ಪ್ರೇಯಸಿಗಾಗಿ ದೇಶವನ್ನೇ ತೊರೆದ ಭಾರತದ ಕ್ರಿಕೆಟಿಗ ಈತ; ಜೀವನ, ವೃತ್ತಿಜೀವನ ಎರಡನ್ನೂ ಪಣಕ್ಕಿಟ್ಟು ಪ್ರೀತಿ ಗೆದ್ದ, ಆದರೆ..!
Mahalingam Venkatesan: ಪ್ರೀತಿಸಿದ ಪ್ರೇಯಸಿಗಾಗಿ ದೇಶವನ್ನೇ ತೊರೆದು ದಕ್ಷಿಣ ಆಫ್ರಿಕಾಗೆ ತಮಿಳುನಾಡನ್ನು ಪ್ರತಿನಿಧಿಸಿದ್ದ ಭಾರತದ ಮಾಜಿ ಕ್ರಿಕೆಟಿಗನ ಕಥೆ ಇದು. ಎಷ್ಟೇ ರೊಮ್ಯಾಂಟಿಕ್ ಮತ್ತು ಕ್ಲಾಸಿಕ್ ಪ್ರೇಮಕಥೆಗಳಿದ್ದರೂ ಕ್ರಿಕೆಟಿಗ ಮಹಾಲಿಂಗಂ ವೆಂಕಟೇಶನ್ ಪ್ರೇಮಕಥೆ ಅವೆಲ್ಲವನ್ನೂ ಮೀರಿದ್ದು.

ಪ್ರೀತಿ ಎನ್ನುವುದು ಒಂದೇ ಪದವಾದರೂ ಅದಕ್ಕಿರುವ ಶಕ್ತಿ ಜಗತ್ತನ್ನೇ ಗೆಲ್ಲುವಷ್ಟು. ಅದು ಪ್ರತಿಯೊಬ್ಬರ ಜೀವನದಲ್ಲಿ ಒಂದು ಸುಂದರ ಸಿಹಿ ನೆನಪು. ಅದರಲ್ಲೂ ಹುಡುಗರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ತಾವು ಪ್ರೀತಿಸಿದ ಹುಡುಗಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರು. ಎಲ್ಲಿಗೆ ಬೇಕಾದರೂ ಹೋಗುತ್ತಾರೆ, ಅಗತ್ಯ ಬಿದ್ದರೆ ಪ್ರಾಣವನ್ನೇ ಪಣಕ್ಕಿಡಲೂ ಹಿಂಜರಿಯುವುದಿಲ್ಲ. ಇದಕ್ಕೆ ನಮ್ಮ ಕ್ರಿಕೆಟಿಗರೂ ಹೊರತಾಗಿಲ್ಲ. ಏಕೆಂದರೆ ಭಾರತೀಯ ಕ್ರಿಕೆಟ್‌ನಲ್ಲೂ ಹಲವು ಪ್ರೇಮಕಥೆಗಳಿವೆ ಎಂಬುದು ಗೊತ್ತಿರುವ ಸಂಗತಿ. ಮನ್ಸೂರ್ ಅಲಿಖಾನ್ ಪಟೌಡಿ-ಶರ್ಮಿಳಾ ಟ್ಯಾಗೋರ್ ಅವರಿಂದ ಹಿಡಿದು ಗಂಗೂಲಿ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ.. ಹೀಗೆ ಹಲವು ಪ್ರೇಮಕಥೆಗಳು ತ್ರಿಕೋನ ಬಂಧಗಳಾಗಿ ಪರಿವರ್ತನೆಗೊಂಡು ಆದರ್ಶವಾಗಿ ನಿಂತಿವೆ.
