ಇಂಗ್ಲೆಂಡ್ ವಿರುದ್ಧ 38 ರನ್‌ಗಳಿಂದ ಮುಗ್ಗರಿಸಿದ ಭಾರತ ವನಿತೆಯರು; ಟಿ20 ಸರಣಿಯಲ್ಲಿ ಆಂಗ್ಲರ ಶುಭಾರಂಭ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ವಿರುದ್ಧ 38 ರನ್‌ಗಳಿಂದ ಮುಗ್ಗರಿಸಿದ ಭಾರತ ವನಿತೆಯರು; ಟಿ20 ಸರಣಿಯಲ್ಲಿ ಆಂಗ್ಲರ ಶುಭಾರಂಭ

ಇಂಗ್ಲೆಂಡ್ ವಿರುದ್ಧ 38 ರನ್‌ಗಳಿಂದ ಮುಗ್ಗರಿಸಿದ ಭಾರತ ವನಿತೆಯರು; ಟಿ20 ಸರಣಿಯಲ್ಲಿ ಆಂಗ್ಲರ ಶುಭಾರಂಭ

India W vs England W: ಭಾರತದ ವಿರುದ್ಧ ಇಂಗ್ಲೆಂಡ್‌ ವನಿತೆಯರ ತಂಡ ಶುಭಾರಂಭ ಮಾಡಿದೆ. ತವರಿನಲ್ಲಿ ಆಂಗ್ಲರ ವಿರುದ್ಧ ಹರ್ಮನ್‌ಪ್ರೀತ್‌ ಕೌರ್‌ ಬಳಗವು ಕಳಪೆ ಪ್ರದರ್ಶನ ಮುಂದುವರೆಸಿದೆ.

ಭಾರತ ವಿರುದ್ಧ ಮೊದಲ ಟಿ20 ಪಂದ್ಯ ಗೆದ್ದ ಇಂಗ್ಲೆಂಡ್‌ ವನಿತೆಯರು
ಭಾರತ ವಿರುದ್ಧ ಮೊದಲ ಟಿ20 ಪಂದ್ಯ ಗೆದ್ದ ಇಂಗ್ಲೆಂಡ್‌ ವನಿತೆಯರು (PTI)

ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವನಿತೆಯರ (India Women vs England Women) ತಂಡ ಮುಗ್ಗರಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹೆದರ್‌ ನೈಟ್‌ ಬಳಗವು 38 ರನ್‌ಗಳಿಂದ ಗೆದ್ದು ಬೀಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌, ಡೇನಿಯಲ್‌ ವ್ಯಾಟ್‌ ಮತ್ತು ಸಿವರ್‌ ಬ್ರಂಟ್‌ ಶತಕದ ಜೊತೆಯಾಟದ ನೆರವಿಂದ 6 ವಿಕೆಟ್‌ ಕಳೆದುಕೊಂಡು 197 ರನ್‌ ಗಳಿಸಿತು. ಬೃಹತ್‌ ಗುರಿ ಬೆನ್ನಟ್ಟಿದ ಭಾರತ, ಶಫಾಲಿ ವರ್ಮ ಅರ್ಧಶತಕದ ಹೊರತಾಗಿಯೂ 6 ವಿಕೆಟ್‌ ಕಳೆದುಕೊಂಡು 159 ರನ್‌ ಕಲೆ ಹಾಕಲಷ್ಟೇ ಶತಕ್ತವಾಯ್ತು. ಆ ಮೂಲಕ ಮೊದಲ ಟಿ20 ಪಂದ್ಯದಲ್ಲಿ ಗೆದ್ದು ಇಂಗ್ಲೆಂಡ್‌ ತಂಡವು ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿತು.

