ಅಬ್ಬರಿಸಿದ ಸ್ಪಿನ್ನರ್ಸ್, ತಿಣುಕಾಡಿದ ಬ್ಯಾಟರ್ಸ್; ಭಾರತಕ್ಕೆ ಆಘಾತಕಾರಿ ಸೋಲುಣಿಸಿದ ಇಂಗ್ಲೆಂಡ್
India vs England 1st Test Day 4: ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ 0-1ರಲ್ಲಿ ಮುನ್ನಡೆ ಪಡೆದಿದೆ.
ಇಂಗ್ಲೆಂಡ್ನ ಟಾಮ್ ಹಾರ್ಟ್ಲೆ ಸ್ಪಿನ್ ಬೌಲಿಂಗ್ನಲ್ಲಿ ವಿರುದ್ಧ ಬ್ಯಾಟರ್ಸ್ ದಯನೀಯ ವೈಫಲ್ಯ ಅನುಭವಿಸಿದ ಕಾರಣ ಟೀಂ ಇಂಡಿಯಾ, ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಂಡಿದೆ. ಹೈದರಾಬಾದ್ನ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಪಡೆ, 28 ರನ್ಗಳಿಂದ ಶರಣಾಗಿದೆ. ಈ ಜಯನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 0-1ರಲ್ಲಿ ಮುನ್ನಡೆ ಸಾಧಿಸಿದೆ.
ಕಳಪೆ ದಾಖಲೆ ಬರೆದ ಭಾರತ
ಪ್ರವಾಸಿ ತಂಡ ನೀಡಿದ 231 ರನ್ಗಳ ಸುಲಭ ಗುರಿಯನ್ನು ಬೆನ್ನಟ್ಟಲು ವಿಫಲವಾದ ಭಾರತ, 202 ರನ್ಗಳಿಗೆ ಆಲೌಟ್ ಆಯಿತು. ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಟೀಮ್ ಇಂಡಿಯಾ, ತವರಿನಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಅಲ್ಲದೆ, ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಇಂಗ್ಲೆಂಡ್ ಎದುರು ಮಂಡಿಯೂರಿದೆ. ಇಂಗ್ಲೆಂಡ್ ಭರ್ಜರಿ ಗೆಲುವು ಜೊತೆ ಐತಿಹಾಸಿಕ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ.
ಆದರೆ ಈ ಸೋಲಿನೊಂದಿಗೆ ರೋಹಿತ್ ಪಡೆ ಅತ್ಯಂತ ಕಳಪೆ ದಾಖಲೆಯನ್ನು ಬರೆದಿದೆ. ಮೊದಲ ಇನ್ನಿಂಗ್ಸ್ನಲ್ಲಿ 100ಕ್ಕೂ ಅಧಿಕ ರನ್ಗಳ ಮುನ್ನಡೆ ಪಡೆದರೂ ಇದೇ ಮೊದಲ ಬಾರಿಗೆ ಭಾರತ ತವರಿನಲ್ಲಿ ಸೋಲು ಕಂಡಿದೆ. ಇಂಗ್ಲೆಂಡ್ ಪರ ಬ್ಯಾಟಿಂಗ್ನಲ್ಲಿ ಒಲ್ಲಿ ಪೋಪ್ 196 ರನ್ ಸಿಡಿಸಿ ಮಿಂಚಿದರೆ, ಬೌಲಿಂಗ್ನಲ್ಲಿ ಟಾಮ್ ಹಾರ್ಟ್ಲೆ 7 ವಿಕೆಟ್ ಕಬಳಿಸಿ ಗೆಲುವಿನ ರೂವಾರಿಗಳಾದರು ಎಂಬುದು ವಿಶೇಷ.
ಭಾರತದ ಬ್ಯಾಟಿಂಗ್ ವೈಫಲ್ಯ
ಸಾಧಾರಣ ಗುರಿ ಬೆನ್ನಟ್ಟಿದ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ 80 ರನ್ ಚಚ್ಚಿದ್ದ ಯಶಸ್ವಿ ಜೈಸ್ವಾಲ್ 15 ರನ್ಗಳಿಗೆ ಆಟ ಮುಗಿಸಿದರು. ಶುಭ್ಮನ್ ಗಿಲ್ ಡಕೌಟ್ ಆಗಿ ಮತ್ತೆ ನಿರಾಸೆ ಮೂಡಿಸಿದರು. ಮತ್ತೊಂದೆಡೆ ತಂಡಕ್ಕೆ ಭರವಸೆ ಮೂಡಿಸುತ್ತಿದ್ದ ರೋಹಿತ್, 39 ರನ್ ಸಿಡಿಸಿ ಔಟಾದರು. ಅಗ್ರ ಕ್ರಮಾಂಕದ ಈ ಮೂವರು ಸಹ ಹಾರ್ಟ್ಲೆ ಬೌಲಿಂಗ್ನಲ್ಲಿ ಔಟಾಗಿ ಆರಂಭಿಕ ಕುಸಿತಕ್ಕೆ ಕಾರಣರಾದರು.