ಆದರೆ, ಎಷ್ಟೇ ರೊಮ್ಯಾಂಟಿಕ್ ಮತ್ತು ಕ್ಲಾಸಿಕ್ ಪ್ರೇಮಕಥೆಗಳಿದ್ದರೂ ಕ್ರಿಕೆಟಿಗ ಮಹಾಲಿಂಗಂ ವೆಂಕಟೇಶನ್ (ಪ್ರೀತಿಯಿಂದ ಮಾಲಿ ಎಂದು ಕರೆಯಲಾಗುತ್ತಿತ್ತು) ಪ್ರೇಮಕಥೆ ಅವೆಲ್ಲವನ್ನೂ ಮೀರಿದ್ದು. ಮಾಲಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಸಲುವಾಗಿ ತಾನು ಮಾಡಿದ ಸಾಹಸಗಳು ಒಂದೆರಡಲ್ಲ. ವಿಶ್ವ ಪ್ರಸಿದ್ಧ ರೋಮ್ಯಾಂಟಿಕ್, ಕ್ಲಾಸಿಕ್ ಲವ್ ಸ್ಟೋರಿಗಳು ಈ ಪ್ರೇಮಕಥೆಯ ಮುಂದೆ ಮುಸುಕಾಗುತ್ತವೆ ಎಂದರೂ ತಪ್ಪಿಲ್ಲ. ತನ್ನ ಪ್ರೀತಿಗಾಗಿ ತಮ್ಮ ವೃತ್ತಿಜೀವನ ಮತ್ತು ತನ್ನ ಜೀವನವನ್ನೇ ಪಣಕ್ಕಿಟ್ಟರು. ನಿಯಮಗಳನ್ನೇ ಮುರಿದು ದೇಶವನ್ನು ದಾಟಿದರು. ಆತ ತೆಗೆದುಕೊಂಡ ನಿರ್ಧಾರ ಅವರ ಜೀವನವನ್ನು ಅಪಾಯಕ್ಕೆ ತಳ್ಳಿತು. ಪ್ರೇಮದ ವಿಚಾರದಲ್ಲಿ ಯಶಸ್ಸು ಕಂಡರೂ ವೃತ್ತಿಜೀವನ ಹಾಳು ಮಾಡಿಕೊಂಡರು. ಇದರಿಂದ ನಿಷೇಧಕ್ಕೂ ಒಳಗಾದರು. ಎಲ್ಲವನ್ನೂ ಬಿಟ್ಟು ವಿದೇಶದಲ್ಲಿ ನೆಲೆಸಿದರು. ಆದರೆ ಕ್ರಿಕೆಟ್ ಆಡದಿದ್ದರೂ ಈಗ ಅವರು ಮಿಲೇನಿಯರ್ ಆಗಿದ್ದಾರೆ. ಈಗ ಅವರು ಚೆನ್ನೈ ಸೂಪರ್ ಕಿಂಗ್ಸ್‌ನ ಅತಿಥಿಯೂ ಹೌದು!
ಮಾಲಿ ಲವ್ಸ್ಟೋರಿ
ಮಾಲಿ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಲವ್ ಸ್ಟೋರಿ ಮತ್ತು ಸಿಎಸ್‌ಕೆ ಜತೆಗಿನ ಸಂಬಂಧದ ಬಗ್ಗೆ ವಿವರಿಸಿದ್ದಾರೆ. ಮಾಲಿ 1970-80ರಲ್ಲಿ ಟೀಮ್ ಇಂಡಿಯಾ ಪ್ರಾದೇಶಿಕ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಮುಖ್ಯವಾಗಿ ಕೆಳ-ಡಿವಿಷನ್ ಲೀಗ್ಗಳಲ್ಲಿ ಆಡಿ ಉತ್ತಮ ಹೆಸರು ಸಂಪಾದಿಸಿದ್ದ ಅವರು, ಚೆನ್ನೈನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿ ಅನೇಕ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ. ಅವರು ಪ್ರತಿನಿಧಿಸಿದ ತಂಡಗಳಲ್ಲಿ ಇಂಡಿಯಾ ಸಿಮೆಂಟ್ಸ್ ಒಡೆತನದ ಜಾಲಿ ರೋವರ್ಸ್ ಕ್ಲಬ್ ಕೂಡ ಸೇರಿತ್ತು. 1978ರಲ್ಲಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಂಡವನ್ನು ಸೇರಿದ್ದರು. ಕ್ರಿಕೆಟ್ ದಿಗ್ಗಜರಾದ ಸೈಯದ್ ಕಿರ್ಮಾನಿ ಮತ್ತು ಕ್ರಿಸ್ ಶ್ರೀಕಾಂತ್ ಅವರೊಂದಿಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು. ಆದಾಗ್ಯೂ, ಪ್ರೀತಿ ಬಲೆಯೊಳಗೆ ಸಿಲುಕಿದ ಕಾರಣ ಅವರ ಜೀವನ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಹೇಗಿತ್ತು ಮಾಲಿ ಲವ್ಸ್ಟೋರಿ? ಇಲ್ಲಿದೆ ವಿವರ.
