ಮಂಗಗಳು ಕೂಡ ನಿಮಗಿಂತ ಕಡಿಮೆ ತಿನ್ನುತ್ತವೆ; ಪಾಕಿಸ್ತಾನ ಆಟಗಾರರ ಆಹಾರ ಪದ್ಧತಿ ಟೀಕಿಸಿದ ವಾಸೀಂ ಅಕ್ರಮ್
ಭಾರತ ವಿರುದ್ಧದ ಪಂದ್ಯದ ವೇಳೆ ಪಾಕಿಸ್ತಾನ ಆಟಗಾರರಿಗೆ ಡ್ರಿಂಕ್ಸ್ ಬ್ರೇಕ್ ವೇಳೆ ಬಾಳೆಹಣ್ಣು ತುಂಬಿದ ಪ್ಲೇಟ್ ತಂದಿದ್ದನ್ನು ನೋಡಿ ನನಗೆ ಆಘಾತವನ್ನುಂಟು ಮಾಡಿದೆ ಎಂದು ವಾಸಿಮ್ ಅಕ್ರಮ್ ಕಿಡಿಕಾರಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ವಿರುದ್ಧ ಹೀನಾಯ ಸೋಲಿನ ನಂತರ ಪಾಕಿಸ್ತಾನದ ಮಾಜಿ ವೇಗಿ ವಾಸಿಮ್ ಅಕ್ರಮ್ ಅವರು ಪಾಕಿಸ್ತಾನ ಆಟಗಾರರ ಆಹಾರ ಪದ್ಧತಿಯನ್ನು ಟೀಕಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ (ಹೈಬ್ರಿಡ್ ಮಾದರಿ) ಆತಿಥ್ಯ ವಹಿಸುತ್ತಿರುವ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಭಾರತದ ವಿರುದ್ಧ ಮೊದಲ 2 ಪಂದ್ಯಗಳನ್ನು ಸೋತ ನಂತರ ಗುಂಪು ಹಂತದಲ್ಲಿ ಪಂದ್ಯಾವಳಿಯಿಂದ ಹೊರಬಿದ್ದಿದೆ.
ಪಾಕ್ ಸೆಮೀಸ್ ಆಸೆ ಜೀವಂತವಾಗಿರಲು ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ಗೆಲುವು ಸಾಧಿಸುವುದು ಅಗತ್ಯವಾಗಿತ್ತು. ಆದರೆ, ಸೋಮವಾರ ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ವಿರುದ್ಧ ಕಿವೀಸ್ ತಂಡ 5 ವಿಕೆಟ್ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ. ಭಾರತವೂ ಅಧಿಕೃತವಾಗಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತು. ಇದರ ಬೆನ್ನಲ್ಲೇ ವಾಸೀಂ ಅಕ್ರಮ್ ಪಾಕ್ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ಬಾಳೆಹಣ್ಣುಗಳಿಂದ ತುಂಬಿದ ತಟ್ಟೆಯೊಂದನ್ನು ತಂದಿದ್ದರ ಬಗ್ಗೆ ಅಕ್ರಮ್ ಆಘಾತ ವ್ಯಕ್ತಪಡಿಸಿದ್ದಾರೆ. ಅದು 2ನೇ ಅಥವಾ 3ನೇ ಡ್ರಿಂಕ್ಸ್ ಬ್ರೇಕ್ ಎಂದು ನಾನು ಭಾವಿಸುತ್ತೇನೆ. ಆಟಗಾರರು ತಿನ್ನಲು ಬಾಳೆಹಣ್ಣು ತುಂಬಿದ ತಟ್ಟೆ ತಂದಿದ್ದನ್ನು ನಾನು ಗಮನಿಸಿದೆ. ಕೋತಿಗಳು ಸಹ ಅಷ್ಟೊಂದು ಬಾಳೆಹಣ್ಣುಗಳನ್ನು ತಿನ್ನುವುದಿಲ್ಲ. ಇದು ಅವರ ಆಹಾರ ಎಂದು ಅಕ್ರಮ್ ಟೀಕಿಸಿದ್ದಾರೆ.