ಆ ಬಳಿಕ ಜೊತೆಯಾದ ಕೆಎಲ್ ರಾಹುಲ್ 22 ರನ್ ಗಳಿಸಿದರೆ, ಬಡ್ತಿ ಪಡೆದು 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅಕ್ಷರ್ ಪಟೇಲ್ 15 ರನ್ಗಳಿಗೆ ಸುಸ್ತಾದರು. ಶ್ರೇಯಸ್ ಅಯ್ಯರ್ 13, ರವೀಂದ್ರ ಜಡೇಜಾ 2 ರನ್ ಗಳಿಸಿ ಔಟಾದರು. 119 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ಅಶ್ವಿನ್ ಮತ್ತು ಭರತ್ ಅರ್ಧಶತಕದ ಜೊತೆಯಾಟವಾಡಿ ಗೆಲುವಿನ ಆಸೆ ಹೆಚ್ಚಿಸಿದರು.
ಆದರೆ ಉತ್ತಮ ಹಾದಿಯಲ್ಲಿ ಸಾಗುತ್ತಿದ್ದ ಅವಧಿಯಲ್ಲಿ ಮತ್ತೆ ಅಟ್ಯಾಕ್ ಮಾಡಿದ ಟಾಮ್ ಹಾರ್ಟ್ಲೆ, ಮಹತ್ವದ 28 ರನ್ ಭರತ್ಗೆ ಗೇಟ್ ಪಾಸ್ ನೀಡಿದರು. ಇದರೊಂದಿಗೆ ಭಾರತದ ಸೋಲು ಖಚಿತವಾಯಿತು. ಇದರ ಬೆನ್ನಲ್ಲೇ ಅಮೂಲ್ಯ 28 ರನ್ ಸಿಡಿಸಿದ್ದ ಅಶ್ವಿನ್ ಸಹ ಟಾಮ್ಗೆ ಬಲಿಯಾದರು. ಕೊನೆಯಲ್ಲಿ ಸಿರಾಜ್ 12, ಬುಮ್ರಾ 6 ರನ್ ಗಳಿಸಿ ಹೋರಾಟ ನೀಡಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.
ಓಲ್ಲಿ ಪೋಪ್ ಅವರ ಭರ್ಜರಿ 195 ರನ್ಗಳ ನೆರವಿನಿಂದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ, 420 ರನ್ಗಳ ಬೃಹತ್ ಮೊತ್ತ ಕಲೆ ಹಾಕಿ ಆಲೌಟ್ ಆಯಿತು. 3ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 316 ರನ್ ಗಳಿಸಿತ್ತು. ಈ ಮೊತ್ತದೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಆಂಗ್ಲರು, ಭೋಜನ ವಿರಾಮಕ್ಕೂ ಮುನ್ನ ಅಂದರೆ ಮೊದಲ ಸೆಷನ್ನಲ್ಲಿ 104 ರನ್ ಕಲೆ ಹಾಕಿತು. ಅದ್ಭುತ ಪ್ರದರ್ಶನ ನೀಡಿದ ಪೋಪ್ 196 ರನ್ಗಳಿಗೆ ಔಟಾಗಿ ದ್ವಿಶತಕ ವಂಚಿತರಾದರು.
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್, 246 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಭಾರತ 436 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಅಲ್ಲದೆ, ರೋಹಿತ್ ಪಡೆ 190 ರನ್ಗಳ ಉತ್ತಮ ಮುನ್ನಡೆ ಸಾಧಿಸಿತು. ಈ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೀಷರು 420 ರನ್ ಗಳಿಸಿ 230 ರನ್ಗಳ ಗುರಿ ನೀಡಿದರು. ಆದರೆ ಈ ಗುರಿಯನ್ನು ಬೆನ್ನಟ್ಟಿದ ಭಾರತ 69.2 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 202 ರನ್ಗಳಿಗೆ ಆಲೌಟ್ ಆಯಿತು.
