ವಿರಾಟ್‌ ಕೊಹ್ಲಿ ಕ್ಲೀನ್​ ಬೋಲ್ಡ್ ಮಾಡಿದ ಹಿಮಾಂಶು ಸಾಂಗ್ವಾನ್ ಯಾರು; ರೈಲ್ವೆ ಟಿಕೆಟ್ ಕಲೆಕ್ಟರ್ ಈಗ ಸ್ಟಾರ್‌ ಬೌಲರ್
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್‌ ಕೊಹ್ಲಿ ಕ್ಲೀನ್​ ಬೋಲ್ಡ್ ಮಾಡಿದ ಹಿಮಾಂಶು ಸಾಂಗ್ವಾನ್ ಯಾರು; ರೈಲ್ವೆ ಟಿಕೆಟ್ ಕಲೆಕ್ಟರ್ ಈಗ ಸ್ಟಾರ್‌ ಬೌಲರ್

ವಿರಾಟ್‌ ಕೊಹ್ಲಿ ಕ್ಲೀನ್​ ಬೋಲ್ಡ್ ಮಾಡಿದ ಹಿಮಾಂಶು ಸಾಂಗ್ವಾನ್ ಯಾರು; ರೈಲ್ವೆ ಟಿಕೆಟ್ ಕಲೆಕ್ಟರ್ ಈಗ ಸ್ಟಾರ್‌ ಬೌಲರ್

Who is Himanshu Sangwan: ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ ಮುಂದುವರೆದಿದೆ. ರಣಜಿ ಟ್ರೋಫಿ ಕಮ್‌ಬ್ಯಾಕ್‌ ಪಂದ್ಯದಲ್ಲೂ ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದ್ದಾರೆ. ರೈಲ್ವೇಸ್‌ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ವಿರಾಟ್‌ ನಿರಾಶೆ ಮೂಡಿಸಿದ್ದಾರೆ. ಹಿಮಾಂಶು ಸಾಂಗ್ವಾನ್ ಸ್ಟಾರ್‌ ಬೌಲರ್‌ ಆಗಿ ಹೊರಹೊಮಿದ್ದಾರೆ.

ವಿರಾಟ್‌ ಕೊಹ್ಲಿ ಕ್ಲೀನ್​ ಬೋಲ್ಡ್ ಮಾಡಿದ ಹಿಮಾಂಶು ಸಾಂಗ್ವಾನ್ ಯಾರು
ವಿರಾಟ್‌ ಕೊಹ್ಲಿ ಕ್ಲೀನ್​ ಬೋಲ್ಡ್ ಮಾಡಿದ ಹಿಮಾಂಶು ಸಾಂಗ್ವಾನ್ ಯಾರು

ದೆಹಲಿ: ಭಾರಿ ನಿರೀಕ್ಷೆ ಮೂಡಿಸಿದ್ದ ವಿರಾಟ್‌ ಕೊಹ್ಲಿ ರಣಜಿ ಟ್ರೋಫಿ ಪುನರಾಗಮನದ ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಶೆಯಾಗಿದೆ. ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಕಿಕ್ಕರಿದು ಸೇರಿದ್ದ ಫ್ಯಾನ್ಸ್‌, ವಿರಾಟ್‌ ಕಳಪೆ ಪ್ರದರ್ಶನದಿಂದ ಬೇಸರಗೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫಾರ್ಮ್‌ನಲ್ಲಿ ಇರದ ಕೊಹ್ಲಿ, ಇದೀಗ ದೇಶೀಯ ಕ್ರಿಕೆಟ್‌ನಲ್ಲೂ ಮುಗ್ಗರಿಸಿದ್ದಾರೆ. ಅನನುಭವಿ ಬೌಲರ್‌ಗಳ ಮುಂದೆ ಬ್ಯಾಟ್‌ ಬೀಸಲು ಪರದಾಡಿದ್ದಾರೆ. ದೆಹಲಿ ಮತ್ತು ರೈಲ್ವೇಸ್ ತಂಡಗಳ ನಡುವಿನ ರಣಜಿ ಟ್ರೋಫಿ ಪಂದ್ಯದ 2ನೇ ದಿನದಂದು ಭಾರತದ ಸ್ಟಾರ್‌ ಬ್ಯಾಟರ್‌ ಬ್ಯಾಟ್‌ನಿಂದ ಪ್ರಭಾವ ಬೀರಲು ವಿಫಲರಾಗಿದ್ದಾರೆ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ನಿರಾಶೆಯಾಗಿದೆ.

ಡೆಲ್ಲಿ ಬ್ಯಾಟರ್‌ ಕೇವಲ 6 ರನ್‌ ಗಳಿಸಿ ಔಟ್ ಆದರು. ಅದರ ಬೆನ್ನಲ್ಲೇ ಅವರ ಫಾರ್ಮ್ ಬಗ್ಗೆ ಮತ್ತೆ ಚಿಂತೆ ಶುರುವಾಗಿದೆ. ಮುಂದೆ ಮಹತ್ವದ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದ್ದು, ಭರವಸೆಯ ಬ್ಯಾಟರ್‌ ಇನ್ನೂ ಫಾರ್ಮ್‌ಗೆ ಬಂದಿಲ್ಲ.