ಪ್ರೇಯಸಿಗಾಗಿ ಸೌತ್ ಆಫ್ರಿಕಾಗೆ ಹೋಗಿದ್ದ ಮಾಲಿ
‘ನನ್ನ ಪತ್ನಿ ಪ್ರಿಸ್ಸಿಲ್ಲಾ (Priscilla) ಇದ್ದದ್ದು ದಕ್ಷಿಣ ಆಫ್ರಿಕಾದಲ್ಲಿ. ಅವರು ಭಾರತದ ಮೂಲದವರು. ಆಕೆ 1983ರಲ್ಲಿ ಭಾರತಕ್ಕೆ ಬಂದಾಗ ನಾನು ಭೇಟಿಯಾಗಿದ್ದೆ. ನಂತರ ಪ್ರಿಸ್ಸಿಲ್ಲಾ ತನ್ನ ತಾಯ್ನಾಡಿಗೆ ಹೋದರು. ಆಕೆಯನ್ನು ನೋಡಿದ ತಕ್ಷಣ ಫಿದಾ ಆಗಿದ್ದೆ, ಪ್ರೀತಿಯಲ್ಲಿ ಬಿದ್ದೆ. ಬಿಟ್ಟು ಹೋದ ತಕ್ಷಣ ನನಗೆ ಆಕೆಯ ನೆನಪು ಕಾಡುತ್ತಿತ್ತು. ಹೇಗಾದರೂ ಸರಿ ಆಕೆಯನ್ನು ಭೇಟಿ ಮಾಡಬೇಕು ಎಂದುಕೊಂಡೆ. ಹೀಗಾಗಿ ಸೌತ್ ಆಫ್ರಿಕಾಗೆ ಹೋಗಲು ಹಲವು ದಾರಿಗಳನ್ನು ಹುಡುಕಿದೆ. ಏಕೆಂದರೆ ಆಗ ಸೌತ್ ಆಫ್ರಿಕಾಗೆ ಪ್ರಯಾಣಿಸುವುದು ಸುಲಭವಾಗಿರಲಿಲ್ಲ. ಆ ಸಮಯದಲ್ಲಿ ಭಾರತ ಸರ್ಕಾರದಿಂದ ದಕ್ಷಿಣ ಆಫ್ರಿಕಾದಲ್ಲಿ ನನಗೆ ದೂರದ ಸಂಬಂಧಿಯೊಬ್ಬರಿದ್ದಾರೆ ಎಂದು ವಿಶೇಷ ಅನುಮತಿ ಪಡೆದಿದ್ದೆ. ಆದರೆ ಇದೆಲ್ಲವೂ ಆಕೆಯ ಭೇಟಿಗಾಗಿ ಹೇಳಿದ್ದ ಸುಳ್ಳು. ಆಗ ನನಗೆ 24 ಅಥವಾ 25 ವಯಸ್ಸಾಗಿತ್ತು. ನಾನು ಡರ್ಬನ್ನಲ್ಲಿ ಇಳಿದಾಗ ಬೆನ್ನಲ್ಲೇ ಭೇಟಿಯಾಗುವಂತೆ ಆಕೆಗೆ ತಿಳಿಸಿದ್ದೆ. ಪ್ರಿಸ್ಸಿಲ್ಲಾ ನನ್ನ ಮಾತನ್ನು ಮೊದಲು ನಂಬಲಿಲ್ಲ. ಆಗ ಭಾರತದಿಂದ ನಿನಗಾಗಿಯೇ ಬಂದಿದ್ದೇನೆ ಎಂದು ಹೇಳಿದ್ದೆ. ಆ ಬಳಿಕ ನಮ್ಮಿಬ್ಬರ ಪರಿಚಯ ಮತ್ತೊಂದು ಹಂತಕ್ಕೆ ಹೋಯಿತು. ಅದೇ ಮದುವೆ. ನಾವು 38 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ’ ಎಂದು 70 ವರ್ಷದ ಮಾಲಿ ಹೇಳಿದ್ದಾರೆ.
