ಹಿರಿಯರ ವಿದಾಯದ ಸುಳಿವು, ಯುವ ಪ್ರತಿಭೆಗಳ ಯುಗಾರಂಭ; 2025ರಲ್ಲಿ ಭಾರತೀಯ ಕ್ರಿಕೆಟ್‌ನ ನಿರೀಕ್ಷೆ ಮತ್ತು ಸವಾಲುಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಹಿರಿಯರ ವಿದಾಯದ ಸುಳಿವು, ಯುವ ಪ್ರತಿಭೆಗಳ ಯುಗಾರಂಭ; 2025ರಲ್ಲಿ ಭಾರತೀಯ ಕ್ರಿಕೆಟ್‌ನ ನಿರೀಕ್ಷೆ ಮತ್ತು ಸವಾಲುಗಳು

ಹಿರಿಯರ ವಿದಾಯದ ಸುಳಿವು, ಯುವ ಪ್ರತಿಭೆಗಳ ಯುಗಾರಂಭ; 2025ರಲ್ಲಿ ಭಾರತೀಯ ಕ್ರಿಕೆಟ್‌ನ ನಿರೀಕ್ಷೆ ಮತ್ತು ಸವಾಲುಗಳು

ಹೊಸ ವರ್ಷ 2025 ಆರಂಭವಾಗಿದ್ದು, ಭಾರತ ಪುರುಷರ ಮತ್ತು ವನಿತೆಯರ ಕ್ರಿಕೆಟ್‌ ತಂಡ ಒಂದಷ್ಟು ಸವಾಲುಗಳಿಗೆ ಸಜ್ಜಾಗಬೇಕಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ವನಿತೆಯರ ವಿಶ್ವಕಪ್‌ ಇರುವ ಮಹತ್ವದ ವರ್ಷಗಳಲ್ಲಿ ಟೀಮ್‌ ಇಂಡಿಯಾ ಮುಂದಿರುವ ಸವಾಲು ಹಾಗೂ ನಿರೀಕ್ಷೆಗಳ ಕುರಿತು ನೋಡೋಣ.

2025ರಲ್ಲಿ ಭಾರತೀಯ ಕ್ರಿಕೆಟ್‌ನ ನಿರೀಕ್ಷೆ ಮತ್ತು ಸವಾಲುಗಳು
2025ರಲ್ಲಿ ಭಾರತೀಯ ಕ್ರಿಕೆಟ್‌ನ ನಿರೀಕ್ಷೆ ಮತ್ತು ಸವಾಲುಗಳು (AP, AFP and ANI Images)

17 ವರ್ಷಗಳಿಂದ ಕಾಯುತ್ತಿದ್ದ ಟಿ20 ವಿಶ್ವಕಪ್‌ 2024ರಲ್ಲಿ ಭಾರತದ ಕೈಸೇರಿತು. ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಲು ಹಪಹಪಿಸುತ್ತಿದ್ದ ಟೀಮ್‌ ಇಂಡಿಯಾ, ಆ ಕೊತೆಯನ್ನು ನೀಗಿಸಿತು. ಒಟ್ಟಿನಲ್ಲಿ ಕೆಲವೊಂದಷ್ಟು ಕಹಿಗಳಿದ್ದರೂ, 2024ರ ವರ್ಷವು ಭಾರತೀಯ ಕ್ರಿಕೆಟ್‌ ಪಾಲಿಗೆ ಫಲಪ್ರದವಾಗಿತ್ತು. ಈಗ 2025 ಬಂದಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಇರುವ ಮಹತ್ವದ ವರ್ಷದಲ್ಲಿ ಭಾರತ ಕ್ರಿಕೆಟ್‌ ಮೇಲೆ ಹಲವು ನಿರೀಕ್ಷೆಗಳಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಸದ್ಯ ದೂರದ ಬೆಟ್ಟ. ಈ ನಡುವೆ ಅನುಭವಿ ಹಾಗೂ ಹಿರಿಯ ಆಟಗಾರರ ಫಾರ್ಮ್ ಸಮಸ್ಯೆ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಇದೇ ವೇಳೆ ಭಾರತವು ವನಿತೆಯರ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವುದರಿಂದ ಹರ್ಮನ್ ಪ್ರೀತ್ ಕೌರ್ ನಾಯಕತ್ವದಲ್ಲಿ ಮಹಿಳಾ ತಂಡವು ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸುವ ನಿರೀಕ್ಷೆಯಲ್ಲಿದೆ.

