ಮುಂದಿನ 12 ತಿಂಗಳಲ್ಲಿ 39 ಪಂದ್ಯ; ಏಷ್ಯಾಕಪ್, ಟಿ20 ವಿಶ್ವಕಪ್ ಸೇರಿ ಭಾರತದ ಒಂದು ವರ್ಷದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಟೀಮ್ ಇಂಡಿಯಾದ ಮುಂದಿನ 12 ತಿಂಗಳ ವೇಳಾಪಟ್ಟಿ ಹೇಗಿದೆ? ಯಾವೆಲ್ಲಾ ತಂಡಗಳ ಮಧ್ಯೆ ಸೆಣಸಾಟ ನಡೆಸಲಿದೆ? ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಎಷ್ಟು ಟಿ20ಐ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ? ಇಲ್ಲಿದೆ ಮಾಹಿತಿ.

2025ರ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಭಾರತ ತಂಡದ ಆಟಗಾರರು ಮಾರ್ಚ್ 22ರಿಂದ ಮೇ 25ರ ತನಕ 18ನೇ ಆವೃತ್ತಿಯ ಐಪಿಎಲ್ನಲ್ಲಿ ನಿರತರಾಗಿರಲಿದ್ದಾರೆ. ಎರಡು ತಿಂಗಳ ಕಾಲ ನಾನ್ಸ್ಟಾಪ್ ಮನರಂಜನೆ ಬಳಿಕ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವುದು ಜುಲೈನಲ್ಲಿ. ನಂತರ ಟೀಮ್ ಇಂಡಿಯಾ ಆಟಗಾರರು ನಿರಂತರವಾಗಿ ಟೆಸ್ಟ್, ಒಡಿಐ, ಟಿ20ಐ ಕ್ರಿಕೆಟ್ನ ಭಾಗವಾಗಲಿದ್ದಾರೆ. ಭಾರತ ತಂಡದ ಮುಂದಿನ 12 ತಿಂಗಳ ವೇಳಾಪಟ್ಟಿ ಹೇಗಿದೆ? ಇಲ್ಲಿದೆ ವಿವರ.
ಭಾರತ ತಂಡದ ಮುಂದಿನ ನಿಯೋಜನೆಯು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಾಗಿದೆ. ಇದು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ನಾಲ್ಕನೇ ಆವೃತ್ತಿಯ ಮೊದಲ ಪಂದ್ಯ. ಮೊದಲ 2 ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ, 3ನೇ ಆವೃತ್ತಿಯಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ವಿಫಲವಾಗಿತ್ತು. ಹಾಗಾಗಿ 4ನೇ ಆವೃತ್ತಿ ಭಾರತದ ಪಾಲಿಗೆ ಅತ್ಯಂತ ಅತ್ಯಂತ ಮುಖ್ಯವಾಗಿತ್ತು. ಇದೀಗ ಫೈನಲ್ ತಲುಪುವ ಗುರಿಯೊಂದಿಗೆ ಕಣಕ್ಕಿಳಿಯಲು ಭಾರತ ಸಜ್ಜಾಗಿದೆ.
2021-22ರಲ್ಲಿ ತನ್ನ ಕೈಯಲ್ಲಿದ್ದ ಪಟೌಡಿ ಟ್ರೋಫಿಯನ್ನು ಕೈಚೆಲ್ಲಿದ್ದ ಭಾರತ ಈ ಸಲ ಇಂಗ್ಲೆಂಡ್ ನೆಲದಲ್ಲಿ 18 ವರ್ಷಗಳ ನಂತರ ಸರಣಿ ಜಯದ ಬರ ನೀಗಿಸಲು ಸಜ್ಜಾಗಿದೆ. ಸದ್ಯ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಅವರೇ ಈ ಐದು ಪಂದ್ಯಗಳ ಸರಣಿಗೆ ನಾಯಕತ್ವ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸೋತ ನಂತರ ಟೆಸ್ಟ್ ನಾಯಕತ್ವ ಬದಲಾಗಲಿದೆ ಎಂದು ಬಿಸಿಸಿಐ ಮೂಲಗಳೇ ತಿಳಿಸಿದ್ದವು. ಇದೀಗ ಉಲ್ಟಾ ಹೊಡೆಯುತ್ತಿದೆ ಎನ್ನಲಾಗಿದೆ.
ಮುಂದಿನ ಟಿ20 ವಿಶ್ವಕಪ್, ಈಗಿನಿಂದಲೇ ಗಮನ
2026ರಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಲಿದೆ. ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಭಾರತ ತಂಡ ಈಗಿನಿಂದಲೇ ಸಿದ್ಧತೆ ನಡೆಸುವ ಅಗತ್ಯ ಇದೆ. ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಭಾರತ ತನ್ನ ತವರು ನೆಲದಲ್ಲಿ ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ಗುರಿ ಹೊಂದಿದೆ. ಆದರೆ ಈ ಟೂರ್ನಿಗೆ ಶ್ರೀಲಂಕಾ ಸಹ-ಆತಿಥ್ಯ ವಹಿಸಲಿದೆ.
ಮುಂದಿನ 12 ತಿಂಗಳ ಭಾರತ ಕ್ರಿಕೆಟ್ ತಂಡದ ವೇಳಾಪಟ್ಟಿ
- ಭಾರತ vs ಇಂಗ್ಲೆಂಡ್ ನಡುವೆ 5 ಟೆಸ್ಟ್ ಪಂದ್ಯಗಳ ಸರಣಿ (ಪಟೌಡಿ ಟ್ರೋಫಿ) - ಇಂಗ್ಲೆಂಡ್ ಆತಿಥ್ಯ - 2025ರ ಜೂನ್ 21 ರಿಂದ ಆಗಸ್ಟ್ 4ರ ತನಕ
- ಬಾಂಗ್ಲಾದೇಶ vs ಭಾರತ ನಡುವೆ 3 ಏಕದಿನ ಪಂದ್ಯಗಳು, 3 ಟಿ20 ಪಂದ್ಯಗಳು - ಬಾಂಗ್ಲಾದೇಶ ಆತಿಥ್ಯ - ಆಗಸ್ಟ್ 2025
- ಏಷ್ಯಾ ಕಪ್ 2025 (ಟಿ20 ಸ್ವರೂಪ) - ದಿನಾಂಕ ಘೋಷಣೆಯಾಗಿಲ್ಲ - ಸೆಪ್ಟೆಂಬರ್ 2025
- ವೆಸ್ಟ್ ಇಂಡೀಸ್ vs ಭಾರತ ನಡುವೆ 2 ಟೆಸ್ಟ್ ಪಂದ್ಯಗಳು - ಭಾರತ ಆತಿಥ್ಯ - ಅಕ್ಟೋಬರ್ 2025
- ಭಾರತ vs ಆಸ್ಟ್ರೇಲಿಯಾ ನಡುವೆ 3 ಏಕದಿನ, 5 ಟಿ20ಐ ಪಂದ್ಯಗಳು - ಆಸ್ಟ್ರೇಲಿಯಾ ಆತಿಥ್ಯ - ಅಕ್ಟೋಬರ್/ನವೆಂಬರ್ 2025
ಇದನ್ನೂ ಓದಿ: ಐಸಿಸಿ ತಿಂಗಳ ಪ್ರಶಸ್ತಿ ಜಯಿಸಿ ಬಾಬರ್ ಅಜಮ್ ವಿಶ್ವದಾಖಲೆ ಸರಿಗಟ್ಟಿದ ಶುಭ್ಮನ್ ಗಿಲ್; ಅಪರೂಪದ ಸಾಧನೆಗೈದ ಮೊದಲ ಭಾರತೀಯ
- ದಕ್ಷಿಣ ಆಫ್ರಿಕಾ vs ಭಾರತ ನಡುವೆ 2 ಟೆಸ್ಟ್ ಪಂದ್ಯಗಳು, 3 ಏಕದಿನ ಪಂದ್ಯಗಳು, 5 ಟಿ20ಐಗಳು - ನವೆಂಬರ್/ಡಿಸೆಂಬರ್ 2025
- ಭಾರತ vs ನ್ಯೂಜಿಲೆಂಡ್ ನಡುವೆ 3 ಏಕದಿನ ಪಂದ್ಯಗಳು, 5 ಟಿ20 ಪಂದ್ಯಗಳು - ಜನವರಿ 2026
- ಟಿ20 ವಿಶ್ವಕಪ್ 2026 - ಭಾರತ/ಶ್ರೀಲಂಕಾ ಜಂಟಿ ಆತಿಥ್ಯ - ದಿನಾಂಕ ಘೋಷಣೆಯಾಗಿಲ್ಲ - ಫೆಬ್ರವರಿ/ಮಾರ್ಚ್ 2026
ಒಟ್ಟು 39 ಪಂದ್ಯಗಳು
ಮುಂದಿನ 12 ತಿಂಗಳಲ್ಲಿ ಭಾರತ 9 ಟೆಸ್ಟ್ ಪಂದ್ಯ, 12 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಏಷ್ಯಾಕಪ್ ಮತ್ತು ವಿಶ್ವಕಪ್ ಸೇರಿದಂತೆ 18 ಟಿ20 ಪಂದ್ಯಗಳಲ್ಲಿ ಸೆಣಸಾಟ ನಡೆಸಲಿದೆ.