ವೀಸಾ ಅವಧಿ ಮುಕ್ತಾಯ, ಭಾರತಕ್ಕೆ ವಾಪಸ್
‘ನನ್ನ ಹೆಂಡತಿ [ಆಗ ಗೆಳತಿ] ಮತ್ತು ಆಕೆಯ ಸಹೋದರಿ ಕರೆನ್ಸಿ ವಿನಿಮಯಕ್ಕಾಗಿ ಎಸ್ಬಿಐಗೆ (ಭಾರತಕ್ಕೆ) ಬಂದಿದ್ದರು. ಭಾರತ-ವೆಸ್ಟ್ ಇಂಡೀಸ್ ನಡುವೆ ಚೆನ್ನೈನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ನಾನು ಆಕೆಯನ್ನು ಪಂದ್ಯಕ್ಕೂ ಕರೆದೊಯ್ದಿದ್ದೆ’ ಎಂದಿದ್ದಾರೆ. ಮಾತು ಮುಂದುವರೆಸಿದ ಅವರು, ‘ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ಯುಗ ಅದಾಗಿತ್ತು. ದೇಶೀಯ ವ್ಯವಸ್ಥೆಯಲ್ಲಿ ನೇಟಾಲ್ ಕ್ರಿಕೆಟ್ ಅಸೋಸಿಯೇಷನ್ ಮತ್ತು ನೇಟಾಲ್ ಕ್ರಿಕೆಟ್ ಬೋರ್ಡ್ ಎಂಬ ಎರಡು ಮಂಡಳಿಗಳು ಕಾರ್ಯನಿರ್ವಹಿಸುತ್ತಿದ್ದವು. ನಾನು ಆಡಬೇಕು ಎಂದು ಬಯಸಿದ್ದೆ. ಅದರಂತೆ, ಬಹು-ಜನಾಂಗೀಯ ಸೆಟಪ್ ಅಲ್ಲದ ಸ್ಥಳೀಯ ತಂಡ ಸೇರಿದ್ದೆ. ಫೀನಿಕ್ಸ್ ಜಿಲ್ಲೆಯಲ್ಲಿ ನಡೆದ ಡರ್ಬನ್ನ ಎ-ಡಿವಿಷನ್ ಲೀಗ್ನಲ್ಲಿ ಪಾಸ್ಟರಲ್ಸ್ ಪರ ಕಾಣಿಸಿಕೊಂಡಿದ್ದೆ. ಮಹಾಲಿಂಗಂ ಮೂಡ್ಲೆ ಎಂಬ ಹೆಸರಿನೊಂದಿಗೆ ಆಡುತ್ತಿದ್ದೆ. ಆದರೆ ನನ್ನ ವೀಸಾ ಅವಧಿ ಮುಗಿಯುವ ಹಂತದಲ್ಲಿದ್ದಾಗ, ವಿಸ್ತರಣೆಗೆ ಅರ್ಜಿ ಸಲ್ಲಿಸಿದ್ದೆ. ಆದರೆ ತೊಡಕುಗಳು ಉದ್ಭವಿಸಿದವು. ಬಳಿಕ ಇಲ್ಲಿನ ರಾಯಭಾರಿ ನನ್ನನ್ನು ಸಂಪರ್ಕಿಸಿತ್ತು. ನಂತರ ರಾಯಭಾರಿ ಕಚೇರಿಯು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಅನ್ನು ಸಂಪರ್ಕಿಸಿತ್ತು. ಬಳಿಕ ಬೇರೆ ದಾರಿ ಇಲ್ಲದೆ, ಪ್ರಿಸಿಲ್ಲಾಳವನ್ನು ಬಿಟ್ಟು ಭಾರತಕ್ಕೆ ಬರುವಂತಾಯಿತು’ ಎಂದು ಮಾಲಿ ಹೇಳಿದ್ದಾರೆ.
