ಬಶೀರ್ ಬಳಿಕ ರೆಹಾನ್ ಅಹ್ಮದ್‌ಗೂ ವೀಸಾ ಸಮಸ್ಯೆ; ರಾಜ್‌ಕೋಟ್ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್ ಕ್ರಿಕೆಟಿಗನ ತಡೆದ ಅಧಿಕಾರಿಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಬಶೀರ್ ಬಳಿಕ ರೆಹಾನ್ ಅಹ್ಮದ್‌ಗೂ ವೀಸಾ ಸಮಸ್ಯೆ; ರಾಜ್‌ಕೋಟ್ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್ ಕ್ರಿಕೆಟಿಗನ ತಡೆದ ಅಧಿಕಾರಿಗಳು

ಬಶೀರ್ ಬಳಿಕ ರೆಹಾನ್ ಅಹ್ಮದ್‌ಗೂ ವೀಸಾ ಸಮಸ್ಯೆ; ರಾಜ್‌ಕೋಟ್ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್ ಕ್ರಿಕೆಟಿಗನ ತಡೆದ ಅಧಿಕಾರಿಗಳು

Rehan Ahmed: ಅಬುಧಾಬಿಯಿಂದ ಚಾರ್ಟರ್ಡ್ ವಿಮಾನದಲ್ಲಿ ಇಂಗ್ಲೆಂಡ್‌ ತಂಡ ರಾಜ್‌ಕೋಟ್‌ಗೆ ಬಂದಿದೆ. 10 ದಿನಗಳ ವಿರಾಮದ ನಂತರ ಭಾರತಕ್ಕೆ ಮರಳಿದ ಬಳಿಕ, ಆಂಗ್ಲ ಆಟಗಾರನೊಬ್ಬ ವೀಸಾ ಸಮಸ್ಯೆ ಎದುರಿಸಿದ್ದಾರೆ. ಹೀಗಾಗಿ ಸ್ಪಿನ್ನರ್‌ ರೆಹಾನ್‌ ಅಹ್ಮದ್‌ ಅವರನ್ನು ಭಾರತದ ಇಮಿಗ್ರೇಷನ್ ಅಧಿಕಾರಿಗಳು ತಡೆದಿದ್ದಾರೆ.

ರಾಜ್‌ಕೋಟ್ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ರೆಹಾನ್ ಅಹ್ಮದ್‌ ತಡೆದ ಅಧಿಕಾರಿಗಳು
ರಾಜ್‌ಕೋಟ್ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ರೆಹಾನ್ ಅಹ್ಮದ್‌ ತಡೆದ ಅಧಿಕಾರಿಗಳು (PTI)

ಇಂಗ್ಲೆಂಡ್‌ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ (Rehan Ahmed) ಸಿಂಗಲ್ ಎಂಟ್ರಿ ವೀಸಾದೊಂದಿಗೆ ಭಾರತಕ್ಕೆ ಆಗಮಿಸಿ ಸಂಕಷ್ಟ ಅನುಭವಿಸಿದರು. ಭಾರತ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯಕ್ಕಾಗಿ ಇಂಗ್ಲೆಂಡ್‌ ತಂಡದೊಂದಿಗೆ ರಾಜ್‌ಕೋಟ್‌ಗೆ ಆಗಮಿಸಿದ ಅವರನ್ನು ಭಾರತದ ಇಮಿಗ್ರೇಷನ್ ಅಧಿಕಾರಿಗಳು ತಡೆದು ಪ್ರಶ್ನಿಸಿದ್ದಾರೆ.

ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದ ಬಳಿಕ, ಇಂಗ್ಲೆಂಡ್‌ ತಂಡವು ಅಬುಧಾಬಿಗೆ ಹಾರಿತ್ತು. ಅಲ್ಲಿಂದ ಮತ್ತೆ ಆಂಗ್ಲರ ಪಡೆ ಭಾರತಕ್ಕೆ ಮರಳಿದೆ. ಸಿಂಗಲ್ ಎಂಟ್ರಿ ವೀಸಾ ಹೊಂದಿರುವ ವ್ಯಕ್ತಿಗೆ ಭಾರತದಿಂದ ನಿರ್ಗಮಿಸಿ ಮತ್ತೆ ಭಾರತಕ್ಕೆ ಪ್ರವೇಶಿಸಲು ಅನುಮತಿ ಇಲ್ಲ. ಅಬುಧಾಬಿಯಿಂದ ನೇರವಾಗಿ ರಾಜ್‌ಕೋಟ್‌ಗೆ ಚಾರ್ಟರ್ಡ್ ವಿಮಾನದಲ್ಲಿ ತಂಡ ಬಂದಿದೆ. ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯದ ನಡುವೆ ಅಬುಧಾಬಿಯಲ್ಲಿ 10 ದಿನಗಳನ್ನು ಕಳೆದ ಇಂಗ್ಲೆಂಡ್ ತಂಡ ಭಾರತಕ್ಕೆ ಮರಳಿದೆ.

ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಿಂದ ಕೆಎಲ್ ರಾಹುಲ್ ಔಟ್; ರಾಜ್‌ಕೋಟ್‌ ಪಂದ್ಯಕ್ಕೆ ಮತ್ತೋರ್ವ ಕನ್ನಡಿಗ ಆಯ್ಕೆ

“ಮುಂದಿನ ಎರಡು ದಿನಗಳಲ್ಲಿ ವೀಸಾವನ್ನು ಮತ್ತೆ ಒದಗಿಸುವಂತೆ ಇಂಗ್ಲೆಂಡ್ ತಂಡಕ್ಕೆ ಸೂಚಿಸಲಾಗಿದೆ. ಆಟಗಾರನಿಗೆ ತಂಡದ ಇತರರೊಂದಿಗೆ ಭಾರತವನ್ನು ಪ್ರವೇಶಿಸಲು ಅವಕಾಶ ನೀಡಲಾಗಿದೆ. ಅವರು ಮಂಗಳವಾರ ಅಭ್ಯಾಸ ಅವಧಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೀಸಾ ಸಮಸ್ಯೆ ಎದುರಿಸಿದ್ದ ಶೋಯೆಬ್ ಬಶೀರ್

ವಾರಗಳ ಹಿಂದೆ, ಇಂಗ್ಕೆಂಡ್‌ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್ ಕೂಡಾ ಭಾರತಕ್ಕೆ ಪ್ರವೇಶಿಸುವ ಮೊದಲು ವೀಸಾ ಸಮಸ್ಯೆ ಎದುರಿಸಿದ್ದರು. ಹೀಗಾಗಿ ಅವರು ಮತ್ತೆ ಲಂಡನ್‌ಗೆ ಹಿಂತಿರುಗಬೇಕಾಯಿತು. ಇದೇ ಕಾರಣದಿಂದ ಅವರು ಹೈದರಾಬಾದ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯ ಮಿಸ್‌ ಮಾಡಿಕೊಂಡರು. ಆ ಬಳಿಕ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆಡಿದರು.‌

ರಾಜ್‌ಕೋಟ್‌ನಲ್ಲಿ ತಾತ್ಕಾಲಿಕ ಇಮಿಗ್ರೇಷನ್ ಕೌಂಟರ್

ಅಂತಾರಾಷ್ಟ್ರೀಯ ವಿಮಾನವೊಂದು ನೇರವಾಗಿ ರಾಜ್‌ಕೋಟ್‌ನಲ್ಲಿ ಬಂದಿಳಿದಿದ್ದು ಇದೇ ಮೊದಲು. ಹೀಗಾಗಿ, ಇಲ್ಲಿ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕ ಇಮಿಗ್ರೇಷನ್ ಕೌಂಟರ್ ಸ್ಥಾಪಿಸಲಾಯ್ತು. 31 ಸದಸ್ಯರ ಇಂಗ್ಲಿಷ್ ತಂಡದಲ್ಲಿ ರೆಹಾನ್ ಅಹ್ಮದ್ ಮಾತ್ರ ಸರಿಯಾದ ವೀಸಾ ಹೊಂದಿರದ ಸದಸ್ಯನಾಗಿದ್ದರು.

ಇದನ್ನೂ ಓದಿ | ಕೆಎಸ್ ಭರತ್ ಬದಲಿಗೆ ಯುವ ಆಟಗಾರನಿಗೆ ಅವಕಾಶ; ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ಗೆ ಧ್ರುವ್ ಜುರೆಲ್ ಪದಾರ್ಪಣೆ ಸಾಧ್ಯತೆ

ಕಳೆದ ವರ್ಷ ಕರಾಚಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ, ರೆಹಾನ್ ಐದು ವಿಕೆಟ್‌ ಕಬಳಿಸಿದ್ದರು. ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಅತ್ಯಂತ ಕಿರಿಯ ಟೆಸ್ಟ್ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ರೆಹಾನ್ ಪಾತ್ರರಾಗಿದ್ದರು. ಅಹ್ಮದ್ 2004ರಲ್ಲಿ ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಮ್‌ನಲ್ಲಿ ಜನಿಸಿದರು. ಅವರ ತಂದೆ ನಯೀಮ್‌, ಪಾಕಿಸ್ತಾನದ ಮಾಜಿ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿದ್ದರು.

ಭಾರತ ಪ್ರವಾಸದಲ್ಲಿ ರೆಹಾನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದುವರೆಗೂ ಆಡಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ರೆಹಾನ್ ಎಂಟು ವಿಕೆಟ್ ಪಡೆದಿದ್ದಾರೆ . ಈವರೆಗೆ ಸರಣಿಯಲ್ಲಿ ಇಂಗ್ಲೆಂಡ್ ತಂಡವು ಏಕೈಕ ವೇಗದ ಬೌಲರ್ ಜೊತೆಗೆ ಕಣಕ್ಕಿಳಿದಿದೆ. ಮೂರು ಸ್ಪಿನ್ ಅಸ್ತ್ರವನ್ನು ಬಳಸಿದೆ.

ಇದನ್ನೂ ಓದಿ | ಸಹರಾನ್, ಮುಶೀರ್‌, ಲಿಂಬಾನಿ...; ಅಂಡರ್ 19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಸಿಕ್ಕ 5 ಸ್ಟಾರ್ ಆಟಗಾರರು

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner