ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ಗೆ 323 ರನ್ಗಳ ಬೃಹತ್ ಗೆಲುವು; ಕಿವೀಸ್ ನೆಲದಲ್ಲಿ 16 ವರ್ಷಗಳ ಬಳಿಕ ಸರಣಿ ಕೈ ವಶ
England beat New zealand: ಎರಡನೇ ಟೆಸ್ಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 323 ರನ್ಗಳ ಬೃಹತ್ ಗೆಲುವು ಸಾಧಿಸಿದೆ. ಇದರೊಂದಿಗೆ ಕಿವೀಸ್ ನೆಲದಲ್ಲಿ 16 ವರ್ಷಗಳ ಬಳಿಕ ಸರಣಿ ಕೈ ವಶ ಮಾಡಿಕೊಂಡಿದೆ.
ವೆಲ್ಲಿಂಗ್ಟನ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 323 ರನ್ಗಳ ಅಂತರದಿಂದ ದೊಡ್ಡ ಗೆಲುವು ದಾಖಲಿಸಿದೆ. 583 ರನ್ಗಳ ಬೃಹತ್ ಗುರಿ ಪಡೆದ ಕಿವೀಸ್, 259 ರನ್ಗಳಿಗೆ ಸರ್ವಪತನಗೊಂಡು ತವರಿನಲ್ಲಿ ಸರಣಿಯನ್ನು ಕೈ ಚೆಲ್ಲಿತು. ಒಂದು ಪಂದ್ಯ ಬಾಕಿ ಇರುವಂತೆಯೇ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0ರಲ್ಲಿ ಗೆದ್ದಿರುವ ಇಂಗ್ಲೆಂಡ್, ಕಿವೀಸ್ ನಾಡಲ್ಲಿ 16 ವರ್ಷಗಳ ನಂತರ ದೀರ್ಘ ಸ್ವರೂಪದ ಸರಣಿಗೆ ಮುತ್ತಿಕ್ಕಿದೆ. ಮೊದಲ ಪಂದ್ಯದಲ್ಲಿ 8 ವಿಕೆಟ್ಗಳ ಗೆಲುವು ಸಾಧಿಸಿತ್ತು.
ನ್ಯೂಜಿಲೆಂಡ್ ನೆಲದಲ್ಲಿ ಇಂಗ್ಲೆಂಡ್ ಕೊನೆಯದಾಗಿ ಸರಣಿ ಗೆದ್ದಿದ್ದು 2008ರಲ್ಲಿ. ಆ ಬಳಿಕ ಹಲವು ಸರಣಿಗಳನ್ನು ಕಳೆದುಕೊಂಡಿರುವ ಇಂಗ್ಲೆಂಡ್, 16 ವರ್ಷಗಳ ನಂತರ ಸರಣಿಯನ್ನು ಗೆದ್ದು ಸಂಭ್ರಮಿಸಿದೆ. ಉಭಯ ತಂಡಗಳ ನಡುವಿನ ಕೊನೆಯ ಪಂದ್ಯ ಡಿಸೆಂಬರ್ 14ರಿಂದ ಹ್ಯಾಮಿಲ್ಟನ್ನಲ್ಲಿ ಆರಂಭವಾಗಲಿದೆ. ಇಂಗ್ಲೆಂಡ್ ಬೌಲರ್ಗಳು ಕಟ್ಟುನಿಟ್ಟಿನ ದಾಳಿ ನಡೆಸಿ ಕಿವೀಸ್ ಬ್ಯಾಟರ್ಗಳ ಬ್ಯಾಟಿಂಗ್ಗೆ ಕಡಿವಾಣ ಹಾಕಿತು. 3ನೇ ಟೆಸ್ಟ್ನಲ್ಲೂ ಭರ್ಜರಿ ಗೆಲುವು ದಾಖಲಿಸಿ, ಸರಣಿ ವೈಟ್ ವಾಶ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ ಇಂಗ್ಲೆಂಡ್.
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಪ್ರಥಮ ಇನ್ನಿಂಗ್ಸ್ನಲ್ಲಿ 280 ರನ್ ಗಳಿಸಿತು. ಹ್ಯಾರಿಸ್ ಬ್ರೂಕ್ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಇದಕ್ಕೆ ಪ್ರತಿಯಾಗಿ ನ್ಯೂಜಿಲೆಂಡ್ ಕೆಟ್ಟ ಪ್ರದರ್ಶನ ನೀಡಿತು. 125 ರನ್ಗಳಿಸಲಷ್ಟೇ ಶಕ್ತವಾಯಿತು. ಗಸ್ ಆಟ್ಕಿನ್ಸನ್ ಮತ್ತು ಬ್ರೈಡನ್ ಕಾರ್ಸೆ ತಲಾ 4 ವಿಕೆಟ್ ಪಡೆದು ಮಿಂಚಿದರು. 155 ರನ್ಗಳ ಮುನ್ನಡೆ ಪಡೆದಿದ್ದ ಇಂಗ್ಲೆಂಡ್, ದ್ವಿತೀಯ ಇನ್ನಿಂಗ್ಸ್ನಲ್ಲಿ 6 ವಿಕೆಟ್ ನಷ್ಟಕ್ಕೆ 427 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಒಟ್ಟು 533 ರನ್ಗಳ ಗುರಿ ಪಡೆದ ಕಿವೀಸ್ 259 ರನ್ಗಳಿಗೆ ಆಲೌಟ್ ಆಯಿತು.
ಜೋ ರೂಟ್ ದಾಖಲೆ
ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಆಟಗಾರ ಜೋ ರೂಟ್ 36ನೇ ಟೆಸ್ಟ್ ಶತಕ ಸಿಡಿಸಿ ದಾಖಲೆ ಬರೆದರು. ಇದರೊಂದಿಗೆ ಅಷ್ಟೇ ಶತಕ ಬಾರಿಸಿರುವ ರಾಹುಲ್ ದ್ರಾವಿಡ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದರೊಂದಿಗೆ ಅತಿ ಹೆಚ್ಚು ಶತಕ ಸಿಡಿಸಿದ ಟಾಪ್-5 ಪಟ್ಟಿಗೆ ಸೇರ್ಪಡೆಯಾದರು.
ಶ್ರೇಣಿ | ತಂಡ | ಪಂದ್ಯ | ಗೆಲುವು | ಸೋಲು | ಟೈ | ಅಂಕ | ಗೆ.ಶೇ |
---|---|---|---|---|---|---|---|
1. | ಆಸ್ಟ್ರೇಲಿಯಾ | 14 | 9 | 4 | 1 | 102 | 60.71 |
2. | ದಕ್ಷಿಣ ಆಫ್ರಿಕಾ | 9 | 5 | 3 | 1 | 64 | 59.26 |
3. | ಭಾರತ | 16 | 9 | 6 | 1 | 110 | 57.29 |
4. | ಶ್ರೀಲಂಕಾ | 10 | 5 | 5 | 0 | 60 | 50.00 |
5. | ಇಂಗ್ಲೆಂಡ್ | 21 | 11 | 9 | 1 | 114 | 45.24 |
6. | ನ್ಯೂಜಿಲೆಂಡ್ | 13 | 6 | 7 | 0 | 69 | 44.23 |
7. | ಪಾಕಿಸ್ತಾನ | 10 | 4 | 6 | 0 | 40 | 33.33 |
8. | ಬಾಂಗ್ಲಾದೇಶ | 12 | 4 | 8 | 0 | 45 | 31.25 |
9. | ವೆಸ್ಟ್ ಇಂಡೀಸ್ | 11 | 2 | 7 | 2 | 32 | 24.24 |