ಒಟ್ಟಿನಲ್ಲಿ ಹೊಸ ವರ್ಷ ಆರಂಭವಾಗುತ್ತಿದ್ದಂತೆ, ಈ ವರ್ಷ ಭಾರತ ತಂಡದಲ್ಲಿ ಒಂದಷ್ಟು ಬದಲಾವಣೆ, ಪರಿವರ್ತನೆಗೆ ಕಾರಣವಾಗಬಹುದು. 2025ರಲ್ಲಿ ಭಾರತೀಯ ಕ್ರಿಕೆಟ್‌ನಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನೋಡೋಣ.

ಚಾಂಪಿಯನ್ಸ್ ಟ್ರೋಫಿ 2025

ಭಾರತಕ್ಕೆ ಮೊದಲ ದೊಡ್ಡ ಸವಾಲು ಚಾಂಪಿಯನ್ಸ್ ಟ್ರೋಫಿ. ಒಂದು ರೀತಿಯಲ್ಲಿ ಇಬ್ಬರು ಹಿರಿಯ ಭಾರತೀಯ ಆಟಗಾರರಿಗೆ ಇದು ಹಂಸಗೀತೆಯಾಗಬಹುದು. 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ನಂತರ, ರೋಹಿತ್ ಶರ್ಮಾ ಐಸಿಸಿ ಏಕದಿನ ಟ್ರೋಫಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಭಾರತವು ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ತಂಡದ ಗುಂಪಿನಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿವೆ. ಈ ಬಾರಿಯ ಗೆಲುವು ವಿರಾಟ್‌ ಹಾಗೂ ರೋಹಿತ್‌ ಪಾಲಿಗೆ ಅತಿ ಮುಖ್ಯ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್

ಸದ್ಯ ಭಾರತಕ್ಕೆ ಡಬ್ಲ್ಯುಟಿಸಿ ಫೈನಲ್‌ ದೂರದ ಬೆಟ್ಟ. ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್‌ ಸೋತರ, ಭಾರತ ಫೈನಲ್‌ ರೇಸ್‌ನಿಂದ ಹೊರಬೀಳುತ್ತೆ. ಒಂದು ವೇಳೆ ಗೆದ್ದರೆ ಮಾತ್ರವೇ, ಶ್ರೀಲಂಕಾ ಮೇಲೆ ಅವಲಂಬಿಸಿ ಫೈನಲ್‌ ಪ್ರವೇಶಿಸಬಹುದು. ಕಳೆದ ಎರಡು ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿ ಎಡವಿದ್ದ ಭಾರತ, ಈ ಬಾರಿ ಫೈನಲ್‌ಗೂ ಮುನ್ನವೇ ಜಾರಿದೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿದಾಯ ಸಾಧ್ಯತೆ

ಟೆಸ್ಟ್‌ನಲ್ಲಿ ಬಲಿಷ್ಠ ತಂಡವಾಗಿದ್ದ ಭಾರತ, 2024ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ಏರಿಳಿತಗಳನ್ನು ಕಂಡಿದೆ. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ 3-0 ಅಂತರದಿಂದ ವೈಟ್‌ವಾಶ್‌ ಮುಖಭಂಗಕ್ಕೆ ತುತ್ತಾದ ತಂಡ, ಇದೀಗ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರು ನಿರೀಕ್ಷೆಗಳನ್ನು ಪೂರೈಸಲು ವಿಫಲರಾಗಿದ್ದಾರೆ. ಕಳೆದ ದಶಕದಲ್ಲಿ ಭಾರತದ ಯಶಸ್ಸಿನ ಬೆನ್ನೆಲುಬಾಗಿದ್ದ ಆಟಗಾರರು, ಈ ಬಾರಿ ಟೀಕೆಗಳ ಮೇಲೆ ಟೀಕೆ ಎದುರಿಸುತ್ತಿದ್ದಾರೆ. ಹೀಗಾಗಿ ಹಳೆಯ ಮುಖಗಳನ್ನು ಹೊರಗಿಟ್ಟು ಹೊಸ ಪ್ರತಿಭೆಗಳನ್ನು ಪರಿಚಯಿಸಿ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗಕ್ಕೆ ಮುನ್ನುಡಿ ಬರೆಯಲು ಬಿಸಿಸಿಐಗೆ ಸಲಹೆ ಹೋಗುತ್ತಿವೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ಮಧ್ಯದಲ್ಲೇ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದರು. ಇದು ಮುಂಬರುವ ದಿನಗಳಲ್ಲಿ ಹಲವು ಅನುಭವಿ ಆಟಗಾರರ ನಿವೃತ್ತಿಯ ಮುನ್ಸೂಚನೆಯಾಗಿ ಮಾರ್ಪಟ್ಟಿದೆ. ರೋಹಿತ್, ಕೊಹ್ಲಿ ಮತ್ತು ಜಡೇಜಾ ಈಗಾಗಲೇ ವಿಶ್ವಕಪ್ ಅಭಿಯಾನದ ನಂತರ ಟಿ20 ಸ್ವರೂಪದಿಂದ ದೂರ ಸರಿದಿದ್ದಾರೆ. ಇದು ಉಳಿದ ಸ್ವರೂಪದವರೆಗೆ ಹೋದರೂ ಅಚ್ಚರಿ ಇಲ್ಲ. ಭಾರತ ತಂಡವು ಈಗ ಸವಾಲಿನ ಹಂತದಲ್ಲಿದೆ. ಭವಿಷ್ಯದಲ್ಲಿ ಸುಸ್ಥಿರ ಯಶಸ್ಸಿಗೆ ಸಮರ್ಥವಾದ ತಂಡವನ್ನು ಕಟ್ಟುವ ಅಗತ್ಯವಿದೆ.