ಇಂಗ್ಲೆಂಡ್‌ ನೀಡಿದ 198 ರನ್‌ಗಳ ಬೃಹತ್‌ ಟಾರ್ಗೆಟ್‌ ಬೆನ್ನಟ್ಟಿದ ಭಾರತ, ಆರಂಭದಲ್ಲೇ ಸ್ಮೃತಿ ವಿಕೆಟ್‌ ಕಳೆದುಕೊಂಡಿತು. 6 ರನ್‌ ಗಳಿಸಿದ ಮಂಧಾನ, ಸಿವರ್‌ ಬ್ರಂಟ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಜೆಮೀಮಾ ರೋಡ್ರಿಗಸ್‌ ಕೂಡಾ ಕೇವಲ 4 ರನ್‌ ಗಳಿಸಿ ನಿರಾಸೆ ಮೂಡಿಸಿದರು. ಶಫಾಲಿ ವರ್ಮಾ ಜೊತೆಗೂಡಿ ಕೆಲಕಾಲ ಉತ್ತಮ ಹೊಡೆತಗಳನ್ನಾಡಿದ ನಾಯಕಿ ಕೌರ್‌, 26 ರನ್‌ ಗಳಿಸಿ ಔಟಾದರು.

ಇದನ್ನೂ ಓದಿ | ICC Rankings: ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರಿದ ರವಿ ಬಿಷ್ಣೋಯ್

ಆರಂಭಿಕರಾಗಿ ಬಂದು ಉತ್ತಮ ಬ್ಯಾಟಿಂಗ್‌ ನಡೆಸಿ ಶಫಾಲಿ ವರ್ಮಾ ಆಕರ್ಷಕ ಅರ್ಧಶತಕ ಸಿಡಿಸಿದರು. 9 ಬೌಂಡರಿ ಸಹಿತ 52 ರನ್‌ ಗಳಿಸಿದ ಅವರು ಎಕ್ಲೆಸ್ಟನ್‌ ಎಸೆತದಲ್ಲಿ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು. ಅಬ್ಬರದ ಆಟಕ್ಕೆ ಕೈ ಹಾಕಿದ ರಿಚಾ ಆಟ 21 ರನ್‌ಗಳಿಗೆ ಸೀಮಿತವಾಯ್ತು. ಕನಿಕಾ ಅಹುಜಾ 15 ರನ್‌ ಗಳಿಸಿದರೆ, ಪೂಜಾ ವಸ್ತ್ರಾಕರ್‌ ಮತ್ತು ದೀಪ್ತಿ ಶರ್ಮಾ ಪ್ರಯತ್ನದಿಂದ ತಂಡದ ಗೆಲುವು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ 159 ರನ್‌ಗೆ ಇನ್ನಿಂಗ್ಸ್‌ ಮುಗಿಸಿತು.

ಇಂಗ್ಲೆಂಡ್‌ ಪರ ಸೋಫಿ ಎಕ್ಲೆಸ್ಟನ್‌ ಯಶಸ್ವಿ ಬೌಲಿಂಗ್‌ ಪ್ರದರ್ಶನ ನೀಡಿ ಭಾರತದ ಪ್ರಮುಖ 3 ವಿಕೆಟ್‌ ಕಬಳಿಸಿದರು.

ಇಂಗ್ಲೆಂಡ್‌ ಅಬ್ಬರ

ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಇಂಗ್ಲೆಂಡ್ ತಂಡಕ್ಕೆ ಮೊದಲಿಗೆ ಬ್ಯಾಟಿಂಗ್‌ ಅವಕಾಶ ನೀಡಿತು. ನಾಯಕಿ ಕೌರ್‌ ನಿರ್ಧಾರಕ್ಕೆ ಸರಿಯಾಗಿ ಬೌಲಿಂಗ್‌ನಲ್ಲಿ ಭಾರತ ಉತ್ತಮ ಆರಂಭ ಪಡೆಯಿತು. ಮೊದಲ ಓವರ್‌ನಲ್ಲೇ ಸೋಫಿಯಾ ಡಂಕ್ಲೆ ಮತ್ತು ಅಲಿಸ್‌ ಕ್ಯಾಪ್ಸ್‌ ಒಬ್ಬರ ನಂತರ ಒಬ್ಬರಂತೆ ರೇಣುಕಾ ಸಿಂಗ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಇವರಲ್ಲಿ ಕ್ಯಾಪ್ಸ್‌ ಗೋಲ್ಡನ್‌ ಡಕ್‌ಗೆ ಬಲಿಯಾದ್ರು.

