4ನೇ ಟೆಸ್ಟ್​ನಲ್ಲೂ ಇಕ್ಕಟ್ಟಿಗೆ ಸಿಲುಕಿದ ಭಾರತ; ರೋಹಿತ್ ಪಡೆ ಫಾಲೋ ಆನ್​ನಿಂದ ಪಾರಾಗಲು ಇನ್ನೆಷ್ಟು ರನ್ ಗಳಿಸಬೇಕು?
ಕನ್ನಡ ಸುದ್ದಿ  /  ಕ್ರಿಕೆಟ್  /  4ನೇ ಟೆಸ್ಟ್​ನಲ್ಲೂ ಇಕ್ಕಟ್ಟಿಗೆ ಸಿಲುಕಿದ ಭಾರತ; ರೋಹಿತ್ ಪಡೆ ಫಾಲೋ ಆನ್​ನಿಂದ ಪಾರಾಗಲು ಇನ್ನೆಷ್ಟು ರನ್ ಗಳಿಸಬೇಕು?

4ನೇ ಟೆಸ್ಟ್​ನಲ್ಲೂ ಇಕ್ಕಟ್ಟಿಗೆ ಸಿಲುಕಿದ ಭಾರತ; ರೋಹಿತ್ ಪಡೆ ಫಾಲೋ ಆನ್​ನಿಂದ ಪಾರಾಗಲು ಇನ್ನೆಷ್ಟು ರನ್ ಗಳಿಸಬೇಕು?

India vs Australia 4th test: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. 2ನೇ ದಿನದಾಟದ ಅಂತ್ಯಕ್ಕೆ 164 ರನ್ ಪೇರಿಸಿರುವ ಭಾರತ ತಂಡ, ಫಾಲೋ ಆನ್​ನಿಂದ ಪಾರಾಗಲು ಇನ್ನೆಷ್ಟು ರನ್ ಗಳಿಸಬೇಕು? ಇಲ್ಲಿದೆ ಮಾಹಿತಿ.

4ನೇ ಟೆಸ್ಟ್​ನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ; ರೋಹಿತ್ ಪಡೆ ಫಾಲೋ ಆನ್​ನಿಂದ ಪಾರಾಗಲು ಇನ್ನೆಷ್ಟು ರನ್ ಗಳಿಸಬೇಕು?
4ನೇ ಟೆಸ್ಟ್​ನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ; ರೋಹಿತ್ ಪಡೆ ಫಾಲೋ ಆನ್​ನಿಂದ ಪಾರಾಗಲು ಇನ್ನೆಷ್ಟು ರನ್ ಗಳಿಸಬೇಕು? (AP)

ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್​ ಟ್ರೋಫಿಯಲ್ಲಿ ಮೆಲ್ಬೋರ್ನ್​ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ 4ನೇ ಟೆಸ್ಟ್​​ ಪಂದ್ಯದಲ್ಲೂ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಭಾರತ ತಂಡ ಬೌಲಿಂಗ್ ಜೊತೆಗೆ ಬ್ಯಾಟಿಂಗ್​​ನಲ್ಲೂ ಮತ್ತೆ ವೈಫಲ್ಯ ಅನುಭವಿಸಿದೆ. ಆಸ್ಟ್ರೇಲಿಯಾ, ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ 474 ರನ್​ಗಳ ಬೃಹತ್ ಮೊತ್ತ ಪೇರಿಸಿದೆ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ 2ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದ್ದು, 310 ರನ್​​ಗಳ ಹಿನ್ನಡೆಯಲ್ಲಿದೆ. ಇದರೊಂದಿಗೆ ಫಾಲೋ ಆನ್ ಭೀತಿಗೆ ಸಿಲುಕಿದೆ. ಹಾಗಿದ್ದರೆ ರೋಹಿತ್ ಪಡೆ ಫಾಲೋಆನ್ ಭೀತಿಯಿಂದ ಪಾರಾಗಲು ಇನ್ನೆಷ್ಟು ರನ್ ಗಳಿಸಬೇಕಿದೆ? ಇಲ್ಲಿದೆ ವಿವರ.

