ಗೆದ್ದು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ಇಂಗ್ಲೆಂಡ್; ಸೋತು ವಿಶ್ವಕಪ್​ನಿಂದ ಹೊರಬಿದ್ದ ಪಾಕಿಸ್ತಾನ
ಕನ್ನಡ ಸುದ್ದಿ  /  ಕ್ರಿಕೆಟ್  /  ಗೆದ್ದು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ಇಂಗ್ಲೆಂಡ್; ಸೋತು ವಿಶ್ವಕಪ್​ನಿಂದ ಹೊರಬಿದ್ದ ಪಾಕಿಸ್ತಾನ

ಗೆದ್ದು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ಇಂಗ್ಲೆಂಡ್; ಸೋತು ವಿಶ್ವಕಪ್​ನಿಂದ ಹೊರಬಿದ್ದ ಪಾಕಿಸ್ತಾನ

England vs Pakistan: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 44ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್, 93 ರನ್​​ಗಳ ಭರ್ಜರಿ ಗೆಲುವು ದಾಖಲಿಸಿದೆ. ಆಂಗ್ಲರು ಗೆದ್ದು ಅಭಿಯಾನ ಮುಗಿಸಿದರೆ, ಬಾಬರ್ ಪಡೆ ಸೋತು ವಿಶ್ವಕಪ್ ಮುಗಿಸಿದೆ.

ಗೆದ್ದು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ಇಂಗ್ಲೆಂಡ್.
ಗೆದ್ದು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ಇಂಗ್ಲೆಂಡ್.

ಏಕದಿನ ವಿಶ್ವಕಪ್ ಟೂರ್ನಿಯ 44ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್​ ಭರ್ಜರಿ ಗೆಲುವು ದಾಖಲಿಸಿತು. ತಮ್ಮ ಕೊನೆಯ ಲೀಗ್​ ಪಂದ್ಯದಲ್ಲಿ ಗೆದ್ದ ಬಟ್ಲರ್​ ಪಡೆ 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೂ ಅರ್ಹತೆ ಪಡೆಯಿತು. ಅಲ್ಲದೆ ಸೆಮಿಫೈನಲ್​ಗೆ ಅರ್ಹತೆ ಪಡೆಯುವಲ್ಲೂ ವಿಫಲವಾದರೂ ಗೆಲುವಿನೊಂದಿಗೆ ಅಭಿಯಾನ ಮುಗಿಸಿತು.

ಆದರೆ, 93 ರನ್​ಗಳ ಸೋಲಿನ ನಿರಾಸೆಯೊಂದಿಗೆ ಪಾಕಿಸ್ತಾನ ಅಭಿಯಾನ ಮುಗಿಸಿತು. ಸೆಮಿಫೈನಲ್ ಅವಕಾಶ ಇತ್ತಾದರೂ ಅಸಾಧ್ಯವಾಗಿತ್ತು. ಕೇವಲ 6.4 ಓವರ್​​​ಗಳಲ್ಲಿ 338 ರನ್​ಗಳ ಗುರಿ ಬೆನ್ನಟ್ಟಬೇಕಿತ್ತು. ಆದರೆ ಇದು ಅಸಾಧ್ಯವಾಗಿತ್ತು. ಟೂರ್ನಿಯಲ್ಲಿ ಒಟ್ಟು 4 ಪಂದ್ಯಗಳಲ್ಲಿ ಗೆದ್ದಿರುವ ಪಾಕಿಸ್ತಾನ, 5ರಲ್ಲಿ ಸೋಲು ಕಂಡಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್​, 50 ಓವರ್​​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್​ಗಳ ಬೃಹತ್ ಮೊತ್ತ ಕಲೆ ಹಾಕಿತು. ಬೆನ್​ಸ್ಟೋಕ್ಸ್​ 84 ರನ್, ಜೋ ರೂಟ್ 60 ರನ್ ಸಿಡಿಸಿದರು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 44.3 ಓವರ್​​ಗಳಲ್ಲಿ 244 ರನ್​ಗಳಿಗೆ ಆಲೌಟ್​ ಆಯಿತು.

ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಪಾಕ್

338 ರನ್​ಗಳ ಮೊತ್ತ ಹಿಂಬಾಲಿಸಿದ ಪಾಕ್, ತನ್ನ ಇನ್ನಿಂಗ್ಸ್​ನ 2ನೇ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ಅಬ್ದುಲ್ಲಾ ಶಫೀಕ್​, ಡೇವಿಡ್ ವಿಲ್ಲಿ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ನಂತರ ಮತ್ತೊಬ್ಬ ಆರಂಭಿಕ ಆಟಗಾರ ಫಖರ್ ಜಮಾನ್ 1 ರನ್ ಗಳಿಸಿ ನಿರಾಸೆ ಮೂಡಿಸಿದರು. ಡೇವಿಡ್ ವಿಲ್ಲಿ ಈ ಇಬ್ಬರಿಗೂ ಗೇಟ್​​ಪಾಸ್ ನೀಡಿದರು.

ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಚೇತರಿಕೆ ನೀಡುವ ಭರವಸೆ ಸೃಷ್ಟಿಸಿದರು. ಆದರೆ ಬಾಬರ್​ 38, ರಿಜ್ವಾನ್ 36 ರನ್ ಸಿಡಿಸಿ ನಿರ್ಗಮಿಸಿದರು. ನಂತರ ಸೌದ್ ಶಕೀಲ್ 29, ಇಫ್ತಿಕಾರ್ ಅಹ್ಮದ್ 3, ಶಾದಾಬ್ ಖಾನ್ 4 ರನ್ ಗಳಿಸಿ ನಿರಾಸೆ ಮೂಡಿಸಿದರು.

ಇದರೊಂದಿಗೆ ತಂಡವು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಆಘಾ ಸಲ್ಮಾನ್ ಅರ್ಧಶತಕ ಸಿಡಿಸಿ ಮಿಂಚಿದರು. 45 ಎಸೆತಗಳಲ್ಲಿ 51 ರನ್ ಗಳಿಸಿದರು. ಹಾಫ್ ಸೆಂಚುರಿ ಬೆನ್ನಲ್ಲೇ ಡೇವಿಡ್ ವಿಲ್ಲಿಗೆ 100ನೇ ಏಕದಿನ ವಿಕೆಟ್​ಗೆ ಬಲಿಯಾದರು. ಕೊನೆಯಲ್ಲಿ ಶಾಹೀನ್ ಅಫ್ರಿದಿ 25, ಹ್ಯಾರಿಸ್ ರೌಫ್ 35 ರನ್​ಗಳ ಕಾಣಿಕೆ ನೀಡಿದರಾದರೂ ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ.

ಇಂಗ್ಲೆಂಡ್ ಸ್ಕೋರ್ ವಿವರ

ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಡೇವಿಡ್ ಮಲಾನ್ 31 ರನ್ ಸಿಡಿಸಿ ಔಟಾದರೆ, ಜಾನಿ ಬೈರ್​ ಸ್ಟೋ ಅರ್ಧಶತಕ ಸಿಡಿಸಿ ಮಿಂಚಿದರು. ಮಲಾನ್-ಬೈರ್​​ಸ್ಟೋ ಔಟಾದ ಬೆನ್ನಲ್ಲೇ ಬೆನ್​ಸ್ಟೋಕ್ಸ್ ಮತ್ತು ಜೋ ರೂಟ್ 3ನೇ ವಿಕೆಟ್​ಗೆ 132ರನ್​ಗಳ ಜೊತೆಯಾಟವಾಡಿದರು.

ಅರ್ಧಶತಕ ಸಿಡಿಸಿದ ಸ್ಟೋಕ್ಸ್-ರೂಟ್

ಭರ್ಜರಿ ಫಾರ್ಮ್​ನಲ್ಲಿದ್ದ ಬೆನ್ ಸ್ಟೋಕ್ಸ್​ ಈ ಪಂದ್ಯದಲ್ಲೂ ಭರ್ಜರಿ ಅರ್ಧಶತಕ ಸಿಡಿಸಿದರು. 76 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಿತ 84 ರನ್ ಗಳಿಸಿದರು. ಸ್ಟೋಕ್ಸ್​ ಬೆನ್ನಲ್ಲೇ 72 ಎಸೆತಗಳಲ್ಲಿ 4 ಬೌಂಡರಿ ಸಹಿತ 60 ರನ್ ಸಿಡಿಸಿ ರೂಟ್ ಔಟಾದರು. ಬಳಿಕ ಜೋಸ್ ಬಟ್ಲರ್ ಮತ್ತು ಹ್ಯಾರಿ ಬ್ರೂಕ್ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಬಟ್ಲರ್​ 27, ಬ್ರೂಕ್ 30, ಮೊಯಿನ್ ಅಲಿ 8, ಡೇವಿಡ್ ವಿಲ್ಲಿ 15 ರನ್ ಗಳಿಸಿದರು. ಅಂತಿಮವಾಗಿ ಇಂಗ್ಲೆಂಡ್ 50 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತು. ಹ್ಯಾರಿಸ್ ರೌಫ್ 3, ಮೊಹಮ್ಮದ್ ವಾಸೀಂ, ಶಾಹೀನ್ ಅಫ್ರಿದಿ ತಲಾ 2, ಇಫ್ತಿಕರ್ ಅಹ್ಮದ್ 1 ವಿಕೆಟ್ ಪಡೆದರು.

Whats_app_banner