ಒಂದು ಹಂತದಲ್ಲಿ ಇಂಗ್ಲೆಂಡ್‌ ತಂಡವು 2 ರನ್‌ ವೇಳೆಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಶುರುವಾಗಿದ್ದೇ ಡೇನಿಯಲ್‌ ವ್ಯಾಟ್‌ ಮತ್ತು ಸಿವರ್‌ ಬ್ರಂಟ್‌ ಜುಗಲ್‌ಬಂದಿ. ಸ್ಫೋಟಕ ಆಟವಾಡಿದ ಈ ಜೋಡಿ ಶತಕದ ಜೊತೆಯಾಟವಾಡಿದರು. ಮೈದಾನದ ಸುತ್ತಲೂ ಬೌಂಡರಿಗಳ ಸುರಿಮಳೆಗೈದರು. ಇವರಿಬ್ಬರೂ 15 ಓವರ್‌ಗಳ ಕಾಲ ಜೊತೆಯಾಟವಾಡಿದರು. ಮೂರನೇ ವಿಕೆಟ್‌ಗೆ ಒಂದಾಗಿ ಬರೋಬ್ಬರಿ 138 ರನ್‌ ಕಲೆ ಹಾಕಿದರು. 47 ಎಸೆತಗಳಿಂದ 75 ರನ್‌ ಗಳಿಸಿದ ವ್ಯಾಟ್‌, ಇಂದು ಪದಾರ್ಪಣೆ ಮಾಡಿದ ಸೈಕಾ ಇಶಾಕ್‌ ಎಸೆತದಲ್ಲಿ ಔಟಾದರು. ಅವರ ಬನ್ನಲ್ಲೇ‌ ಆಂಗ್ಲ ನಾಯಕಿ ಹೆದರ್‌ ನೈಟ್‌ಗೆ ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕ ಪೆವಿಲಿಯನ್‌ ದಾರಿ ತೋರಿದರು. ಪದಾರ್ಪಣೆ ಪಂದ್ಯವಾಡಿದ ಇಬ್ಬರು ಬೌಲರ್‌ಗಳು ಚೊಚ್ಚಲ ಅಂತಾರಾಷ್ಟ್ರೀಯ ವಿಕೆಟ್‌ ಪಡೆದು ಮಿಂಚಿದರು.

77 ರನ್‌ ಗಳಿಸಿದ್ದ ಸಿವರ್‌ ಬ್ರಂಟ್‌ ಅಂತಿಮವಾಗಿ ರೇಣುಕಾಗೆ ವಿಕೆಟ್‌ ಒಪ್ಪಿಸಿದರು. ಡೆತ್‌ ಓವರ್‌ಗಳಲ್ಲಿ 23 ರನ್‌ ಸಿಡಿಸಿದ ಆಮಿ ಜೋನ್ಸ್‌ ಅಂತಿಮ ಎಸೆತದಲ್ಲಿ ಶ್ರೇಯಾಂಕಾಗೆ ವಿಕೆಟ್‌ ನೀಡಿದರು.

ಭಾರತದ ಪರ ಅನುಭವಿ ರೇಣುಕಾ 3 ವಿಕೆಟ್‌ ಪಡೆದರೆ, ಕನ್ನಡತಿ ಶ್ರೇಯಾಂಕಾ 2 ವಿಕೆಟ್‌ ಕಬಳಿಸಿದರು.

ಟಿ20 ಸರಣಿ ವೇಳಾಪಟ್ಟಿ

  • 1ನೇ ಟಿ20 : ಡಿಸೆಂಬರ್ 6 ಬುಧವಾರ, ವಾಂಖೆಡೆ ಸ್ಟೇಡಿಯಂ, ಮುಂಬೈ; ಸಂಜೆ 7:00 ಗಂಟೆ
  • 2ನೇ ಟಿ20 : ಡಿಸೆಂಬರ್ 9 ಶನಿವಾರ, ವಾಂಖೆಡೆ ಸ್ಟೇಡಿಯಂ, ಮುಂಬೈ; ಸಂಜೆ 7:00 ಗಂಟೆ
  • 3ನೇ ಟಿ20 : ಡಿಸೆಂಬರ್ 10 ಭಾನುವಾರ, ವಾಂಖೆಡೆ ಸ್ಟೇಡಿಯಂ, ಮುಂಬೈ; ಸಂಜೆ 7:00 ಗಂಟೆ

Whats_app_banner