ನಾನು ಇಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಕಾರಣ ಆಯ್ಕೆದಾರರು ಬೆನ್ಸನ್ ಮತ್ತು ಹೆಡ್ಜಸ್ ಟೂರ್ನಿಗಾಗಿ ನನ್ನನ್ನು ಭೇಟಿಯಾಗಿದ್ದರು. ನನ್ನನ್ನು ಆಯ್ಕೆಯೂ ಮಾಡಿದರು. ಆದರೆ, ಇದೇ ವೇಳೆ ನಾನು ದಕ್ಷಿಣ ಆಫ್ರಿಕಾದವನಲ್ಲ ಎಂದು ಆಯ್ಕೆದಾರರಿಗೆ ತಿಳಿಯಿತು. ಬಳಿಕ ಅವರು ನನ್ನನ್ನು ನಿಷೇಧಿಸಿದರು. ಆದ್ದರಿಂದ, ನಾನು ಭಾರತಕ್ಕೆ ಹಿಂತಿರುಗಿದೆ. ಆದರೆ ನಾನ ದಕ್ಷಿಣ ಆಫ್ರಿಕಾದಲ್ಲಿ ಆಡಿದ ಮೊದಲ ಭಾರತೀಯ. ಭಾರತಕ್ಕೆ ಮರಳುವುದಕ್ಕೂ ಮುನ್ನ ನಾನಿನ್ನೂ ಮದುವೆಯಾಗಿರಲಿಲ್ಲ ಎಂದು ಮಾಲಿ ಹೇಳಿದ್ದಾರೆ. ‘ಭಾರತಕ್ಕೆ ಮರಳಿದ ಬಳಿಕ ಪ್ರಶ್ನೆಗಳನ್ನು ಎದುರಿಸಿದೆ. ಈ ಪ್ರಕ್ರಿಯೆಯಲ್ಲಿ ಅನಿರೀಕ್ಷಿತ ಹೊಡೆತ ಬಿದ್ದಿತು. ನಾನು ಗಂಭೀರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದೆ. ಬಳಿಕ ಕ್ರಿಕೆಟ್‌ನಿಂದ ನಿವೃತ್ತನಾದೆ. ಬಳಿಕ ರೆಸ್ಟೋರೆಂಟ್ ಉದ್ಯಮ ಆರಂಭಿಸಿ ಉತ್ತಮ ಯಶಸ್ಸು ಕಂಡೆ. ಇದರ ನಡುವೆ ಪ್ರಿಸ್ಸಿಲ್ಲಾಳನ್ನು ಮದುವೆಯಾದೆ’ ಎಂದಿದ್ದಾರೆ.
