Explainer: ಸತತ 2 ಸಿಕ್ಸರ್ ಸಿಡಿಸಿ 3ನೇ ಎಸೆತದಲ್ಲಿ ಔಟಾದ ಸ್ಟಬ್ಸ್; ಐಪಿಎಲ್ ಹೊಸ ನಿಯಮ ಲಕ್ನೋಗೆ ವರದಾನವಾಗಿದ್ದು ಹೇಗೆ?
ಐಪಿಎಲ್ 2025ರಲ್ಲಿ ಚೆಂಡು ಬದಲಾವಣೆಯ ಹೊಸ ನಿಯಮವು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಲಾಭವಾಗಿದೆ. ಸತತ ಎರಡು ಸಿಕ್ಸರ್ ಬಾರಿಸಿದ್ದ ಟ್ರಿಸ್ಟಾನ್ ಸ್ಟಬ್ಸ್, ಹೊಸ ಚೆಂಡು ಎದುರಿಸಲಾಗದೆ ಔಟಾಗಿದ್ದಾರೆ. ಆ ಹೊಸ ನಿಯಮದ ಕುರಿತ ವಿವರ ಇಲ್ಲಿದೆ.

ಐಪಿಎಲ್ 2025ರ ಆವೃತ್ತಿಯು ದಿನದಿಂದ ದಿನಕ್ಕೆ ರೋಚಕ ಹಂತ ತಲುಪುತ್ತಿದೆ. ಸೋಮವಾರ (ಮಾ.24) ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರೋಚಕ ಜಯ ಸಾಧಿಸಿತು. ಪಂದ್ಯವು ಹಲವು ತಿರುವುಗಳಿಗೆ ಸಾಕ್ಷಿಯಾಯ್ತು. ಒಂದು ಮುಖ್ಯ ಅಂಶವೆಂದರೆ, ಐಪಿಎಲ್ 2025ರಲ್ಲಿ ಜಾರಿಗೆ ತರಲಾದ ಒಂದು ನಿಯಮವು ಪಂದ್ಯದ ಗತಿಯನ್ನೇ ಬದಲಿಸಿದೆ. ಚೇಸಿಂಗ್ ವೇಳೆ ಡೆಲ್ಲಿ ಪರ ಅಬ್ಬರಿಸುತ್ತಿದ್ದ ಟ್ರಿಸ್ಟಾನ್ ಸ್ಟಬ್ಸ್, ಎದುರಾಳಿ ತಂಡವು ಐಪಿಎಲ್ ಹೊಸ ನಿಯಮದ ಲಾಭವನ್ನು ಸಮಯೋಚಿತವಾಗಿ ಬಳಸಿದ ಕಾರಣದಿಂದ ಬೇಗನೆ ಔಟಾಗಿದ್ದಾರೆ.
ಡೆಲ್ಲಿ ಚೇಸಿಂಗ್ ವೇಳೆ 13ನೇ ಓವರ್‌ನ ಮೂರನೇ ಎಸೆತದಲ್ಲಿ ಸ್ಟಬ್ಸ್ ಔಟಾದರು. ಮಣಿಮಾರನ್ ಸಿದ್ಧಾರ್ಥ್, ಸ್ಟಬ್ಸ್ ವಿಕೆಟ್ ಪಡೆದರು. ಈ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಸ್ಟಬ್ಸ್ ಮಾರುದ್ದದ ಸಿಕ್ಸರ್ ಸಿಡಿಸಿದ್ದರು. ಅದರಲ್ಲಿ ಎರಡನೇ ಸಿಕ್ಸರ್ ಭಾರಿ ದೊಡ್ಡದಾಗಿತ್ತು. ಆ ಹೊಡೆತಕ್ಕೆ ಚೆಂಡು ಮೈದಾನದಿಂದ ಹೊರ ಹೋಯ್ತು. ಸ್ಟಬ್ಸ್ ಆಕ್ರಮಣಕಾರಿ ಆಟ ಮುಂದುವರೆಸುವುದರಲ್ಲಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಕಾರಣ ಈ ನಡುವೆ ಬಾಲ್ ಚೇಂಜ್ ಮಾಡಿ ಹೊಸ ಬಾಲ್ ತರಲಾಯ್ತು.
13ನೇ ಓವರ್‌ನ ಮೊದಲ ಎರಡು ಎಸೆತಗಳು ಆದ ನಂತರ ಅಂಪೈರ್‌ಗಳು ಚೆಂಡನ್ನು ಬದಲಾಯಿಸಲು ನಿರ್ಧರಿಸಿದರು. ಎರಡನೇ ಇನ್ನಿಂಗ್ಸ್‌ನ 11ನೇ ಓವರ್‌ನ ನಂತರ ಫೀಲ್ಡಿಂಗ್ ತಂಡಕ್ಕೆ ಎರಡನೇ ಹೊಸ ಚೆಂಡನ್ನು ನೀಡಲು ಅವಕಾಶ ಮಾಡಿಕೊಟ್ಟರು. ಇಲ್ಲಿ ಚೆಂಡು ಮೈದಾನದಿಂದ ಹೊರ ಹೋದ ಕಾರಣಕ್ಕೆ ಚೆಂಡು ಬದಲಾಯಿಸಿದಂತಿದೆ. ಆದರೆ, ಮೈದಾನದಲ್ಲಿ ಇಬ್ಬನಿ ಬಿದ್ದ ಕಾರಣ ಕಾರಣ ಚೆಂಡು ತುಂಬಾ ಒದ್ದೆಯಾಗಿದೆ ಎಂದು ಅಂಪೈರ್‌ಗಳು ಚೆಂಡು ಬದಲಾಯಿಸಬಹುದು.