ಸರಣಿಯ ಮೇಲೆ ಹಿಡಿತ ಸಾಧಿಸಲು ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪ್ರವೇಶಿಸಲು ಟೀಮ್ ಇಂಡಿಯಾ ಪಾಲಿಗೆ ಈ ಪಂದ್ಯದ ಗೆಲ್ಲುವುದು ಅನಿವಾರ್ಯ. ಪಂದ್ಯದ ಮಹತ್ವ ಅರಿವಿದ್ದರೂ ಭಾರತ ತಂಡ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡದೆ ನಿರಾಸೆ ಮೂಡಿಸಿದೆ. ಕಳೆದ ಪಂದ್ಯಗಳಲ್ಲಿ ಮಾಡಿದ್ದ ತಪ್ಪುಗಳನ್ನೇ ಪುನರಾವರ್ತಿಸುತ್ತಿರುವುದು ಬೇಸರದ ಸಂಗತಿ. ಪ್ರಸ್ತುತ ಪ್ರವಾಸಿಗರ ಬ್ಯಾಟಿಂಗ್ ಪರಿಸ್ಥಿತಿಯನ್ನು ಗಮನಿಸಿದರೆ, ಆತಿಥೇಯರ ವಿರುದ್ಧ ಪ್ರಾಬಲ್ಯ ಸಾಧಿಸುತ್ತದೆ ಎಂದು ತೋರುತ್ತಿಲ್ಲ. ಫಾಲೋ ಆನ್ ಭೀತಿಯಿಂದ ತಪ್ಪಿಸಿಕೊಂಡರೆ ಸಾಕು ಎನ್ನುವಂತಿದೆ. ಅನಿಶ್ಚಿತ ಪರಿಸ್ಥಿತಿಯಲ್ಲಿ ಉಳಿದಿರುವ ಭಾರತ ತಂಡ ಪ್ರಸ್ತುತ ಫಾಲೋ-ಆನ್ ತಪ್ಪಿಸಲು ಬ್ಯಾಟಿಂಗ್ ಮಾಡುತ್ತಿದೆ. ಅತ್ತ ಆಸೀಸ್ ಅದಕ್ಕೆ ಅವಕಾಶ ನೀಡದೇ ಇರಲು ಯೋಜಿಸುತ್ತಿದೆ.

ನಾಲ್ಕನೇ ಟೆಸ್ಟ್​​ನಲ್ಲಿ ಭಾರತ ತಂಡದ ಪ್ರದರ್ಶನ

ಇಂಡೋ-ಆಸೀಸ್ ಎರಡನೇ ದಿನದಾಟ ಮುಕ್ತಾಯಗೊಂಡಿದೆ. 474 ರನ್​ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸುತ್ತಿರುವ ಭಾರತ ತಂಡ ಆಗಲೇ ಪ್ರಮುಖ 5 ವಿಕೆಟ್ ಕಳೆದುಕೊಂಡಿದೆ. ಆದರೆ ಗಳಿಸಿದ್ದು ಕೇವಲ 164 ರನ್. ಇದರಲ್ಲಿ ಯಶಸ್ವಿ ಜೈಸ್ವಾಲ್ ಬಿಟ್ಟರೆ ಉಳಿದಂತೆ ಯಾರೂ ಕ್ರೀಸ್ ಕಚ್ಚಿ ಆಡುವ ಸಾಹಸ ಮಾಡಲಿಲ್ಲ. ಆಸೀಸ್ ವೇಗಿಗಳ ದಾಳಿಯನ್ನು ಸಮರ್ಥ ಮತ್ತು ದಿಟ್ಟವಾಗಿ ಎದುರಿಸಲು ವಿಫಲರಾಗುತ್ತಿದ್ದಾರೆ. ತನ್ನ ಅಗ್ರ ಕ್ರಮಾಂಕಕ್ಕೆ ರೋಹಿತ್​ ಶರ್ಮಾ (3) ಮರಳಿದರೂ ಸದ್ದು ಮಾಡಲಿಲ್ಲ. ಕೆಎಲ್ ರಾಹುಲ್ ಅವರು ಸ್ಥಾನ ಬದಲಿಸಿದ್ದರ ಪರಿಣಾಮವೋ ಏನೋ 24 ರನ್​ಗೆ ಸುಸ್ತಾದರು. ಆರಂಭಿಕ ಹೊಡೆತದ ನಂತರ ತಂಡಕ್ಕೆ ಚೇತರಿಕೆ ನೀಡಿದ್ದು ಜೈಸ್ವಾಲ್ ಮತ್ತು ಕೊಹ್ಲಿ ಶತಕದ ಜೊತೆಯಾಟ.