ದ್ವಿತೀಯ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಪ್ರದರ್ಶನ
ಹಿನ್ನೆಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಉತ್ತಮ ಪ್ರದರ್ಶನ ತೋರಿತು. ಬಜ್ಬಾಲ್ ಕಾರ್ಯತಂತ್ರವನ್ನು ಕಾರ್ಯರೂಪಕ್ಕಿಳಿಸಿತು. ಪರಿಣಾಮ ಜಾಕ್ ಕ್ರಾವ್ಲಿ 31, ಬೆನ್ ಡಕೆಟ್ 47 ರನ್ ಗಳಿಸಿ ಔಟಾದರು. ವೇಗವಾಗಿ ಬ್ಯಾಟ್ ಬೀಸಿ ರನ್ ಕಲೆ ಹಾಕಿದ್ದು ವಿಶೇಷ. ಆದರೆ ಪ್ರಮುಖ ಬ್ಯಾಟ್ಸ್ಮನ್ಗಳು ನಿರಾಸೆ ಮೂಡಿಸಿದರು.
ಜೋ ರೂಟ್ 2, ಜಾನಿ ಬೈರ್ಸ್ಟೋ 10, ಸ್ಟೋಕ್ಸ್ 6 ರನ್ ಗಳಿಸಿ ತೀವ್ರ ನಿರಾಸೆ ಮೂಡಿಸಿದರು. ಆದರೂ ಪೋಪ್ ಎದುರಾಳಿಗೆ ತೀವ್ರ ಒತ್ತಡ ಹೇರಿದರು. ಅಲ್ಲದೆ, ಬೆನ್ಫೋಕ್ಸ್ (34) ಜೊತೆಗೆ 6 ವಿಕೆಟ್ಗೆ 112 ರನ್ಗಳ ಜೊತೆಯಾಟವಾಡಿದರು. ರೆಹಾನ್ ಅಹ್ಮದ್ (28) ಜೊತೆಗೆ 64 ರನ್, ಟಾಮ್ ಹಾರ್ಟ್ಲೀ (34) ಜೊತೆಗೆ 80 ರನ್ಗಳ ಪಾಲುದಾರಿಕೆ ನೀಡಿದರು. ಆ ಮೂಲಕ ಭಾರತಕ್ಕೆ ದೊಡ್ಡ ಸವಾಲಾದರು.
196 ರನ್ ಚಚ್ಚಿದ ಪೋಪ್
ಭಾರತೀಯ ಬೌಲರ್ಗಳಿಗೆ ಬೆಂಡೆತ್ತಿದ ಒಲ್ಲಿ ಪೋಪ್, ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು. ಕುಸಿಯುವ ತಂಡಕ್ಕೆ ಆಪತ್ಭಾಂಧವನಂತೆ ಕ್ರೀಸ್ ಕಚ್ಚಿ ನಿಂತರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕೊನೆವರೆಗೂ ಕ್ರೀಸ್ನಲ್ಲಿದ್ದರು. ಪರಿಣಾಮ ಶತಕ ಸಿಡಿಸುವಲ್ಲಿ ಯಶಸ್ಸು ಕಂಡರು. 278 ಎಸೆತಗಳಲ್ಲಿ 21 ಬೌಂಡರಿ ಸಹಿತ 196 ರನ್ ಗಳಿಸಿದರು. ಆದರೆ ದ್ವಿಶತಕ ಅಂಚಿನಲ್ಲಿ ರಿವರ್ಸ್ ಸ್ವೀಪ್ ಶಾಟ್ಗೆ ಯತ್ನಿಸಿ ಔಟಾದರು.
ಬುಮ್ರಾಗೆ 4, ಅಶ್ವಿನ್ 3 ವಿಕೆಟ್
ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡದ 6 ವಿಕೆಟ್ ಉರುಳಿಸಿದ್ದ ಭಾರತೀಯ ಬೌಲರ್ಗಳು ನಾಲ್ಕನೇ ದಿನದಾಟದ ಭೋಜನ ವಿರಾಮಕ್ಕೂ ಮುನ್ನ 4 ವಿಕೆಟ್ಗಳನ್ನು ಉರುಳಿಸಿದರು. ಜಸ್ಪ್ರೀತ್ ಬುಮ್ರಾ 4 ವಿಕೆಟ್, ಆರ್ ಅಶ್ವಿನ್ 3, ರವೀಂದ್ರ ಜಡೇಜಾ 2, ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.