ಚೆಂಡು ಬದಲಾವಣೆಯು ಲಕ್ನೋ ತಂಡಕ್ಕೆ ವರವಾಯ್ತು. ಹೊಸ ಚೆಂಡು ಡ್ರೈ ಇದ್ದ ಕಾರಣ ಬೌಲರ್‌ಗೆ ಹಿಡಿತ ಸಾಧಿಸಲು ಸಾಧ್ಯವಾಯ್ತು. ಸಿದ್ಧಾರ್ಥ್ ಎಸೆದ ಚೆಂಡು ತಿರುವು ಪಡೆದು ಸ್ಟಬ್ಸ್ ಅವರ ವಿಕೆಟ್ ಹಾರಿಸಿತು. ದಕ್ಷಿಣ ಆಫ್ರಿಕಾದ ದಾಂಡಿಗ 21 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರು.
ಅಷ್ಟಕ್ಕೂ ಹೊಸ ನಿಯಮವೇನು?
ಐಪಿಎಲ್ 18ನೇ ಸೀಸನ್‌ನ ಹೊಸ ನಿಯಮದ ಪ್ರಕಾರ, ಸಂಜೆ ನಂತರ ನಡೆಯುವ ಪಂದ್ಯಗಳಲ್ಲಿ ಇಬ್ಬನಿಯಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು, ಎರಡನೇ ಇನ್ನಿಂಗ್ಸ್‌ನಲ್ಲಿ ಚೇಸಿಂಗ್ ಮಾಡುವ ತಂಡಕ್ಕೆ 10ನೇ ಓವರ್ ನಂತರ ಒಮ್ಮೆ ಚೆಂಡನ್ನು ಬದಲಾಯಿಸಲು ಮನವಿ ಮಾಡುವ ಅವಕಾಶ ಸಿಗುತ್ತದೆ. ಮೈದಾನದಲ್ಲಿ ಗೋಚರಿಸುವಂತೆ ಇಬ್ಬನಿ ಇದ್ದರೂ ಅಥವಾ ಇಲ್ಲದಿದ್ದರೂ, ಬೌಲಿಂಗ್ ಮಾಡುವ ತಂಡದ ನಾಯಕ ಅಂಪೈರ್‌ಗಳ ಬಳಿ ಈ ವಿನಂತಿ ಮಾಡಲು ಅವಕಾಶವಿದೆ. ಮನವಿ ಮಾಡಿದ ನಂತರ, ಅಂಪೈರ್‌ಗಳು ಕಡ್ಡಾಯವಾಗಿ ಅದೇ ರೀತಿಯ ಹೊಸ ಚೆಂಡನ್ನು ಬದಲಾಯಿಸಬೇಕು. ಆದರೆ ಬೌಲಿಂಗ್ ಮಾಡುತ್ತಿರುವ ತಂಡದ ಆಟಗಾರರಿಗೆ ಬದಲಿ ಚೆಂಡನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಇರುವುದಿಲ್ಲ. ಅದನ್ನು ಅಂಪೈರ್‌ಗಳೇ ನಿರ್ಧರಿಸುತ್ತಾರೆ.
ಇನ್ನೊಂದೆಡೆ, ಒಂದು ವೇಳೆ ಇನ್ನಿಂಗ್ಸ್‌ನ 10 ನೇ ಓವರ್‌ಗೆ ಮೊದಲು ಯಾವುದೇ ಸಮಯದಲ್ಲಿ ಚೆಂಡು ತುಂಬಾ ಒದ್ದೆಯಾಗಿದ್ದರೆ, ಹಾನಿಯಾಗಿದ್ದರೆ ಅಥವಾ ಕಳೆದುಹೋದರೆ, ಅದನ್ನು ಬದಲಾಯಿಸುವ ಅಧಿಕಾರ ಅಂಪೈರ್‌ಗಳಿಗೆ ಇರುತ್ತದೆ. ಆ ನಂತರ 11ನೇ ಓವರ್‌ನಲ್ಲಿ ಚೆಂಡು ಆಕಾರ ಹಾಳಾಗಿದೆ ಎಂದು ನಾಯಕ ಚೆಂಡನ್ನು ಬದಲಾಯಿಸಲು ವಿನಂತಿಸಿದರೆ, ಅಂಪೈರ್‌ಗಳು ಅದನ್ನು ಮೌಲ್ಯಮಾಪನ ಮಾಡುತ್ತಾರೆ. ಆ ಬಳಿಕ ಅಗತ್ಯವೆಂದು ಪರಿಗಣಿಸಿದರೆ ಮಾತ್ರ ಚೆಂಡು ಬದಲಾಯಿಸುತ್ತಾರೆ.