ಟೆಸ್ಟ್ ನಾಯಕತ್ವಕ್ಕೆ ಜಸ್ಪ್ರೀತ್ ಬುಮ್ರಾ

ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದವರು ಜಸ್ಪ್ರೀತ್‌ ಬುಮ್ರಾ. ವಿಶ್ವದ ಅತ್ಯುತ್ತಮ ವೇಗಿ ಎಂದು ಪರಿಗಣಿಸಲ್ಪಟ್ಟಿರುವ ಬುಮ್ರಾ ತಂಡವನ್ನು ಸಮರ್ಥವಾಗಿ ಮುನ್ನಡೆಸಿದರು. 31 ವರ್ಷದ ಆಟಗಾರ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಮೋಘ ಬೌಲಿಂಗ್ ಪ್ರದರ್ಶನದೊಂದಿಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆರಂಭದಲ್ಲೇ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಆ ನಂತರ ರೋಹಿತ್‌ಗೆ ನಾಯಕತ್ವ ಹಸ್ತಾಂತರಿಸಲಾಯ್ತು. ನಾಯಕನಾಗಿ ಅಲ್ಪಾವಧಿಯ ಅನುಭವದ ಹೊರತಾಗಿಯೂ, ಬುಮ್ರಾ ಅವರ ಪ್ರದರ್ಶನವು ಟೆಸ್ಟ್ ಕ್ರಿಕೆಟ್‌ನ ಮುಂದಿನ ಕಿಂಗ್‌ ಎಂಬ ಹೊಗಳಿಕೆ ಸಂಪಾದಿಸಿದೆ. ಹಲವು ಮಾಜಿ ಕ್ರಿಕೆಟಿಗರು ಬುಮ್ರಾರನ್ನು ಮುಂದಿನ ನಾಯಕ ಎಂದೇ ಬಣ್ಣಿಸಿದ್ದಾರೆ. ಆದರೆ, ಬಿಸಿಸಿಐ ಅಷ್ಟು ಸುಲಭದಲ್ಲಿ ಅವರಿಗೆ ನಾಯಕತ್ವ ವಹಿಸಲು ಸಿದ್ಧವಿಲ್ಲ. ಬುಮ್ರಾ ಅವರ ಗಾಯಗಳ ಇತಿಹಾಸವೇ ಮಂಡಳಿಗೆ ಪ್ರಮುಖ ಕಾಳಜಿಯಾಗಿದೆ. ಬುಮ್ರಾ ನಾಯಕತ್ವದ ಸಾಮರ್ಥ್ಯದ ಮೇಲೆ ಬಿಸಿಸಿಐ ಮಾತ್ರವಲ್ಲದೆ ಯಾರಿಗೂ ಅನುಮಾನವಿಲ್ಲ. ಆದರೆ, ಅವರಿಗೆ ಪೂರ್ಣ ಸಮಯದ ನಾಯಕತ್ವವನ್ನು ವಹಿಸುವ ಮೊದಲು ಹಲವು ಸವಾಲುಗಳನ್ನು ಅಳೆದು ತೂಗಬೇಕಿದೆ.

ಟಿ20ಯಲ್ಲಿ ಹೊಸ ಯುಗಾರಂಭ

ಟಿ20 ವಿಶ್ವಕಪ್ ನಂತರ ರೋಹಿತ್, ವಿರಾಟ್ ಕೊಹ್ಲಿ ಮತ್ತು ಜಡೇಜಾ ನಿವೃತ್ತಿ ಪಡೆದಿದ್ದು, ಭಾರತವು ಟಿ20 ಕ್ರಿಕೆಟ್‌ನಲ್ಲಿ ಹೊಸ ಯುಗವನ್ನು ಆರಂಭಿಸಿದೆ. ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ. ಇಲ್ಲಿಯವರೆಗೂ ಅವರು ಆಯ್ಕೆದಾರರ ನಂಬಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಂಡವನ್ನು ಪ್ರಭಾವಶಾಲಿ ಸರಣಿ ವಿಜಯಗಳಿಗೆ ಮುನ್ನಡೆಸಿದ್ದಾರೆ. ಸೂರ್ಯ ಅವರ ನಾಯಕತ್ವದಲ್ಲಿ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಉದಯೋನ್ಮುಖ ಪ್ರತಿಭೆಗಳ ಜೊತೆಗೆ ರಿಂಕು ಸಿಂಗ್ ಮತ್ತು ಹಾರ್ದಿಕ್ ಅವರಂತಹ ಬಲಿಷ್ಠ ಆಟಗಾರರು ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಬೌಲಿಂಗ್ ವಿಭಾಗವೂ ಅಸಾಧಾರಣವಾಗಿದೆ. ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್ ಅಬ್ಬರಿಸುತ್ತಿದ್ದಾರೆ.