ಅಪಘಾತ, ಮದುವೆ, ಉದ್ಯಮ, ಸಿಎಸ್‌ಕೆ ಜೊತೆ ಸಂಬಂಧ
‘ಭಾರತಕ್ಕೆ ಬಂದ ನಂತರ ಬೈಕ್ ಅಪಘಾತಕ್ಕೆ ಒಳಗಾದೆ. ಗಂಭೀರವಾಗಿ ಗಾಯಗೊಂಡೆ. ಶಸ್ತ್ರಚಿಕಿತ್ಸೆಗೂ ಒಳಗಾದೆ. ಇದು ನನ್ನ ವೃತ್ತಿಜೀವನಕ್ಕೂ ಅಡ್ಡಿಪಡಿಸಿತು. ಇಲ್ಲದಿದ್ದರೆ, ನಾನು ಹೆಚ್ಚು ಕ್ರಿಕೆಟ್ ಆಡುತ್ತಿದ್ದೆ. ಇದು ನನ್ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿತು’ ಎಂದಿದ್ದಾರೆ. ‘ನನ್ನ ಪತ್ನಿ 1986ರಲ್ಲಿ ಭಾರತಕ್ಕೆ ಮರಳಿದರು. ಇಬ್ಬರೂ ಅದೇ ವರ್ಷ ಮದುವೆಯಾದೆವು. ಮುಂದಿನ 15 ವರ್ಷಗಳ ಕಾಲ ಭಾರತದಲ್ಲೇ ಒಟ್ಟಿಗೆ ಜೀವನ ನಡೆಸಿದೆವು. ಬಳಿಕ ರೆಸ್ಟೋರೆಂಟ್ ಉದ್ಯಮಕ್ಕೆ ಕಾಲಿಟ್ಟೆ. 3 ಸಂಸ್ಥೆಗಳನ್ನು ತೆರೆದೆ. ಉತ್ತಮ ಲಾಭ ಪಡೆದೆ. ಗಣನೀಯವಾಗಿ ಉದ್ಯಮವನ್ನು ವಿಸ್ತರಿಸಿದೆ. ನಾನು ಕಳೆದ 24 ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿದ್ದೇನೆ’ ಎಂದರು. ಸಿಎಸ್‌ಕೆ ಮಾಲೀಕ ಶ್ರೀನಿವಾಸನ್ ಎನ್ ಮತ್ತು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ಗೆ ನಾನು ಕೃತಜ್ಞನಾಗಿದ್ದೇನೆ. 2009ರ ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಿದಾಗ ಸಿಎಸ್ಕೆಗೆ ಸಹಾಯ ಮಾಡುವ ಅವಕಾಶ ಸಿಕ್ಕಿತ್ತು. ಅಂದು ಕಾಶಿ ವಿಶ್ವನಾಥನ್ ಅವರು ಮಾಲಿ ಎಂದೆಂದಿಗೂ ನಮ್ಮ ಅತಿಥಿ ಎಂದಿದ್ದರು. ಅಂದಿನಿಂದ ಪ್ರತಿ ಐಪಿಎಲ್ನಲ್ಲೂ ನಾನು ಮತ್ತು ಪತ್ನಿ ಜೊತೆಗೆ ಭಾರತಕ್ಕೆ ಪ್ರವಾಸ ಕೈಗೊಳ್ಳಲು ಸಿಎಸ್‌ಕೆ ಸ್ಪಾನ್ಸರ್ ಮಾಡುತ್ತಿದೆ. ನಾನು ಸಿಎಸ್‌ಕೆ ಪಂದ್ಯಗಳನ್ನು ಆನಂದಿಸುತ್ತೇನೆ. ಭಾರತದಾದ್ಯಂತ ಪ್ರಯಾಣಿಸುತ್ತೇನೆ. ಕಳೆದ ವರ್ಷವೂ ನಾನು ಅಲ್ಲಿದ್ದೆ. ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಜೋಹಾನ್ಸ್ಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ನನ್ನನ್ನು ಸಾರ್ವಜನಿಕ ಅಧಿಕಾರಿಯಾಗಿ ನೇಮಿಸಿದರು ಎಂದು ಮಾಲಿ ಹೇಳಿದ್ದಾರೆ.