ಯಶ್ ಧುಲ್ ಔಟಾದ ನಂತರ ಕೊಹ್ಲಿ ಬ್ಯಾಟಿಂಗ್ ಮಾಡಲು ಬಂದರು. ಇದು ಸ್ಟೇಡಿಯಂನಲ್ಲಿ ಅಭಿಮಾನಿಗಳು ಬಲು ನಿರೀಕ್ಷೆಯಿಂದ ಕಾಯುತ್ತಿದ್ದ ಕ್ಷಣ. ಕೆಲವೇ ಕೆಲವು ಎಸೆತಗಳನ್ನು ಎದುರಿಸಿದ ವಿರಾಟ್‌, ಕ್ರೀಸ್‌ಕಚ್ಚಿ ಆಡಲು ಸಾಧ್ಯವಾಗಲಿಲ್ಲ. 15 ಎಸೆತಗಳಲ್ಲಿ 6 ರನ್ ಗಳಿಸಿದರು. ಈ ವೇಳೆ ಹಿಮಾಂಶು ಸಾಂಗ್ವಾನ್ ಬೌಲಿಂಗ್‌ ದಾಳಿಗೆ ಬಂದರು. ಮೊದಲಿಗೆ ಕೊಹ್ಲಿ ಬೌಂಡರಿ ಬಾರಿಸಿದರು. ಅದಾದ ನಂತರದ ಎಸೆತದಲ್ಲಿ ವಿರಾಟ್ ಕೊಹ್ಲಿ ಮತ್ತೆ ಕ್ರೀಸ್‌ನಿಂದ ಮುಂದೆ ಬಂದು ದೊಡ್ಡ ಹೊಡೆತಕ್ಕೆ ಮುಂದಾದರು. ಆದರೆ ಚೆಂಡು ಬ್ಯಾಟ್ ಮತ್ತು ಪ್ಯಾಡ್ ನಡುವೆ ಹಾದು ಹೋಗಿ ಆಫ್-ಸ್ಟಂಪ್‌ಗೆ ಅಪ್ಪಳಿಸಿತು.

ಕೊಹ್ಲಿ ವಿಕೆಟ್‌ ಒಪ್ಪಿಸಿದ್ದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನೆರೆದಿದ್ದ ದೆಹಲಿ ಪ್ರೇಕ್ಷಕರಿಗೆ ಆಘಾತವನ್ನುಂಟು ಮಾಡಿತು.

ಹಿಮಾಂಶು ಸಾಂಗ್ವಾನ್ ಯಾರು?

ಮಧ್ಯಮ ಬಲಗೈ ವೇಗಿ ಸಾಂಗ್ವಾನ್ ದೆಹಲಿ ಮೂಲದವರಾಗಿದ್ದು, 2019ರ ಸೆಪ್ಟೆಂಬರ್‌ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ರೈಲ್ವೇಸ್‌ ಪರ ಲಿಸ್ಟ್ ಎ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆ ನಂತರ 2019-20ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಟಿ20 ಸ್ವರೂಪಕ್ಕೆ ಪದಾರ್ಪಣೆ ಮಾಡಿದರು. 2019ರ ಡಿಸೆಂಬರ್‌ನಲ್ಲಿ ರಣಜಿ ಟ್ರೋಫಿಯಲ್ಲಿ ರೈಲ್ವೇಸ್ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.‌

ಈ ಹಿಂದೆ ಅವರು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡಿದ್ದರು. ಅಲ್ಲದೆ ಎಂಆರ್‌ಎಫ್ ಪೇಸ್ ಫೌಂಡೇಶನ್‌ನಲ್ಲಿ ತರಬೇತಿ ಪಡೆದಿದ್ದಾರೆ. ಅಲ್ಲಿ ಆಸೀಸ್ ದಿಗ್ಗಜ ಗ್ಲೆನ್ ಮೆಕ್‌ಗ್ರಾತ್ ಅವರ ಅಡಿಯಲ್ಲಿ ತರಬೇತಿ ಪಡೆದರು.

ಕೊಹ್ಲಿ ಇತ್ತೀಚೆಗೆ ಕಳಪೆ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸಮಯದಲ್ಲಿ ಅಬ್ಬರ ಮರೆತಿದ್ದರು. ಸ್ಟಾರ್‌ ಆಟಗಾರರ ಕಳಪೆ ಫಾರ್ಮ್ ಕಾರಣದಿಂದಾಗಿ, ರಣಜಿ ಟ್ರೋಫಿಯಲ್ಲಿ ಭಾಗವಹಿಸುವಂತೆ ರಾಷ್ಟ್ರೀಯ ತಂಡದ ಆಟಗಾರರ ಮೇಲೆ ಬಿಸಿಸಿಐ ಒತ್ತಡ ಹೇರಿದೆ. ಮುಂಬೈ ಪರ ರೋಹಿತ್ ಶರ್ಮಾ ಆಡಿದರೆ, ಶುಭ್ಮನ್ ಗಿಲ್, ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್ ಆಡಿದ್ದಾರೆ.

Whats_app_banner