲೇಆಫ್‌ಗೂ ಮುನ್ನ ಆರ್‌ಸಿಬಿ-ರಾಜಸ್ಥಾನಕ್ಕೆ ಭಾರಿ ಹೊಡೆತ

ಐಪಿಎಲ್ 2024ರ ಲೀಗ್‌ ಹಂತದ ಪಂದ್ಯಗಳು ಪೂರ್ಣಗೊಳ್ಳುವುದಕ್ಕೂ ಮುನ್ನ, ಇಂಗ್ಲೆಂಡ್‌ ತಂಡದ ಹಲವು ಆಟಗಾರರು ಟೂರ್ನಿಗೆ ವಿದಾಯ ಹೇಳಿದ್ದಾರೆ. ಈಗಾಗಲೇ ಜೋಸ್‌ ಬಟ್ಲರ್‌, ವಿಲ್‌ ಜ್ಯಾಕ್ಟ್‌ ಹಾಗೂ ರೀಸ್‌ ಟಾಪ್ಲಿ ಜೊತೆಗೆ ಲಿಯಾಮ್‌ ಲಿವಿಂಗ್‌ಸ್ಟನ್‌ ಕೂಡಾ ತಮ್ಮ ಐಪಿಎಲ್‌ ತಂಡಗಳನ್ನು ತೆರೆದಿದ್ದಾರೆ.

ಐಪಿಎಲ್‌ ತೊರೆದು ತವರಿಗೆ ಮರಳಿದ ವಿಲ್ ಜ್ಯಾಕ್ಸ್, ಬಟ್ಲರ್
ಐಪಿಎಲ್‌ ತೊರೆದು ತವರಿಗೆ ಮರಳಿದ ವಿಲ್ ಜ್ಯಾಕ್ಸ್, ಬಟ್ಲರ್

ಐಪಿಎಲ್‌ನಲ್ಲಿ ಅಬ್ಬರಿಸುತ್ತಿರುವ ಇಂಗ್ಲೆಂಡ್‌ ಕ್ರಿಕೆಟಿಗರು ಒಬ್ಬೊಬ್ಬರಾಗಿ ತವರಿಗೆ ಮರಳುತ್ತಿದ್ದಾರೆ. ಪ್ಲೇಆಫ್‌ ಹಂತ ಸಮೀಪಿಸುತ್ತಿದ್ದಂತೆಯೇ ಹಲವು ಫ್ರಾಂಚೈಸ್‌ಗಳಿಗೆ ಚಿಂತೆ ಶುರುವಾಗಿದೆ. ಜೂನ್‌ ತಿಂಗಳಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಸಿದ್ಧತೆ ನಡೆಸುವ ಸಲುವಾಗಿ ಆಂಗ್ಲ ಕ್ರಿಕೆಟಿಗರು ಐಪಿಎಲ್‌ಗೆ ವಿದಾಯ ಹೇಳಲು ಶುರು ಮಾಡಿದ್ದಾರೆ. ಮೇ 22ರಿಂದ ಪಾಕಿಸ್ತಾನ ವಿರುದ್ಧದ 4 ಪಂದ್ಯಗಳ ಟಿ20 ಸರಣಿಯಲ್ಲಿ ಆಡಲು ಇಂಗ್ಲೆಂಡ್‌ ತಂಡ ಸಜ್ಜಾಗುತ್ತಿದ್ದು, ಇದರಲ್ಲಿ ಭಾಗವಹಿಸುವ ಸಲುವಾಗಿ ಆಟಗಾರರು ಐಪಿಎಲ್‌ ಪಂದ್ಯಾವಳಿಯಿಂದ ಅರ್ಧದಲ್ಲೇ ನಿರ್ಗಮಿಸಿದ್ದಾರೆ. ಸರಣಿ ಬಳಿಕ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಆಂಗ್ಲರು ತೆರಳಲಿದ್ದಾರೆ.

ರಾಜಸ್ಥಾನ ರಾಯಲ್ಸ್‌ ತಂಡದ ಆರಂಭಿಕ ಬ್ಯಾಟರ್‌ ಜೋಸ್ ಬಟ್ಲರ್ ಈಗಾಗಲೇ ಆರ್‌ಆರ್‌ ಕ್ಯಾಂಪ್ ತೊರೆದಿದ್ದಾರೆ. ಇದನ್ನು ಫ್ರಾಂಚೈಸ್‌ ಖಚಿತಪಡಿಸಿದೆ. ರಾಜಸ್ಥಾನ ಪರ ಈ ಬಾರಿ 11 ಪಂದ್ಯಗಳಲ್ಲಿ ಆಡಿರುವ ಬಟ್ಲರ್‌ 2 ಶತಕ ಸಹಿತ 359 ರನ್ ಗಳಿಸಿದ್ದಾರೆ. ಹೀಗಾಗಿ ಅನುಭವಿ ಆಟಗಾರನ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ.