ಅಬ್ಬಾ, ಕೊನೆಗೂ ಭಾರತ ತಂಡ ಚೇತರಿಸಿಕೊಳ್ಳುವತ್ತ ಸಾಗುತ್ತಿದೆ ಎಂದು ನಿಟ್ಟುಸಿರು ಬಿಡಬೇಕು ಎನ್ನುವಷ್ಟರಲ್ಲಿ 80 ರನ್ ಬಾರಿಸಿದ್ದ ಜೈಸ್ವಾಲ್ ಅನಗತ್ಯ ರನ್​ ಕದಿಯಲು ಯತ್ನಿಸಿ ಡಗೌಟ್​ನತ್ತ ಹೆಜ್ಜೆ ಹಾಕಿದರು. ಅತ್ತ, ಕೊಹ್ಲಿಯಾದರೂ ವಿಕೆಟ್ ಕಾಪಾಡಬಲ್ಲರು ಎಂದು ನಿರೀಕ್ಷೆ ಇಡುವಷ್ಟರಲ್ಲಿ 36 ರನ್ ಗಳಿಸಿದ್ದೇ ಸಾಕು ಎಂದು ಜಾಗ ಖಾಲಿ ಮಾಡಿದರು. ಸೂಕ್ಷ್ಮ ಮತ್ತು ಎಚ್ಚರದ ಸಮಯದಲ್ಲಿ ವೇಗಿ ಆಕಾಶ್ ದೀಪ್​ಗೆ ಬಡ್ತಿ ನೀಡಿ 5ನೇ ಕ್ರಮಾಂಕದಲ್ಲಿ ಆಡಿಸುವ ಮೂಲಕ ದೊಡ್ಡ ಪ್ರಮಾದ ಎಸಗಿತು. ಜತೆಗೆ ಒಂದು ವಿಕೆಟ್ ನಷ್ಟವನ್ನೂ ಅನುಭವಿಸಿತು. ಪ್ರಸ್ತುತ ರವೀಂದ್ರ ಜಡೇಜಾ (6*), ರವೀಂದ್ರ ಜಡೇಜಾ (4*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತವು ಫಾಲೋ-ಆನ್ ತಪ್ಪಿಸಲು ಎಷ್ಟು ರನ್‌ಗಳ ಅಗತ್ಯವಿದೆ?

ಕ್ರಿಕೆಟ್​​ ನಿಯಮಗಳನ್ನು ರೂಪಿಸುವ ಮೆರಿಲ್​ಬೋರ್ನ್​ ಕ್ರಿಕೆಟ್ ನಿಯಮಗಳ ಆರ್ಟಿಕಲ್ 14.1.1ರ ಪ್ರಕಾರ, ಟೆಸ್ಟ್​ ಕ್ರಿಕೆಟ್​ನಲ್ಲಿ ಯಾವುದೇ ತಂಡವು ಎದುರಾಳಿ ತಂಡದ ವಿರುದ್ಧ 200 ರನ್​ಗಳ ಮುನ್ನಡೆ ಪಡೆದರೆ, ಆಗ ಫಾಲೋ ಆನ್ ಹೇರಬಹುದು. ಆದರೆ, ಫಾಲೋ ಆನ್ ಹೇರುವುದು ಬಿಡುವುದು ಆಯಾ ತಂಡಕ್ಕೆ ಸೇರಿದ ನಿರ್ಧಾರ. ಪ್ರಸ್ತುತ ಆಸೀಸ್​ 474 ರನ್ ಗಳಿಸಿದೆ. ಇದೀಗ ಭಾರತ ತಂಡಕ್ಕೆ ಫಾಲೋ ಆನ್ ಹೇರಲು 274 ರನ್​ಗಳೊಳಗೆ ಆಲ್​ಔಟ್ ಮಾಡಬೇಕು. ಒಂದು ವೇಳೆ ಭಾರತ 274 ರನ್ ಗಳಿಸಿದರೆ ಫಾಲೋ​ ಆನ್​ನಿಂದ ತಪ್ಪಿಸಿಕೊಳ್ಳಲಿದೆ. ಪ್ರಸ್ತುತ 164 ರನ್ ಗಳಿಸಿರುವ ಭಾರತ ಮೂರನೇ ದಿನದಾಟಕ್ಕೆ 100 ರನ್ ಸೇರಿಸುವ ಅಗತ್ಯ ಇದೆ.

Whats_app_banner