ಭಾರತದ ಮುಂದಿನ ಏಕದಿನ ನಾಯಕ ಯಾರು?

2027ರ ಏಕದಿನ ವಿಶ್ವಕಪ್‌ಗೆ ಕೇವಲ ಎರಡು ವರ್ಷಗಳು ಬಾಕಿ ಇವೆ. ದಕ್ಷಿಣ ಆಫ್ರಿಕಾದಲ್ಲಿ ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬ ಬಗ್ಗೆ ಬಿಸಿಸಿಐ ಆಯ್ಕೆದಾರರಿಗೆ ಸವಾಲು ಇದೆ. ರೋಹಿತ್ ಅವರ ವಯಸ್ಸು ಮುಂದಿನ ವಿಶ್ವಕಪ್‌ಗೆ ಅವರ ಲಭ್ಯತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಮುಂಬರುವ ಚಾಂಪಿಯನ್ಸ್ ಟ್ರೋಫಿಯೇ, ನಾಯಕನಾಗಿ ಅವರ ಕೊನೆಯ ಅವಧಿ ಎಂದು ಅನೇಕ ದಿಗ್ಗಜರು ಊಹಿಸಿದ್ದಾರೆ.

ಇತ್ತೀಚಿನ ಏಕದಿನ ಸರಣಿಯಲ್ಲಿ ಶುಭ್ಮನ್ ಗಿಲ್ ಅವರನ್ನು ಉಪನಾಯಕನನ್ನಾಗಿ ಹೆಸರಿಸಲಾಗಿತ್ತು. ಇವರು ರೋಹಿತ್‌ ಅವರ ಸಂಭಾವ್ಯ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ. ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೇ ಯಶಸ್ಸಿನ ಭಾಗವಾಗಿರುವ ಗಿಲ್‌, ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ನಿರೀಕ್ಷಿತ ಯಶಸ್ಸು‌ ಗಳಿಸಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ನಾಯಕತ್ವದ ಯಶಸ್ಸನ್ನು ತೋರಿಸಿರುವ ಶ್ರೇಯಸ್ ಅಯ್ಯರ್, ಏಕದಿನ ನಾಯಕತ್ವಕ್ಕೆ ಮತ್ತೊಂದು ಪ್ರಬಲ ಸ್ಪರ್ಧಿಯಾಗಿದ್ದಾರೆ. ಮುಂದೆ ಬರಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು ಸ್ಥಿರ ಪ್ರದರ್ಶನ ನೀಡಬೇಕಿದೆ. ಅತ್ತ ಬಿಸಿಸಿಐ ಕೂಡಾ ಲಭ್ಯ ಆಯ್ಕೆಗಳನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕಾಗಿದೆ.

ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸುತ್ತಾ ಹರ್ಮನ್ ಪ್ರೀತ್ ಕೌರ್ ಬಳಗ

2024ರ ಟಿ20 ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಹರ್ಮನ್ ಪ್ರೀತ್ ಕೌರ್ ಪಡೆ, ಇದೀಗ ಏಕದಿನ ವಿಶ್ವಕಪ್ ಆತಿಥ್ಯದೊಂದಿಗೆ ತಂಡವನ್ನು ಐಸಿಸಿ ಪ್ರಶಸ್ತಿಗೆ ಮುನ್ನಡೆಸಲು ಮತ್ತೊಂದು ಅವಕಾಶವನ್ನು ಪಡೆಯಲಿದ್ದಾರೆ. ದ್ವಿಪಕ್ಷೀಯ ಸರಣಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಸ್ಮೃತಿ ಮಂಧಾನ, ಜೆಮಿಮಾ ರೊಡ್ರಿಗಸ್ ಮತ್ತು ದೀಪ್ತಿ ಶರ್ಮಾ ಅವರಂತಹ ಪ್ರಮುಖ ಆಟಗಾರ್ತಿಯರು ತಂಡದ ಗೆಲುವಿಗೆ ಹೋರಾಡಬೇಕಿದೆ.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope

Whats_app_banner