'ಪಾಕಿಸ್ತಾನದ ಬೌಲಿಂಗ್ ಸರಾಸರಿ ಕೆಟ್ಟದಾಗಿದೆ'
ತಮ್ಮ ಶ್ರೇಷ್ಠ ಏಕದಿನ ವೃತ್ತಿಜೀವನದಲ್ಲಿ 502 ವಿಕೆಟ್ಗಳನ್ನು ಪಡೆದಿರುವ ದಿಗ್ಗಜ ವೇಗಿ, ಕಳೆದ 5 ಪಂದ್ಯಗಳಲ್ಲಿ ಕಳಪೆ ಬೌಲಿಂಗ್ ಸರಾಸರಿ ಹೊಂದಿರುವ ಪಾಕಿಸ್ತಾನದ ಬೌಲರ್ಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಒಮಾನ್ ಮತ್ತು ಯುಎಸ್ಎ ತಂಡಗಳಿಗಿಂತ ಕೆಟ್ಟದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 5 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನದ ಬೌಲರ್ಗಳು 60ರ ಸರಾಸರಿಯಲ್ಲಿ 24 ವಿಕೆಟ್ ಪಡೆದಿದ್ದಾರೆ. ಅಂದರೆ ಪ್ರತಿ ವಿಕೆಟ್ಗೆ 60 ರನ್. ನಮ್ಮ ಸರಾಸರಿ ಒಮಾನ್ ಮತ್ತು ಯುಎಸ್ಎಗಿಂತಲೂ ಕಳಪೆಯಾಗಿದೆ. ಏಕದಿನ ಕ್ರಿಕೆಟ್ ಆಡುತ್ತಿರುವ 14 ತಂಡಗಳಲ್ಲಿ ಪಾಕಿಸ್ತಾನದ ಬೌಲಿಂಗ್ ಸರಾಸರಿ 2ನೇ ಕೆಟ್ಟ ತಂಡವಾಗಿದೆ ಎಂದು ಹೇಳಿದ್ದಾರೆ.
ನಾಯಕ, ಆಯ್ಕೆ ಸಮಿತಿ ಕರೆದು ಪ್ರಶ್ನಿಸಿ
ಆಯ್ಕೆ ಸಮಿತಿ ಮತ್ತು ನಾಯಕನನ್ನು ಕರೆದು ಚಾಂಪಿಯನ್ಸ್ ಟ್ರೋಫಿಗೆ ತಂಡದ ಆಯ್ಕೆಗೆ ಸಂಬಂಧಿಸಿದಂತೆ ಕಠಿಣ ಪ್ರಶ್ನೆಗಳನ್ನು ಕೇಳುವಂತೆ ಪಿಸಿಬಿ ಮುಖ್ಯಸ್ಥರನ್ನು ಒತ್ತಾಯಿಸಿದ್ದಾರೆ.
ಪಿಸಿಬಿ ಅಧ್ಯಕ್ಷರು ದಯವಿಟ್ಟು ನಾಯಕ, ಆಯ್ಕೆ ಸಮಿತಿ ಮತ್ತು ತರಬೇತುದಾರರನ್ನು ಕರೆದು ಅವರು ಯಾವ ರೀತಿಯ ಆಯ್ಕೆ ಮಾಡಿದ್ದಾರೆ ಎಂದು ಕೇಳಿ. ಖುಷ್ದಿಲ್ ಶಾ ಮತ್ತು ಸಲ್ಮಾನ್ ಆಘಾ ಅವರು ಎಂದಾದರೂ ವಿಕೆಟ್ ಪಡೆಯುವಂತೆ ಕಾಣುತ್ತಿದ್ದರೇ? ಈ ತಂಡವು ಉತ್ತಮವಾಗಿಲ್ಲ ಎಂದು ನಾನು ವಾರಗಟ್ಟಲೆ ಅಕ್ಷರಶಃ ಕೂಗಿ ಹೇಳಿದ್ದೇನೆ. ಆದರೆ ಯಾರೂ ಕಿವಿಗೂಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