ಅತ್ತ ಆರ್‌ಸಿಬಿಯ ಶತಕವೀರ ವಿಲ್‌ ಜ್ಯಾಕ್ಸ್ ಹಾಗೂ ವೇಗಿ ರೀಸ್‌ ಟಾಪ್ಲಿ ಕೂಡಾ ಆರ್‌ಸಿಬಿ ಕ್ಯಾಂಪ್‌ ತೊರೆದಿದ್ದಾರೆ. ಇದರಿಂದ ಪ್ಲೇಆಫ್‌ಗೆ ಲಗ್ಗೆ ಹಾಕಲು ಎದುರು ನೋಡುತ್ತಿರುವ ಆರ್‌ಸಿಬಿ ತಂಡಕ್ಕೆ ಎರಡೆರಡು ಆಘಾತವಾಗಿದೆ. ಈಗಾಗಲೇ ವಿಲ್‌ ಜ್ಯಾಕ್ಸ್‌ ಆಡುವ ಬಳಗದಲ್ಲಿ ನಿರಂತರವಾಗಿ ಸ್ಥಾನ ಪಡೆಯುತ್ತಿದ್ದಾರೆ. ಅಲ್ಲದೆ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ಜ್ಯಾಕ್ಸ್‌ ನಿರ್ಗಮನವು ತಂಡಕ್ಕೆ ಹಿನ್ನಡೆಯಾಗಲಿದೆ.

ಟೂರ್ನಿಯಲ್ಲಿ ಸತತ ಐದು ಗೆಲುವುಗಳೊಂದಿಗೆ 12 ಅಂಕಗಳನ್ನು ಸಂಪಾದಿಸಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು, +0.387 ನಿವ್ವಳ ರನ್ ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ತಂಡವು ಪ್ಲೇಆಫ್ ಹಂತಕ್ಕೆ ಲಗ್ಗೆ ಹಾಕುವ ಉತ್ಸಾಹದಲ್ಲಿದ್ದು, ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಉತ್ತಮ ಅಂತರದಿಂದ ಗೆದ್ದರೆ, ಮುಂದಿನ ಹಂತ ಪ್ರವೇಶಿಸುವ ಅವಕಾಶ ತಂಡಕ್ಕಿದೆ. ಆದರೆ, ಈ ಪಂದ್ಯಕ್ಕೆ ವಿಲ್‌ ಜ್ಯಾಕ್ಸ್‌ ಲಭ್ಯರಿರುವುದಿಲ್ಲ. ಹೀಗಾಗಿ ತಂಡವು ಫಾರ್ಮ್‌ನಲ್ಲಿ ಇಲ್ಲದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ಮತ್ತೆ ಕಣಕ್ಕಿಳಿಸುವ ಸಾಧ್ಯತೆ ಇದೆ.

ಅತ್ತ ಪಂಜಾಬ್‌ ಕಿಂಗ್ಸ್‌ ತಂಡದಿಂದ ಲಿಯಾಮ್ ಲಿವಿಂಗ್‌ಸ್ಟನ್‌ ಕೂಡಾ ಹೊರಬಿದ್ದಿದ್ದಾರೆ. ಆದರೆ, ಪಿಬಿಕೆಎಸ್‌ ತಂಡವು ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಹೀಗಾಗಿ ತಂಡಕ್ಕೆ ದೊಡ್ಡ ನಷ್ಟವಿಲ್ಲ.

ಆರ್‌ಸಿಬಿ ತಂಡವು ಪ್ಲೇಆಫ್‌ ಪ್ರವೇಶಿಸಬೇಕೆಂದರೆ, ಸಿಎಸ್‌ಕೆ ವಿರುದ್ಧ ಭಾರಿ ಅಂತರದಿಂದ ಗೆಲ್ಲಬೇಕು. ಒಂದು ವೇಳೆ ಮೊದಲು ಬ್ಯಾಟಿಂಗ್‌ ಮಾಡಿ 200 ರನ್ ಗಳಿಸಿದರೆ, ಸಿಎಸ್‌ಕೆ ತಂಡವನ್ನು 182 ರನ್‌ ಒಳಗೆ ಕಟ್ಟಿ ಹಾಕಬೇಕು. ಅಂದರೆ, ಕನಿಷ್ಠ 18 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳ ಅಂತರದಿಂದ ಗೆಲ್ಲಬೇಕು. ಒಂದು ವೇಳೆ ಸಿಎಸ್‌ಕೆ ತಂಡವು ಮೊದಲು ಬ್ಯಾಟಿಂಗ್‌ ಮಾಡಿ ಆರ್‌ಸಿಬಿಗೆ 201 ರನ್‌ ಗುರಿ ನೀಡಿದರೆ, ಆಗ ಆರ್‌ಸಿಬಿ ತಂಡವು ವೇಗವಾಗಿ ರನ್‌ ಚೇಸಿಂಗ್‌ ಮಾಡಬೇಕು. ಕನಿಷ್ಠ ಸರಿಸುಮಾರು 11 ಎಸೆತಗಳು ಬಾಕಿ ಉಳಿಸಿ ಗುರಿ ತಲುಪಬೇಕಾಗುತ್ತದೆ. ಹೀಗಾದರೆ ಆರ್‌ಸಿಬಿಯು ಸಿಎಸ್‌ಕೆ ತಂಡದ ರನ್‌ ರೇಟ್‌ ಮೀರಿಸಿ ಅಂಕಪಟ್ಟಿಯಲ್ಲಿ ಮೇಲೇರಲಿದೆ.

Whats_app_banner